ರೌಡಿಶೀಟರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಆರೋಪದ ಮೇಲೆ ಹುಲಿಯೂರುದುರ್ಗ ಪಿಎಸ್‌ಐ ಸುನೀಲ್ ಕುಮಾರ್ ಅವರನ್ನು ಅಮಾನತು ಮಾಡಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್ ಆದೇಶಿಸಿದ್ದಾರೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್ ಆಟೊ ರಾಮ ಮತ್ತು ಆತನ ಸಹಚರರು ಕಳೆದ ಡಿಸೆಂಬರ್ 30ರಂದು ರಾತ್ರಿ ಮತ್ತೊಬ್ಬ ರೌಡಿ ಶೀಟರ್ ಸುರೇಶ್ ಅಲಿಯಾಸ್ ಕ್ಯಾಪ್ಟನ್ ಸೂರಿ ಚಲಿಸುತ್ತಿದ್ದ ಕಾರಿಗೆ ಮತ್ತೊಂದು ಕಾರಿನಿಂದ ಢಿಕ್ಕಿ ಹೊಡೆದು, ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಕಂಪಲಪುರ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದಿದ್ದರು. ಈ ಸಂಬಂಧ ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸಬ್ ಇನ್ಸ್‌ಪೆಕ್ಟರ್ ಕರ್ತವ್ಯಲೋಪ ಕಂಡುಬಂದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತುಪಡಿಸಿ, ಎಸ್ಪಿ
ಕೆ.ವಿ.ಆಶೋಕ್ ಆದೇಶಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ತಪ್ಪಿತಸ್ಥ ಪೊಲೀಸರಿಗೆ ಎಸ್‌ಪಿ ಅಶೋಕ್ ಕೆ ವಿ ಅವರು ಅಮಾನತಿನ ಶಿಕ್ಷೆ ನೀಡುವ ಮೂಲಕ ಕಾನೂನು ಎಲ್ಲರಿಗೂ ಒಂದೇ ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭರವಸೆ ಮೂಡಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ದಲಿತ ಮಹಿಳೆ ಮೇಲೆ ಹಲ್ಲೆ; ಸವರ್ಣೀಯರ ವಿರುದ್ಧ ದೂರು ದಾಖಲು
“ಸಮಾಜ ಘಾತುಕರೊಂದಿಗೆ ಸೇರಿಕೊಂಡು ತಮ್ಮ ಕರ್ತವ್ಯಕ್ಕೆ ಹಾಗೂ ಸಮಾಜಕ್ಕೆ ದ್ರೋಹ ಬಗೆಯುವ ಅಧಿಕಾರಿಗಳಿಗೆ ಎಸ್‌ಪಿ ತಕ್ಕ ಪಾಠ ಕಲಿಸುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಸ್ವಚ್ಛ ಪೊಲೀಸ್ ವ್ಯವಸ್ಥೆ ಜಾರಿಗೆ ಎಸ್‌ಪಿ ಶ್ರಮಿಸುತ್ತಿದ್ದಾರೆ” ಎಂದು ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.