ಕರ್ತವ್ಯಕ್ಕೆಂದು ಅಕ್ಟೋಬರ್ 15ರ ರಾತ್ರಿ ಮನೆಯಿಂದ ಕಾರ್ಕಳ ನಗರ ಠಾಣೆಗೆ ತೆರಳಿದ್ದು, ಅ.19ರಂದು ಮನೆಗೆ ಬರುತ್ತಿರುವುದಾಗಿ ದೂರವಾಣಿ ಕರೆ ಮಾಡಿ ಹೇಳಿದ್ದ ಕಾರ್ಕಳ ನಗರ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಬಳಿಕ ನಾಪತ್ತೆಯಾಗಿದ್ದರು. ಇದೀಗ ಸೋಮವಾರ ಬೆಳಿಗ್ಗೆ 11ಗಂಟೆ ಸುಮಾರಿಗೆ ಮೃತದೇಹ ಪತ್ತೆಯಾಗಿದೆ.
ಕಾಪು ತಾಲೂಕು ಮಜೂರು ಗ್ರಾಮದ ಜನಾರ್ದನ ದೇವಸ್ಥಾನದ ಬಳಿ ಇರುವ ಅಂಗಡಿಮನೆ ನಿವಾಸಿಯಾದ ಶೃತಿನ್ ಶೆಟ್ಟಿ(35) ಎರಡು ತಿಂಗಳ ಹಿಂದಷ್ಟೇ ಬಡ್ತಿ ಪಡೆದು ಕಾರ್ಕಳ ನಗರ ಠಾಣೆಗೆ ವರ್ಗಾವಣೆಗೊಂಡಿದ್ದರು. ಅ.15ರಂದು ರಾತ್ರಿ ಮನೆಯಿಂದ ಕರ್ತವ್ಯಕ್ಕೆಂದು ತೆರಳಿದ್ದ ಅವರು ಅ.19ರ ಬೆಳಗ್ಗೆ 7:30ಕ್ಕೆ ಪತ್ನಿಗೆ ಕರೆ ಮಾಡಿ ತಾನೀಗ ನಂದಿಕೂರಿನಲ್ಲಿದ್ದು, ಮನೆಗೆ ಬರುವುದಾಗಿ ತಿಳಿಸಿದ್ದರು ಎನ್ನಲಾಗಿದೆ.
ಮನೆಗೆ ಕರೆ ಮಾಡಿದ ಬಳಿಕ ಅವರ ಫೋನ್ ಸ್ವೀಚ್‌ಆಫ್ ಆಗಿತ್ತು. ಅವರ ನಾಪತ್ತೆ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಇಂದು ಬೆಳಿಗ್ಗೆ ಸಾಣೂರು ಗ್ರಾಮದ ಶ್ರೀಲಕ್ಷ್ಮೀದೇವಿ ಕಲ್ಯಾಣಮಂಟಪದ ಬಳಿಯ ಬಾವಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಈ ಸುದ್ದಿ ಓದಿದ್ದೀರಾ? ರಾಮನಗರ | ₹6.25 ಕೋಟಿ ವೆಚ್ಚದಲ್ಲಿ ಕಾಮಗಾರಿ; ಜನರಿಗೆ ಸಿಗದ ಕಾವೇರಿ ನೀರು
ಅಗ್ನಿಶಾಮಕ ದಳದಿಂದ ಮೃತದೇಹವನ್ನು ಮೇಲಕ್ಕೆತ್ತಿ ನೋಡಿದಾಗ ಶೃತಿನ್ ಶೆಟ್ಟಿ ಅವರದೆಂದು ದೃಢಪಡಿಸಲಾಗಿದೆ. ಯಾವುದೋ ಕಾರಣದಿಂದ ಮನಸ್ಸಿಗೆ ಬೇಸರಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.