2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಬಗ್ಗೆ ಇದೀಗ ಹೊಸ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಹಮಾಸ್ ದಾಳಿ ನಡೆಸುವ ಸುಮಾರು ಹತ್ತು ದಿನ ಮೊದಲೇ, ಆ ದಾಳಿಯ ಬಗ್ಗೆ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಎಚ್ಚರಿಕೆ ನೀಡಿದ್ದರು ಎಂದು ಹೇಳಲಾಗಿದೆ.
ಈ ಬಗ್ಗೆ ಇಸ್ರೇಲ್‌ನ ‘ಹಾರೇಟ್ಜ್’ ಪತ್ರಿಕೆಯ ತನಿಖಾ ವರದಿ ಪ್ರಕಟಿಸಿದೆ. ವರದಿಯ ಪ್ರಕಾರ, ಹಮಾಸ್ ದಾಳಿ ನಡೆಸುವ ಸುಮಾರು 10 ದಿನಗಳ ಮೊದಲು ನೆತನ್ಯಾಹು ಜೊತೆ ಯುಎಇ ಅಧ್ಯಕ್ಷರು 45 ನಿಮಿಷಗಳ ಕಾಲ ಫೋನ್ ಕರೆಯಲ್ಲಿ ಮಾತನಾಡಿದ್ದರು. ಆ ವೇಳೆ, ಹಮಾಸ್‌ನ ಅಂದಿನ ಗಾಜಾ ನಾಯಕ ಯಾಹ್ಯಾ ಸಿನ್ವಾರ್ ಅವರು ಇಸ್ರೇಲ್ ವಿರುದ್ಧ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯನ್ನು ನೆತನ್ಯಾಹುಗೆ ನೀಡಿದ್ದರು. ಈ ದಾಳಿಯು ಇಡೀ ಮಧ್ಯಪ್ರಾಚ್ಯದ ಸ್ಥಿರತೆಯನ್ನು ಹಾಳುಗೆಡವಲಿದ್ದು, ಅರಬ್ ರಾಷ್ಟ್ರಗಳೊಂದಿಗಿನ ರಾಜತಾಂತ್ರಿಕ ಒಪ್ಪಂದಗಳಿಗೂ ಧಕ್ಕೆ ತರಲಿದೆ ಎಂದು ಬಿನ್ ಜಾಯೆದ್ ಕಳವಳ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಆದರೆ, ಯುಎಇ ಅಧ್ಯಕ್ಷರು ನೀಡಿದ ಗಂಭೀರ ಎಚ್ಚರಿಕೆಯನ್ನು ನೆತನ್ಯಾಹು ಅತ್ಯಂತ ಹಗುರವಾಗಿ ಪರಿಗಣಿಸಿದ್ದರು. ಮಾತ್ರವಲ್ಲ, ಈ ಎಚ್ಚರಿಕೆ ಮತ್ತು ಸುಳಿವಿನ ಕುರಿತು ನೆತನ್ಯಾಹು ತಮ್ಮ ಸೇನಾ ಮುಖ್ಯಸ್ಥರು ಅಥವಾ ಗುಪ್ತಚರ ಸಂಸ್ಥೆಯ ಮುಖ್ಯಸ್ಥರಿಗೂ ಮಾಹಿತಿ ನೀಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.
ಮಾತ್ರವಲ್ಲ, ‘ಗಾಜಾದ ಸಂಪೂರ್ಣ ಸ್ಥಿತಿಗತಿ ತಮ್ಮ ಸಂಪೂರ್ಣ ನಿಯಂತ್ರಣದಲ್ಲಿದೆ, ಒಂದೊಮ್ಮೆ ಹಮಾಸ್ ದಾಳಿ ನಡೆಸಿದರೂ ಅದು ವೆಸ್ಟ್ ಬ್ಯಾಂಕ್ ಭಾಗದಲ್ಲಾಗುತ್ತದೆಯೇ ಹೊರತು ಗಾಜಾದಿಂದಲ್ಲ’ ಎಂಬುದು ನೆತನ್ಯಾಹು ಅವರ ಕಲ್ಪನೆಯಾಗಿತ್ತು ಎನ್ನಲಾಗಿದೆ.
ಆದಾಗ್ಯೂ, ಯುಎಇ ಅಧ್ಯಕ್ಷರು ಇದೇ ಮಾಹಿತಿಯನ್ನು ಅಮೆರಿಕದ ಸಿಐಎ ನಿರ್ದೇಶಕ ವಿಲಿಯಂ ಬರ್ನ್ಸ್ ಅವರೊಂದಿಗೂ ಹಂಚಿಕೊಂಡಿದ್ದರು. ಅಲ್ಲದೆ, ಇದೇ ಅವಧಿಯಲ್ಲಿ ಈಜಿಪ್ಟ್‌ನ ಗುಪ್ತಚರ ಮುಖ್ಯಸ್ಥರು ಕೂಡ ಗಾಜಾದಿಂದ ಭಾರೀ ದಾಳಿ ನಡೆಯುವ ಸಾಧ್ಯತೆಯ ಬಗ್ಗೆ ನೆತನ್ಯಾಹು ಅವರ ಗಮನಕ್ಕೆ ತಂದಿದ್ದರೆಂದು ಹಾರೇಟ್ಜ್ ವರದಿ ಹೇಳಿದೆ.
ಈ ಲೇಖನ ಓದಿದ್ದೀರಾ?: ಕುಸಿದ ಮೋದಿ ಜನಪ್ರಿಯತೆ – ʼಪ್ರಜಾಪ್ರಭುತ್ವ ಅಪಾಯದಲ್ಲಿದೆʼ ಎನ್ನುತ್ತಿರುವ ಜನತೆ; ಸಮೀಕ್ಷಾ ವರದಿ
ವರದಿ ಪ್ರಕಟಗೊಂಡ ಬೆನ್ನಲ್ಲೇ, ಇಸ್ರೇಲ್‌ನ ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್ ಮತ್ತು ವಿರೋಧ ಪಕ್ಷದ ನಾಯಕರು, “ನೆತನ್ಯಾಹು ಅವರಿಗೆ ಮುನ್ಸೂಚನೆ ಸಿಕ್ಕಿದ್ದು ನಿಜ. ಆದರೆ, ಅವರ ಭದ್ರತಾ ವೈಫಲ್ಯವೇ ಇಷ್ಟೊಂದು ದೊಡ್ಡ ದುರಂತಕ್ಕೆ ಕಾರಣ” ಎಂದು ಕಿಡಿಕಾರಿದ್ದಾರೆ.
ಆದರೆ, ಈ ಎಲ್ಲ ಆರೋಪಗಳನ್ನು ನೆತನ್ಯಾಹು ಅವರ ಕಚೇರಿ ತಳ್ಳಿಹಾಕಿದೆ. ಆ ಅವಧಿಯಲ್ಲಿ ಯುಎಇ ಅಧ್ಯಕ್ಷರೊಂದಿಗೆ ಯಾವುದೇ ಸಂಭಾಷಣೆ ನಡೆದಿಲ್ಲ. ಯುಎಇಯಿಂದ ಯಾವುದೇ ಎಚ್ಚರಿಕೆ ಬಂದಿಲ್ಲ ಎಂದು ನೆತನ್ಯಾಹು ಕಚೇರಿ ವಾದಿಸಿದೆ.
ದಶಕಗಳಿಂದ ಗಾಜಾ ಮೇಲೆ ಇಸ್ರೇಲ್ ಭೀಕರ ದಾಳಿ, ಆಕ್ರಮಣ, ಶೋಷಣೆಗಳನ್ನು ನಡೆಸುತ್ತಲೇ ಬಂದಿದೆ. ಇಸ್ರೇಲ್‌ನ ಕ್ರೌರ್ಯದಿಂದ ಗಾಜಾ ತತ್ತರಿಸಿದೆ. ಇಸ್ರೇಲ್ ಕ್ರೌರ್ಯದಿಂದ ಪ್ಯಾಲೆಸ್ತೀನ್‌ಗೆ ವಿಮೋಚನೆ ದೊರಕಿಸುತ್ತೇವೆಂದು ಹುಟ್ಟಿಕೊಂಡಿದ್ದ ಹಮಾಸ್, 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿತ್ತು. ಆ ನಂತರ, ಗಾಜಾ ಮೇಲೆ ಇಸ್ರೇಲ್ ನಿರಂತರ ದಾಳಿ ನಡೆಸುತ್ತಲೇ ಇದೆ. ಕ್ರೌರ್ಯ ಮೆರೆಯುತ್ತಿದೆ. ಇಸ್ರೇಲ್ ದಾಳಿಯಿಂದಾಗಿ ಗಾಜಾದಲ್ಲಿ ಈವರೆಗೆ ಕನಿಷ್ಠ 40,000ಕ್ಕೂ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ಸುಮಾರು 95,000ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.ಗಾಜಾದ ಒಟ್ಟು 23 ಲಕ್ಷ ಜನಸಂಖ್ಯೆಯಲ್ಲಿ ಸುಮಾರು 19 ಲಕ್ಷಕ್ಕೂ ಹೆಚ್ಚು ಜನರು (85%) ತಮ್ಮ ಮನೆಗಳನ್ನು ತೊರೆದು ನಿರಾಶ್ರಿತರಾಗಿದ್ದಾರೆ.ಗಾಜಾದ ಬಹುತೇಕ ಆಸ್ಪತ್ರೆಗಳು, ಶಾಲೆಗಳು, ನಿರಾಶ್ರಿತರ ಶಿಬಿರಗಳು ಮತ್ತು ವಸತಿ ಸಮುಚ್ಚಯಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಔಷಧಿ, ಆಹಾರ ಮತ್ತು ಕುಡಿಯುವ ನೀರಿನ ತೀವ್ರ ಅಭಾವ ಎದುರಾಗಿದೆ.




