ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ; ಸುಪ್ರೀಂನದ್ದು ದ್ವಂದ್ವ ನಿಲುವಲ್ಲವೇ?

Date:

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ ನೀಡುವುದಾಗಿ ನೀಡಿರುವ ಭರವಸೆಗಳು ಸುಪ್ರೀಂ ಕೋರ್ಟಿನ ಆದ್ಯತೆಗಳು ಹಾಗೂ ದ್ವಂದ್ವ ನಿಲುವುಗಳ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

- Advertisement -

ಅಕ್ಟೋಬರ್ ತಿಂಗಳ ಆರಂಭದಲ್ಲಿ ದೆಹಲಿಯಲ್ಲಿ ನಡೆದ ಬೆಳವಣಿಗೆಗಳು ಭಾರತೀಯ ಪ್ರಜಾಪ್ರಭುತ್ವದ ಅತಿ ಸೂಕ್ಷ್ಮ ಸಂಘರ್ಷದ ಕ್ಷಣಗಳಿಗೆ ಸಾಕ್ಷಿಯಾದವು. ಮುಖ್ಯ ಚುನಾವಣಾ ಆಯುಕ್ತರ ಕಾರ್ಯವೈಖರಿ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪಗಳು ಮತ್ತು ನಾಗರಿಕರ ಪ್ರತಿಭಟನಾ ಹಕ್ಕಿನ ಪ್ರಶ್ನೆಗಳು ಬೀದಿಗಿಳಿದಿದ್ದವು. ದೆಹಲಿ ಪ್ರತಿಭಟನೆಗಳ ಸಂದರ್ಭದಲ್ಲಿ ಪೊಲೀಸರು ವಿಧಿಸಿದ ನಿರ್ಬಂಧಗಳು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಕ್ರಮಗಳು ಮತ್ತು ಸಾರ್ವಜನಿಕ ಸಭೆಗಳಿಗೆ ಅನುಮತಿ ನೀಡದಿರುವ ವಿಚಾರಗಳು ಕಾನೂನು ವಿವಾದಕ್ಕೆ ಕಾರಣವಾದವು. ಅಕ್ಟೋಬರ್ 5ರಂದು ಚುನಾವಣಾ ಆಯೋಗದ ವಿರುದ್ಧದ ಅರ್ಜಿಗಳ ವಿಚಾರಣೆ, ಅಕ್ಟೋಬರ್ 10-11ರ ತೀವ್ರ ಪ್ರತಿಭಟನೆಗಳು, ಸಾಮೂಹಿಕ ಬಂಧನಗಳು, ಇಂಟರ್ನೆಟ್ ಮತ್ತು ಮೆಟ್ರೋ ಸೇವೆಗಳನ್ನು ಬಂದ್‌ ಮಾಡಿದ ಘಟನೆಗಳು ಜರುಗಿದವು. ಅಕ್ಟೋಬರ್ 11ರಂದು ಸುಪ್ರೀಂ ಕೋರ್ಟ್ ಭಾನುವಾರದ ವಿಶೇಷ ವಿಚಾರಣೆ ನಡೆಸಿ ಮುಕ್ತ ಸಂಚಾರ ಮತ್ತು ಕೆಲವು ಮಧ್ಯಂತರ ಹಕ್ಕುಗಳ ರಕ್ಷಣೆಗೆ ನಿರ್ದೇಶನ ನೀಡಿತ್ತಾದರೂ, ಒಟ್ಟು 46 ಅರ್ಜಿಗಳನ್ನು ಅಕ್ಟೋಬರ್ 15ರಂದು ವಿಚಾರಣೆಗೆ ಕೈಗೆತ್ತಿಕೊಂಡ ಮೇಲೂ ತ್ವರಿತ ವಿಚಾರಣೆ ನಡೆಸಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಶಿವಮೊಗ್ಗ | ಅಸುರಕ್ಷತೆಯ ತಾಣವಾದ ರೈಲ್ವೆ ನಿಲ್ದಾಣ: ಪ್ರಯಾಣಿಕರ...

ಕುಡಿಯುವ ನೀರಿಲ್ಲದಿರುವುದು, ಹಾಳಾದ ಶೌಚಾಲಯಗಳು, ರಾತ್ರಿ ವೇಳೆ ಬೀದಿದೀಪ ಹಾಗೂ ಕಾವಲುಗಾರರ ಕೊರತೆಯಿಂದಾಗಿ ಈ ನಿಲ್ದಾಣವು ನಿರ್ಜನ ಪ್ರದೇಶದಂತೆ ಭಾಸವಾಗುತ್ತಿದೆ. ಇದರೊಂದಿಗೆ ಕಳ್ಳತನ, ಅನೈತಿಕ ಚಟುವಟಿಕೆಗಳು ಹೆಚ್ಚಾಗಿರುವುದು ಜೊತೆಗೆ ಸಿಸಿಟಿವಿ ಕ್ಯಾಮೆರಾಗಳೂ ಇಲ್ಲದಿರುವುದು...

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಚುನಾವಣಾ ಆಯೋಗದ ಕಾರ್ಯವೈಖರಿ, ಮುಖ್ಯ ಚುನಾವಣಾ ಆಯುಕ್ತರ ಅಧಿಕಾರ ದುರ್ಬಳಕೆ ಮತ್ತು SIR ಪ್ರಕ್ರಿಯೆಯ ಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಅಕ್ಟೋಬರ್ 5ರಂದು ಸುಪ್ರೀಂ ಕೋರ್ಟ್‌ ವಿಚಾರಣೆಗೆ ಕೈಗೆತ್ತಿಕೊಂಡಿತು. ಅರ್ಜಿಗಳಲ್ಲಿ SIR ಪ್ರಕ್ರಿಯೆಯನ್ನು ಕಾನೂನುಬಾಹಿರವೆಂದು ಘೋಷಿಸಬೇಕು, ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ತನಿಖೆ ನಡೆಸಬೇಕು ಎಂಬ ಬೇಡಿಕೆಗಳೂ ಸೇರಿದ್ದವು. ನ್ಯಾಯಾಲಯವು ಚುನಾವಣಾ ಆಯೋಗಕ್ಕೆ ನೋಟಿಸ್‌ ಜಾರಿ ಮಾಡಿ ಪ್ರತಿಕ್ರಿಯೆ ಕೇಳಿತು. ಅಕ್ಟೋಬರ್ 10ರಂದು ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧದ ಪ್ರತಿಭಟನೆಗಳು ತೀವ್ರಗೊಂಡವು. ಜಂತರ್ ಮಂತರ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿ, ಸಾವಿರಾರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಪತ್ರಕರ್ತರು, ವಕೀಲರು ಮತ್ತು ರಾಜಕೀಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಆರೋಪಗಳೂ ಕೇಳಿಬಂದವು. ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ನಿರ್ಬಂಧಿಸಿದ್ದರ ಕುರಿತು ದೇಶಾದ್ಯಂತ ಆಕ್ರೋಶ ವ್ಯಕ್ತವಾಯಿತು. ಆದರೂ ಸುಪ್ರೀಂ ಕೋರ್ಟ್‌ ತ್ವರಿತ ಕ್ರಮಕೈಗೊಳ್ಳಲಿಲ್ಲ. ಅಕ್ಟೋಬರ್ 13ರಂದು, ದೆಹಲಿಯ ಪ್ರತಿಭಟನೆಗಳ ಸಂದರ್ಭದಲ್ಲಿ ವಿಧಿಸಲಾದ ನಿರ್ಬಂಧಗಳು, ಮೆಟ್ರೊ ಮತ್ತು ರೈಲು ಸೇವೆಗಳ ವ್ಯತ್ಯಯ, ಪ್ರತಿಭಟನಾಕಾರರ ಬಂಧನಗಳು ಹಾಗೂ ಪೊಲೀಸರ ಕ್ರಮಗಳ ಕುರಿತು ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಲಾಯಿತು.

Advertisements

ಇದೇ ಸರಣಿ ಘಟನೆಗಳ ಮುಂದುವರಿದ ಭಾಗವಾಗಿ CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಹಾಗೂ ಇತರ ನಾಯಕರ ಕರೆ ಮೇರೆಗೆ ಅಕ್ಟೋಬರ್ 16 ರಂದು ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ರಾಷ್ಟ್ರಧ್ವಜದೊಂದಿಗೆ ‘ತಿರಂಗಾ ಯಾತ್ರೆ’ ನಡೆಸಲು ನಿರ್ಧರಿಸಲಾಗಿತ್ತು. ಇದನ್ನು ತಡೆಯಲು ದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ವಿನಂತಿ ಮೇರೆಗೆ ದೆಹಲಿ ಪೊಲೀಸರು ಸೆಂಟ್ರಲ್ ಪಾರ್ಕ್ ಅನ್ನು ಸಂಪೂರ್ಣವಾಗಿ ಮುಚ್ಚಿ, ಬಿಎನ್‌ಎಸ್‌ಎಸ್ ಸೆಕ್ಷನ್ 163ರಡಿ (ನಿಷೇಧಾಜ್ಞೆ) ಕಾವಲು ಹೆಚ್ಚಿಸಿದ್ದರು.

ಈ ಪ್ರತಿಭಟನೆಯನ್ನು ತಡೆಯಲು ವ್ಯಾಪಾರಿಗಳ ಸಂಘಟನೆಗಳು ಹೈಕೋರ್ಟ್ ಮೊಕದ್ದಮೆ ಹೂಡಿದ್ದವು. ಹೈಕೋರ್ಟ್ ಪ್ರತಿಭಟನೆಯನ್ನು ಸಂಪೂರ್ಣವಾಗಿ ನಿಷೇಧಿಸಲು ನಿರಾಕರಿಸಿದರೂ, ಪೊಲೀಸರು ಕೇವಲ 11 ಜನರಿಗೆ ಮಾತ್ರ ಧ್ವಜ ಹಿಡಿದುಕೊಂಡು ಸಾಂಕೇತಿಕವಾಗಿ ತೆರಳಲು ಅವಕಾಶ ನೀಡುವುದಾಗಿ ತಿಳಿಸಿದ್ದರು. ಆದರೆ, ಪರಿಸ್ಥಿತಿ ತೀವ್ರ ಉದ್ವಿಗ್ನಗೊಂಡಿತ್ತು.

ಪ್ರತಿಭಟನೆ ಆರಂಭವಾಗುವ ಮುನ್ನವೇ ಸಿಜೆಪಿ ನಾಯಕರಾದ ಅಭಿಜೀತ್ ದೀಪ್ಕೆ ಮತ್ತು ಐಸಾ (AISA) ನಾಯಕಿ ನೇಹಾ ಬೋರಾ ಸೇರಿದಂತೆ ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದರು. ಇನ್ನುಳಿದಂತೆ CJP ನಾಯಕರಾದ ಆಶುತೋಷ್ ರಂಕಾ ಮತ್ತು ಸೌರವ್ ದಾಸ್ ಈಗಾಗಲೇ ಜೈಲಿನಲ್ಲಿದ್ದರು. ನಾಯಕರಿಲ್ಲದಿದ್ದರೂ ನೂರಾರು ಸಂಖ್ಯೆಯಲ್ಲಿ ಯುವಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕನ್ನಾಟ್ ಪ್ಲೇಸ್‌ನ ಇನ್ನರ್ ಸರ್ಕಲ್ ಹಾಗೂ ಪಾಲಿಖಾ ಬಜಾರ್ ಸುತ್ತಲೂ ರಾಷ್ಟ್ರಧ್ವಜ ಹಿಡಿದು ಜಮಾಯಿಸಿದರು. ಸ್ಥಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರನ್ನು ನಿಯೋಜಿಸಲಾಗಿತ್ತು.

ಪ್ರತಿಭಟನೆ ಮತ್ತು ಕಾವಲು ಕ್ರಮಗಳಿಂದಾಗಿ ಕನ್ನಾಟ್ ಪ್ಲೇಸ್‌ನ ಪ್ರಮುಖ ಅಂಗಡಿಗಳು, ಶೋರೂಮ್‌ಗಳು ಹಾಗೂ ವಾಣಿಜ್ಯ ಚಟುವಟಿಕೆಗಳು ಸ್ತಬ್ಧಗೊಂಡು, ಹಬ್ಬದ ಸೀಸನ್‌ನಲ್ಲಿ ವ್ಯಾಪಾರಸ್ಥರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗುವ ಆತಂಕ ಎದುರಾಯಿತು. ಪೆಟ್ರೋಲ್ ಬಂಕ್‌ಗಳು, ಮೆಟ್ರೋ ನಿಲ್ದಾಣದ ಪ್ರವೇಶದ್ವಾರಗಳು ಹಾಗೂ ಪಬ್‌ಗಳ ಸುತ್ತಲೂ ಪೊಲೀಸರ ಕಣ್ಗಾವಲು ಇತ್ತು. ಕನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್ ಬಂದ್ ಮಾಡಲಾಗಿರುವ ನಿರ್ಧಾರ ಮತ್ತು ನಿಷೇಧಾಜ್ಞೆಗಳಿಂದ ವ್ಯಾಪಾರಿಗಳಿಗೆ ಸಂಭವಿಸಬಹುದಾದ ಭಾರಿ ನಷ್ಟದ ಕುರಿತು ವ್ಯಾಪಾರಿಗಳ ಸಂಘಟನೆಗಳು ಸುಪ್ರೀಂ ಕೋರ್ಟ್‌ನ ಮೊಕದ್ದಮೆ ಹೂಡಿದವು. ಕನಾಟ್ ಪ್ಲೇಸ್‌ನ ವ್ಯಾಪಾರಿಗಳ ಸಂಘಟನೆ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರು, ಸೆಂಟ್ರಲ್ ಪಾರ್ಕ್ ಬಂದ್ ಮತ್ತು ನಿಷೇಧಾಜ್ಞೆಗಳ ಕಾರಣದಿಂದ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿವೆ ಎಂದು ಸುಪ್ರೀಂ ಕೋರ್ಟ್‌ನ ಗಮನಕ್ಕೆ ತಂದರು. ವಿಶೇಷವಾಗಿ ದಸರಾ ಮತ್ತು ದೀಪಾವಳಿಯಂತಹ ಹಬ್ಬದ ಸೀಸನ್‌ನಲ್ಲಿ ವ್ಯಾಪಾರಸ್ಥರು ತಮ್ಮ ಇಡೀ ವರ್ಷದ ಆದಾಯದ ಸಿಂಹಪಾಲು ಗಳಿಸುವುದರಿಂದ, ಈ ರೀತಿಯ ಅನಿರೀಕ್ಷಿತ ಪ್ರತಿಭಟನೆಗಳು ಮತ್ತು ಪೊಲೀಸ್ ದಿಗ್ಬಂಧನಗಳಿಂದಾಗಿ ದಿನಕ್ಕೆ ಬರೋಬ್ಬರಿ ₹250 ಕೋಟಿಗೂ ಅಧಿಕ ನಷ್ಟವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಈ ವಾದವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು, ಹಬ್ಬದ ಈ ಸಂದರ್ಭದಲ್ಲಿ ಸಣ್ಣ ಅಂಗಡಿಕಾರರು, ಬೀದಿಬದಿ ವ್ಯಾಪಾರಿಗಳು ಮತ್ತು ದಿನಗೂಲಿ ಕಾರ್ಮಿಕರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ಹಾಗೂ ಕಷ್ಟ-ಕಾರ್ಪಣ್ಯಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತು. ಈ ವೇಳೆ ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ, “ವ್ಯಾಪಾರಕ್ಕೆ ನಷ್ಟ ಉಂಟಾದರೆ ಮತ್ತು ಅದು ನಿಮ್ಮ ಕಕ್ಷಿದಾರರಿಗೆ ಕಾನೂನುಬಾಹಿರವಾಗಿ ಸಂಭವಿಸಿದ್ದರೆ, ನಾವು ನಮ್ಮ ‘ಸಾಂವಿಧಾನಿಕ ಟಾರ್ಟ್’ (Constitutional Tort) ಅಧಿಕಾರವನ್ನು ಬಳಸಿ ಪರಿಹಾರ ನೀಡುತ್ತೇವೆ” ಎಂದು ತಿಳಿಸಿದರು. ಅಲ್ಲದೆ, ಪ್ರತಿಭಟನಾಕಾರರು, ವ್ಯಾಪಾರಿಗಳು ಮತ್ತು ಕಾನೂನು-ಸುವ್ಯವಸ್ಥೆ ಕಾಪಾಡುವ ಅಧಿಕಾರಿಗಳ ಸ್ಪರ್ಧಾತ್ಮಕ ಹಿತಾಸಕ್ತಿಗಳು ಒಂದಕ್ಕೊಂದು ಸಮತೋಲನದಲ್ಲಿರಬೇಕು ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಅನಗತ್ಯ ಹಾಗೂ ಅಸಮಾನವಾದ ನಿರ್ಬಂಧಗಳಿಂದ ವ್ಯಾಪಾರಿಗಳ ಬದುಕಿಗೆ ಧಕ್ಕೆಯುಂಟಾದರೆ ಸಾರ್ವಜನಿಕ ಕಾನೂನು ಮತ್ತು ಪರಿಹಾರ ಕಾನೂನಿನಡಿ ಮಧ್ಯಪ್ರವೇಶಿಸಿ ಪರಿಹಾರ ಒದಗಿಸುವ ವಿಶಾಲ ಅಧಿಕಾರ ತಮಗಿದೆ ಎಂಬುದನ್ನು ಸ್ಪಷ್ಟಪಡಿಸಿತು.

ಕಾನಾಟ್ ಪ್ಲೇಸ್‌ನ ಸುತ್ತಲಿನ ಪ್ರತಿಬಂಧಕ ಕ್ರಮಗಳು ಮತ್ತು ದಿಗ್ಬಂಧನಗಳಿಂದಾಗಿ ಹಬ್ಬದ ಸೀಸನ್‌ನಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸಣ್ಣ ವ್ಯಾಪಾರಿಗಳು, ಬೀದಿಬದಿ ಮಾರಾಟಗಾರರು ಹಾಗೂ ದಿನಗೂಲಿ ಕಾರ್ಮಿಕರ ಆರ್ಥಿಕ ನಷ್ಟಕ್ಕೆ ಸ್ಪಂದಿಸುವುದಾಗಿ ಸುಪ್ರೀಂ ಕೋರ್ಟ್ ನೀಡಿರುವ ಭರವಸೆ ಅತ್ಯಂತ ಸ್ವಾಗತಾರ್ಹ. ವರ್ಷವಿಡೀ ಹಬ್ಬದ ಮಾರುಕಟ್ಟೆಯನ್ನೇ ನಂಬಿ ಬದುಕು ಕಟ್ಟಿಕೊಳ್ಳುವ ಬಡ ಶ್ರಮಿಕರು ಮತ್ತು ಸಣ್ಣ ಅಂಗಡಿಕಾರರ ಬದುಕಿಗೆ ರಕ್ಷಣೆ ನೀಡುವುದು ಹಾಗೂ ಅವರ ಜೀವನೋಪಾಯದ ಹಕ್ಕನ್ನು ಎತ್ತಿಹಿಡಿಯುವುದು ಕಲ್ಯಾಣ ರಾಜ್ಯದ ಆಡಳಿತ ಮತ್ತು ನ್ಯಾಯಾಂಗದ ಮಹತ್ವದ ಜವಾಬ್ದಾರಿಯಾಗಿದೆ. ಪ್ರತಿಭಟನೆಗಳು ಅಥವಾ ಆಡಳಿತಾತ್ಮಕ ನಿರ್ಬಂಧಗಳ ಭರಾಟೆಯಲ್ಲಿ ಬಡವರ ಅಡುಗೆಮನೆಗೆ ಕಲ್ಲುಬೀಳದಂತೆ ಎಚ್ಚೆತ್ತುಕೊಂಡ ನ್ಯಾಯಾಲಯದ ಈ ಮಾನವೀಯ ಹಾಗೂ ಸಂವೇದನಾಶೀಲ ಕಾಳಜಿಯು ಖಂಡಿತವಾಗಿಯೂ ಪ್ರಶಂಸನೀಯವಾದದ್ದು.

ಇದನ್ನೂ ಓದಿ: ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ? ಅಂಜಲಿ ಭಾರದ್ವಾಜ್‌ ಏನು ಹೇಳುತ್ತಾರೆ?

ಆದರೆ, ಇದೇ ಮಾನವೀಯ ಕಾಳಜಿಯ ಮಾನದಂಡವನ್ನು ಚುನಾವಣಾ ಜನತಂತ್ರದ ಪ್ರಶ್ನೆಗಳಿಗೂ ಅನ್ವಯಿಸಬೇಕೆಂಬ ನಿರೀಕ್ಷೆ ಸಹಜವಾಗಿಯೇ ಮೂಡುತ್ತದೆ. ದೆಹಲಿಯ ರಸ್ತೆಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಮುಂದಾದ ವಿದ್ಯಾರ್ಥಿನಿಯರು, ಪತ್ರಕರ್ತೆಯರು, ವಿದ್ಯಾರ್ಥಿಗಳು ಮತ್ತು ನಾಗರಿಕರನ್ನು ಪೊಲೀಸರು ಬಲವಂತವಾಗಿ ಎಳೆದಾಡಿದಾಗ, ಹಕ್ಕುಗಳಿಗಾಗಿ ಧ್ವನಿಯೆತ್ತಿದ ಯುವಜನರ ಮೈಮೇಲೆ ಪೊಲೀಸರ ಲಾಠಿ ಏಟುಗಳು ಬಿದ್ದಾಗ, ಅವರನ್ನು ವಶಕ್ಕೆ ಪಡೆದು ವ್ಯಾನುಗಳಲ್ಲಿ ತುಂಬಿ ಅಜ್ಞಾತ ಸ್ಥಳಗಳಿಗೆ ಕೊಂಡೊಯ್ದಾಗಲೂ ಇದೇ ಮಾನವೀಯ ಕಾಳಜಿ ಕಾಣಿಸಬೇಕಿತ್ತು. ಈ ದೇಶದ ಯುವಜನರನ್ನು ಶತ್ರು ದೇಶದ ಪ್ರಜೆಗಳಂತೆ ನಡೆಸಿಕೊಂಡು, ಅವರ ಘನತೆ, ಸ್ವಾತಂತ್ರ್ಯ ಮತ್ತು ಪ್ರತಿಭಟನೆಯ ಹಕ್ಕುಗಳನ್ನು ಪೊಲೀಸರು ಕಸಿದುಕೊಂಡಾಗ ನ್ಯಾಯಾಲಯ ಮಧ್ಯಪ್ರವೇಶಿಸಿ ಪೊಲೀಸರ ಹೊಣೆಗಾರಿಕೆಯನ್ನು ನಿಗದಿಪಡಿಸುವುದು ನ್ಯಾಯಾಲಯದ ಆದ್ಯತೆಯಾಗಬೇಕಿತ್ತು. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸುವ ವಿಚಾರದಲ್ಲಿಯೂ ಇದೇ ಸಂವೇದನಾಶೀಲತೆಯನ್ನು ತೋರಬೇಕಿತ್ತು ಎಂಬುದು ಈ ದೇಶದ ಸಾಮಾನ್ಯ ಪ್ರಜೆಗಳ ಸಂವಿಧಾನಾತ್ಮಕ ನಿರೀಕ್ಷೆ.

ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆಗಳನ್ನು ನಡೆಸುವುದು, ಮತಗಳನ್ನು ಎಣಿಸುವುದು ಮತ್ತು ಸರ್ಕಾರಗಳನ್ನು ರಚಿಸುವುದಷ್ಟೇ ಅಲ್ಲ. ಆ ಪ್ರಕ್ರಿಯೆಯ ಮೇಲೆ ಜನರಿಗೆ ವಿಶ್ವಾಸವಿರುವಂತೆ ನೋಡಿಕೊಳ್ಳುವುದು, ಭಿನ್ನಾಭಿಪ್ರಾಯಗಳಿಗೆ ಅವಕಾಶ ಕಲ್ಪಿಸುವುದು ಮತ್ತು ಅಧಿಕಾರದ ದುರ್ಬಳಕೆಯ ವಿರುದ್ಧ ನಾಗರಿಕರ ಹಕ್ಕುಗಳನ್ನು ರಕ್ಷಿಸುವುದೂ ಅದರ ಅವಿಭಾಜ್ಯ ಭಾಗ. ವ್ಯಾಪಾರಿಗಳ ಜೀವನೋಪಾಯಕ್ಕೆ ಧಕ್ಕೆಯಾದಾಗ ಪರಿಹಾರದ ಸಾಧ್ಯತೆಯನ್ನು ನೆನಪಿಸುವ ನ್ಯಾಯಾಂಗ, ಜನತಂತ್ರದ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸುವ ನಾಗರಿಕರ ಹಕ್ಕುಗಳ ರಕ್ಷಣೆಯಲ್ಲಿಯೂ ಅಷ್ಟೇ ದೃಢವಾಗಿ ನಿಲ್ಲಬೇಕೆಂಬ ನಿರೀಕ್ಷೆ ಸಹಜ. ಇಲ್ಲಿ ಪ್ರಶ್ನೆ ವ್ಯಾಪಾರಿಗಳ ಪರವಾಗಿ ಮಾತ್ರ ನ್ಯಾಯಾಲಯ ಕಾಳಜಿ ತೋರಿದ್ದೇಕೆ ಎಂಬುದಲ್ಲ, ಅದೇ ಸಂವಿಧಾನಾತ್ಮಕ ಸಂವೇದನೆ ನಾಗರಿಕ ಸ್ವಾತಂತ್ರ್ಯ, ಶಾಂತಿಯುತ ಪ್ರತಿಭಟನೆ ಮತ್ತು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ವಿಷಯಗಳಲ್ಲಿಯೂ ಸಮಾನವಾಗಿ ಪ್ರತಿಫಲಿಸುತ್ತಿದೆಯೇ ಎಂಬುದು. ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ ನೀಡುವ ನ್ಯಾಯಾಂಗ, ಜನತಂತ್ರದ ಹಕ್ಕುಗಳಿಗೆ ಧಕ್ಕೆಯಾದಾಗಲೂ ಅಷ್ಟೇ ತುರ್ತಾಗಿ ಸ್ಪಂದಿಸಬೇಕಲ್ಲವೇ? ಜನತಂತ್ರದ ಬಿಕ್ಕಟ್ಟಿನ ಸಂದರ್ಭದಲ್ಲಿ ನ್ಯಾಯಾಂಗದ ಮೌನ ತಾಳುತ್ತದೆ ಎನ್ನುವ ಜನರ ಭಾವನೆಯನ್ನು ನಿವಾರಿಸುವುದು, ಹಕ್ಕುಗಳ ಉಲ್ಲಂಘನೆಯ ಆರೋಪಗಳನ್ನು ನಿಷ್ಪಕ್ಷಪಾತವಾಗಿ ಪರಿಶೀಲಿಸುವುದು ಮತ್ತು ಅಧಿಕಾರ ದುರ್ಬಳಕೆಗೆ ಹೊಣೆಗಾರಿಕೆ ನಿಗದಿಪಡಿಸುವುದು ನ್ಯಾಯದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಬಲಪಡಿಸಲು ಅತ್ಯಗತ್ಯ. ವ್ಯಾಪಾರದ ರಕ್ಷಣೆಯೂ ಮುಖ್ಯ, ಜನತಂತ್ರದ ರಕ್ಷಣೆಯೂ ಮುಖ್ಯ. ಆದರೆ ಜನತಂತ್ರವೇ ದುರ್ಬಲವಾದರೆ ಉಳಿದ ಹಕ್ಕುಗಳಿಗೆ ರಕ್ಷಣೆ ಒದಗಿಸುವ ವ್ಯವಸ್ಥೆಯೂ ದುರ್ಬಲವಾಗುವ ಅಪಾಯವಿದೆ. ಇದೇ ಈ ಇಡೀ ವಿದ್ಯಮಾನದೊಳಗೆ ಸುಪ್ರೀಂ ಕೋರ್ಟ್‌ ಮುಂದಿಡಬೇಕಾದ ಆತ್ಮಾವಲೋಕನದ ಪ್ರಶ್ನೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ರೈತರಿಗೆ ಎಕರೆಗೆ ರೂ.25 ಸಾವಿರ ಪರಿಹಾರ ನೀಡಿ: ಭೀಮ್ ರಾಜ್ಯ ದಲಿತ ಸೇವಾ ಸಮಿತಿ ಆಗ್ರಹ

ಮಳೆ ಕೊರತೆಯಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ...

14 ಎಸೆತಗಳಲ್ಲಿ ಅರ್ಧಶತಕ: ಮೆಕ್‌ಗರ್ಕ್‌ ಸಿಡಿಲಾಟ, ವೈಭವ್‌ ವಿಶ್ವದಾಖಲೆ ಅಬಾಧಿತ

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್‌ ಜೇಕ್‌ ಫ್ರೇಸರ್‌ ಮೆಕ್‌ಗರ್ಕ್‌ ಕೇವಲ 14...

ರಷ್ಯಾ-ಉಕ್ರೇನ್ ಸಂಘರ್ಷ: ನಿರ್ಬಂಧ ವಿನಾಯಿತಿ ಪುಟಿನ್‌ಗೆ ಟ್ರಂಪ್ ನೀಡಿದ ಬಹುಮಾನ ಎಂದ‌ ಝೆಲೆನ್ಸ್ಕಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾದ ಮೇಲಿನ ಪ್ರಮುಖ ನಿರ್ಬಂಧಗಳನ್ನು...

CJPಯ ತಿರಂಗಾ ಯಾತ್ರೆಗೆ ಮುನ್ನ ಬಂಧನ; ಅಭಿಜೀತ್ ದೀಪ್ಕೆಗೆ ಷರತ್ತುಬದ್ಧ ಜಾಮೀನು

ಕನ್ನಾಟ್ ಪ್ಲೇಸ್‌ನಲ್ಲಿ ಆಯೋಜಿಸಲಾಗಿದ್ದ ‘ಲೇಹ್ರಾ ದೋ ತಿರಂಗಾ’ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ...