ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ಸಾರಾಂಶ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ವಿಜಯನಗರ ಜಿಲ್ಲೆಯ ಅಲೆಮಾರಿ ಸಮುದಾಯಗಳಿಗೆ ಕಬ್ಬಿಣದ ಕಡಲೆಯಾಗಿದೆ. ಆಯೋಗ ಕೇಳುತ್ತಿರುವ ದಾಖಲೆಗಳ ಪಟ್ಟಿ ವಿದ್ಯಾವಂತರನ್ನೂ ಬೆಚ್ಚಿಬೀಳಿಸುವಂತಿದ್ದು, ದಾಖಲೆಗಳನ್ನು ಸಲ್ಲಿಸದಿದ್ದರೆ ಮತದಾನದ ಹಕ್ಕೇ ಕಳೆದುಹೋಗುವ ಭೀತಿ ಎದುರಾಗಿದೆ. ವಿಶೇಷವಾಗಿ ಅನಕ್ಷರಸ್ಥರು ಹಾಗೂ ಊರೂರು ಅಲೆದಾಡಿ ಜೀವನ ನಡೆಸುವವರಿಗೆ ಈ ಪ್ರಕ್ರಿಯೆ ಇನ್ನೂ ಕಠಿಣವಾಗಿದೆ. ಅಲೆಮಾರಿಗಳ ಬಳಿ ಬೂತ್ ಲೆವೆಲ್ ಅಧಿಕಾರಿಗಳು (ಬಿಎಲ್ಒ) ಇನ್ನೂ ಭೇಟಿ ನೀಡಿಲ್ಲ ಎಂದು ಆರೋಪಿಸಲಾಗುತ್ತಿದೆ.
ಹೊಸಪೇಟೆಯಿಂದ ಏಳು ಕಿಲೋಮೀಟರ್ ದೂರದಲ್ಲಿರುವ ಗೋಂಧಳಿಪುರ (ಹೊಸಪೇಟೆ ನಗರಸಭೆಯ 23ನೇ ವಾರ್ಡ್)ದಲ್ಲಿ ಬುಡ್ಗ ಜನಾಂಗದ ಸುಮಾರು 100 ಕುಟುಂಬಗಳಿವೆ. ಇವುಗಳಲ್ಲಿ ಕೇವಲ 25 ಕುಟುಂಬಗಳು ಮಾತ್ರ ಖಾಯಂ ಆಗಿ ವಾಸಿಸುತ್ತಿವೆ. ಉಳಿದವರು ಸಣ್ಣ ಗುಡಿಸಲು ಮನೆಗಳನ್ನು ನಿರ್ಮಿಸಿಕೊಂಡಿದ್ದರೂ, ಪಾತ್ರೆ ಹಾಗೂ ಪ್ಲಾಸ್ಟಿಕ್ ವಸ್ತುಗಳ ವ್ಯಾಪಾರಕ್ಕಾಗಿ ಊರೂರು ಅಲೆದಾಡುತ್ತಾರೆ. ಒಮ್ಮೆ ಹೊರಟರೆ ಮೂರು-ನಾಲ್ಕು ತಿಂಗಳುಗಳ ಕಾಲ ಹಿಂತಿರುಗುವುದೇ ಇಲ್ಲ. ಪ್ರತಿ ವರ್ಷ ಡಿಸೆಂಬರ್ನಲ್ಲಿ ನಡೆಯುವ ಹುಲಿಗೆಮ್ಮದೇವಿ ಕಾರ್ತಿಕೋತ್ಸವದ ಸಮಯದಲ್ಲಿ ಮಾತ್ರ ಎಲ್ಲರೂ ಸೇರುತ್ತಾರೆ. ಆನಂತರ ಹೆಚ್ಚಿನವರು ಮತ್ತೆ ಬರುವುದು ಅಪರೂಪ.
ಈ ಸಮುದಾಯದ ಬಹುತೇಕ ಜನರು ಶಿಕ್ಷಣ ಪಡೆದಿಲ್ಲ. ಕೆಲವೇ ಮಂದಿ ಅಲ್ಪಸ್ವಲ್ಪ ಓದಿದವರು ಸಮುದಾಯದವರನ್ನು ಎಸ್ಐಆರ್ಗೆ ಒಳಪಡಿಸಲು ಹರಸಾಹಸಪಡುತ್ತಿದ್ದಾರೆ. ಆದರೆ ಆಯೋಗ ಕೇಳುವ ದಾಖಲೆಗಳು ಒಬ್ಬರ ಬಳಿ ಇದ್ದರೆ, ಮತ್ತೊಬ್ಬರ ಬಳಿ ಯಾವುದೇ ಪುರಾವೆಗಳೂ ಇಲ್ಲ.
ಈದಿನ.ಕಾಮ್ ತಂಡ ಗೋಂಧಳಿಪುರಕ್ಕೆ ಭೇಟಿ ನೀಡಿದಾಗ, 35 ವರ್ಷದ ಇಬ್ಬರು ವ್ಯಕ್ತಿಗಳು ಎದುರಾದರು. “ನಿಮ್ಮದು ಎಸ್ಐಆರ್ ಆಗಿದೆಯೇ?” ಎಂದು ಕೇಳಿದಾಗ, ಅವರಿಗೆ ಎಸ್ಐಆರ್ ಎಂದರೇನು ಎಂಬುದೇ ಗೊತ್ತಿರಲಿಲ್ಲ. “ನಾವು ಯಾವ ಅರ್ಜಿಯನ್ನೂ ಕೊಟ್ಟಿಲ್ಲ. ಯಾವ ಬಿಎಲ್ಒಗಳೂ ನಮ್ಮ ಮನೆಗೆ ಬಂದಿಲ್ಲ” ಎಂದು ಹೇಳಿ ಹೊರಟುಬಿಟ್ಟರು. ಅವರಿಗೆ ಮತದಾನದ ಹಕ್ಕಿನ ಬಗ್ಗೆಯೂ ಸರಿಯಾದ ಅರಿವಿಲ್ಲ.
ಹುಲಿಗೆಮ್ಮದೇವಿ ದೇವಸ್ಥಾನದ ಬಳಿ ಕುಳಿತಿದ್ದ 75 ವರ್ಷದ ಕೃಷ್ಣಪ್ಪ ಅವರು, “ನನಗೆ ಈ ವಿಷಯದ ಬಗ್ಗೆ ಏನೂ ತಿಳಿದಿಲ್ಲ. ನಾವು ಊರೂರು ಅಲೆದಾಡಿ ಜೀವನ ನಡೆಸುವವರು. ನಮಗೆ ಶಾಶ್ವತ ವಾಸಸ್ಥಳವಿಲ್ಲ. 40 ವರ್ಷಗಳ ಹಿಂದೆ ಹೊಸಪೇಟೆಯ ಬಳ್ಳಾರಿ ದುರ್ಗಮ್ಮನ ಗುಡಿ ಬಳಿ ವಾಸವಿದ್ದೆವು. ಅಲ್ಲಿ ಮತದಾನ ಮಾಡಿದ್ದೇನೆ. ನಂತರ ಚಪ್ಪರದಳ್ಳಿ, ಎಸ್.ಆರ್. ನಗರ, ಮಲಪನಗುಡಿ ಎಂದು ಸ್ಥಳಾಂತರಗೊಂಡು, ಕಳೆದ 15 ವರ್ಷಗಳಿಂದ ಇಲ್ಲಿ ನೆಲೆಸಿದ್ದೇವೆ. ನಮ್ಮ ವೋಟರ್ ಐಡಿ 13ನೇ ವಾರ್ಡ್ನ ವಿಳಾಸ ಹೊಂದಿದೆ. ಆದರೆ ಆಧಾರ್ ಕಾರ್ಡ್ ಗೋಂಧಳಿಪುರದ್ದು. ಇಲ್ಲಿಗೆ ಯಾರೂ ಬಂದು ವೋಟರ್ ಐಡಿ ಮಾಡಿಕೊಡಲಿಲ್ಲ” ಎಂದು ನೊಂದುಕೊಂಡರು.
ಕುಮಾರ್ ಎಂಬುವರು, “ನಮ್ಮನ್ನು ಯಾವ ಬಿಎಲ್ಒಗಳೂ ಸಂಪರ್ಕಿಸಿಲ್ಲ. ಎಸ್ಐಆರ್ ಮಾಡುವುದು ಹೇಗೆ? ಮಾಡಿಸದಿದ್ದರೆ ಏನಾಗುತ್ತದೆ?” ಎಂದು ಪ್ರಶ್ನಿಸಿದರು. ಸರ್ಕಾರಿ ಸವಲತ್ತುಗಳ ಬಗ್ಗೆ ಹೇಳಿದಾಗ, “ನನ್ನ 40 ವರ್ಷದ ಜೀವನದಲ್ಲಿ ಸರ್ಕಾರಿ ಸವಲತ್ತುಗಳನ್ನು ಪಡೆದೇ ಇಲ್ಲ. ಈಗ ಪಡೆದು ಏನು ಮಾಡುವುದು?” ಎಂದು ನೊಂದು ನುಡಿದರು.
ಗೋಂದಲ್ಲಿ ಪದ್ಮಾ ಅವರು, “ದುಡಿಯಲು ಹೋದಾಗ ಹಗರಿಬೊಮ್ಮನಹಳ್ಳಿಯಲ್ಲಿ ವೋಟರ್ ಐಡಿ ಮಾಡಿಸಿಕೊಂಡಿದ್ದೇನೆ. ಆಧಾರ್ ಕಾರ್ಡ್ ವಿಳಾಸ ಗೋಂಧಳಿಪುರದ್ದು. ಬಿಎಲ್ಒಗಳು ಬಂದೇ ಇಲ್ಲ. ಈ ಬಾರಿ ಇಲ್ಲಿಯೇ ವೋಟರ್ ಐಡಿ ಮಾಡಿಸಬೇಕು. ಹೇಗೆ, ಎಲ್ಲಿ ಮಾಡಿಸಬೇಕು ಎಂಬುದು ಗೊತ್ತಿಲ್ಲ” ಎಂದರು.
ಉಮಾ ಅವರು, “ಮಲಪನಗುಡಿಯಲ್ಲಿ ಬಾಡಿಗೆ ಮನೆಯಲ್ಲಿದ್ದಾಗ ಅಲ್ಲಿಯ ವಿಳಾಸದಲ್ಲಿ ವೋಟರ್ ಐಡಿ ಮಾಡಿಸಿಕೊಂಡಿದ್ದೆವು. ಬಿಎಲ್ಒಗಳು ಫೋನ್ ಮಾಡಿ ವಿಳಾಸ ಕೇಳಿ ಬರೆದುಕೊಂಡಿದ್ದಾರೆ. ಮನೆಗೆ ಯಾರೂ ಬಂದಿಲ್ಲ” ಎಂದು ಹೇಳಿದರು.
35 ವರ್ಷದ ಹೊನ್ನಮ್ಮ ಅವರ ಬಳಿ ಯಾವುದೇ ದಾಖಲೆಗಳಿಲ್ಲ. ಮದುವೆಯಾಗಿ ನಾಲ್ಕು ಮಕ್ಕಳಿದ್ದರೂ ವೋಟರ್ ಐಡಿ, ರೇಷನ್ ಕಾರ್ಡ್, ಜಾತಿ ಹಾಗೂ ಆದಾಯ ಪ್ರಮಾಣಪತ್ರಗಳು ಇಲ್ಲ. ಹಿರಿ ಮಗಳಿಗೆ ಮಾತ್ರ ಆಧಾರ್ ಕಾರ್ಡ್ ಇದೆ. ದಾಖಲೆಗಳಿರುವವರಿಗೇ ಕಷ್ಟವಾಗಿರುವ ಎಸ್ಐಆರ್ ಪ್ರಕ್ರಿಯೆ, ಯಾವುದೇ ಪುರಾವೆಗಳಿಲ್ಲದ ಇಂತಹ ಬಡ ಮಹಿಳೆಗೆ ಹೇಗೆ ಸಾಧ್ಯ?
ಸಮುದಾಯದಲ್ಲಿ ಸ್ವಲ್ಪ ಶಿಕ್ಷಣ ಪಡೆದಿರುವ ಮಲ್ಲೇಶ್ ಅವರು ತಹಶೀಲ್ದಾರ್ ಕಚೇರಿವರೆಗೆ ಅಲೆದಾಡಿ ಜನರ ವಾಸಸ್ಥಳ ಹಾಗೂ ಇತರ ದಾಖಲೆಗಳನ್ನು ಪಡೆಯಲು ಶ್ರಮಿಸುತ್ತಿದ್ದಾರೆ. ಆದರೆ ಕೆಲವರಿಗೆ ಮಾತ್ರ ದಾಖಲೆಗಳು ದೊರಕಿವೆ.
ಬಿಎಲ್ಒಗಳನ್ನು ಸಂಪರ್ಕಿಸಿದಾಗ, ಒಬ್ಬರು “ನಮಗೆ ಕೇವಲ 10 ಜನರ ಎನ್ಯುಮರೇಷನ್ ಫಾರಂಗಳು ಬಂದಿವೆ. ಉಳಿದವರ ಅರ್ಜಿಗಳು ಬಂದಿಲ್ಲ” ಎಂದರು. ಮತ್ತೊಬ್ಬರು “ನನಗೆ ಮೂರು ಜನರ ಫಾರಂಗಳು ಮಾತ್ರ ಬಂದಿವೆ” ಎಂದು ಹೇಳಿದರು.
ಒಟ್ಟಾರೆ 100 ಮನೆಗಳಿರುವ ಕ್ಯಾಂಪ್ನಲ್ಲಿ ಕೇವಲ 13 ಜನರ ಎಸ್ಐಆರ್ ಎನ್ಯುಮರೇಷನ್ ಫಾರಂಗಳು ಮಾತ್ರ ಬಂದಿವೆ. ಉಳಿದವರ ಫಾರಂಗಳು ಏನಾದವು? ಇಲ್ಲಿಯೇ ಹುಟ್ಟಿ ಬೆಳೆದ ಈ ಜನರಿಗೆ ಮತದಾನದ ಹಕ್ಕಿಲ್ಲವೇ? ಸಂವಿಧಾನ ಮತದಾನದ ಹಕ್ಕು ನೀಡಿದರೂ, ಚುನಾವಣಾ ಆಯೋಗದ ಪ್ರಕ್ರಿಯೆ ಅವರ ಮತಶಕ್ತಿಯನ್ನು ಹತ್ತಿಕ್ಕುತ್ತಿರುವುದು ದುರಂತವಾಗಿದೆ. ಆಯೋಗದ ಅಧಿಕಾರಿಗಳು ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು.
ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕನ್ನು ಖಾತರಿಪಡಿಸಿದೆ. ಆದರೆ, ದಾಖಲೆಗಳ ಕೊರತೆ ಮತ್ತು ಜಾಗೃತಿಯಿಲ್ಲದೆ ಅಲೆಮಾರಿ ಸಮುದಾಯಗಳು ತಮ್ಮ ಹಕ್ಕಿನಿಂದ ವಂಚಿತರಾಗುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡ ಲೋಪ. ಚುನಾವಣಾ ಆಯೋಗ ಮತ್ತು ಸ್ಥಳೀಯ ಆಡಳಿತವು ಕೇವಲ ಕಚೇರಿ ನಿಯಮಗಳಿಗೆ ಬದ್ಧವಾಗಿರದೆ, ವಿಶೇಷ ಮುತುವರ್ಜಿ ವಹಿಸಿ ಈ ಅಲೆಮಾರಿ ಶಿಬಿರಗಳಿಗೆ ನೇರವಾಗಿ ಭೇಟಿ ನೀಡಬೇಕಿದೆ. ಸರಳೀಕೃತ ಪ್ರಕ್ರಿಯೆಯ ಮೂಲಕ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಮತದಾರರ ಪಟ್ಟಿಯಲ್ಲಿ ಸ್ಥಾನ ಸಿಗುವಂತೆ ಮಾಡುವುದು ಆಯೋಗದ ತಕ್ಷಣದ ಕರ್ತವ್ಯವಾಗಿದೆ.

ವಿಜಯಕುಮಾರ್ ಎಂ
ವಿಜಯನಗರ ಕೋಆರ್ಡಿನೇಟರ್
