ಕುಂದಾಪುರ–ಹೊಸಂಗಡಿ ರಸ್ತೆಯಲ್ಲಿ ಸಾವಿನ ಭೀತಿ: ಭಾರೀ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಿ

Date:

ಕುಂದಾಪುರದಿಂದ ಹೊಸಂಗಡಿಯವರೆಗಿನ ರಸ್ತೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಗಟ್ಟಲು ರಸ್ತೆ ಅಗಲೀಕರಣ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು ಹಾಗೂ ಟಿಪ್ಪರ್ ಸೇರಿದಂತೆ ಘನ ವಾಹನಗಳ ಸಂಚಾರಕ್ಕೆ ಕಟ್ಟುನಿಟ್ಟಿನ ನಿಯಂತ್ರಣ ವಿಧಿಸಬೇಕು ಎಂದು ಆಗ್ರಹಿಸಿ ಜಾಮಿಯಾ ಮಸೀದಿ ಆಡಳಿತ ಸಮಿತಿ, ಕಂಡ್ಲೂರು ಸೇರಿದಂತೆ ಸಮಾನ ಮನಸ್ಕರು, ಸಾರ್ವಜನಿಕರು ಹಾಗೂ ಪ್ರಗತಿಪರ ಹೋರಾಟಗಾರರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

- Advertisement -

ಕುಂದಾಪುರ–ಹೊಸಂಗಡಿ ರಸ್ತೆಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಚಾರ ಹೆಚ್ಚಾಗುತ್ತಿದ್ದು, ಕಿರಿದಾದ ರಸ್ತೆಯಲ್ಲಿ ಟಿಪ್ಪರ್ ಹಾಗೂ ಇತರ ಘನ ವಾಹನಗಳ ಅತಿವೇಗ ಮತ್ತು ಅಜಾಗರೂಕ ಚಾಲನೆಯಿಂದ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿವೆ. ಈಗಾಗಲೇ ಈ ರಸ್ತೆಯಲ್ಲಿ ಹಲವು ಜೀವಗಳು ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಆದರೂ ರಸ್ತೆ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳದಿರುವುದು ಸಾರ್ವಜನಿಕರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೋಟು ನಿಷೇಧಕ್ಕೆ 10 ವರ್ಷ: ಮೋದಿ ಸರ್ಕಾರದ ಒಂದು...

ಒಂದು ದಶಕದ ಆರ್ಥಿಕ ಪರಿಣಾಮಗಳು, ಅಧಿಕೃತ ಅಂಕಿಅಂಶಗಳು ಮತ್ತು ತಜ್ಞರ ಸಂಶೋಧನೆಗಳ ಆಧಾರಿತ ಅಧ್ಯಯನ ಬರಹ. 2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ₹500 ಮತ್ತು ₹1,000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ...

150 ವರ್ಷ ಹಳೆಯ ಶಿವಮೊಗ್ಗ ತುಂಗಾ ಸೇತುವೆ ಮರುನಿರ್ಮಾಣಕ್ಕೆ...

ಮಲೆನಾಡಿನ ಹೆಬ್ಬಾಗಿಲು ಎಂದೇ ಗುರುತಿಸಿಕೊಂಡಿರುವ ಶಿವಮೊಗ್ಗ ನಗರದ ಹೃದಯಭಾಗದಲ್ಲಿರುವ ಬಿ.ಎಚ್. ರಸ್ತೆಯ ತುಂಗಾ ಸೇತುವೆಗೆ ಕೊನೆಗೂ ಹೊಸ ರೂಪ ನೀಡುವ ಕಾಲ ಸನ್ನಿಹಿತವಾಗಿದೆ. ಶತಮಾನಕ್ಕೂ ಹೆಚ್ಚು ಕಾಲದ ಇತಿಹಾಸ ಹೊಂದಿರುವ ಹಳೆಯ ತುಂಗಾ...

ಟ್ರಂಪ್‌ ತಿರಸ್ಕರಿಸಿದ ಯುವಜನರು; 2029ರಲ್ಲಿ ಭಾರತದ ಯುವ ಮತದಾರರ...

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ 18–29 ವರ್ಷದ ಯುವ ಮತದಾರರು ರಿಪಬ್ಲಿಕನ್ ಪಕ್ಷದಿಂದ ದೊಡ್ಡ ಪ್ರಮಾಣದಲ್ಲಿ ದೂರ ಸರಿದಿದ್ದಾರೆ. ಉದ್ಯೋಗದ ಅನಿಶ್ಚಿತತೆ, ದುಬಾರಿ ಜೀವನ, ಭವಿಷ್ಯದ ಆತಂಕ ಹಾಗೂ ಸರ್ಕಾರದ ನೀತಿಗಳ ಕುರಿತ ಅಸಮಾಧಾನ...
WhatsApp Image 2026 11 08 at 9.16.38 PM 1

ಕೆಲವು ದಿನಗಳ ಹಿಂದೆ ಬಳ್ಕೂರು ಪ್ರದೇಶದಲ್ಲಿ ಕಾಲೇಜಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಟಿಪ್ಪರ್ ವಾಹನ ಡಿಕ್ಕಿಯಾಗಿ ಟಿ.ಕೆ. ಮೊಹಮ್ಮದ್ ಶಯಾನ್ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದು, ಮತ್ತೊಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದ ಘಟನೆ ಸಾರ್ವಜನಿಕರನ್ನು ಬೆಚ್ಚಿಬೀಳಿಸಿತ್ತು. ಇದರ ಬೆನ್ನಲ್ಲೇ ಇತ್ತೀಚೆಗೆ ಶಟ್ರಕಟ್ಟೆಯಲ್ಲಿ ಬಸ್ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿರುವುದು ಈ ರಸ್ತೆಯ ಅಪಾಯಕಾರಿ ಸ್ಥಿತಿಯನ್ನು ಮತ್ತೊಮ್ಮೆ ಬಯಲಿಗೆಳೆದಿದೆ.

ವಿದ್ಯಾರ್ಥಿಗಳು, ಪಾದಚಾರಿಗಳು ಹಾಗೂ ಸಾರ್ವಜನಿಕರು ಪ್ರತಿದಿನ ಜೀವಭಯದಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಕಿರಿದಾಗಿರುವುದು, ಭಾರೀ ವಾಹನಗಳ ಅತಿವೇಗದ ಸಂಚಾರ, ಸಮರ್ಪಕ ಬಸ್ ನಿಲ್ದಾಣಗಳ ಕೊರತೆ ಹಾಗೂ ಅಗತ್ಯ ರಸ್ತೆ ಸುರಕ್ಷತಾ ವ್ಯವಸ್ಥೆಗಳ ಅಭಾವ ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ. ಅಪಘಾತಗಳು ಸಂಭವಿಸಿದ ಬಳಿಕ ಸಾಂತ್ವನ ಹೇಳುವುದಕ್ಕಿಂತ ಅವುಗಳನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಆಡಳಿತದ ಜವಾಬ್ದಾರಿಯಾಗಿದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

WhatsApp Image 2026 11 08 at 9.15.31 PM 2

ಕುಂದಾಪುರ–ಹೊಸಂಗಡಿ ರಸ್ತೆಯ ಅಗಲೀಕರಣ ಕಾಮಗಾರಿಯನ್ನು ವಿಳಂಬ ಮಾಡದೆ ಆರಂಭಿಸಬೇಕು. ಟಿಪ್ಪರ್ ಹಾಗೂ ಇತರ ಘನ ವಾಹನಗಳ ಅತಿವೇಗದ ಮತ್ತು ಅಜಾಗರೂಕ ಚಾಲನೆಗೆ ಕಡಿವಾಣ ಹಾಕಬೇಕು. ಶಾಲಾ-ಕಾಲೇಜುಗಳ ಆರಂಭ ಮತ್ತು ಮುಕ್ತಾಯದ ಸಮಯದಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಸಮಯದ ನಿರ್ಬಂಧ ವಿಧಿಸಬೇಕು. ವಿದ್ಯಾರ್ಥಿಗಳು, ಪಾದಚಾರಿಗಳು ಹಾಗೂ ಸಾರ್ವಜನಿಕರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಬೇಕು ಎಂದು ಆಗ್ರಹಿಸಲಾಗಿದೆ.

ಅಲ್ಲದೆ, ರಾಜ್ಯ ಹೆದ್ದಾರಿಯಲ್ಲಿ ಸುಸಜ್ಜಿತ ಬಸ್ ತಂಗುದಾಣಗಳ ಕೊರತೆಯಿಂದ ಬಸ್ಸುಗಳು ರಸ್ತೆಯ ಮಧ್ಯಭಾಗದಲ್ಲೇ ನಿಲ್ಲಿಸುವ ಪರಿಸ್ಥಿತಿ ಇದೆ. ಇದರಿಂದ ಇತರ ವಾಹನಗಳ ಸಂಚಾರಕ್ಕೂ ಅಡಚಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಸ್ ನಿಲುಗಡೆ ಪ್ರದೇಶಗಳಲ್ಲಿ ಹೆಚ್ಚುವರಿ ಡಾಂಬರೀಕರಣ ನಡೆಸಿ, ಬಸ್ಸುಗಳು ಮುಖ್ಯ ರಸ್ತೆಯನ್ನು ಬಿಟ್ಟು ಎಡಭಾಗದಲ್ಲಿ ನಿಲ್ಲುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅಪಘಾತಗಳು ಹೆಚ್ಚಾಗಿ ಸಂಭವಿಸುವ ಸ್ಥಳಗಳನ್ನು ಗುರುತಿಸಿ ವೇಗ ನಿಯಂತ್ರಣ ವ್ಯವಸ್ಥೆ, ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಅಗತ್ಯವಿರುವ ಕಡೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು. ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗುವವರೆಗೆ ತಾತ್ಕಾಲಿಕವಾಗಿ ಅಪಘಾತ ತಡೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬೇಡಿಕೆಗಳನ್ನೂ ಮುಂದಿಡಲಾಗಿದೆ.

ಇನ್ನೆಷ್ಟು ಜೀವಗಳು ಬಲಿಯಾದರೆ ಆಡಳಿತ ಎಚ್ಚೆತ್ತುಕೊಳ್ಳಲಿದೆ? ವಿದ್ಯಾರ್ಥಿಗಳ ಸಾವಿನಂತಹ ದುರಂತಗಳು ಮರುಕಳಿಸುವ ಮುನ್ನವೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಲೋಕೋಪಯೋಗಿ, ಪೊಲೀಸ್ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳ ತುರ್ತು ಸಭೆ ನಡೆಸಿ, ರಸ್ತೆ ಅಗಲೀಕರಣ ಸೇರಿದಂತೆ ಸಾರ್ವಜನಿಕರ ಬೇಡಿಕೆಗಳನ್ನು ಶೀಘ್ರ ಈಡೇರಿಸಲು ನಿರ್ದೇಶನ ನೀಡಬೇಕು ಎಂದು ಮನವಿದಾರರು ಆಗ್ರಹಿಸಿದ್ದಾರೆ.

WhatsApp Image 2026 11 08 at 9.15.30 PM

ಜಾಮಿಯಾ ಮಸೀದಿ ಆಡಳಿತ ಸಮಿತಿ, ಕಂಡ್ಲೂರು, ಸಮಾನ ಮನಸ್ಕರು, ಸಾರ್ವಜನಿಕರು ಹಾಗೂ ಪ್ರಗತಿಪರ ಹೋರಾಟಗಾರರು ಈ ಮನವಿಯ ಮೂಲಕ ಜನರ ಜೀವ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಈ ದಿನ.ಕಾಮ್ ಜೊತೆ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಹೆಚ್.ಕೆ. ದೇವಾನಂದ ಶೆಟ್ಟಿ ಅವರು, ಈ ಘಟನೆ ಹಲವು ಗಂಭೀರ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ. ರಸ್ತೆಯಲ್ಲಿ ಸಂಚರಿಸುವಾಗ ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ಯಾಕೆ ನಿರ್ಮಾಣವಾಗಿದೆ? ಪ್ರತಿದಿನ ಶಾಲೆಗೆ ತೆರಳುವ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲಸ ಮತ್ತು ವ್ಯಾಪಾರಕ್ಕಾಗಿ ರಸ್ತೆಗೆ ಇಳಿಯುವ ಸಾರ್ವಜನಿಕರ ಸುರಕ್ಷತೆಯ ಹೊಣೆ ಹೊರುವವರು ಯಾರು?

WhatsApp Image 2026 11 08 at 10.14.48 PM

ಹುಡುಕಾಟದ ವರದಿಗಳ ಪ್ರಕಾರ, ಕುಂದಾಪುರ ಕಡೆಯಿಂದ ಮಣ್ಣು ಸಾಗಿಸುತ್ತಿದ್ದ ಎರಡು ಟಿಪ್ಪರ್‌ಗಳ ಅಜಾಗರೂಕ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ. ಸ್ಥಳಾವಕಾಶದ ಕೊರತೆಯಿಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಮಣ್ಣು ಸಾಗಾಟಕ್ಕೆ ಅಗತ್ಯವಾದ ಪರವಾನಗಿ ಇರಲಿಲ್ಲ ಎಂಬ ಅಂಶವೂ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಟಿಪ್ಪರ್ ಚಾಲಕರ ಜೊತೆಗೆ ಮಣ್ಣು ತೆಗೆದ ಸ್ಥಳದ ಮಾಲಕರನ್ನೂ ಬಂಧಿಸಲಾಗಿದೆ.

WhatsApp Image 2026 11 08 at 9.16.38 PM

ಹೀಗಾಗಿ, ಇದು ಕೇವಲ ಅಪಘಾತದ ಪ್ರಶ್ನೆಯಲ್ಲ. ಅಕ್ರಮ ಮಣ್ಣು ಸಾಗಾಟ, ಅತಿವೇಗದ ಚಾಲನೆ ಹಾಗೂ ವಾಹನ ಸಂಚಾರದ ಮೇಲಿನ ನಿಯಂತ್ರಣ ಮತ್ತು ಜವಾಬ್ದಾರಿಯುತ ವ್ಯವಸ್ಥೆಯ ವೈಫಲ್ಯವೂ ಇಲ್ಲಿ ಅಡಗಿದೆ.

ಟಿಪ್ಪರ್ ಚಾಲಕರು ಭಾರಿ ವಾಹನಗಳನ್ನು ಚಲಾಯಿಸಲು ಅಗತ್ಯವಾದ ಚಾಲನಾ ಪರವಾನಗಿ ಹೊಂದಿದ್ದಾರೆಯೇ? ಅವರಿಗೆ ಭಾರಿ ವಾಹನ ಚಾಲನೆಯ ಸೂಕ್ತ ತರಬೇತಿ ಇದೆಯೇ? ಎಷ್ಟು ವರ್ಷಗಳಿಂದ ಚಾಲನೆ ಮಾಡುತ್ತಿದ್ದಾರೆ? ಈ ಹಿಂದೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ? ಎಂಬುದನ್ನು ಪೊಲೀಸ್ ಇಲಾಖೆ ಪರಿಶೀಲಿಸಬೇಕು.

ಅಷ್ಟೇ ಅಲ್ಲದೆ, ಭಾರಿ ವಾಹನಗಳನ್ನು ರಸ್ತೆಗೆ ಇಳಿಸುವ ಮಾಲಕರು ಕೂಡ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಚಾಲಕರ ಸುರಕ್ಷತೆ ಹಾಗೂ ಸಾರ್ವಜನಿಕರ ಜೀವದ ಸುರಕ್ಷತೆಯ ಬಗ್ಗೆ ಗಮನಹರಿಸಬೇಕು. ಎಷ್ಟು ಟ್ರಿಪ್ ಮಾಡಬೇಕು, ಯಾವ ಮಾರ್ಗದಲ್ಲಿ ಸಂಚರಿಸಬೇಕು ಎಂಬುದನ್ನು ನಿರ್ಧರಿಸುವ ಮಾಲಕರು ವಾಹನಗಳ ಸುರಕ್ಷಿತ ಸಂಚಾರಕ್ಕೂ ಆದ್ಯತೆ ನೀಡಬೇಕು” ಎಂದು ಹೇಳಿದರು.

ಈ ದಿನ.ಕಾಮ್ ಜೊತೆ ಮಾತನಾಡಿದ ಸುಹೇಲ್ ಕಂಡ್ಲೂರು ಅವರು, “ಈ ಹೋರಾಟದ ಮೂಲಕ ನಾವು ನಮ್ಮ ಹಕ್ಕು ಮತ್ತು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದೇವೆ. ಇಷ್ಟೊಂದು ಸಂಖ್ಯೆಯಲ್ಲಿ ಸಾರ್ವಜನಿಕರು ಇಲ್ಲಿ ಸೇರಿರುವುದನ್ನು ಗಮನಿಸಿದಾಗ, ಕುಂದಾಪುರದಿಂದ ತೀರ್ಥಹಳ್ಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸೇರಿದಂತೆ ಉಡುಪಿ ಮತ್ತು ಚಿಕ್ಕಮಗಳೂರು ಸಂಸದರು ಹಾಗೂ ಬೈಂದೂರು ಮತ್ತು ಶಿವಮೊಗ್ಗ ಭಾಗದ ಜನಪ್ರತಿನಿಧಿಗಳ ಗಮನ ಸೆಳೆಯುವ ಕೆಲಸ ಮೊದಲು ಆಗಬೇಕು.

WhatsApp Image 2026 11 08 at 9.15.31 PM

ವಿಶೇಷವಾಗಿ ಟಿಪ್ಪರ್‌ಗಳ ಅತಿವೇಗದ ಸಂಚಾರಕ್ಕೆ ಕಡಿವಾಣ ಹಾಕಬೇಕು. ಕೆಲವು ಟಿಪ್ಪರ್‌ಗಳು 15 ವರ್ಷಗಳಿಗಿಂತಲೂ ಹಳೆಯದಾಗಿದ್ದು, ಅಗತ್ಯ ಫಿಟ್ನೆಸ್ ಪ್ರಮಾಣಪತ್ರ (ಎಫ್‌ಸಿ) ಹಾಗೂ ಪರವಾನಗಿ ಇಲ್ಲದೆ ರಸ್ತೆಗಳಲ್ಲಿ ಸಂಚರಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇಂತಹ ವಾಹನಗಳ ವಿರುದ್ಧ ಆರ್‌ಟಿಒ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಿಯಮ ಉಲ್ಲಂಘಿಸುವ ವಾಹನಗಳನ್ನು ರಸ್ತೆಗಿಳಿಯದಂತೆ ತಡೆಯಬೇಕು.

ಈ ಸಮಸ್ಯೆಗೆ ಪೊಲೀಸ್ ಇಲಾಖೆಯೊಂದನ್ನೇ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಆರ್‌ಟಿಒ ಇಲಾಖೆ, ಗ್ರಾಮ ಪಂಚಾಯತ್ ಹಾಗೂ ಸಂಬಂಧಪಟ್ಟ ಎಲ್ಲಾ ಇಲಾಖೆಗಳೂ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ವಾಹನಗಳ ವೇಗಕ್ಕೆ ಮಿತಿ ವಿಧಿಸಿ, ನಿಯಮಿತವಾಗಿ ತಪಾಸಣೆ ನಡೆಸಬೇಕು.

WhatsApp Image 2026 11 08 at 10.14.48 PM 1

ಅಪಘಾತಗಳು ಹೆಚ್ಚಾಗಿ ಸಂಭವಿಸುವ ಕೋಳಿ ಭಾಗ, ಅಂಪಾರು ಸೇರಿದಂತೆ ಅಪಾಯದ ಸಾಧ್ಯತೆ ಇರುವ ಪ್ರದೇಶಗಳನ್ನು ಗುರುತಿಸಿ, ಅವುಗಳನ್ನು ಅಪಘಾತ ವಲಯಗಳೆಂದು (ಅಕ್ಸಿಡೆಂಟ್ ಝೋನ್) ಘೋಷಿಸುವ ಕೆಲಸವನ್ನು ಗ್ರಾಮ ಪಂಚಾಯತ್ ಮೊದಲು ಮಾಡಬೇಕು. ಅಂತಹ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಫಲಕಗಳನ್ನು ಅಳವಡಿಸಿ, ವಾಹನಗಳ ವೇಗ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಜೀವ ರಕ್ಷಣೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಕೂಡ ತನ್ನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಬೇಕು” ಎಂದು ಆಗ್ರಹಿಸಿದರು.

WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಶಾರೂಕ್ ತೀರ್ಥಹಳ್ಳಿ
ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಚಿನ್ನದ ಸರ ಕಳ್ಳತನ: ಪ್ರಕರಣ ದಾಖಲು

ಚಿಕ್ಕಮಗಳೂರು ನಗರದ ಅಗ್ರಹಾರ ಸರ್ಕಲ್,  ಸ್ಪಲೆನ್ಸರ್ ರಸ್ತೆ ವ್ಯಾಪ್ತಿಯಲ್ಲಿ ವಾಕಿಂಗ್ ಮಾಡುತ್ತಿದ್ದಾಗ...

150 ವರ್ಷ ಹಳೆಯ ಶಿವಮೊಗ್ಗ ತುಂಗಾ ಸೇತುವೆ ಮರುನಿರ್ಮಾಣಕ್ಕೆ ಅಂಕಿತ; 40 ಕೋಟಿ ರೂ ಅನುದಾನ

ಮಲೆನಾಡಿನ ಹೆಬ್ಬಾಗಿಲು ಎಂದೇ ಗುರುತಿಸಿಕೊಂಡಿರುವ ಶಿವಮೊಗ್ಗ ನಗರದ ಹೃದಯಭಾಗದಲ್ಲಿರುವ ಬಿ.ಎಚ್. ರಸ್ತೆಯ...

ಚಿಂತಾಮಣಿ: ಬೆಲೆ ಏರಿಕೆ,ಸರ್ಕಾರದ ವೈಫಲ್ಯ ಹಾಗೂ ಪೊಲೀಸ್ ಇಲಾಖೆಯ ರಾಜಕೀಯ ಹಸ್ತಕ್ಷೇಪ ಖಂಡಿಸಿ ಎನ್‌ಡಿಎ ಕಡೆಯಿಂದ ಬೃಹತ್ ಪ್ರತಿಭಟನೆ

ಚಿಂತಾಮಣಿ:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ,ಜನವಿರೋಧಿ ನೀತಿಗಳು ಹಾಗೂ ಸರ್ಕಾರದ ವೈಫಲ್ಯ...

ಚಿಂತಾಮಣಿ | ಮಾಲಿನ್ಯ ಮುಕ್ತ ಪರಿಸರಕ್ಕೆ ಸಾರಿಗೆ ಇಲಾಖೆ ಕರೆ: ವಾಯು ಮಾಲಿನ್ಯ ಜಾಗೃತಿ ಕರಪತ್ರ ಬಿಡುಗಡೆ

ಚಿಂತಾಮಣಿ ನಗರದ ಹೊರವಲಯದ ಕೋನಪ್ಪಲ್ಲಿ ಬಳಿ ಇರುವ ಸಹಾಯಕ ಪ್ರಾದೇಶಿಕ ಸಾರಿಗೆ...