ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ ಮುದ್ದಹನುಮೇಗೌಡರನ್ನು ಗೆಲ್ಲಿಸಬೇಕು ಎಂದು ಕ್ಷೇತ್ರದ ಜನರಲ್ಲಿ ಗೃಹ ಸಚಿವ ಪರಮೇಶ್ವರ್ ಮನವಿ ಮಾಡಿದರು.
ತುಮಕೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “ಮುದ್ದಹನುಮೇಗೌಡರು ತಮ್ಮ 35 ವರ್ಷದ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಮಾಡಿಕೊಂಡಿಲ್ಲ. ಅವರೊಬ್ಬ ಸಜ್ಜನ ರಾಜಕಾರಣಿ. ವಿದ್ಯಾವಂತರಾಗಿ ಮತ್ತು ನ್ಯಾಯಾಧೀಶರಾಗಿ ಸಾರ್ವಜನಿಕ ಬದುಕಿನಲ್ಲಿ ಜನಪರ ಕೆಲಸಗಳನ್ನು ಮಾಡಿದ್ದಾರೆ. ತನ್ನ ವ್ಯಕ್ತಿತ್ವವನ್ನು ಶುದ್ಧವಾಗಿಟ್ಟುಕೊಂಡಿದ್ದಾರೆ. ಇಡೀ ದೇಶದಲ್ಲಿ ಕೇವಲ 44 ಸೀಟುಗಳನ್ನು ಗೆದ್ದಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನಿಂದ 2014ರಲ್ಲಿ ಗೆದ್ದು ಬಂದರು. ಕೇಂದ್ರದಲ್ಲಿ ನಮ್ಮ ಸರ್ಕಾರವಿರದೆ, ವಿರೋಧ ಪಕ್ಷವೂ ಇರದೆ ಇದ್ದರೂ ಮುದ್ದಹನುಮೇಗೌಡರು ಜಿಲ್ಲೆಯ ಹಾಗೂ ರಾಜ್ಯದ ಸಮಸ್ಯೆಗಳನ್ನು ಗಟ್ಟಿ ಧ್ವನಿಯಲ್ಲಿ ಪ್ರತಿನಿಧಿಸಿದ್ದರು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ ಬಂಡಾಯ ಶಮನಕ್ಕೆ ಬಿಎಸ್‌ವೈ ಎಂಟ್ರಿ
“ಭದ್ರಾ ಮೇಲ್ದಂಡೆ, ಮೇಕೆದಾಟು, ಮಹದಾಯಿ, ತುಮಕೂರು-ರಾಯದುರ್ಗ ರೈಲ್ವೆ, ಕೊಬ್ಬರಿ ಬೆಲೆ ನಿಯಂತ್ರಣ ಹಾಗೂ ನಾಫೆಡ್ ಮೂಲಕ ಕೊಬ್ಬರಿ ಖರೀದಿಗೆ ನಿಗದಿತ ಬೆಲೆ ಸಿಗುವಂತೆ ಮಾಡಿದ್ದಾರೆ. ಇಂತಹ ಪ್ರಮುಖ ಸಮಸ್ಯೆಗಳ ಬಗ್ಗೆ ಸರ್ಕಾರಗಳನ್ನು ಎಚ್ಚರಿಸುವ ಕೆಲಸ ಮಾಡಿದ್ದರು. ಅಲ್ಲದೆ ತಾವೊಬ್ಬ ಕ್ರಿಯಾಶೀಲ ಸಂಸದನಾಗಿ ಐದು ವರ್ಷಗಳು ಕೆಲಸ ಮಾಡಿದ್ದಾರೆ. ಅವರು ಪ್ರಜಾಪ್ರಭುತ್ವದ ಕುರಿತು ವಿಶ್ವಸಂಸ್ಥೆಯಲ್ಲಿ ಮಾತನಾಡಿರುವ ನಮ್ಮ ಜಿಲ್ಲೆಯ ಏಕೈಕ ವ್ಯಕ್ತಿ. ಹಾಗಾಗಿ ಈ ಬಾರಿಯ ಸಂಸದರನ್ನಾಗಿ ಮುದ್ದಹನುಮೇಗೌಡರನ್ನು ಆಯ್ಕೆ ಮಾಡೋಣ” ಎಂದು ಕರೆ ನೀಡಿದರು.