ತನ್ನದೇ ಮಾಲೀಕತ್ವದ ಬಸ್ ಕೆಳಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲದ ಮಾಂಡವಿ ಖಾಸಗಿ ಬಸ್ ಮಾಲೀಕ ದಯಾನಂದ ಶೆಟ್ಟಿ(65) ಮೃತ ದುರ್ದೈವಿ ಎಂದು ತಿಳಿದುಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಮಾಂಡವಿ ಸಂಸ್ಥೆ ಸುಮಾರು ವರ್ಷಗಳಿಂದ ಬಸ್ ಸೇವೆ ನೀಡುತ್ತಿದ್ದು, ಇತ್ತೀಚಿಗೆ ಒಂದು ಬಸ್ ಕೆಟ್ಟು ನಿಂತಿತ್ತು. ಈ ಹಿನ್ನೆಲೆಯಲ್ಲಿ ದಯಾನಂದ ಶೆಟ್ಟಿ ಬಸ್‌ವೊಂದನ್ನು ಮಣಿಪಾಲದ ಬಡಗಬೆಟ್ಟುವಿನ ಗ್ಯಾರೇಜ್‌ವೊಂದಕ್ಕೆ ರಿಪೇರಿಗೆ ಬಿಟ್ಟಿದ್ದರು. ಬಸ್ ರಿಪೇರಿಗೆ ನೀಡಿ ದಿನ ಕಳೆದ ಹಿನ್ನೆಲೆಯಲ್ಲಿ ದಯಾನಂದ ಶೆಟ್ಟಿ ಮಾರ್ಚ್ 13ರಂದು ಬಸ್ ನೋಡಲೆಂದು ಗ್ಯಾರೇಜ್‌ಗೆ ತೆರಳಿದ್ದರು. ಈ ವೇಳೆ ಚಾಲಕ ಏಕಾಏಕಿ ಬಸ್ ಚಲಾಯಿಸಿದ್ದರಿಂದ ಬಸ್ ಎದುರು ನಿಂತಿದ್ದ ದಯಾನಂದ ಶೆಟ್ಟಿ ಬಸ್ ಚಕ್ರದಡಿಗೆ ಸಿಲುಕಿದ್ದಾರೆಂಬ ಆರೋಪ ವ್ಯಕ್ತವಾಗಿದೆ.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಬಿರು ಬೇಸಿಗೆಗೆ ಜನ ಕಂಗಾಲು; ಕೊಡಗಿನಲ್ಲಿ ಮಳೆಯ ಸಿಂಚನ
ದುರ್ಘಟನೆ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿದ್ದವರು ಕೂಡಲೇ ಬಸ್ ಚಕ್ರದ ಕೆಳಗೆ ಸಿಲುಕಿದ್ದ, ದಯಾನಂದ ಶೆಟ್ಟಿ ಅವರನ್ನು ಹೊರ ತೆಗೆದಿದ್ದಾರೆ. ಬಳಿಕ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಯಾನಂದ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದ ಕಾರಣ ದಯಾನಂದ ಶೆಟ್ಟಿ ಮಣಿಪಾಲ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.