ವಕ್ಫ್ ಆಸ್ತಿಯ ವಿಚಾರದಲ್ಲಿ ವಿಲಕ್ಷಣ ಸಿದ್ಧಾಂತವನ್ನು ಮಂಡಿಸಿ, ಹಿಂದೂ- ಮುಸ್ಲಿಮರ ನಡುವೆ ವೈಮನಸ್ಸು ಮೂಡಿಸಿ, ಸೌಹಾರ್ದಭರಿತ ವಾತಾವರಣವನ್ನು ಕಲುಷಿತಗೊಳಿಸಿ, ನಾಡಿನ ಸಾಮರಸ್ಯವನ್ನು ಹದಗೆಡಿಸುವ ದೊಡ್ಡ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ ಎಂದು ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕದ ವಕ್ತಾರ ಮುಷ್ತಾಕ್ ಹೆನ್ನಾಬೈಲ್ ಹೇಳಿದ್ದಾರೆ.
ಉಡುಪಿ ನಗರದ ಜಾಮಿಯ ಮಸೀದಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ವಿಚಾರವಾಗಿ ರಾಜ್ಯದ ರೈತರಿಗೆ ತೊಂದರೆಯಾಗಬಾರದು. ಈ ಕುರಿತು ತಪ್ಪು ಮಾಹಿತಿ ಹರಡುವವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಕ್ಫ್ ಮಂಡಳಿ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು, ಜನರಲ್ಲಿ ತಪ್ಪು ಗ್ರಹಿಕೆ ಮೂಡಿಸಲಾಗುತ್ತಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆಯಿಂದಾಗಿ ಇಡೀ ದೇಶ ಗೊಂದಲದ ಗೂಡಾಗಿದೆ. ಕೇಂದ್ರ ಸರ್ಕಾರವು ವಿಭಜನೆಯ ನೀತಿಯನ್ನು ಬಿಡಬೇಕು ಮತ್ತು ರಾಜಧರ್ಮವನ್ನು ಪಾಲಿಸಬೇಕು. ಅನಗತ್ಯ ಗೊಂದಲದ ಕಾರಣದಿಂದಾಗಿ ಮುಸ್ಲಿಮರು ಕಂಡ ಕಂಡ ಆಸ್ತಿಯನ್ನೆಲ್ಲ ವಕ್ಫ್ ಆಸ್ತಿ ಅನ್ನುತ್ತಾರೆ ಎಂಬ ಆರೋಪ ರಾಜಕೀಯ ಪ್ರೇರಿತವಾಗಿ ಕೇಳಿಬರುತ್ತಿದೆ ಎಂದರು.

ಒಂದು ಅಂದಾಜಿನ ಪ್ರಕಾರ ವಕ್ಫ್ ಆಸ್ತಿಯ ಪ್ರಮಾಣ 9 ಲಕ್ಷ ಎಕರೆಗಳಿಗಿಂತಲೂ ಹೆಚ್ಚಿದೆ. ಆದರೆ ಇದು ಇರಬೇಕಾದ ಪ್ರಮಾಣಕ್ಕಿಂತ ಅದೆಷ್ಟೋಪಟ್ಟು ಕಡಿಮೆ ಇದೆ. ಹೆಚ್ಚು ಇರಬೇಕಾಗಿದ್ದ ಭೂಮಿಯನ್ನು ಬಹುತೇಕ ಕಬಳಿಸಿದ್ದು, ಮುಸ್ಲಿಮರೇ ಹೊರತು ಹಿಂದೂಗಳಲ್ಲ. ಬ್ರಿಟಿಷರು ಕೂಡ ವಕ್ಫ್ ಆಸ್ತಿ ಸಂರಕ್ಷಣೆಗೆ 1925ರಲ್ಲಿ ಕಾನೂನಾತ್ಮಕ ಸ್ವರೂಪದ ಮಂಡಳಿ ರೂಪಿಸಿದರೆ ಹೊರತು, ಎಲ್ಲಿಯೂ ಕಬಳಿಸಿದ ಅಥವಾ ಇತರ ಉದ್ದೇಶಗಳಿಗೆ ಬಳಸಿದ ಉದಾಹರಣೆ ಕಂಡು ಬರುತ್ತಿಲ್ಲ ಎಂದರು.
ವಕ್ಫ್ ಆಸ್ತಿಯ ಕಬಳಿಕೆ, ಕಳಪೆ ನಿರ್ವಹಣೆ ಮತ್ತು ಅಸಡ್ಡೆಗೆ ಮುಸ್ಲಿಂ ಸಮುದಾಯವೇ ಹೊಣೆ. ಆದರೆ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿರುವ ರೀತಿಯಲ್ಲಿ ವಕ್ಫ್ ಆಸ್ತಿಯು ವ್ಯಾಪಕವಾಗಿ ಅಕ್ರಮ ನೋಂದಣಿಯಾಗಿಲ್ಲ ಎಂದು ಹೇಳಿದರು.
ಮುಸ್ಲಿಮರಲ್ಲಿ ಭೂಮಿಯನ್ನು ದಾನ ಮಾಡುವುದು ಧಾರ್ಮಿಕ ಶ್ರದ್ಧೆಯ ಪ್ರಧಾನ ಭಾಗ. ಮಸೀದಿ, ಮದ್ರಸಗಳಿಗೆ ಮುಸ್ಲಿಮರು ಮಾತ್ರ ಭೂದಾನ ಮಾಡಿದ್ದಲ್ಲ, ಹಿಂದೂಗಳು ಮತ್ತು ಹಿಂದೂ ರಾಜರೂ ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ಕೊಟ್ಟಿದ್ದಾರೆ. ಛತ್ರಪತಿ ಶಿವಾಜಿ ಸೇರಿದಂತೆ ಮರಾಠ ಚಕ್ರವರ್ತಿಗಳು, ವಿಜಯನಗರದ ಅರಸರು, ರಜಪೂತ ಅರಸರು ಕೂಡ ಮುಸ್ಲಿಮರಿಗೆ ಭೂದಾನ ಮಾಡಿದ ನಿದರ್ಶನಗಳಿವೆ ಎಂದರು.
ದಾನ ನೀಡಿದ ಬಹುತೇಕ ಭೂಮಿಗೆ ದಾಖಲೆಗಳು ಇರಲಿಲ್ಲ. ಈ ಕಾರಣಕ್ಕೆ ಭೂಮಿಯ ಒತ್ತುವರಿ ಮತ್ತು ಅತಿಕ್ರಮಣ ನಡೆದಿದ್ದವು. ಧಾರ್ಮಿಕ ಕೇಂದ್ರಗಳ ಆಸ್ತಿಗಳು ಮುಸ್ಲಿಮರದ್ದಾಗಲಿ, ಹಿಂದೂಗಳ ದ್ದಾಗಲಿ ಅಥವಾ ಬೇರೆ ಯಾವುದೇ ಧರ್ಮಗಳದ್ದಾಗಲಿ, ಸಂರಕ್ಷಣೆಯ ಉದ್ದೇಶದ ಶಾಸನಾತ್ಮಕ ಹಕ್ಕುಗಳ ಹೊರತಾಗಿ ಸರ್ಕಾರಕ್ಕೆ ಅವುಗಳ ಮೇಲೆ ಯಾವ ಹಕ್ಕೂ ಇರುವುದಿಲ್ಲ. ಕೇಂದ್ರ ಸರ್ಕಾರ ಸದ್ಯಕ್ಕೆ ಮುಸ್ಲಿಮರ ವಿಚಾರದಲ್ಲಿ ಕಾನೂನು ರೂಪಿಸಿ ವಕ್ಫ್ ಆಸ್ತಿಯನ್ನು ಕಬಳಿಸಲು ಹವಣಿಸುತ್ತಿದೆ, ಇದು ಖಂಡನೀಯ ಎಂದು ಮುಷ್ತಾಕ್ ಹೆನ್ನಾಬೈಲ್ ತಿಳಿಸಿದರು.
ರಾಜ್ಯದಲ್ಲಿ ವಕ್ಫ್ ವಿವಾದ ತಾರಕಕ್ಕೇರಿರುವ ಕಾರಣ ವಕ್ಫ್‌ಗೆ ಭೂದಾನ ಮಾಡುವ ಪ್ರಮಾಣ ಇಳಿಕೆಯಾಗಿದೆ. ದಾನ ಮಾಡಿದ ಭೂಮಿಯನ್ನು ಸರ್ಕಾರ ಉದ್ದೇಶಿತ ಕಾರ್ಯಕ್ಕೆ ಬಳಸಲ್ಲ ಎಂಬ ಆತಂಕ ಮುಸ್ಲಿಮರನ್ನು ಕಾಡುತ್ತಿದೆ ಎಂದು ಮುಸ್ಲಿಂ ಬಾಂಧವ್ಯ ವೇದಿಕೆಯ ಅನೀಸ್ ಪಾಷಾ ಹೇಳಿದರು ಹೇಳಿದರು.
ಇದನ್ನು ಓದಿದ್ದೀರಾ? ರಾಯಚೂರು | ಆರ್‌ಡಿಸಿಸಿ ಬ್ಯಾಂಕ್‌ನಲ್ಲಿ ಹಗಲು ದರೋಡೆ; ಖಾತೆಗಳ ದುರ್ಬಳಕೆ ಆರೋಪ
ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಡಿವೈಎಸ್ಪಿ ಸೊಹೈಲ್ ಅಹ್ಮದ್ ಮರೂರ್ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ವೇದಿಕೆ ಕರ್ನಾಟಕ ಇದರ ಕಾರ್ಯದರ್ಶಿ ಡಾ.ಹಕೀಮ್ ತೀರ್ಥಹಳ್ಳಿ, ಗೌರವಾಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಉಡುಪಿ ಜಾಮೀಯ ಮಸೀದಿ ಅಧ್ಯಕ್ಷ ರಿಯಾಝ್ ಅಹಮದ್, ನಝೀರ್ ಬೆಳುವಾಯಿ, ಮುಬಾರಕ್ ಗುಲ್ವಾಡಿ, ಜಮೀರ್ ಅಹ್ಮದ್ ರಶದಿ, ಮುಜಾಫರ್ ಹುಸೈನ್, ಜಿಯಾವುಲ್ಲಾ ಖಾನ್, ವೌಲಾನ ಅಬ್ದುಲ್ ಹಫೀಝ್ ಕಾರ್ಕಳ ಉಪಸ್ಥಿತರಿದ್ದರು.
