ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ನೇತ್ರಾವತಿ ನದಿ ತೀರದಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ರಿಕ್ಷಾ ಚಾಲಕ ಸೇರಿದಂತೆ ಮೂವರು ಸೇರಿ ಸಾಮೂಹಿಕ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದ್ದು, ಮೂವರನ್ನು ವಶಕ್ಕೆ ಪಡೆದುಕೊಂಡು ಮಂಗಳೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ಬುಧವಾರ ತಡರಾತ್ರಿ ಮುನ್ನೂರು ಗ್ರಾಮ ಮತ್ತು ಉಳ್ಳಾಲ ನಗರಸಭೆ ಗಡಿಯಲ್ಲಿರುವ ಬೊಳ್ಯಹೌಸ್ ಸಮೀಪ ಈ ಘಟನೆ ನಡೆದಿದ್ದು, ಗಾಯಗೊಂಡಿದ್ದ ಯುವತಿ ತಡರಾತ್ರಿ ಪಕ್ಕದ ಮನೆಯೊಂದರಲ್ಲಿ ನೀರು ಕೇಳಿದ ನಂತರ ಘಟನೆ ಬೆಳಕಿಗೆ ಬಂದಿರುವುದಾಗಿ ವರದಿಯಾಗಿದೆ.
ಯುವತಿ ಉದ್ಯೋಗ ಅರಸಿ ತನ್ನ ಬಂದಿದ್ದು, ಕೇರಳದ ಉಪ್ಪಳದಲ್ಲಿ ವಾಸವಾಗಿದ್ದಳು. ಸ್ನೇಹಿತನ ಜತೆಗೆ ಮಂಗಳೂರಿಗೆ ಬಂದಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿದೆ. ಈ ವೇಳೆ ಸ್ನೇಹಿತ ಆಕೆಯ ಮೊಬೈಲ್ ನೆಲಕ್ಕೆ ಎಸೆದು ಹಾನಿ ಮಾಡಿದ್ದ ಎಂದು ತಿಳಿದು ಬಂದಿದೆ.
ಈ ಕಾರಣದಿಂದ ಏಕೆ ಮಧ್ಯರಾತ್ರಿ ಹೊರಗೆ ಬಂದು, ರಿಕ್ಷಾ ಚಾಲಕನ ಬಳಿ ಸಹಾಯ ಕೇಳಿದ್ದಾಳೆ. ಸಹಾಯ ಮಾಡುವ ನೆಪದಲ್ಲಿ ರಿಕ್ಷಾ ಚಾಲಕ ಆಕೆಯನ್ನು ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ಮೂವರ ಜತೆ ಸೇರಿ ಅತ್ಯಾಚಾರವೆಸಗಿರುವ ಬಗ್ಗೆ ಆಪಾದನೆ ಕೇಳಿ ಬಂದಿದೆ.
ಯುವತಿ ತಡರಾತ್ರಿ ಸ್ಥಳೀಯರೊಬ್ಬರ ಮನೆ ಬಾಗಿಲು ಬಡಿದಿದ್ದು, ನೀರು ಕೇಳುತ್ತಿದ್ದಂತೆ ಅಲ್ಲೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಮನೆಮಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ಬೆಳಕಿಗೆ ಬಂದಿದೆ. ಯುವತಿ ಮೈಯಲ್ಲಿ ಗಾಯದ ಗುರುತು ಕಂಡು ಬಂದಿದೆ.
ಈ ಬಗ್ಗೆ ಸುದ್ದಿಗೋಷ್ಠಿಯ ಮೂಲಕ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅರ್ಗವಾಲ್, ಸದ್ಯ ಯುವತಿಯನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ವೈದ್ಯಕೀಯ ವರದಿಯ ನಂತರ ಅತ್ಯಾಚಾರ ನಡೆದಿರುವ ಬಗ್ಗೆ ಮಾಹಿತಿಯನ್ನು ನೀಡಲಾಗುವುದು’ ಎಂದು ತಿಳಿಸಿದ್ದಾರೆ.
ಬುಧವಾರ ರಾತ್ರಿ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಧ್ಯರಾತ್ರಿ 1.30 ಸುಮಾರಿಗೆ 112 ಒಂದು ಕರೆ ಬಂದಿರುತ್ತದೆ. ಒಂದು ಹುಡುಗಿ ಕೂಗಾಡುತ್ತಿದ್ದಾಳೆ, ಆಕೆಗೆ ಹಲ್ಲೆ ಮಾಡಿದ್ದಾರೆ ಎಂಬ ದೂರು ಬಂದಿತ್ತು. ತಕ್ಷಣವೇ ಹೊಯ್ಸಳ ಘಟನಾ ಸ್ಥಳಕ್ಕೆ ತೆರಳಿ ಯುವತಿಯನ್ನು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಅವಳು ಮಾತನಾಡುವ ಸ್ಥಿತಿಯಲ್ಲಿರದ ಕಾರಣ ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ತದ ನಂತರ ಬೆಳಗ್ಗೆ ಅವಳ ಹೇಳಿಕೆ ಪ್ರಕಾರ, ರಾತ್ರಿ ಯಾರೋ ಅವಳಿಗೆ ಮದ್ಯಪಾನ ಮಾಡಿಸಿದ್ದಾರೆ. ಆನಂತರ ಪ್ರಜ್ಞೆ ತಪ್ಪಿದ್ದು, ಕಾರಲ್ಲಿ ಮೂರು ಜನ ಇದ್ದಿದ್ದಾಗಿ ಯುವತಿ ತಿಳಿಸಿದ್ದಾಳೆ. ಪ್ರಜ್ಞೆ ಬಂದ ನಂತರ ಅವಳ ಒಳಉಡುಪು ಇರಲಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾಳೆ. ಪ್ರಜ್ಞೆ ಬಂದು ಅವಳು ಕೂಗಾಡಲು ಶುರು ಮಾಡಿದಾಗ ಅವರು ಆಕೆಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಆ ಬಳಿಕ ಸ್ಥಳೀಯರ ಸಹಾಯದೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದಾಳೆ ಎನ್ನಲಾಗಿದೆ.
ಅವಳ ದೂರಿನ ಆಧಾರದಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದೇವೆ. ಬುಧವಾರ ಬೆಳಗ್ಗೆ ತನ್ನ ಸ್ನೇಹಿತನ ಜೊತೆಗೆ ಕೆಲಸ ಹುಡುಕಿಕೊಂಡು ಮಂಗಳೂರಿಗೆ ಬಂದಿದ್ದಳು. ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಮೂಲದವಳಾದ ಯುವತಿ 2-3 ವರ್ಷಗಳಿಂದ ಕೇರಳದ ಫ್ಲೆವುಡ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಮಂಗಳೂರಿನಲ್ಲಿ ಬೇರೆ ಸಂಸ್ಥೆಯಲ್ಲಿ ಕೆಲಸದ ಅವಕಾಶವಿದ್ದ ಕಾರಣ ಸಹಚರನ ಜೊತೆ ಮಂಗಳೂರಿಗೆ ಬಂದಿದ್ದಳು ಎಂದು ಕಮಿಷನರ್ ತಿಳಿಸಿದ್ದಾರೆ.
ಮಂಗಳೂರಿಗೆ ಬಂದಿದ್ದ ವೇಳೆ ಗೆಳೆಯನ ಜೊತೆಗೆ ಜಗಳವಾಗಿ ಆತ ಈಕೆಯ ಮೊಬೈಲಿಗೆ ಹಾನಿ ಮಾಡಿದ್ದ. ಹಾಗಾಗಿ ಮೊಬೈಲ್ ರಿಪೇರಿಗೆಂದು ಆಟೋ ಹಿಡಿದು ಮೊಬೈಲ್ ಅಂಗಡಿಗೆ ತೆರಳಿದ್ದಾಳೆ. 5-6 ಗಂಟೆಗಳ ಕಾಲ ಆಕೆ ಆಟೋ ಡ್ರೈವರ್ ಜೊತೆಗೇ ಇದ್ದು, ಅವನ ಜೊತೆಗೆ ಗೆಳೆತನ ಆಗಿದೆ. ಮೊಬೈಲ್ ರಿಪೇರಿ ಹಣ ಕೂಡಾ ಆತನೇ ಪಾವತಿಸಿದ್ದ. ಆ ಬಳಿಕ ಆಕೆ ರಾತ್ರಿ ವೇಳೆ ಪ.ಬಂಗಾಳ ಹೋಗಲು ರೈಲ್ವೆ ನಿಲ್ದಾಣಕ್ಕೆ ಬಿಡಲು ಆಟೋ ಡ್ರೈವರಿಗೆ ಹೇಳುತ್ತಾಳೆ. ಆದರೆ ಕಂಕನಾಡಿ ರೈಲ್ವೇ ನಿಲ್ದಾಣಕ್ಕೆ ಹೋಗದೇ ಆಟೋ ಡ್ರೈವರ್ ಮತ್ತಿಬ್ಬರ ಗೆಳೆಯರನ್ನು ಕರೆಸಿ ಬೇರೊಂದು ಜಾಗಕ್ಕೆ ಹೋಗುತ್ತಾರೆ. ಆ ಜಾಗದಲ್ಲಿ ಆಕೆಗೆ ಚೆನ್ನಾಗಿ ಮದ್ಯಪಾನ ಮಾಡಿಸಿ, ಆಕೆ ಪ್ರಜ್ಞೆ ತಪ್ಪಿದ್ದು , ಪ್ರಜ್ಞೆ ಬಂದಾಗ ಅತ್ಯಾಚಾರ ನಡೆದಿರುವುದು ಆಕೆ ಗಮನಕ್ಕೆ ಬಂದಿದೆ. ಸದ್ಯ ಈ ಪ್ರಕರಣದ ತನಿಖೆ ನಡೆಸಿ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ವಶಕ್ಕೆ ತೆಗೆದುಕೊಂಡ ಆರೋಪಿಗಳನ್ನು ಮುಲ್ಕಿ ನಿವಾಸಿ, 10 ವರ್ಷಕ್ಕಿಂತ ಹೆಚ್ಚು ಕಾಲ ಆಟೋ ಚಾಲಕನಾಗಿ ದುಡಿಯುತ್ತಿದ್ದ ಪ್ರಭುರಾಜ್ (38), ನಿನ್ನೆ ಮಧ್ಯಾಹ್ನ 2.30 ಸುಮಾರಿಗೆ ಆಕೆಯನ್ನು ಆಟೋದಲ್ಲಿ ಪ್ರಭುರಾಜ್ ಪಿಕಪ್ ನಡೆಸಿದ್ದನು. ಆ ಬಳಿಕ ಪ್ರಭುರಾಜ್ ಕುಂಪಲ ನಿವಾಸಿ ಇಲೆಕ್ಟ್ರಿಷಿಯನ್ ಕಾರ್ಯನಿರ್ವಹಿಸುವ ಮಿಥುನ್ (30) ಹಾಗೂ ಮಂಗಳೂರಿನಲ್ಲಿ ವಾಸ ಮಾಡುವ ಮತ್ತೋರ್ವ ಗೆಳೆಯ ಮಣಿ ಎಂಬಾತನನ್ನು ಕರೆದಿರುತ್ತಾರೆ. ಈ ಮೂವರು ಆಕೆಗೆ ಚೆನ್ನಾಗಿ ಕುಡಿಸಿ ಅವರು ಚೆನ್ನಾಗಿ ಕುಡಿದು ಅತ್ಯಾಚಾರ ಎಸಗಿದ್ದಾರೆ. ಯುವತಿ ತನ್ನ ಹೇಳಿಕೆಯಲ್ಲಿ ತನ್ನ ಮೇಲೆ ಅತ್ಯಾಚಾರ ಆಗಿರುವುದಾಗಿ ಹೇಳಿದ್ದಾಳೆ. ವೈದ್ಯಕೀಯ ವರದಿ ಬಂದ ಬಳಿಕ ಅತ್ಯಾಚಾರ ಆಗಿದೆಯೋ ಇಲ್ಲವೋ ಎನ್ನುವುದು ದೃಢಪಡಿಸಲಾಗುವುದು ಎಂಬುವುದಾಗಿ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿಕೆ ನೀಡಿದ್ದಾರೆ.