ಪೊಲೀಸರನ್ನು ನಂಬಿ ಸಹಿ ಹಾಕಿದ್ದೇ ತಪ್ಪಾಯಿತೇ? ಶೀನ ಪೂಜಾರಿ ಪ್ರಕರಣಕ್ಕೆ ಹೈಕೋರ್ಟ್‌ ತಿರುವು

Date:

ಸರಕಾರಿ ಜಮೀನಿನಲ್ಲಿ ಕಲ್ಲುಕೋರೆ ನಡೆಸಿ ಕೆಂಪುಕಲ್ಲು ಕಳವು ಮಾಡಿದ ಆರೋಪದ ಪ್ರಕರಣದಲ್ಲಿ ಯಾವುದೇ ತಪ್ಪು ಮಾಡಿರದ ರಿಕ್ಷಾ ಚಾಲಕನೊಬ್ಬರನ್ನು ಆರೋಪಿಯನ್ನಾಗಿ ಮಾಡಿದ್ದ ಪ್ರಕರಣವನ್ನು ಕರ್ನಾಟಕ ಉಚ್ಚ ನ್ಯಾಯಾಲಯ ರದ್ದುಪಡಿಸಿದ್ದು, ಇದೀಗ ಗಂಗೊಳ್ಳಿ ಪೊಲೀಸರ ವಿರುದ್ಧ ಸೂಕ್ತ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಶೀನ ಪೂಜಾರಿಯವರಿಗೆ ಉಡುಪಿಯ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಸಂಪೂರ್ಣ ಸಹಕಾರ ನೀಡುವುದಾಗಿ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ರವೀಂದ್ರನಾಥ ಶ್ಯಾನುಭಾಗ್ ತಿಳಿಸಿದ್ದಾರೆ.

- Advertisement -

ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂದಾಪುರ ತಾಲೂಕಿನ ಆಲೂರು ಗ್ರಾಮದ ನಿವಾಸಿ ಶೀನ ಪೂಜಾರಿ ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದು, ಕುಟುಂಬದ ಜೀವನ ನಿರ್ವಹಣೆಗಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಅವರ ಪತ್ನಿ ಎಂಡೋಸಲ್ಫಾನ್ ಪೀಡಿತರಾಗಿದ್ದು, ಇಬ್ಬರು ಮಕ್ಕಳು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪತ್ನಿಯ ಚಿಕಿತ್ಸಾ ವೆಚ್ಚ ಹಾಗೂ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಶೀನ ಪೂಜಾರಿ, ರಿಕ್ಷಾ ಚಾಲನೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಏನಿದು ಪ್ರಕರಣ ?

2025ರ ಆಗಸ್ಟ್ 24ರಂದು ಆಲೂರಿನ ಉದಯ ಶೆಟ್ಟಿಯವರು ಗಂಗೊಳ್ಳಿಗೆ ತೆರಳಿ ಬರಲು ಶೀನ ಪೂಜಾರಿಯವರ ರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದರು. ಗಂಗೊಳ್ಳಿ ಪೊಲೀಸ್ ಠಾಣೆಯ ಹೊರಗಡೆ ರಿಕ್ಷಾವನ್ನು ನಿಲ್ಲಿಸಿ ತನ್ನನ್ನು ಕಾಯುವಂತೆ ತಿಳಿಸಿ ಉದಯ ಶೆಟ್ಟಿಯವರು ಠಾಣೆಯೊಳಗೆ ತೆರಳಿದ್ದರು.

ಸುಮಾರು 30 ನಿಮಿಷಗಳ ಬಳಿಕ ಪೊಲೀಸ್ ಸಿಬ್ಬಂದಿಯೊಬ್ಬರು ಹೊರಗೆ ಬಂದು ಶೀನ ಪೂಜಾರಿಯವರನ್ನು ಠಾಣೆಯೊಳಗೆ ಕರೆದುಕೊಂಡು ಹೋಗಿದ್ದರು. ಉದಯ ಶೆಟ್ಟಿಯವರ ಪರಿಚಯವಿದೆಯೇ ಎಂದು ವಿಚಾರಿಸಿದ ಬಳಿಕ, ಪೊಲೀಸ್ ಅಧಿಕಾರಿಯೊಬ್ಬರು ದಾಖಲೆಯೊಂದಕ್ಕೆ ಸಹಿ ಮಾಡುವಂತೆ ಸೂಚಿಸಿದ್ದರು ಎನ್ನಲಾಗಿದೆ.

ಓದಲು-ಬರೆಯಲು ಬಾರದ ತಾನು ದಾಖಲೆಗೆ ಏಕೆ ಸಹಿ ಮಾಡಬೇಕು ಎಂದು ಶೀನ ಪೂಜಾರಿ ಪ್ರಶ್ನಿಸಿದಾಗ, ಇದು ಕೇವಲ ಔಪಚಾರಿಕವಾಗಿದ್ದು ಯಾವುದೇ ತೊಂದರೆಯಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದರು ಎನ್ನಲಾಗಿದೆ. ಪೊಲೀಸರ ಮಾತನ್ನು ನಂಬಿದ ಶೀನ ಪೂಜಾರಿ ದಾಖಲೆಯೊಂದಕ್ಕೆ ಸಹಿ ಮಾಡಿದ್ದು, ಬಳಿಕ ಅವರ ಆಧಾರ್ ಕಾರ್ಡ್ ಪ್ರತಿಯನ್ನೂ ಪಡೆಯಲಾಗಿತ್ತು ಎಂದು ಅವರು ತಿಳಿಸಿದರು.

WhatsApp Image 2026 09 08 at 8.02.57 PM 2

ಎರಡು ತಿಂಗಳ ಬಳಿಕ ಬಂದ ಕೋರ್ಟ್ ಸಮನ್ಸ್

ಘಟನೆ ನಡೆದು ಸುಮಾರು ಎರಡು ತಿಂಗಳ ಬಳಿಕ ಪೊಲೀಸರು ಕರೆ ಮಾಡಿ ನ್ಯಾಯಾಲಯದಿಂದ ನೋಟಿಸ್ ಬಂದಿದೆ ಎಂದು ತಿಳಿಸಿದ್ದರು. ಗ್ರಾಹಕರೊಬ್ಬರನ್ನು ಕುಂದಾಪುರಕ್ಕೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಶೀನ ಪೂಜಾರಿಯವರನ್ನು ಸಂಪರ್ಕಿಸಿ ನೋಟಿಸ್ ನೀಡಿ ಸಹಿ ಪಡೆದುಕೊಂಡಿದ್ದರು.

ನೋಟಿಸ್‌ ಕುರಿತು ಪರಿಚಯಸ್ಥರೊಬ್ಬರ ಬಳಿ ವಿಚಾರಿಸಿದಾಗ, ಕುಂದಾಪುರ ನ್ಯಾಯಾಲಯದಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸರಕಾರಿ ಜಮೀನಿನಲ್ಲಿ ಕಲ್ಲುಕೋರೆ ನಡೆಸಿ ಕಲ್ಲು ಕಳವು ಮಾಡಿದ ಆರೋಪದಲ್ಲಿ ಉದಯ ಶೆಟ್ಟಿಯವರನ್ನು ಮೊದಲ ಆರೋಪಿಯಾಗಿಯೂ ಶೀನ ಪೂಜಾರಿಯವರನ್ನು ಎರಡನೇ ಆರೋಪಿಯಾಗಿಯೂ ಸೇರಿಸಲಾಗಿದೆ ಎಂಬುದು ಅವರಿಗೆ ತಿಳಿದುಬಂದಿತ್ತು.

ತಾನು ಯಾವುದೇ ಕಲ್ಲುಕೋರೆ ನಡೆಸಿಲ್ಲ, ಕಲ್ಲು ಕಳವು ಮಾಡಿಲ್ಲ. ಉದಯ ಶೆಟ್ಟಿಯವರೊಂದಿಗೆ ರಿಕ್ಷಾ ಚಾಲಕನಾಗಿ ಗಂಗೊಳ್ಳಿಗೆ ತೆರಳಿದ್ದನ್ನು ಹೊರತುಪಡಿಸಿ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ತನಗಿಲ್ಲ ಎಂದು ಶೀನ ಪೂಜಾರಿ ತಿಳಿಸಿದ್ದರು.

WhatsApp Image 2026 09 08 at 7.32.42 PM

‘ತಪ್ಪು ಒಪ್ಪಿಕೊಂಡರೆ ಕೇಸು ಮುಗಿಯುತ್ತದೆ’ ಎಂದಿದ್ದ ಪೊಲೀಸರು?

ಪ್ರಕರಣದ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಗೆ ತೆರಳಿ ಪ್ರಶ್ನಿಸಿದಾಗ, ತಾವು ಯಾವುದೇ ಟೆನ್ಷನ್ ತೆಗೆದುಕೊಳ್ಳಬೇಕಾಗಿಲ್ಲ. ನ್ಯಾಯಾಲಯದ ಮುಂದೆ ತಪ್ಪನ್ನು ಒಪ್ಪಿಕೊಂಡರೆ ಒಂದೆರಡು ವಿಚಾರಣೆಯಲ್ಲಿ ಪ್ರಕರಣ ಮುಗಿಯುತ್ತದೆ ಎಂದು ಪೊಲೀಸರು ಸಮಾಧಾನಪಡಿಸಿದ್ದರು ಎಂದು ಶೀನ ಪೂಜಾರಿ ಆರೋಪಿಸಿದ್ದಾರೆ. ನ್ಯಾಯಾಲಯ ವಿಧಿಸುವ ದಂಡವನ್ನು ಮೊದಲ ಆರೋಪಿಯೇ ಪಾವತಿಸಲು ಒಪ್ಪಿಕೊಂಡಿದ್ದಾರೆ ಹಾಗೂ ಜಾಮೀನು ಕೊಡಿಸಲೂ ಸಿದ್ಧರಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು ಎನ್ನಲಾಗಿದೆ.

ಆದರೆ, ತಾನು ಮಾಡದ ತಪ್ಪನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಳ್ಳಲು ಶೀನ ಪೂಜಾರಿ ನಿರಾಕರಿಸಿದ್ದರು. ಪ್ರಕರಣದಿಂದ ಹೇಗೆ ಹೊರಬರಬೇಕು ಎಂಬುದು ತಿಳಿಯದೆ ಮಾನಸಿಕವಾಗಿ ತೀವ್ರ ಸಂಕಷ್ಟಕ್ಕೊಳಗಾಗಿದ್ದ ಅವರು, ಕುಟುಂಬದ ಜವಾಬ್ದಾರಿಗಳ ನಡುವೆಯೂ ರಿಕ್ಷಾ ಚಲಾಯಿಸುವುದನ್ನು ಮುಂದುವರಿಸಿದ್ದರು.

ಮಾನವಹಕ್ಕುಗಳ ಪ್ರತಿಷ್ಠಾನದ ಮೊರೆ

ಕಾನೂನು ವಿದ್ಯಾರ್ಥಿಯೊಬ್ಬರ ಸಲಹೆಯ ಮೇರೆಗೆ ಶೀನ ಪೂಜಾರಿ ಉಡುಪಿಯ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿದ್ದರು. ಅವರ ಬಳಿ ನ್ಯಾಯಾಲಯದಿಂದ ಬಂದ ಸಮನ್ಸ್ ಪ್ರತಿಯನ್ನು ಹೊರತುಪಡಿಸಿ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳಿರಲಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದ ಉಳಿದ ದಾಖಲೆಗಳ ಅಧಿಕೃತ ಪ್ರತಿಗಳನ್ನು ಪಡೆದು ಪರಿಶೀಲಿಸಲು ಪ್ರತಿಷ್ಠಾನದ ಕಾರ್ಯಕರ್ತರಿಗೆ ಸುಮಾರು ಎರಡು ತಿಂಗಳುಗಳು ಬೇಕಾದವು. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಶೀನ ಪೂಜಾರಿಯವರ ವಿರುದ್ಧದ ಆರೋಪಗಳಿಗೆ ಸೂಕ್ತ ಆಧಾರವಿದೆಯೇ ಎಂಬುದನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸಲು ಪ್ರತಿಷ್ಠಾನ ನಿರ್ಧರಿಸಿತು.

ಪ್ರತಿಷ್ಠಾನದ ವಕೀಲರಾದ ಎನ್. ವಿವೇಕಾನಂದ ಅವರ ಮೂಲಕ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕ್ರಿಮಿನಲ್ ಅರ್ಜಿ ಸಲ್ಲಿಸಿ, ಕುಂದಾಪುರ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣದಿಂದ ಶೀನ ಪೂಜಾರಿಯವರನ್ನು ಮುಕ್ತಗೊಳಿಸುವಂತೆ ಮನವಿ ಮಾಡಲಾಗಿತ್ತು.

WhatsApp Image 2026 09 08 at 8.02.57 PM

ಪೊಲೀಸರಿಂದ ಸಮಜಾಯಿಷಿ ಕೇಳಿದ ಹೈಕೋರ್ಟ್

ಈ ಅರ್ಜಿ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಾಗ, ಶೀನ ಪೂಜಾರಿಯವರನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲು ಇರುವ ಆಧಾರಗಳ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಿಂದ ಉತ್ತರ ಪಡೆಯುವಂತೆ ಸೂಚಿಸಲಾಗಿತ್ತು.

ಪೊಲೀಸರಿಗೆ ನಾಲ್ಕು ಬಾರಿ ಅವಕಾಶ ನೀಡಿದರೂ ಪ್ರಕರಣದಲ್ಲಿ ಶೀನ ಪೂಜಾರಿಯವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಸಮರ್ಪಕ ಉತ್ತರ ಅಥವಾ ಸಮಜಾಯಿಷಿ ಸಲ್ಲಿಕೆಯಾಗಲಿಲ್ಲ ಎಂದು ಪ್ರತಿಷ್ಠಾನ ತಿಳಿಸಿದೆ.

ಇದಾದ ಬಳಿಕ 2026ರ ಆಗಸ್ಟ್ 6ರಂದು ಕರ್ನಾಟಕ ಉಚ್ಚ ನ್ಯಾಯಾಲಯ ಅಂತಿಮ ಆದೇಶ ನೀಡಿದ್ದು, ಶೀನ ಪೂಜಾರಿಯವರನ್ನು ಕುಂದಾಪುರ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣದ ಆರೋಪಪಟ್ಟಿಯಿಂದ ಕೈಬಿಟ್ಟು, ಅವರ ಮೇಲಿನ ಆರೋಪಗಳಿಂದ ಮುಕ್ತಗೊಳಿಸಿದೆ ಎಂದು ಪ್ರತಿಷ್ಠಾನ ಹೇಳಿದೆ.

WhatsApp Image 2026 09 08 at 8.02.57 PM 1

ಪೊಲೀಸರ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಬೆಂಬಲ

ಈದಿನ.ಕಾಮ್ ಜೊತೆ ಮಾತನಾಡಿದ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ರವೀಂದ್ರನಾಥ ಶ್ಯಾನುಭಾಗ್ ಅವರು, ತಾವು ಮಾಡದ ಅಪರಾಧದಲ್ಲಿ ಆರೋಪಿಯನ್ನಾಗಿ ಮಾಡಲಾಗಿದ್ದರಿಂದ ಶೀನ ಪೂಜಾರಿಯವರ ಮಾನ-ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಅಭಿಪ್ರಾಯಪಟ್ಟಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, ಶೀನ ಪೂಜಾರಿಯವರು ಬಯಸಿದಲ್ಲಿ ತಮ್ಮ ವಿರುದ್ಧ ಆಧಾರರಹಿತ ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಿಸಿದವರ ವಿರುದ್ಧ ಸೂಕ್ತ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಸಂಪೂರ್ಣ ಕಾನೂನು ಸಹಕಾರ ನೀಡುವುದಾಗಿ ತಿಳಿಸಿದರು.

“ಹೊಟ್ಟೆಪಾಡಿಗಾಗಿ ಸ್ವಾಭಿಮಾನದಿಂದ ದುಡಿಯುವ ಸಾಮಾನ್ಯ ನಾಗರಿಕನನ್ನು ಯಾವುದೇ ಅಪರಾಧದ ಮಾಹಿತಿ ಇಲ್ಲದೆ ಆರೋಪಿಯನ್ನಾಗಿ ಮಾಡುವುದು ಆತನ ಮೂಲಭೂತ ಹಕ್ಕುಗಳು ಮತ್ತು ಆತ್ಮಸಮ್ಮಾನದ ಮೇಲಿನ ಗಂಭೀರ ಪರಿಣಾಮವಾಗಿದೆ. ಇಂತಹ ಪ್ರಕರಣಗಳಲ್ಲಿ ಅಮಾಯಕ ನಾಗರಿಕರ ಹಕ್ಕುಗಳ ರಕ್ಷಣೆಗೆ ಕಾನೂನು ಹೋರಾಟ ನಡೆಸುವುದು ಅಗತ್ಯ” ಎಂದು ತಿಳಿದರು.

ಪೊಲೀಸರು ವಿಚಾರಣೆಗೆ ಕರೆ ಮಾಡಿದ ಸಂದರ್ಭದಲ್ಲಿ ಜನಸಾಮಾನ್ಯರು ಹಾಗೂ ಅವಿದ್ಯಾವಂತರು ಗೊಂದಲಕ್ಕೊಳಗಾಗುವುದು ಸಹಜ. ಇಂತಹ ಸಂದರ್ಭಗಳಲ್ಲಿ ನಾಗರಿಕರು ತಮ್ಮ ಹಕ್ಕುಗಳ ಕುರಿತು ಅಗತ್ಯ ಮಾಹಿತಿ ಹೊಂದಿರಬೇಕು. ಪೊಲೀಸರು ಕರೆ ಮಾಡಿ ಪೊಲೀಸ್ ಠಾಣೆಗೆ ಬರುವಂತೆ ಸೂಚಿಸಿದಾಗ, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಬೇಕಾಗಿದೆ ಅಥವಾ ಯಾವುದಾದರೂ ದಾಖಲೆಗೆ ಸಹಿ ಪಡೆಯಬೇಕಾಗಿದೆ ಎಂದು ತಿಳಿಸಿದರೆ ತಕ್ಷಣವೇ ಗಾಬರಿಗೊಳ್ಳುವ ಅಗತ್ಯವಿಲ್ಲ. ಪೊಲೀಸರು ಲಿಖಿತವಾಗಿ ಕ್ರಮಬದ್ಧ ನೋಟಿಸ್ ನೀಡಿದಲ್ಲಿ ಮಾತ್ರ ಠಾಣೆಗೆ ಹಾಜರಾಗುವ ಅಗತ್ಯವಿದೆ. ಅಂತಹ ನೋಟಿಸ್‌ನಲ್ಲಿ ಕ್ರೈಂ ನಂಬರ್, ಅಪರಾಧದ ವಿವರ ಹಾಗೂ ಎಫ್‌ಐಆರ್‌ಗೆ ಸಂಬಂಧಿಸಿದ ಮಾಹಿತಿಗಳು ಸ್ಪಷ್ಟವಾಗಿ ನಮೂದಾಗಿರಬೇಕು. ಕೇವಲ ಸಾಮಾನ್ಯ ಮೊಬೈಲ್ ಸಂದೇಶ, ವಾಟ್ಸಾಪ್ ಸಂದೇಶ ಅಥವಾ ದೂರವಾಣಿ ಕರೆ ಮೂಲಕ ಠಾಣೆಗೆ ಬರುವಂತೆ ಸೂಚಿಸಿದ ಮಾತ್ರಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂಬ ನಿಯಮವಿಲ್ಲ ಎಂದು ಹೇಳಿದರು.

ಪೊಲೀಸ್ ವಿಚಾರಣೆಗೆ ತೆರಳುವ ಮುನ್ನ ನಾಗರಿಕರು ವಕೀಲರ ಸಲಹೆ ಪಡೆಯಬಹುದು. ಅಗತ್ಯವಿದ್ದಲ್ಲಿ ವಕೀಲರನ್ನೇ ತಮ್ಮೊಂದಿಗೆ ಠಾಣೆಗೆ ಕರೆದುಕೊಂಡು ಹೋಗಬಹುದು ಅದೇ ರೀತಿ, ಪೊಲೀಸರು ನೀಡುವ ಯಾವುದೇ ದಾಖಲೆಗೆ ಸಹಿ ಮಾಡುವ ಮೊದಲು ಅದರಲ್ಲಿ ಏನು ಬರೆಯಲಾಗಿದೆ ಎಂಬುದನ್ನು ಸಂಪೂರ್ಣವಾಗಿ ಓದಿ, ಅರ್ಥಮಾಡಿಕೊಂಡ ನಂತರವೇ ಸಹಿ ಮಾಡಬೇಕು. ದಾಖಲೆಯ ವಿಷಯವನ್ನು ತಿಳಿಯದೆ ಸಹಿ ಮಾಡಬಾರದು. ಒಮ್ಮೆ ಸಹಿ ಮಾಡಿದ ಬಳಿಕ ಆ ದಾಖಲೆಯಲ್ಲಿರುವ ಅಂಶಗಳಿಗೆ ಸಂಬಂಧಿಸಿದಂತೆ ಕಾನೂನು ಪರಿಣಾಮಗಳು ಎದುರಾಗುವ ಸಾಧ್ಯತೆ ಇರುವುದರಿಂದ ನಾಗರಿಕರು ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ನೀಡಿದರು.

ಭಾರತೀಯ ಸಂವಿಧಾನದ ವಿಧಿ 20ರ ಅಡಿಯಲ್ಲಿ ನಾಗರಿಕರಿಗೆ ಕೆಲವು ಪ್ರಮುಖ ರಕ್ಷಣಾತ್ಮಕ ಹಕ್ಕುಗಳಿದ್ದು, ತಮ್ಮ ವಿರುದ್ಧವೇ ಸಾಕ್ಷಿಯಾಗುವಂತೆ ವ್ಯಕ್ತಿಯನ್ನು ಬಲವಂತಪಡಿಸಲಾಗುವುದಿಲ್ಲ.
ಹೀಗಾಗಿ, ಪೊಲೀಸ್ ಠಾಣೆಯಿಂದ ಕರೆ ಬಂದಾಗ ಭಯಪಡುವ ಬದಲು, ಕರೆ ಯಾವ ಪ್ರಕರಣಕ್ಕೆ ಸಂಬಂಧಿಸಿದೆ, ಯಾವ ರೀತಿಯ ನೋಟಿಸ್ ನೀಡಲಾಗಿದೆ ಮತ್ತು ತಮ್ಮ ಕಾನೂನು ಹಕ್ಕುಗಳೇನು ಎಂಬುದನ್ನು ತಿಳಿದುಕೊಂಡು ಮುಂದಿನ ಕ್ರಮ ಕೈಗೊಳ್ಳುವುದು ಮುಖ್ಯ ಎಂದು ಅವರು ಹೇಳಿದರು.

WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಶಾರೂಕ್ ತೀರ್ಥಹಳ್ಳಿ
ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಪಶ್ಚಿಮ ಪದವೀಧರರ  ಚುನಾವಣೆ; ಜಿಲ್ಲೆಯಲ್ಲಿ ಶೇ. 77.66  ರಷ್ಟು ಮತದಾನ ದಾಖಲು

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯ ಮತದಾನವು ಅಕ್ಟೋಬರ್ 23...

ಉಡುಪಿ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ಬೃಹತ್ ಪಾದಯಾತ್ರೆ ; ಮಳೆಯಲ್ಲೂ ಮುಂದುವರಿದ ಪ್ರತಿಭಟನೆ

ಕೇಂದ್ರ ಚುನಾವಣಾ ಆಯೋಗದ ಎಸ್‌ಐಆರ್‌ ಪ್ರಕ್ರಿಯೆ ರದ್ದುಗೊಳಿಸುವಂತೆ ಹಾಗೂ ಮುಖ್ಯ ಚುನಾವಣಾ...

ಉಡುಪಿ | 110 ಕೋಟಿ ರೂ. ವೆಚ್ಚದ ಆಸ್ಪತ್ರೆಗೆ ಹಳೆಯ ಪರಿಕರಗಳ ಅಳವಡಿಕೆ ಸಲ್ಲದು: ಫ್ರ್ಯಾಂಕಿ ಡಿಸೋಜ

ಸುಮಾರು 110 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಉಡುಪಿ ಜಿಲ್ಲಾ...