ನೆಲ ಸಾರಿಸಲು ಮನೆ ಮುಂದೆ ಬಿದ್ದಿದ್ದ ಸಗಣಿ ತೆಗೆದುಕೊಂಡು ಬಂದಿದ್ದಾರೆಂಬ ಕಾರಣಕ್ಕೆ ಸವರ್ಣೀಯರು ದಲಿತ ಮಹಿಳೆಯ ಮೇಲೆ ಹಲ್ಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಅರಬಘಟ್ಟ ಗ್ರಾಮದಲ್ಲಿ ನಡೆದಿದೆ.
ಅರಬಘಟ್ಟ ಗ್ರಾಮದ ವಸಂತಮ್ಮ ಎನ್ನುವ ದಲಿತ ಮಹಿಳೆ ಹಲ್ಲೆಗೊಳಗಾಗಿರುವ ಸಂತ್ರಸ್ತೆ. ಇವರು ಸವರ್ಣೀಯರ ಮನೆ ಮುಂದೆ ಬಿದ್ದಿದ್ದ ಸಗಣಿಯನ್ನು ನೆಲಸಾರಿಸಲು ತೆಗೆದುಕೊಂಡ ಕಾರಣ ಮನೆಯ ಮಾಲೀಕರೆಲ್ಲರೂ ಸೇರಿ ಮನೆಯೊಳಗಿನಿಂದ ದರ ದರನೆ ಎಳೆದು ತಂದು ಮೈ ಮೇಲೆ ಬಟ್ಟೆ ಇಲ್ಲದಂತೆ ಮಾಡಿ ಮನಬಂದಂತೆ ಥಳಿಸಿ ದೌರ್ಜನ್ಯ ಎಸಗಿದ್ದಾರೆ.
“ಸತೀಶ, ಯೋಗೇಶ, ದ್ರಾಕ್ಷಾಯಿಣಮ್ಮ ಮತ್ತು ಕವಿತ ಎನ್ನುವವರು ನನ್ನನ್ನು ಮನೆಯಿಂದ ಎಳೆತಂದು ಹೊಡೆದಿದ್ದಾರೆ. ಸಾಲದೆಂಬಂತೆ ಮರ್ಮಾಂಗಕ್ಕೆ ಕಾಲಿನಿಂದ ಹೊದ್ದಿದ್ದಾರೆ. ಬಟ್ಟೆಯನ್ನು ಹರಿದು ಹಾಕಿ ಜಾತಿ ನಿಂದನೆ ಮಾಡಿದ್ದಾರೆ ಇವರ ದೌರ್ಜನ್ಯದಿಂದಾಗಿ ನಾವು ಊರಿನಲ್ಲಿ ಇರದಂತಾಗಿದೆ” ಎಂದು ಹಲ್ಲೆಗೊಳಗಾದ ವಸಂತಮ್ಮ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸ್ವಚ್ಛ ನಗರಗಳಲ್ಲಿ 27ನೇ ಸ್ಥಾನಕ್ಕೆ ಕುಸಿದ ಮೈಸೂರು
ಸಂತ್ರಸ್ತ ಮಹಿಳೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಹೊಸದುರ್ಗ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆಯ ವಿಷಯ ತಿಳಿಯುತ್ತಿದ್ದಂತೆ ಸಮಾಜದ ಮುಖಂಡರುಗಳಾದ ಕೃಷ್ಣಪ್ಪ, ರಾಮಣ್ಣ, ಪರಮೇಶ್ವರ್ ಸೇರಿದಂತೆ ಇತರರು ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಗೆ ಸಾಂತ್ವಾನ ಹೇಳಿದ್ದಾರೆ.