ಕನಿಷ್ಠ ಬೆಂಬಲ ಬೆಲೆಯಡಿ ಸೋಮವಾರದಿಂದ (ಏಪ್ರಿಲ್ 1) ಕೊಬ್ಬರಿ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ.
ನೋಂದಣಿ ಕಾರ್ಯ ಮುಗಿದ 20 ದಿನಗಳ ಬಳಿಕ ಸರ್ಕಾರ ಕೊಬ್ಬರಿ ಖರೀದಿಗೆ ಮುಂದಾಗಿದೆ. ತುಮಕೂರು ಜಿಲ್ಲೆಯ 26 ಕೇಂದ್ರಗಳಲ್ಲಿ ಏಕಕಾಲಕ್ಕೆ ಖರೀದಿ ಶುರುವಾಗಲಿದೆ. ಖರೀದಿ ಕೇಂದ್ರಗಳಲ್ಲಿ ಅಧಿಕಾರಿಗಳು, ಗ್ರೇಡರ್‌ಗಳು, ತೂಕದ ಯಂತ್ರ, ಕೊಬ್ಬರಿ ತುಂಬಲು ಬೇಕಾದ ಚೀಲಗಳು, ಸಂಗ್ರಹಕ್ಕೆ ಗೋದಾಮು ಸೇರಿದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ತುಮಕೂರು ಜಿಲ್ಲೆಯಾದ್ಯಂತ 27,212 ಮಂದಿ ರೈತರು 3,17,917 ಕ್ವಿಂಟಲ್ ಕೊಬ್ಬರಿ ಮಾರಾಟಕ್ಕೆ ನೋಂದಣಿ ಮಾಡಿದ್ದಾರೆ. ಆರಂಭದಲ್ಲಿ ಒಂದು ಕೇಂದ್ರದಲ್ಲಿ ದಿನವೊಂದಕ್ಕೆ 100 ಕ್ವಿಂಟಲ್‌ನಿಂದ 150 ಕ್ವಿಂಟಲ್ ಕೊಬ್ಬರಿ ಖರೀದಿಸಲಾಗುತ್ತದೆ. ಪ್ರತಿದಿನ 10ರಿಂದ 15 ಮಂದಿ ರೈತರು ಕೊಬ್ಬರಿ ಮಾರಾಟ ಮಾಡಬಹುದು. ಈಗಾಗಲೇ, ನೋಂದಣಿ ಮಾಡಿಕೊಂಡಿರುವ ಕೇಂದ್ರಗಳಲ್ಲಿಯೇ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.
ಎಲ್ಲ ಖರೀದಿ ಕೇಂದ್ರಗಳ ಬಳಿ ಏಪ್ರಿಲ್ 6ರವರೆಗೆ ಮಾರುಕಟ್ಟೆಗೆ ಕೊಬ್ಬರಿ ತರಬೇಕಿರುವ ರೈತರ ಪಟ್ಟಿ ಪ್ರಕಟಿಸಲಾಗಿದೆ. ಹೆಸರು ನೋಂದಣಿ ಮಾಡಿಕೊಂಡಿರುವ ಆಧಾರದ ಮೇಲೆ ಪಟ್ಟಿ ಹಾಕಲಾಗಿದೆ. ಎಲ್ಲ ರೈತರು ಒಂದೇ ದಿನ ಕೇಂದ್ರಗಳ ಹತ್ತಿರ ಬಂದು ಕಾಯುವುದನ್ನು ತಪ್ಪಿಸುವ ಉದ್ದೇಶದಿಂದ ಮುಂಚಿತವಾಗಿಯೇ ರೈತರಿಗೆ ಮಾಹಿತಿ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಿವಿಧ ಸಮುದಾಯಗಳ ಮುಖಂಡರೊಂದಿಗೆ ಸಭೆ; ಮತಯಾಚನೆ ಮಾಡಿದ ಕೈ ಅಭ್ಯರ್ಥಿ
ಈ ವರ್ಷ ಕೊಬ್ಬರಿ ಖರೀದಿಗೆ ಎರಡು ಬಾರಿ ನೋಂದಣಿ ಪ್ರಕ್ರಿಯೆ ನಡೆದಿತ್ತು. ಮೊದಲ ಬಾರಿಗೆ ಜನವರಿಯಲ್ಲಿ ನೋಂದಣಿ ಆರಂಭಿಸಲಾಯಿತು. ನೋಂದಣಿಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದ ನಂತರ ಇಡೀ ಪ್ರಕ್ರಿಯೆಯನ್ನು ರದ್ದುಪಡಿಸಿ, ಮರುನೋಂದಣಿಗೆ ಅವಕಾಶ ಮಾಡಿಕೊಡಲಾಯಿತು.
