ಉತ್ತರ ಕನ್ನಡ | ಯುವನಿಧಿ ಫಲಾನುಭವಿಗಳ ಸಂಖ್ಯೆ ಹೆಚ್ಚಳ: ಹುಸಿಯಾದ ಉದ್ಯೋಗ ಸೃಷ್ಟಿಯ ಭರವಸೆ!

Date:

ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಯುವನಿಧಿ ಯೋಜನೆಯ ಫಲಾನುಭವಿಗಳ ಸಂಖ್ಯೆ 10,280ಕ್ಕೆ ಏರಿಕೆಯಾಗಿರುವುದು ಕೇವಲ ಒಂದು ಸರ್ಕಾರಿ ಯೋಜನೆಯ ಫಲಾಫಲದ ಅಂಕಿ-ಅಂಶವಲ್ಲ. ಜಿಲ್ಲೆಯಲ್ಲಿನ ಉದ್ಯೋಗಾವಕಾಶಗಳು, ಯುವಜನರ ಸದೃಢ ಭವಿಷ್ಯ, ಸ್ಥಳೀಯ ಆರ್ಥಿಕ ವ್ಯವಸ್ಥೆ ಮತ್ತು ಶಿಕ್ಷಣ ವ್ಯವಸ್ಥೆಯ ಕುರಿತು ಗಂಭೀರ ಚರ್ಚೆಯ ಅಗತ್ಯವಿದೆ ಎಂಬುದನ್ನು ಇದು ಮನವರಿಕೆ ಮಾಡುತ್ತದೆ.

ಪದವಿ ಮುಗಿದಿದೆ, ಕೈಯಲ್ಲಿ ಪ್ರಮಾಣಪತ್ರವಿದೆ, ಉದ್ಯೋಗದ ಕನಸೂ ಇದೆ. ಆದರೆ ಓದಿದ ಜಿಲ್ಲೆಯಲ್ಲಿ ಕೆಲಸ ಸಿಗುತ್ತಿಲ್ಲ. ಸಿಕ್ಕರೂ ವಿದ್ಯಾರ್ಹತೆಗೆ ತಕ್ಕ ಸಂಬಳವಿಲ್ಲ. ಬೇರೆ ಜಿಲ್ಲೆ ಅಥವಾ ರಾಜ್ಯಕ್ಕೆ ಹೋಗಿ ಕೆಲಸ ಹುಡುಕುವ ಆರ್ಥಿಕ ಸಾಮರ್ಥ್ಯ ಎಲ್ಲರಿಗೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ನೀಡುವ ನಿರುದ್ಯೋಗ ಭತ್ಯೆಯೇ ಅನೇಕ ಯುವಜನರಿಗೆ ತಾತ್ಕಾಲಿಕ ಆಸರೆಯಾಗಿದೆ, ಆದರೆ ಸ್ವಾವಲಂಬನೆಯ ಬದುಕು ಮರೀಚಿಕೆಯಾಗಿಯೇ ಉಳಿದಿದೆ.

- Advertisement -

2023ರ ಡಿಸೆಂಬರ್‌ನಲ್ಲಿ ಆರಂಭವಾದ ಯುವನಿಧಿ ಯೋಜನೆಯ ಮೊದಲ ಐದಾರು ತಿಂಗಳಲ್ಲಿ ಜಿಲ್ಲೆಯಲ್ಲಿ ಸುಮಾರು 3 ಸಾವಿರ ಯುವಜನರು ಮಾತ್ರ ನೋಂದಣಿ ಮಾಡಿಕೊಂಡಿದ್ದರು. ಈಗ ಆ ಸಂಖ್ಯೆ 10,280ಕ್ಕೆ ತಲುಪಿದೆ. ಆಗಸ್ಟ್ ಅಂತ್ಯದವರೆಗೆ 9,369 ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ಸಹಾಯಧನ ಪಾವತಿಸಲಾಗಿದೆ. ಯೋಜನೆಯಡಿ ಇದುವರೆಗೆ ಸುಮಾರು ₹28.30 ಕೋಟಿ ವಿತರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಡ್ವಾಣಿ – ಅಧಿಕಾರದ ಆಟದಲ್ಲಿ ಸಿದ್ಧಾಂತವೂ ಒಂದು ಮೆಟ್ಟಿಲಷ್ಟೇ!

1984ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು ಕೇವಲ ಎರಡು ಸ್ಥಾನಗಳು. ಅಲ್ಲಿಂದ ಪಕ್ಷವನ್ನು ರಾಷ್ಟ್ರೀಯ ಅಧಿಕಾರದ ಕೇಂದ್ರಕ್ಕೆ ತರುವಲ್ಲಿ ಅಡ್ವಾಣಿ ಅವರ ಪಾತ್ರ ದೊಡ್ಡದು. ರಥಯಾತ್ರೆ, ರಾಮಮಂದಿರ ಚಳವಳಿ ಮತ್ತು ಹಿಂದುತ್ವದ ರಾಜಕಾರಣದ...

ಬಡತನದ ಮಾಪನ ಮತ್ತು ವಾಸ್ತವ ಚಿತ್ರಣ: ಆಳ ಅಗಲ

ವಿಶ್ವಬ್ಯಾಂಕ್‌ನ ಬಡತನ ಮತ್ತು ಸಮಾನತೆಯ ಇತ್ತೀಚಿನ ವರದಿಯ ಪ್ರಕಾರ 2011ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಅಂದಾಜು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ವರದಿಯನ್ನು ಆಧರಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ...

ಗಾಂಧೀಯ ‘ರಾಮ’-ಮನುವಾದಿಗಳ ‘ಶ್ರೀರಾಮ’ನಲ್ಲ

ಸಮಾನತೆಯ ರಾಮರಾಜ್ಯಕ್ಕೂ, ವರ್ಣಾಶ್ರಮದ ರಾಜಕಾರಣಕ್ಕೂ ಇರುವ ವ್ಯತ್ಯಾಸವೇನು? ಗಾಂಧೀಜಿಯವರ ಪಾಲಿಗೆ ರಾಮ ಎಂದರೆ ಸತ್ಯ, ಅಹಿಂಸೆ, ಪ್ರೀತಿ ಮತ್ತು ಸರ್ವಧರ್ಮ ಸಮಭಾವದ ಸಂಕೇತ; ಅಂಬೇಡ್ಕರ್ ಅವರ ವಿಮರ್ಶೆಯಲ್ಲಿ ಪುರಾಣದ ರಾಮನ ಆಡಳಿತದಲ್ಲಿ ಜಾತಿ...

ಪದವಿ ಪೂರ್ಣಗೊಳಿಸಿ ಆರು ತಿಂಗಳಾದರೂ ಉದ್ಯೋಗ ದೊರೆಯದವರಿಗೆ ತಿಂಗಳಿಗೆ ₹3,000 ಹಾಗೂ ಡಿಪ್ಲೊಮಾ ಮುಗಿಸಿದವರಿಗೆ ₹1,500 ಸಹಾಯಧನ ನೀಡಲಾಗುತ್ತಿದೆ. ಗರಿಷ್ಠ ಎರಡು ವರ್ಷಗಳವರೆಗೆ ಈ ನೆರವು ಸಿಗುತ್ತದೆ.

12 ತಾಲೂಕುಗಳಲ್ಲೂ ನಿರುದ್ಯೋಗದ ಪ್ರಶ್ನೆ

ಜಿಲ್ಲೆಯ 12 ತಾಲೂಕುಗಳಲ್ಲೂ ಯುವನಿಧಿ ಫಲಾನುಭವಿಗಳಿದ್ದಾರೆ. ತಾಲೂಕುವಾರು ಅಂಕಿ-ಅಂಶ ಗಮನಿಸಿದರೆ, ಶಿರಸಿ, ಭಟ್ಕಳ, ಹೊನ್ನಾವರ ಮತ್ತು ಕುಮಟಾ ತಾಲೂಕುಗಳಲ್ಲಿ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದೆ.

ಶಿರಸಿಯಲ್ಲಿ 1,357, ಭಟ್ಕಳದಲ್ಲಿ 1,261, ಹೊನ್ನಾವರದಲ್ಲಿ 1,144 ಹಾಗೂ ಕುಮಟಾದಲ್ಲಿ 1,128 ಯುವಜನರು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಸಿದ್ದಾಪುರದಲ್ಲಿ 958, ಹಳಿಯಾಳದಲ್ಲಿ 834, ಅಂಕೋಲಾದಲ್ಲಿ 806, ಮುಂಡಗೋಡದಲ್ಲಿ 758, ಕಾರವಾರದಲ್ಲಿ 756, ಯಲ್ಲಾಪುರದಲ್ಲಿ 608, ದಾಂಡೇಲಿಯಲ್ಲಿ 379 ಹಾಗೂ ಜೋಯಿಡಾದಲ್ಲಿ 291 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಈ ಅಂಕಿ-ಅಂಶಗಳು ತಾಲೂಕುಗಳಲ್ಲಿನ ನಿರುದ್ಯೋಗ ಪ್ರಮಾಣವನ್ನು ನೇರವಾಗಿ ಸೂಚಿಸುವುದಿಲ್ಲ. ಆದರೆ ವಿದ್ಯಾಭ್ಯಾಸ ಮುಗಿಸಿದ ನಂತರ ಉದ್ಯೋಗ ಸಿಗದೆ ಸರ್ಕಾರಿ ಸಹಾಯಧನ ಪಡೆಯುತ್ತಿರುವ ಯುವಜನರ ಸಂಖ್ಯೆ ಜಿಲ್ಲೆಯಾದ್ಯಂತ ಹರಡಿರುವುದನ್ನು ತೋರಿಸುತ್ತವೆ.

ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲವೇ?

ಉತ್ತರ ಕನ್ನಡ ಜಿಲ್ಲೆ ನೈಸರ್ಗಿಕ ಸಂಪನ್ಮೂಲ, ಪ್ರವಾಸೋದ್ಯಮ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ಕೈಗಾರಿಕಾ ಸಾಮರ್ಥ್ಯ ಹೊಂದಿರುವ ಪ್ರದೇಶ. ಆದರೂ ಈ ಸಂಪನ್ಮೂಲಗಳಿಗೆ ತಕ್ಕಂತೆ ಸ್ಥಳೀಯ ಯುವಜನರಿಗೆ ಉದ್ಯೋಗ ಸೃಷ್ಟಿಯಾಗುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

ಕಾರವಾರದ ನೌಕಾನೆಲೆ, ಕೈಗಾ ಅಣು ವಿದ್ಯುತ್ ಯೋಜನೆ, ದಾಂಡೇಲಿಯ ಕಾಗದ ಕಾರ್ಖಾನೆ, ಕಾರವಾರದ ರಾಸಾಯನಿಕ ಕೈಗಾರಿಕೆಗಳು ಹಾಗೂ ಹಳಿಯಾಳದ ಸಕ್ಕರೆ ಕೈಗಾರಿಕೆ ಸೇರಿದಂತೆ ಜಿಲ್ಲೆಯಲ್ಲಿ ಪ್ರಮುಖ ಕೈಗಾರಿಕಾ ಘಟಕಗಳಿವೆ. ಆದರೆ ಇಂತಹ ದೊಡ್ಡ ಯೋಜನೆಗಳು ಮತ್ತು ಕೈಗಾರಿಕೆಗಳ ಬೆಳವಣಿಗೆಯಿಂದ ಸ್ಥಳೀಯ ವಿದ್ಯಾವಂತ ಯುವಜನರಿಗೆ ಎಷ್ಟು ಉದ್ಯೋಗ ಸಿಗುತ್ತಿದೆ ಎಂಬುದರ ಬಗ್ಗೆ ಸಮಗ್ರ ಮಾಹಿತಿ ಸಾರ್ವಜನಿಕವಾಗಿ ಲಭ್ಯವಾಗಬೇಕಿದೆ.

ಜಿಲ್ಲೆಯಲ್ಲಿ ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಅವಕಾಶಗಳಿದ್ದರೂ ಅವುಗಳ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಿಕೊಳ್ಳಲಾಗುತ್ತಿದೆಯೇ ಎಂಬುದೂ ಪರಿಶೀಲನೆಯ ವಿಷಯವಾಗಿದೆ.

ನಬಾರ್ಡ್‌ನ 2026-27ನೇ ಸಾಲಿನ ಉತ್ತರ ಕನ್ನಡ ಜಿಲ್ಲಾ ವರದಿಯ ಪ್ರಕಾರ, ಜಿಲ್ಲೆಯಲ್ಲಿ ಉದ್ದಿಮೆ ನೋಂದಣಿ ಹೊಂದಿರುವ 39,922 ಎಂಎಸ್‌ಎಂಇ ಘಟಕಗಳಿದ್ದು, ಅವುಗಳಲ್ಲಿ ಸುಮಾರು 1,78,827 ಜನರಿಗೆ ಉದ್ಯೋಗವಿದೆ. ಆಹಾರ ಮತ್ತು ಕೃಷಿ ಆಧಾರಿತ ಉದ್ಯಮಗಳು, ಮರದ ಉತ್ಪನ್ನಗಳು, ಜವಳಿ, ಎಂಜಿನಿಯರಿಂಗ್, ದುರಸ್ತಿ ಮತ್ತು ಇತರ ಸಣ್ಣ ಕೈಗಾರಿಕೆಗಳು ಈ ವಲಯದಲ್ಲಿವೆ.

ಆದರೆ ಇಷ್ಟೊಂದು ಘಟಕಗಳಿದ್ದರೂ ಪದವಿ ಮತ್ತು ಡಿಪ್ಲೊಮಾ ಮುಗಿಸಿದ ಯುವಜನರಿಗೆ ಅವರ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗುತ್ತಿದೆಯೇ? ಕೈಗಾರಿಕೆಗಳಿಗೆ ಅಗತ್ಯವಿರುವ ಕೌಶಲ್ಯ ಮತ್ತು ಸ್ಥಳೀಯ ಯುವಜನರಲ್ಲಿರುವ ಕೌಶಲ್ಯ ಒಂದಕ್ಕೊಂದು ಹೊಂದಿಕೆಯಾಗುತ್ತಿದೆಯೇ? ಈ ಬಗ್ಗೆ ಅಧ್ಯಯನ ನಡೆಯಬೇಕಿದೆ.

ಅಭಿವೃದ್ಧಿಯ ಅವಕಾಶಗಳಿವೆ, ಬಳಸಿಕೊಳ್ಳುವ ಪ್ರಯತ್ನ ಬೇಕು

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಆಹಾರ ಸಂಸ್ಕರಣೆ, ಗೋಡಂಬಿ ಉದ್ಯಮ, ಮೀನು ಸಂಸ್ಕರಣೆ, ಕೃಷಿ ಆಧಾರಿತ ಉದ್ಯಮ, ಅರಣ್ಯ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಹೋಟೆಲ್ ಮತ್ತು ಆತಿಥ್ಯ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಸಲು ಅವಕಾಶಗಳಿವೆ.

ವಿಶೇಷವಾಗಿ ದಾಂಡೇಲಿ, ಜೋಯಿಡಾ, ಯಲ್ಲಾಪುರ, ಮುಂಡಗೋಡ, ಶಿರಸಿ ಮತ್ತು ಸಿದ್ದಾಪುರ ಭಾಗಗಳಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಉದ್ಯೋಗಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಬಹುದು. ಸ್ಥಳೀಯ ಯುವಜನರಿಗೆ ಪ್ರವಾಸಿ ಮಾರ್ಗದರ್ಶಿ, ಹೋಟೆಲ್ ನಿರ್ವಹಣೆ, ಹೋಂಸ್ಟೇ ನಿರ್ವಹಣೆ, ಆಹಾರ ತಯಾರಿಕೆ, ಪ್ರವಾಸಿ ವಾಹನ ಸೇವೆ ಹಾಗೂ ಸಾಹಸ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ತರಬೇತಿ ನೀಡಿದರೆ ಸ್ವಯಂ ಉದ್ಯೋಗಕ್ಕೂ ದಾರಿ ತೆರೆಯಬಹುದು.

ಅದೇ ರೀತಿ ಕರಾವಳಿ ಭಾಗದಲ್ಲಿ ಮೀನು ಸಂಸ್ಕರಣೆ, ಶೀತಲೀಕರಣ ಘಟಕಗಳು, ಆಹಾರ ಪ್ಯಾಕಿಂಗ್, ಸಾರಿಗೆ ಮತ್ತು ಮಾರುಕಟ್ಟೆ ವ್ಯವಸ್ಥೆ ಅಭಿವೃದ್ಧಿಪಡಿಸಿದರೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಬಹುದು.

ಆದರೆ ಇಂತಹ ಅವಕಾಶಗಳನ್ನು ಗುರುತಿಸಿ ಯೋಜನೆ ರೂಪಿಸುವುದು, ಹೂಡಿಕೆದಾರರನ್ನು ಆಕರ್ಷಿಸುವುದು, ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಹಾಗೂ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ದೊರೆಯುವಂತೆ ನೋಡಿಕೊಳ್ಳುವುದು ಆಡಳಿತ ಮತ್ತು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ.

ಪದವಿ ಇದೆ, ಕೌಶಲ್ಯ ಇದೆಯೇ? ತರಬೇತಿಯ ಗುಣಮಟ್ಟವೂ ಪ್ರಶ್ನೆ

ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಕೇವಲ ಪದವಿ ಪ್ರಮಾಣಪತ್ರದಿಂದ ಉದ್ಯೋಗ ಸಿಗುವುದು ಕಷ್ಟವಾಗುತ್ತಿದೆ. ಕಂಪ್ಯೂಟರ್ ಜ್ಞಾನ, ಸಂವಹನ ಕೌಶಲ್ಯ, ತಾಂತ್ರಿಕ ಪರಿಣತಿ, ಇಂಗ್ಲಿಷ್ ಭಾಷಾ ಜ್ಞಾನ, ಉದ್ಯಮ ನಿರ್ವಹಣೆ ಸೇರಿದಂತೆ ಹಲವು ಕೌಶಲಗಳಿಗೆ ಉದ್ಯೋಗದಾತರು ಆದ್ಯತೆ ನೀಡುತ್ತಿದ್ದಾರೆ.

ಆದರೆ ಗ್ರಾಮೀಣ ಭಾಗದ ಅನೇಕ ವಿದ್ಯಾರ್ಥಿಗಳಿಗೆ ಇಂತಹ ತರಬೇತಿ ಪಡೆಯಲು ಬೇಕಾದ ಸೌಲಭ್ಯ, ಆರ್ಥಿಕ ನೆರವು ಮತ್ತು ಮಾರ್ಗದರ್ಶನ ಸುಲಭವಾಗಿ ಲಭ್ಯವಾಗುತ್ತಿಲ್ಲ. ಕಾಲೇಜುಗಳಲ್ಲಿ ಕಲಿತ ಪಠ್ಯಕ್ರಮ ಮತ್ತು ಖಾಸಗಿ ಕಂಪನಿಗಳು ನಿರೀಕ್ಷಿಸುವ ಉದ್ಯೋಗ ಕೌಶಲಗಳ ನಡುವೆ ಅಂತರವಿದೆಯೇ ಎಂಬುದನ್ನು ಶಿಕ್ಷಣ ಸಂಸ್ಥೆಗಳು ಹಾಗೂ ಕೌಶಲಾಭಿವೃದ್ಧಿ ಇಲಾಖೆ ಪರಿಶೀಲಿಸಬೇಕಿದೆ.

ಯುವನಿಧಿ ಫಲಾನುಭವಿಗಳಿಗೆ ಕೌಶಲ ತರಬೇತಿ ನೀಡುವ ಉದ್ದೇಶದಿಂದ ಸರ್ಕಾರ ‘ಯುವನಿಧಿ ಪ್ಲಸ್’ ಯೋಜನೆ ಆರಂಭಿಸಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಯೋಜನೆಯ ನೋಂದಣಿ ಎರಡಂಕಿಯನ್ನೂ ದಾಟಿರಲಿಲ್ಲ ಎಂಬ ಮಾಹಿತಿ ಯೋಜನೆಯ ಅನುಷ್ಠಾನದ ಬಗ್ಗೆ ಪ್ರಶ್ನೆ ಮೂಡಿಸುತ್ತದೆ.

ತರಬೇತಿ ಕಾರ್ಯಕ್ರಮದ ಬಗ್ಗೆ ಯುವಜನರಿಗೆ ಸರಿಯಾದ ಮಾಹಿತಿ ತಲುಪುತ್ತಿಲ್ಲವೇ? ತರಬೇತಿ ಕೇಂದ್ರಗಳು ಅನುಕೂಲಕರ ಸ್ಥಳದಲ್ಲಿಲ್ಲವೇ? ನೀಡುವ ತರಬೇತಿ ಯುವಜನರಿಗೆ ಉದ್ಯೋಗ ದೊರಕಿಸಿಕೊಡುವಷ್ಟು ಪರಿಣಾಮಕಾರಿಯಾಗಿದೆಯೇ? ತರಬೇತಿ ಪಡೆದ ನಂತರ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಇದೆಯೇ? ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕಿದೆ.

ಉದ್ಯೋಗಕ್ಕಾಗಿ ಜಿಲ್ಲೆಯ ಗಡಿ ದಾಟಬೇಕಾದ ಅನಿವಾರ್ಯತೆ

ಉತ್ತರ ಕನ್ನಡ ಜಿಲ್ಲೆಯ ಅನೇಕ ಯುವಜನರು ಉದ್ಯೋಗಕ್ಕಾಗಿ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬೆಂಗಳೂರು ಸೇರಿದಂತೆ ಬೇರೆ ನಗರಗಳಿಗೆ ತೆರಳುತ್ತಿದ್ದಾರೆ. ಕೆಲವರು ಗೋವಾ, ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಲ್ಲಿಯೂ ಕೆಲಸ ಮಾಡುತ್ತಿದ್ದಾರೆ.

ಹೊರಗಡೆ ಉದ್ಯೋಗ ಹುಡುಕಲು ತೆರಳುವ ಯುವಜನರಿಗೆ ವಸತಿ, ಊಟ, ಪ್ರಯಾಣ ಮತ್ತು ಇತರ ಖರ್ಚುಗಳನ್ನು ಭರಿಸುವುದು ಸವಾಲಾಗಿದೆ. ಕಡಿಮೆ ಸಂಬಳದ ಕೆಲಸಕ್ಕೆ ಸೇರಿದರೆ ಖರ್ಚು ಕಳೆದು ಕೈಯಲ್ಲಿ ಉಳಿಯುವ ಮೊತ್ತವೂ ಕಡಿಮೆಯಾಗುತ್ತದೆ.

ಇನ್ನೊಂದೆಡೆ, ಗ್ರಾಮೀಣ ಭಾಗದ ಯುವಜನರು ಕುಟುಂಬದ ಕೃಷಿ, ತೋಟಗಾರಿಕೆ ಮತ್ತು ಇತರ ಜವಾಬ್ದಾರಿಗಳ ಕಾರಣದಿಂದ ದೂರದ ನಗರಗಳಿಗೆ ತೆರಳಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗದಿದ್ದರೆ ವಿದ್ಯಾವಂತ ಯುವಜನರ ಸಾಮರ್ಥ್ಯವನ್ನು ಜಿಲ್ಲೆ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಸರ್ಕಾರದ ಯೋಜನೆಗಳ ಉದ್ದೇಶ ಉದ್ಯೋಗ ಸೃಷ್ಟಿಯೂ ಆಗಬೇಕು

ಯುವನಿಧಿ ಯೋಜನೆಯ ಉದ್ದೇಶ ಉದ್ಯೋಗ ಹುಡುಕುತ್ತಿರುವ ಯುವಜನರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡುವುದಾಗಿದೆ. ಉದ್ಯೋಗ ದೊರೆತರೆ ಅಥವಾ ಉನ್ನತ ಶಿಕ್ಷಣಕ್ಕೆ ಸೇರಿದರೆ ಸಹಾಯಧನ ನಿಲ್ಲುತ್ತದೆ. ಪ್ರತಿ ತಿಂಗಳು ಫಲಾನುಭವಿಗಳು ತಮ್ಮ ಉದ್ಯೋಗ ಸ್ಥಿತಿಯ ಕುರಿತು ಪೋರ್ಟಲ್‌ನಲ್ಲಿ ಮಾಹಿತಿ ಸಲ್ಲಿಸುವುದು ಕಡ್ಡಾಯವಾಗಿದೆ.

ಇತ್ತೀಚೆಗೆ ಸರ್ಕಾರ ಉದ್ಯೋಗಾವಕಾಶ ಮತ್ತು ಉದ್ಯೋಗಾಕಾಂಕ್ಷಿಗಳನ್ನು ಸಂಪರ್ಕಿಸುವ ಉದ್ದೇಶದಿಂದ ‘ಯುವ ಉದ್ಯೋಗ ಸೇತು’ ಪೋರ್ಟಲ್ ಆರಂಭಿಸಿದೆ. ಇದರಲ್ಲಿ ಉದ್ಯೋಗಾಕಾಂಕ್ಷಿಗಳು ತಮ್ಮ ವಿದ್ಯಾರ್ಹತೆ ಮತ್ತು ಕೌಶಲದ ವಿವರಗಳನ್ನು ನೋಂದಾಯಿಸಿಕೊಳ್ಳಬಹುದು. ಉದ್ಯೋಗದಾತ ಸಂಸ್ಥೆಗಳು ಕೂಡ ಖಾಲಿ ಹುದ್ದೆಗಳ ಮಾಹಿತಿಯನ್ನು ಪ್ರಕಟಿಸಬಹುದು.

ಆದರೆ ಪೋರ್ಟಲ್ ಆರಂಭಿಸುವುದಷ್ಟೇ ಸಾಕಾಗುವುದಿಲ್ಲ. ಉತ್ತರ ಕನ್ನಡ ಜಿಲ್ಲೆಯ ಯುವಜನರಿಗೆ ಯಾವ ಸಂಸ್ಥೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿಯಿವೆ? ಸ್ಥಳೀಯ ಅಭ್ಯರ್ಥಿಗಳಿಗೆ ಎಷ್ಟು ಉದ್ಯೋಗ ದೊರೆಯುತ್ತಿದೆ? ಎಷ್ಟು ಮಂದಿ ತರಬೇತಿ ಪಡೆದು ಕೆಲಸಕ್ಕೆ ಸೇರಿದ್ದಾರೆ? ಎಂಬ ವಿವರಗಳನ್ನು ಕಾಲಕಾಲಕ್ಕೆ ಪ್ರಕಟಿಸುವ ವ್ಯವಸ್ಥೆ ಬೇಕಾಗಿದೆ.

ಜನಪ್ರತಿನಿಧಿಗಳು ಉತ್ತರಿಸಬೇಕಾದ ಪ್ರಶ್ನೆಗಳು

ಜಿಲ್ಲೆಯಲ್ಲಿ ಯುವನಿಧಿ ಫಲಾನುಭವಿಗಳ ಸಂಖ್ಯೆ 10 ಸಾವಿರ ದಾಟಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಯಾವ ಪ್ರಯತ್ನಗಳು ನಡೆಯುತ್ತಿವೆ? ಸ್ಥಳೀಯ ಯುವಜನರಿಗೆ ಉದ್ಯೋಗ ಕಲ್ಪಿಸಲು ಕೈಗಾರಿಕೆಗಳೊಂದಿಗೆ ಸಭೆ ನಡೆಸಲಾಗಿದೆಯೇ? ತಾಲೂಕುವಾರು ಉದ್ಯೋಗ ಮೇಳಗಳನ್ನು ಏಕೆ ನಿರಂತರವಾಗಿ ಆಯೋಜಿಸುತ್ತಿಲ್ಲ? ಯುವನಿಧಿ ಪ್ಲಸ್ ಯೋಜನೆಗೆ ಯುವಜನರು ಏಕೆ ನೋಂದಣಿ ಮಾಡಿಕೊಳ್ಳುತ್ತಿಲ್ಲ? ಜಿಲ್ಲೆಯಲ್ಲಿ ತರಬೇತಿ ಪಡೆದ ಯುವಜನರಿಗೆ ಉದ್ಯೋಗ ಕಲ್ಪಿಸುವ ಹೊಣೆಗಾರಿಕೆಯನ್ನು ಯಾವ ಇಲಾಖೆ ನಿರ್ವಹಿಸುತ್ತಿದೆ? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಬೇಕಾಗಿದೆ.

ಪ್ರತಿ ತಾಲೂಕಿನಲ್ಲಿ ಉದ್ಯೋಗಾಕಾಂಕ್ಷಿಗಳ ವಿದ್ಯಾರ್ಹತೆ, ಕೌಶಲ, ಆಸಕ್ತಿ ಮತ್ತು ಉದ್ಯೋಗದ ಬೇಡಿಕೆಯನ್ನು ಗುರುತಿಸಿ ಮಾಹಿತಿ ಸಂಗ್ರಹಿಸಬೇಕು. ಕೈಗಾರಿಕೆಗಳು, ಖಾಸಗಿ ಕಂಪನಿಗಳು, ಬ್ಯಾಂಕಿಂಗ್, ಪ್ರವಾಸೋದ್ಯಮ, ಆಸ್ಪತ್ರೆಗಳು ಹಾಗೂ ಇತರ ಉದ್ಯೋಗದಾತ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಬೇಕು.

ಉದ್ಯೋಗ ಮೇಳಗಳನ್ನು ಕೇವಲ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ, ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಜವಾಗಿಯೂ ಕೆಲಸ ದೊರೆತಿದೆಯೇ ಎಂಬುದನ್ನು ನಂತರವೂ ಪರಿಶೀಲಿಸಬೇಕು.

ಸಹಾಯಧನಕ್ಕಿಂತ ಸ್ವಾವಲಂಬನೆ ಮುಖ್ಯ

ಯುವನಿಧಿ ಯೋಜನೆಯಿಂದ ಸಾವಿರಾರು ಕುಟುಂಬಗಳಿಗೆ ತಾತ್ಕಾಲಿಕ ಆರ್ಥಿಕ ನೆರವು ಸಿಗುತ್ತಿರುವುದು ಸ್ವಾಗತಾರ್ಹ. ಆದರೆ ಎರಡು ವರ್ಷಗಳ ಸಹಾಯಧನ ಮುಗಿದ ನಂತರವೂ ಯುವಜನರು ಉದ್ಯೋಗಕ್ಕಾಗಿ ಅಲೆದಾಡುವ ಪರಿಸ್ಥಿತಿ ಮುಂದುವರಿಯಬಾರದು.

ಯುವಜನರಿಗೆ ಹಣಕಾಸಿನ ನೆರವಿನ ಜೊತೆಗೆ ಗುಣಮಟ್ಟದ ಕೌಶಲ ತರಬೇತಿ, ಸ್ಥಳೀಯ ಉದ್ಯೋಗಾವಕಾಶ, ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ, ಉದ್ಯಮ ಆರಂಭಿಸಲು ಮಾರ್ಗದರ್ಶನ ಮತ್ತು ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು ಅಗತ್ಯ.

ಯುವನಿಧಿ ಫಲಾನುಭವಿಗಳ ಸಂಖ್ಯೆ ಕಡಿಮೆಯಾಗುವುದು ಯೋಜನೆಯ ವಿಫಲತೆ ಎಂದರ್ಥವಲ್ಲ; ಫಲಾನುಭವಿಗಳು ಉತ್ತಮ ಉದ್ಯೋಗ ಪಡೆದು ಸ್ವಾವಲಂಬಿಗಳಾಗುವುದೇ ಯೋಜನೆಯ ನಿಜವಾದ ಯಶಸ್ಸು.

ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸೋದ್ಯಮ, ಕೃಷಿ, ಮೀನುಗಾರಿಕೆ, ಕೈಗಾರಿಕೆ ಮತ್ತು ಸಣ್ಣ ಉದ್ಯಮಗಳಲ್ಲಿ ಅಪಾರ ಅವಕಾಶಗಳಿವೆ. ಅವುಗಳನ್ನು ಉದ್ಯೋಗ ಸೃಷ್ಟಿಯೊಂದಿಗೆ ಜೋಡಿಸುವ ದೂರದೃಷ್ಟಿಯ ಯೋಜನೆ ರೂಪಿಸಬೇಕಿದೆ.

ಯುವಜನರು ಉದ್ಯೋಗಕ್ಕಾಗಿ ತಮ್ಮ ಜಿಲ್ಲೆಯನ್ನು ಬಿಟ್ಟು ಹೋಗಬೇಕಾದ ಪರಿಸ್ಥಿತಿ ಬದಲಾಗಬೇಕು. ಪದವಿ ಮುಗಿಸಿದವರು ಸಹಾಯಧನಕ್ಕಾಗಿ ಕಾಯುವುದಕ್ಕಿಂತ ತಮ್ಮ ಊರಿನಲ್ಲೇ ಗೌರವಯುತ ಉದ್ಯೋಗ ಪಡೆದು ಬದುಕು ಕಟ್ಟಿಕೊಳ್ಳುವ ವಾತಾವರಣ ನಿರ್ಮಾಣವಾಗಬೇಕು. ಅದಕ್ಕೆ ಸರ್ಕಾರದ ಯೋಜನೆಗಳ ಜೊತೆಗೆ ಜನಪ್ರತಿನಿಧಿಗಳ ಇಚ್ಛಾಶಕ್ತಿ, ಅಧಿಕಾರಿಗಳ ಕಾರ್ಯಕ್ಷಮತೆ ಮತ್ತು ಕೈಗಾರಿಕೆಗಳ ಜವಾಬ್ದಾರಿಯೂ ಅಗತ್ಯ.

+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ವಿಎಒ ನೇಮಕಾತಿ ಪರೀಕ್ಷೆ ಅಕ್ರಮ: ನಾಲ್ವರು ಕಾನ್‌ಸ್ಟೆಬಲ್‌ಗಳ ಅಮಾನತು

ಗ್ರಾಮ ಆಡಳಿತ ಅಧಿಕಾರಿ (ವಿಎಒ) ನೇಮಕಾತಿ ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮಕ್ಕೆ ಸಂಬಂಧಪಟ್ಟಂತೆ,...

ವೀರಾಮಣಿ ಪೋಕ್ಸೊ ಪ್ರಕರಣ: ಆರೋಪಿಗಳ ಸ್ಥಾನದಲ್ಲಿ ಎಡಿಜಿಪಿ ಶ್ರೇಣಿಯ ಅಧಿಕಾರಿ ಸೇರಿ 7 ಪೊಲೀಸರು!

ಗ್ರಾನೈಟ್ ಉದ್ಯಮಿ ಆರ್. ವೀರಾಮಣಿ ಮತ್ತು ಆತನ ಸಹಚರರ ವಿರುದ್ಧ ದಾಖಲಾಗಿರುವ...

ಬೀದರ್‌ | ವಚನಗಳ ಅಧ್ಯಯನದಿಂದ ಸಂಸಾರಿಕ ಬದುಕು ಆನಂದಮಯ: ಬಸವಲಿಂಗ ಪಟ್ಟದ್ದೇವರು

ಸಂಸಾರಿಕ ಜೀವನ ಆನಂದಮಯವಾಗಬೇಕಾದರೆ ಸತ್ಸಂಗದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ವಚನಗಳ ತತ್ವಗಳನ್ನು ಬದುಕಿನಲ್ಲಿ...

ಬೆಲೆ ಏರಿಕೆಯ ಬರೆ, ಮಿತಿ ಮೀರಿದ ಹಣದುಬ್ಬರ: ಮುಂಗಾರು ಕೈಕೊಟ್ಟ ಬೆನ್ನಲ್ಲೇ ಗ್ರಾಹಕರಿಗೆ ಆರ್ಥಿಕ ಸಂಕಷ್ಟ

ದೇಶದಲ್ಲಿ ಚಿಲ್ಲರೆ ಹಣದುಬ್ಬರವು ಅಕ್ಟೋಬರ್ ತಿಂಗಳಿನಲ್ಲಿ ಶೇಕಡ 6.09ಕ್ಕೆ ತಲುಪಿದ್ದು, ಎರಡು...