ಬಣ್ಣಬಣ್ಣದ ರಂಗೋಲಿ ಚಿತ್ತಾರ, ಕ್ರೀಡಾ ಸ್ಪರ್ಧೆಗಳ ಸಂಭ್ರಮ, ಮಹಿಳೆಯರ ಉತ್ಸಾಹದ ಪಾಲ್ಗೊಳ್ಳುವಿಕೆ. ಇಂತಹ ವೈವಿಧ್ಯಮಯ ಚಟುವಟಿಕೆಗಳಿಗೆ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದ ಒಳಾಂಗಣ ಸಾಕ್ಷಿಯಾಯಿತು.
ತುಮಕೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಮಹಿಳಾ ದಸರಾ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ರಂಗೋಲಿ, ಹಗ್ಗಜಗ್ಗಾಟ, ಬಲೂನ್ ರೇಸ್, ಲೆಗ್ ಟೈಡ್ ರೇಸ್, ಮ್ಯೂಸಿಕಲ್ ಚೇರ್ ಹಾಗೂ ಹೂ ಕಟ್ಟುವ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ರಂಗೋಲಿ ಬಿಡಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಎಳೆ ರಂಗೋಲಿ ಮತ್ತು ಚುಕ್ಕಿ ರಂಗೋಲಿ ವಿಭಾಗಗಳಲ್ಲಿ 150ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡು, ಆಕರ್ಷಕ ವಿನ್ಯಾಸಗಳು ಹಾಗೂ ಬಣ್ಣಗಳ ಸಂಯೋಜನೆಯ ಮೂಲಕ ತಮ್ಮ ಸೃಜನಶೀಲತೆಯನ್ನು ಅನಾವರಣಗೊಳಿಸಿದರು. ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ರಂಗೋಲಿ ಚಿತ್ತಾರಗಳನ್ನು ವೀಕ್ಷಿಸಿದರು.
ಮಹಿಳೆಯರು ಮನೆ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ, ಕಲಾತ್ಮಕ ಚಟುವಟಿಕೆಗಳಲ್ಲಿಯೂ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ರಂಗೋಲಿ ಸ್ಪರ್ಧೆಯಲ್ಲಿ ಮೂಡಿಬಂದ ವೈವಿಧ್ಯಮಯ ವಿನ್ಯಾಸಗಳು ಅವರ ಸೃಜನಶೀಲತೆಗೆ ಸಾಕ್ಷಿಯಾಗಿವೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ.ಸಿದ್ದರಾಮಣ್ಣ ಮಾತನಾಡಿ, ತುಮಕೂರು ನಗರ ಮಾತ್ರವಲ್ಲದೆ ವಿವಿಧ ಪ್ರದೇಶಗಳಿಂದಲೂ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಮಹಿಳಾ ದಸರಾ ಅಂಗವಾಗಿ ನಡೆಯುವ ಪ್ರತಿ ಸ್ಪರ್ಧೆಯಲ್ಲೂ ವಿಜೇತರಿಗೆ ಮೂರು ಬಹುಮಾನಗಳನ್ನು ವಿತರಿಸಲಾಗುವುದು ಎಂದರು.

ನಾಡಹಬ್ಬದ ಸಾಂಸ್ಕೃತಿಕ ಸಂಭ್ರಮಕ್ಕೆ ಮೆರುಗು ನೀಡಿದ ಮಹಿಳಾ ದಸರಾ, ಮಹಿಳೆಯರ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗುವುದರ ಜತೆಗೆ ಸಾಂಪ್ರದಾಯಿಕ ರಂಗೋಲಿ ಕಲೆಯ ಸಂರಕ್ಷಣೆಗೂ ಪ್ರೋತ್ಸಾಹ ನೀಡಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್.ಜೆ.ಪವಿತ್ರ, ಮಕ್ಕಳ ಅಭಿವೃದ್ಧಿ ಅಧಿಕಾರಿ ಅಂಬಿಕ, ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರಾಜು, ಗ್ರಾಮಾಂತರ ಯೋಜನಾಧಿಕಾರಿ ಶಶಿಧರ್, ಜಾಹ್ನವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.





