ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ದಿನೆದಿನೇ ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ನಗರಕ್ಕೆ ಬಂದು ಹೋಗುವವರ ಸಂಖ್ಯೆಯೂ ಹೆಚ್ಚಿದೆ. ಆದರೆ, ವಾಣಿಜ್ಯ ಸ್ಥಳದಲ್ಲಿ ಅಗತ್ಯವಾದ ರಸ್ತೆ ಸೌಲಭ್ಯಗಳಿಲ್ಲದೆ ಸಾರ್ವಜನಿಕರು, ವ್ಯಾಪಾರಿಗಳು ಬೇಸತ್ತಿದ್ದಾರೆ.
ಹಾವೇರಿ, ಗದಗ, ಉತ್ತರ ಕನ್ನಡ, ಬಾಗಲಕೋಟೆ ಹೀಗೆ ಸುತ್ತಮುತ್ತಲಿನ ಜಿಲ್ಲೆಗಳ ಅಪಾರ ಸಂಖ್ಯೆ ಜನರು ನಿತ್ಯ ಇಲ್ಲಿಗೆ ವ್ಯಾಪಾರ, ವ್ಯವಹಾರಗಳಿಗೆ ಓಡಾಡುತ್ತಾರೆ. ನಗರದ ನಿವಾಸಿಗಳು ತಮ್ಮ ಕಚೇರಿ ಕಾರ್ಯಗಳಿಗಾಗಿ ಓಡಾಡುವುದು ಸಾಮಾನ್ಯ. ಹೀಗಾಗಿ ನಗರದ ಪ್ರಮುಖ ರಸ್ತೆಗಳು ಇಡೀ ದಿನ ಜನದಟ್ಟಣೆ, ವಾಹನ ಸಂಚಾರದಿಂದ ಗಿಜಿಗುಡುತ್ತಿರುತ್ತದೆ.
ಕೆಲವು ರಸ್ತೆಗಳು ಕಿರಿದಾಗಿದ್ದು, ಎರಡು ವಾಹನ ಏಕ ಕಾಲದಲ್ಲಿ ಸರಾಗವಾಗಿ ಓಡಾಡುವುದು ಕಷ್ಟಕರವಾಗಿದೆ. ಕಿರಿದಾದ ರಸ್ತೆಯ ಮೇಲೆಯೇ ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆ ಮಾಡುವುದು, ರಸ್ತೆ ಬದಿಯಲ್ಲೇ ತಳ್ಳುಗಾಡಿ, ಗೂಡಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುವುದು ಕೂಡ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ ಎನ್ನುತ್ತಿದ್ದಾರೆ ಸಾರ್ವಜನಿಕರು.
ಸುಲಭ ಸಂಚಾರಕ್ಕಾಗಿ ಒನ್‌ವೇ ಸಂಚಾರ ವ್ಯವಸ್ಥೆ ಮಾಡಲಾಗಿದ್ದರೂ ಬೈಕ್ ಸವಾರರು ಎಲ್ಲೆಂದರಲ್ಲಿ ನುಗ್ಗುತ್ತಾರೆ. ಸಂಚಾರಿ ಪೊಲೀಸರ ಕ್ರಮಕ್ಕೂ ವಾಹನ ಸವಾರರೂ ಕ್ಯಾರೆ ಎನ್ನುತ್ತಿಲ್ಲ. ಆದ್ದರಿಂದ ಇನ್ನೂ ಹೆಚ್ಚು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವ್ಯಾಪಾರಿಗಳು, ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಇವೆಲ್ಲವನ್ನೂ ಮೀರಿಸುವಂತೆ ನಗರದಲ್ಲಿ ನಿರಂತರವಾಗಿ ಒಂದಿಲ್ಲೊಂದು ಕಡೆ ರಸ್ತೆ ಕಾಮಗಾರಿ ನಡೆಯುತ್ತಲೇ ಇರುತ್ತವೆ. ಇವು ಎಂದೂ ಮುಗಿಯದ ಅಭಿವೃದ್ಧಿ ಕಾಮಗಾರಿಗಳಾಗಿ ಜನರಿಗೆ ಕಿರಿಕಿರಿ ಉಂಟಾಗಿದೆ.
ಸಂಗೊಳ್ಳಿ ರಾಯಣ್ಣ ವೃತ್ತದಿಂದ ದಾಜಿಬಾನಪೇಟೆ ಮಾರ್ಗದ ಒಂದು ಬದಿಯಲ್ಲಿ ಸಾಲಾಗಿ ಬೈಕ್‌ಗಳನ್ನು ನಿಲ್ಲಿಸಲಾಗಿರುತ್ತದೆ. ಇನ್ನೊಂದು ಬದಿಯಲ್ಲಿ ಉದ್ದಕ್ಕೂ ಹಣ್ಣು, ಹೂವು ಮಾರಾಟ ಮಾಡುವ ಬೀದಿಬದಿ ವ್ಯಾಪಾರಿಗಳು ಇರುತ್ತಾರೆ. ದುರ್ಗದಬೈಲ್ ಮಾರುಕಟ್ಟೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಇದೂ ಒಂದು. ಗೌಳಿಗಳ ಎಮ್ಮೆಗಳ ಹಿಂಡು ಈ ಗಿಜಿಗುಡುವ ರಸ್ತೆಯಲ್ಲೇ ಓಡಾಡುತ್ತವೆ.
ಪಕ್ಕದಲ್ಲೇ ಹೊಸದಾಗಿ ಜನತಾ ಬಜಾರ್ ನಿರ್ಮಾಣ ಮಾಡಲಾಗಿದೆ. ವ್ಯಾಪಾರಿಗಳಿಗೆ ಇನ್ನೂ ಅಲ್ಲಿ ಮಳಿಗೆ ಕೊಟ್ಟಿಲ್ಲ. ಮಳಿಗೆ ಹಂಚಿಕೆ ಮಾಡಿದರೆ ಅಲ್ಲಿಯೇ ವ್ಯಾಪಾರ ಮಾಡುತ್ತೇವೆ ಎನ್ನುತ್ತಾರೆ ವ್ಯಾಪಾರಿಗಳು. ಆದಷ್ಟು ಬೇಗ ಈ ಜಂಗುಳಿಯಿಂದ ಮುಕ್ತಿ ನೀಡಿ ಎಂದು ಪಾಲಿಕೆಯ ಅಧಿಕಾರಿಗಳ ಬಳಿ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.