ಮುದ್ದಹನುಮೇಗೌಡರು ಅಲೆಮಾರಿ ರಾಜಕಾರಣಿ. ಗುಂಪುಗಾರಿಕೆ ಸೃಷ್ಟಿಸುವ ಅವರಿಗೆ ಪಕ್ಷ ನಿಷ್ಠೆಯಿಲ್ಲ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಚಾರ ಸಮಿತಿಯ ಸದಸ್ಯ ಎಚ್‌ಬಿಎಸ್ ನಾರಾಯಣಗೌಡ ಆರೋಪಿಸಿದ್ದಾರೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಮುದ್ದಹನುಮೇಗೌಡರು ಕೇವಲ ಕಾಂಗ್ರೆಸ್ ಪಕ್ಷದ ಟಿಕೆಟ್ ಬಯಸಿ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ. ಮಾಜಿ ಸಂಸದರ ನಿಲುವು ಖಂಡನೀಯ” ಎಂದರು.
“ಎಸ್‌ಪಿಎಂ ಅವರು ಮೊದಲಿಗೆ ಜೆಡಿಎಸ್ ಪಕ್ಷ, ಆನಂತರ ಕಾಂಗ್ರೆಸ್, ಬಳಿಕ ಬಿಜೆಪಿ. ಈಗ ಮತ್ತೆ ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದಾರೆ. ಜೆಡಿಎಸ್ ಪಕ್ಷದಲ್ಲೇ ಅವರಿಗೆ ಸಿ ಫಾರಂ ನೀಡಿದ್ದರು. ಆ ನಂತರ ಕಾಂಗ್ರೆಸ್ ಪಕ್ಷ ಸೇರಿ ಸಂಸದರಾದರು. ಅವರಿಗೆ ಕಾಂಗ್ರೆಸ್ ಪಕ್ಷದ ನಿಷ್ಠೆ ಇದ್ದಿದ್ದರೆ ಸಂಸದರಾಗಿ ಅಧಿಕಾರ ಹೊಂದಿದವರು ಪಕ್ಷವನ್ನು ಬಿಟ್ಟು ಬಿಜೆಪಿಗೆ ಹೋಗುತ್ತಿರಲಿಲ್ಲ. ಬಿಜೆಪಿಗೆ ಸೇರ್ಪಡೆಯಾದ ಅವರು ಮತ್ತೆ ಲೋಕಸಭಾ ಚುಣಾವಣೆಗೆ ಅಭ್ಯರ್ಥಿ ಆಕಾಂಕ್ಷಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಇವರೊಬ್ಬ ಸ್ಪಷ್ಟ ನಿಲುವಿಲ್ಲದ ರಾಜಕಾರಣಿ” ಎಂದು ವ್ಯಂಗ್ಯವಾಡಿದರು.
“ಜಿಲ್ಲೆಯಲ್ಲಿ ಅನೇಕ ಹಿರಿಯ ನಾಯಕರಿದ್ದಾರೆ. ಅದರಲ್ಲಿ ಡಾ.ಜಿ ಪರಮೇಶ್ವರ್ ಕೂಡ ಒಬ್ಬರು. ಜಿಲ್ಲೆಯಲ್ಲಿ ಅವರಿಗೆ ಹೆಸರಿದೆ. ನಾನೂ ಕೂಡ ಅವರ ಅಭಿಮಾನಿ. ಅವರನ್ನು ಚುನಾವಣೆ ಕಣಕ್ಕಿಳಿಸಿದರೂ ನಾವು ಗೆಲ್ಲಿಸುತ್ತೇವೆ ಅಥವಾ ಆರ್ ನಾರಾಯಣ್ ಅವರಂತಹ ಧೀಮಂತ ನಾಯಕರಿಗೆ ಲೋಕಸಭಾ ಅಭ್ಯರ್ಥಿಯನ್ನಾಗಿ ಜಿಲ್ಲೆಗೆ ಕಣಕ್ಕಿಳಿಸಲಿ” ಎಂದು ಬೆಂಬಲ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಅನಂತ ಕುಮಾರ್ ಹೇಳಿಕೆಯಿಂದ ಜಿಲ್ಲೆಯ ಜನ ತಲೆ ತಗ್ಗಿಸುವಂತಾಗಿದೆ: ಕಾಂಗ್ರೆಸ್ ಮುಖಂಡ ದೀಪಕ್
“ಹಿಂದೆ ಕಾಂಗ್ರೆಸ್ಸಿನಲ್ಲಿದ್ದಾಗ ನೋಡಿದರೆ ಪಕ್ಷ ಸಂಘಟನೆಗೆ ಬದಲು ಕಾರ್ಯಕರ್ತರಲ್ಲೇ ಗುಂಪುಗಾರಿಕೆಗಳನ್ನು ಸೃಷ್ಟಿಸುತ್ತಿದ್ದರು. ಇದರಿಂದ ಪಕ್ಷದ ಬಲವರ್ಧನೆ ಹೇಗೆ ಸಾಧ್ಯವಾಗುತ್ತದೆ. ಈಗ ಪಕ್ಷಕ್ಕೆ ಬಂದರೂ ಗುಂಪುಗಾರಿಕೆ ಮಾಡುವುದರಲ್ಲಿ ಅನುಮಾನವಿಲ್ಲ” ಎಂದರು.