ತುಮಕೂರು ಜಿಲ್ಲೆಯ ಶಿರಾದಲ್ಲಿರುವ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯು ಸಮಸ್ಯೆಗಳ ಆಗರವಾಗಿದ್ದು, ರೋಗಿಗಳು ಮತ್ತು ಅವರ ಪೋಷಕರು ಪರದಾಡುವಂತಾಗಿದೆ.
ಆಸ್ಪತ್ರೆಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳಬೇಕಾದ ರೋಗಿಗಳು ಮತ್ತಷ್ಟು ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯಲ್ಲಿ ಮಗುವನ್ನು ದಾಖಲಿಸಿಕೊಂಡಿರುವ ತಾಯಿಯೊಬ್ಬರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ದಿನಕ್ಕೆ ಒಂದು ಬಾರಿಯಾದರೂ ಶೌಚಾಲಯಗಳನ್ನು ಸ್ವಚ್ಛಗೊಳಿಸುವುದಿಲ್ಲ. ಸಮಯಕ್ಕೆ ಸರಿಯಾಗಿ ನೀರು ಪೂರೈಕೆ ಮಾಡುವುದಿಲ್ಲ” ಎಂದು ಆರೋಪಿಸಿದ್ದಾರೆ.

“ಈ ಬೇಸಿಗೆ ದಿನಗಳಲ್ಲಿ ಆಸ್ಪತ್ರೆಯಲ್ಲಿ ಪದೇ ಪದೆ ವಿದ್ಯುತ್ ಕಡಿತವಾಗುತ್ತಿದೆ. ಹಾಸಿಗೆ ಮೇಲಿನ ಬೆಡ್‌ಶೀಟ್‌ಗಳು ಒದ್ದೆಯಾಗಿ ಹೋಗಿದ್ದರೂ ಕೂಡ ಬದಲಾಯಿಸುತ್ತಿಲ್ಲ. ಆಸ್ಪತ್ರೆಯಲ್ಲಿ ಉಂಟಾಗಿರುವ ಅನೈರ್ಮಲ್ಯ ಸ್ಥಿತಿಯಿಂದ ಇಲ್ಲಿನ ತಾಯಿ ಮಕ್ಕಳ ಪರಿಸ್ಥಿತಿ ಹೇಳತೀರದು” ಎಂದು ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಜನ ವಿರೋಧಿ ಬಿಜೆಪಿ ಸೋಲಿಸಿ, ಜನಪರ ಕಾಂಗ್ರೆಸ್ ಗೆಲ್ಲಿಸೋಣ: ದಸಂಸ
ಚಿಕಿತ್ಸೆಯಿಂದ ಬೇಗ ಚೇತರಿಸಿಕೊಳ್ಳಬೇಕಾದ ಮಕ್ಕಳು ಇಲ್ಲಿನ ಅನೈರ್ಮಲ್ಯದಿಂದ ಇನ್ನಷ್ಟು ರೋಗಕ್ಕೆ ತುತ್ತಾಗುತ್ತಿದ್ದಾರೆ. ಮಕ್ಕಳಿಗಂತೂ ತುಂಬಾ ಸಮಸ್ಯೆ ಎದುರಾಗುತ್ತಿರುವುದು ಬೇಸರದ ಸಂಗತಿ” ಎಂದು ಅವಲತ್ತುಕೊಂಡಿದ್ದಾರೆ.