ಸಾಮಾಜಿಕ ಜಾಲತಾಣ ‘ಎಕ್ಸ್'(ಟ್ವಿಟ್ಟರ್)ನಲ್ಲಿ ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಾಕಾರಿ ಮತ್ತು ಪ್ರಚೋದನಾಕಾರಿಯಾಗಿ ಕಾಮೆಂಟ್ ಮಾಡಿದ ಆರೋಪ ಹೊತ್ತಿರುವ ಉಡುಪಿಯ ವೈದ್ಯ ಡಾ.ಕೀರ್ತನ್ ಉಪಾಧ್ಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಬಂಧಿಸುವಂತೆ ಆಗ್ರಹಿಸಿ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್(ಎಪಿಸಿಆರ್) ಸಂಘಟನೆಯು ಪೊಲೀಸರಿಗೆ ದೂರು ಸಲ್ಲಿಸಿದೆ.
ಬ್ರಹ್ಮಾವರ ಮಹೇಶ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾಕ್ಟರ್ ಕೀರ್ತನ್ ಉಪಾಧ್ಯ ಎನ್ನುವ ವೈದ್ಯರು ತಮ್ಮ ವೃತ್ತಿ ಮಾನದಂಡಕ್ಕೆ ವಿರುದ್ದವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ತೀರಾ ಕೀಳಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಸಾರ್ವಜನಿಕವಾಗಿ ಕೋಮು ಸೌಹಾರ್ದತೆಗೆ ದಕ್ಕೆ ಬರುವಂತೆ ಉದ್ದೇಶಪೂರ್ವಕವಾಗಿ ಕೃತ್ಯ ನಡೆಸಿದ್ದಾರೆ. ಹಾಗಾಗಿ, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದೆ.
ತಮ್ಮ ‘ಎಕ್ಸ್’ ಖಾತೆಯಲ್ಲಿ ನಮ್ಮ ದೇಶದಲ್ಲಿ ಮುಸ್ಲಿಂ ನರಹತ್ಯೆಗೆ ಪ್ರೇರೇಪಿಸುವಂತಹ ಮತ್ತು ಸಾರ್ವಜನಿಕವಾಗಿ ಒಂದು ಸಮುದಾಯಕ್ಕೆ ಅಭದ್ರತೆ ಮೂಡಿಸುವಂತಹ ಹೇಳಿಕೆಯನ್ನು ತಾವೇ ಬರೆದು ತಮ್ಮ ಖಾತೆಯಿಂದ ಹಂಚಿಕೊಂಡಿರುವುದು ಮಾತ್ರವಲ್ಲ, ಇದನ್ನು ಸುಮಾರು 1600 ಜನ ಮೆಚ್ಚುವಂತೆಯೂ ಮಾಡಿರುವುದು, ಪ್ರಜಾ ಪ್ರಭುತ್ವ ದೇಶದಲ್ಲಿ ಅವರ ಮುಸ್ಲಿಂ ದ್ವೇಶದ ಮನಸ್ಥಿಗೆ ಹಿಡಿದ ಕೈಗನ್ನಡಿ ಆಗಿದೆ ಎಂದು ದೂರಿನಲ್ಲಿ ಎಪಿಸಿಆರ್ ತಿಳಿಸಿದೆ.
ಸಂವಿಧಾನದ ಚೌಕಟ್ಟಿನಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎಂದು ಜಾತಿ ನೋಡದೆ ತನ್ನ ರೋಗಿಗಳ ರೋಗ ನೋಡಿ ಚಿಕಿತ್ಸೆ ನೀಡಬೇಕಾದ ವೈದ್ಯರೊಬ್ಬರು ಸಾರ್ವಜನಿಕವಾಗಿಯೇ ಇಷ್ಟೊಂದು ಕೆಳಮಟ್ಟದಲ್ಲಿ ಒಂದು ಸಮುದಾಯದ ಅವನತಿಯ ಯೋಚನೆಗಳನ್ನು ಹರಿಯಬಿಟ್ಟಿರುವದು ಮುಸ್ಲಿಂ ಸಮುದಾಯವನ್ನು ಮುಗಿಸುವ ಅವರ ಉದ್ದೇಶಿತ ಪ್ರಯತ್ನವಾಗಿದೆ. ಈಗಾಗಲೇ ಹಲವಾರು ಮುಸ್ಲಿಂ ರೋಗಿಗಳಿಗೆ ಇದೇ ಉದ್ದೇಶದಿಂದ ಚಿಕಿತ್ಸೆ ನೀಡಿರುವ ಸಾಧ್ಯತೆಯೂ ಅವರ ಸಾಮಾಜಿಕ ಜಾಲತಾಣದಲ್ಲಿ ಸ್ವಷ್ಟವಾಗುತ್ತಿದೆ. ಈ ಹಿಂದೆಯೂ ಇಂತಹದ್ದೇ ಪೋಸ್ಟರ್‌ಗಳನ್ನು ಹರಿಬಿಟ್ಟಿರುವ ಉದಾಹರಣೆ ಕಂಡುಬರುತ್ತಿದೆ ಎಂದು ತಿಳಿಸಿದೆ.
ಇದನ್ನು ಓದಿದ್ದೀರಾ? ಉಡುಪಿ | ವೈದ್ಯ ಡಾ. ಕೀರ್ತನ್ ಉಪಾಧ್ಯರಿಂದ ಮುಸ್ಲಿಮರ ಬಗ್ಗೆ ದ್ವೇಷದ ಟ್ವೀಟ್; ಎಫ್‌ಐಆರ್ ದಾಖಲು
ವೈದ್ಯರೊಬ್ಬರ ಇಂತಹ ನಡವಳಿಕೆಯಿಂದ ಮುಸ್ಲಿಂ ಸಮುದಾಯವೇ ಭಯಕ್ಕೆ ಒಳಗಾಗಿದೆ. ಬ್ರಹ್ಮಾವರ ಪರಿಸರದಲ್ಲಿ ಅತೀ ಹತ್ತಿರಕ್ಕೆ ಸಿಗುವ ಮಹೇಶ್ ಆಸ್ಪತ್ರೆಯ ಮೇಲೆಯೂ ನಂಬಿಕೆ ಕದಡುತ್ತಿದೆ. ದೇವರ ನಂತರ ವೈದ್ಯರನ್ನೇ ನಂಬುವ ಮನುಕುಲಕ್ಕೆ ಇಂತಹ ವೈದ್ಯರಿಂದ ಕೋಮು ಭಾವನೆಗೆ ಧಕ್ಕೆ ಏರ್ಪಟ್ಟಿದೆ. ಆದ ಕಾರಣ, ಡಾಕ್ಟರ್ ಕೀರ್ತನ್ ಉಪಾಧ್ಯರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರ ವೈದ್ಯಕೀಯ ವೃತ್ತಿ ಪರವಾನಿಗೆಯನ್ನು ರದ್ದುಗೊಳಿಸಿ ವೈದ್ಯ ವೃತ್ತಿಯ ಮೇಲಿನ ಗೌರವ ಉಳಿಯುವಂತೆ ಮಾಡಬೇಕು ಎಂದು ಎಪಿಸಿಆರ್ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
