ಮಗಳ ಸಾವಿನ ದುಃಖದಲ್ಲೂ ಸಹ ಆಕೆಯ ಅಂಗಾಂಗ ದಾನ ಮಾಡುವ ಮೂಲಕ ಪೋಷಕರು ಸಾರ್ಥಕತೆಯನ್ನ ಮೆರೆದ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಡೆದಿದೆ.
ತಿಪಟೂರು ನಗರದ ಹಳೆ ಪಾಳ್ಯ ನಿವಾಸಿ ವಸಂತಕುಮಾರ್, ದಿವ್ಯಾ ದಂಪತಿಯ 12 ವರ್ಷದ ಮಗಳು ಚಂದನಾ ಅಪಘಾತದಲ್ಲಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಳು.
ಅಪ್ಪ ಅಮ್ಮನ ಪ್ರೀತಿಯ ಮಗಳಾಗಿದ್ದ ಚಂದನಾ, ಹಲವು ಕನಸು ಕಟ್ಟಿಕೊಂಡಿದ್ದಳು. ತಿಪಟೂರು ನಗರದ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಳು. ಶಾಲೆ ಮುಗಿಸಿ ಮನೆಗೆ ತೆರಳಲು ರಸ್ತೆ ದಾಟುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಚಂದನಾಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹಾಸನ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು.

ಸತತ ಏಳು ದಿನಗಳ ಚಿಕಿತ್ಸೆ ನಂತರ ಚಿಕಿತ್ಸೆ ಫಲಕಾರಿಯಾಗದೆ ಜು.29 ರಂದು ಮೆದುಳು ನಿಷ್ಕ್ರಿಯಗೊಂಡಿದೆ. ಮಗಳು ಬದುಕುವ ಸಾಧ್ಯತೆ ಇಲ್ಲ ಎಂದು ತಿಳಿದ ವಿದ್ಯಾರ್ಥಿನಿಯ ತಂದೆ ವಸಂತ್ ಕುಮಾರ್, ತಾಯಿ ದಿವ್ಯಾ ಮಗಳು ಚಂದನಾಳ ಅಂಗಾಗಗಳನ್ನ ದಾನ ಮಾಡುವ ನಿರ್ಧಾರ ಮಾಡಿದ್ದಾರೆ. ವಿದ್ಯಾರ್ಥಿನಿ ಚಂದನಾಳ ಕಣ್ಣು, ಕಿಡ್ನಿ, ಹೃದಯ, ಸೇರಿದಂತೆ ಬಹು ಅಂಗಾಗಗಳನ್ನ 6 ಜನ ಮಕ್ಕಳಿಗೆ ನೀಡುವ ಮೂಲಕ ಜೀವದಾನ ಮಾಡಿದ್ದಾರೆ. ಆ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ವಿದ್ಯಾರ್ಥಿನಿ ಚಂದನ ಸಾವಿಗೆ ಇಡೀ ಕಲ್ಪತರು ನಾಡು ತಿಪಟೂರು ಕಂಬನಿ ಮಿಡಿದಿದೆ. ಚಂದನಾಳ ಮೃತದೇಹವು ಹಾಸನ ಆಸ್ಪತ್ರೆಯಿಂದ ಹೊರಟು ತಿಪಟೂರಿಗೆ ಆಗಮಿಸುತ್ತಿದ್ದಂತೆ ಜನರು ಅಂತಿಮ ದರ್ಶನ ಪಡೆಯಲು ಮುಗಿಬಿದ್ದರು.
ತಿಪಟೂರು ನಗರದ ಹಾಸನ ವೃತ್ತದಿಂದ ನಗರ ಪ್ರಮುಖ ರಸ್ತೆಯಲ್ಲಿ ಚಂದನಾ ಪಾರ್ಥೀವ ಶರೀರದ ಮೆರವಣಿಗೆ ನಡೆಸಲಾಯಿತು. ಇದೇ ವೇಳೆ ಚಂದನಾ ಮೃತದೇಹಕ್ಕೆ ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ ನೇತೃತ್ವದಲ್ಲಿ ತಾಲೂಕು ಆಡಳಿತದ ವತಿಯಿಂದ ಸರ್ಕಾರಿ ಗೌರವ ಸಲ್ಲಿಸಲಾಯಿತು.
ಮಾಜಿ ಸಚಿವ ಬಿ ಸಿ ನಾಗೇಶ್, ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್, ಖ್ಯಾತ ವೈದ್ಯರಾದ ಡಾ. ಶ್ರೀಧರ್, ಡಾ.ವಿವೇಚನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಡೇನೂರು ಕಾಂತರಾಜು, ಶ್ರೀವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್ ಮುಖ್ಯಸ್ಥ ಕೇಶವ, ತಹಶೀಲ್ದಾರ್ ಪವನ್ ಕುಮಾರ್, ಇಒ ಸುದರ್ಶನ್, ಡಿವೈಎಸ್‌ಪಿ ವಿನಾಯಕ ಶೆಟ್ಟಿಗೇರಿ, ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ ಸೇರಿದಂತೆ ಹಲವು ಗಣ್ಯರು ಮೃತ ಚಂದನಾಳ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಚಂದನಾ ವಿದ್ಯಾಭ್ಯಾಸ ಮಾಡುತ್ತಿದ್ದ ಶ್ರೀವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿಗಳು, ಸಹಪಾಠಿಗಳು, ಚಂದನಾ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಕಣ್ಣೀರಿಟ್ಟರು. ಬಳಿಕ ವಿದ್ಯಾರ್ಥಿನಿ ಸ್ವಗ್ರಾಮ ಹಳೇಪಾಳ್ಯದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಶವಸಂಸ್ಕಾರ ನೆರವೇರಿಸಲಾಯಿತು.

