ವಿಜಯನಗರ ವಿವಿ ಶುಲ್ಕ ಏರಿಕೆ: ಹಣ ತುಂಬಲಾಗದ ಬಡ ಮಕ್ಕಳ ಅಳಲು ಕೇಳುವರಾರು?

0
177

ಪದವಿ ಕಾಲೇಜುಗಳ ಪ್ರವೇಶಾತಿ ಶುಲ್ಕವನ್ನು ಏಕಾಏಕಿ ಹೆಚ್ಚಿಸಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಧಿಡೀರ್ ನಿರ್ಧಾರ, ಬಡ ಮತ್ತು ದುಡಿದು ಓದುತ್ತಿರುವ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಬರಸಿಡಿಲಿನಂತೆ ಎರಗಿದೆ. ವಿಶ್ವವಿದ್ಯಾಲಯವು ಕಳೆದ ವರ್ಷಕ್ಕಿಂತ ₹1,300ರಷ್ಟು ಶುಲ್ಕ ಹೆಚ್ಚಳ ಮಾಡಿದ್ದು, ಹೊಸಪೇಟೆ ಹಾಗೂ ಸುತ್ತಮುತ್ತಲಿನ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ತೀವ್ರ ಆರ್ಥಿಕ ಸಂಕಷ್ಟ ಮತ್ತು ಆಯ್ಕೆಯ ಗೊಂದಲಕ್ಕೆ ತಳ್ಳಿದೆ. ಈ ಅನ್ಯಾಯದ ವಿರುದ್ಧ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (AIDSO) ಧ್ವನಿ ಎತ್ತಿದ್ದು, ಶುಲ್ಕ ಹೆಚ್ಚಳ ನಿರ್ಧಾರ ತಕ್ಷಣವೇ ಹಿಂಪಡೆಯಲು ಒತ್ತಾಯಿಸಿದೆ.

ಈ ವೇಳೆ AIDSO ವಿಜಯನಗರ ಜಿಲ್ಲಾ ಕಾರ್ಯದರ್ಶಿ ಯು. ಉಮಾದೇವಿ ಮಾತನಾಡಿ, “ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಪದವಿ ವಿದ್ಯಾರ್ಥಿಗಳ ಶುಲ್ಕವನ್ನು ಏಕಾಏಕಿ ₹1,300 ಹೆಚ್ಚಿಸಿರುವುದು ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇಕ ವಿದ್ಯಾರ್ಥಿಗಳು ಬಡ, ಮಧ್ಯಮ ವರ್ಗ ಹಾಗೂ ರೈತ-ಕಾರ್ಮಿಕ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಈಗಾಗಲೇ ಶಿಕ್ಷಣ, ವಸತಿ ಹಾಗೂ ಅಧ್ಯಯನ ಸಾಮಗ್ರಿಗಳ ವೆಚ್ಚ ನಿರಂತರವಾಗಿ ಏರುತ್ತಿದೆ. ಎಷ್ಟೋ ಬಡ ವಿದ್ಯಾರ್ಥಿಗಳು ಪಾರ್ಟ್‌ಟೈಮ್ ಕೆಲಸ ಮಾಡುತ್ತಾ ವ್ಯಾಸಂಗ ಮಾಡುವ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಈ ಹೆಚ್ಚುವರಿ ಶುಲ್ಕವು ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಮೇಲೆ ಅನಗತ್ಯ ಆರ್ಥಿಕ ಹೊರೆಯನ್ನು ಹೇರುತ್ತದೆ. ಇದರಿಂದ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ” ಎಂದು ಅಭಿಪ್ರಾಯಿಸಿದರು.

ಅಲ್ಲದೇ, ಶಿಕ್ಷಣ ಎಲ್ಲರ ಕೈಗೆಟುಕುವಂತಿರಬೇಕು. ಯಾವುದೇ ಸಮರ್ಪಕ ಕಾರಣವಿಲ್ಲದೆ ವಿಧಿಸಿರುವ ಈ ಶುಲ್ಕ ಹೆಚ್ಚಳವನ್ನು ವಿದ್ಯಾರ್ಥಿ ಸಮುದಾಯ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಕ್ಷಣವೇ ಈ ನಿರ್ಧಾರವನ್ನು ಮರುಪರಿಶೀಲಿಸಿ ಎಂದು ಆಗ್ರಹಿಸಿದರು. ನಮ್ಮ ಬೇಡಿಕೆಗಳನ್ನು ವಿಶ್ವವಿದ್ಯಾಲಯವು ತಕ್ಷಣವೇ ಈಡೇರಿಸಬೇಕೆಂದು ಮನವಿ ಮಾಡಿದರು.

ಬೇಡಿಕೆಗಳು:

  1. ಪದವಿ ವಿದ್ಯಾರ್ಥಿಗಳ ಶುಲ್ಕ ಹೆಚ್ಚಳವನ್ನು ತಕ್ಷಣವೇ ಹಿಂಪಡೆಯಬೇಕು.
  2. ಈಗಾಗಲೇ ಹೆಚ್ಚುವರಿ ಶುಲ್ಕವನ್ನು ಪಾವತಿಸಿರುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಮೊತ್ತವನ್ನು ಕೂಡಲೇ ಹಿಂದಿರುಗಿಸಬೇಕು (ರಿಫಂಡ್ ಮಾಡಬೇಕು).
  3. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶುಲ್ಕ ಪಾವತಿಯ ಕೊನೆಯ ದಿನಾಂಕವನ್ನು ಸಮರ್ಪಕ ಅವಧಿಯವರೆಗೆ ವಿಸ್ತರಿಸಬೇಕು.

ಈ ಮನವಿ ಪತ್ರವನ್ನು ಸ್ವೀಕರಿಸುವ ಪ್ರಾಂಶುಪಾಲರು, ಯುನಿವರ್ಸಿಟಿ ಕುಲಪತಿಗಳಿಗೆ ತಲುಪಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಕಾಲೇಜು ಶುಲ್ಕ ಕಡಿಮೆಯಾಗುವ ಯಾವುದೇ ಭರವಸೆಯನ್ನು ನೀಡಿಲ್ಲ. ಇದು ಈಗಾಗಲೇ ಅರ್ಧ ಓದು ಮುಗಿಸಿರುವ ವಿದ್ಯಾರ್ಥಿಗಳು, ಹೊಸದಾಗಿ ಅಡ್ಮಿಷನ್ ಮಾಡಲು ಬಂದ ವಿದ್ಯಾರ್ಥಿಗಳಿಗೆ ಬರಸಿಡಿಲೇ ಬಡಿದಂತಾಗಿದೆ. ಫೀಸ್ ಏರಿಕೆಯಿಂದ ನೊಂದ ವಿದ್ಯಾರ್ಥಿಗಳನ್ನು ಈದಿನ.ಕಾಮ್ ತಂಡ ಸಂಪರ್ಕಿಸಿದ್ದು, ಒಬ್ಬೊಬ್ಬರದ್ದೂ ಒಂದು ಕಣ್ಣೀರಿನ ಕಥೆಯಾಗಿದೆ.

ಈದಿನ.ಕಾಮ್ ಜೊತೆ ಮಾತನಾಡಿದ ಶಂಕರ್ ಆನಂದ್ ಸಿಂಗ್ ಕಾಲೇಜಿನ ಬಿಕಾಮ್ ವಿದ್ಯಾರ್ಥಿ, “ಧಿಡೀರ್ ಫೀಸ್ ಹೆಚ್ಚಳದಿಂದ ಹಣ ಹೊಂದಿಸಲು ಸಾಧ್ಯವಾಗಿಲ್ಲ. ಕಳೆದ ವರ್ಷ 5,000 ರೂ. ಪ್ರವೇಶ ಶುಲ್ಕ ಪಾವತಿ ಮಾಡಿದ್ದೆ. ಈ ವರ್ಷ ಧಿಡೀರ್ 6,300 ರೂಪಾಯಿಗೆ ಏರಿಕೆ ಮಾಡಿದ್ದಾರೆ. ಮೊದಲೇ ನಾನು ರಜೆಯಲ್ಲಿ ಗಾರೆ ಕೆಲಸಕ್ಕೆ ಹೋಗಿ ಹಣ ಕೂಡಿಟ್ಟು ವ್ಯಾಸಂಗಕ್ಕೆ ಬಳಸಿಕೊಳ್ಳುತ್ತಿದ್ದೇನೆ. ಈಗ ಹೆಚ್ಚುವರಿ ಶುಲ್ಕ ಕೂಡಿಸಲು ನಾನು ಮತ್ತೆ ಗಾರೆ ಕೆಲಸಕ್ಕೆ ಹೋಗಬೇಕಾಗಿದೆ. ಹೀಗಾಗಿ, ಅಡ್ಮಿಷನ್ ಮಾಡುವ ಕೊನೆಯ ದಿನಾಂಕ ಹತ್ತಿರವಿದ್ದರೂ ಪ್ರವೇಶಾತಿ ಪಡೆಯಲು ಸಾಧ್ಯವಾಗಿಲ್ಲ” ಎಂದು ಸಂಕಟ ತೋಡಿಕೊಂಡರು.

ಶಂಕರ್ ಆನಂದ್ ಸಿಂಗ್ ಕಾಲೇಜಿನಲ್ಲಿ ಬಿಕಾಮ್ ದ್ವಿತೀಯ ವರ್ಷ ಓದುತ್ತಿರುವ ಬುಕ್ಕಸಾಗರದ ವಿದ್ಯಾರ್ಥಿಯೊಬ್ಬರು ಮಾತನಾಡಿ, “ನಾನು ರಜೆಯಲ್ಲಿ ಅಪ್ಪ-ಅಮ್ಮನ ಜೊತೆಗೆ ಮೀನು ಹಿಡಿಯುವ ಕೆಲಸಕ್ಕೆ ಹೋಗಿದ್ದೆ. ಕಳೆದ ವರ್ಷದಷ್ಟೇ ಈ ಬಾರಿಯೂ ಪ್ರವೇಶ ಶುಲ್ಕ ಇರಬಹುದು ಎಂದು ಹಣ ಜೋಡಿಸಿಕೊಂಡು ಕಾಲೇಜಿಗೆ ಬಂದರೆ, ಯಾವ ಮುನ್ಸೂಚನೆಯೂ ಇಲ್ಲದೆ ಫೀಸ್ ಹೆಚ್ಚಳ ಮಾಡಲಾಗಿದೆ. ಈಗ ನನ್ನ ಬಳಿ ಅಷ್ಟು ಹಣ ಇಲ್ಲದೇ ಇರುವುದರಿಂದ ಅಡ್ಮಿಷನ್ ಮಾಡಿಸಿಲ್ಲ” ಎಂದು ನೋವು ತೋಡಿಕೊಂಡರು.

ವಿ.ಎನ್.ಸಿ. ಕಾಲೇಜಿನಲ್ಲಿ ದ್ವಿತೀಯ ವರ್ಷ ಬಿಕಾಮ್ ಓದುತ್ತಿರುವ ಕಂಪ್ಲಿ ವಿದ್ಯಾರ್ಥಿಯೊಬ್ಬರು ಮಾತನಾಡಿ, “ಫಸ್ಟ್ ಇಯರ್ ಬಿಕಾಮ್ ಓದುವಾಗ ನಾನು 10 ಸಾವಿರ ರೂಪಾಯಿ ಪ್ರವೇಶ ಶುಲ್ಕ ಪಾವತಿಸಿದ್ದೆ. ಈ ವರ್ಷ 17,000 ರೂಪಾಯಿ ಅಡ್ಮಿಷನ್ ಫೀಸ್ ಕೇಳುತ್ತಿದ್ದಾರೆ. ಫಸ್ಟ್ ಇಯರ್ ಓದುವಾಗ ನಾನು ಪಾರ್ಟ್‌ಟೈಮ್ ಕೆಲಸ ಮಾಡುತ್ತಿದ್ದೆ. ಅಲ್ಲಿ ದುಡಿದ ಹಣವನ್ನೇ ನಾನು ನನ್ನ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳುತ್ತಿದ್ದೆ. ಈಗ ನಾನು ಪಾರ್ಟ್‌ಟೈಮ್ ಕೆಲಸಕ್ಕೂ ಹೋಗುತ್ತಿಲ್ಲ. ಇದರಿಂದ ಕಾಲೇಜಿನ ಅಡ್ಮಿಷನ್ ಮಾಡುವುದೂ ಕಷ್ಟವಾಗಿದೆ” ಎಂದರು.

ಯುನಿವರ್ಸಿಟಿಗಳು ಮತ್ತು ಶಿಕ್ಷಣ ಸಂಸ್ಥೆಗಳು, ಸಾಧ್ಯವಾದಷ್ಟೂ ಕಡಿಮೆ ಹಣದಲ್ಲಿ ಶಿಕ್ಷಣ ಒದಗಿಸಿ ಮಾನವೀಯತೆ ಮೆರೆಯುವ ಅನಿವಾರ್ಯತೆ ಇದೆ. ಶಿಕ್ಷಣವನ್ನು ಹಣ ಮಾಡುವ ದಂಧೆಯನ್ನಾಗಿ ಪರಿಗಣಿಸದೇ ವಾಸ್ತವ ರೀತಿಯಲ್ಲೇ ಮಕ್ಕಳಿಗೆ ವಿದ್ಯೆ ಕಲಿಸಿದರೆ ಅವರ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದಂತಾಗುತ್ತದೆ. ಅಲ್ಲದೇ, ಬಡ ಮಕ್ಕಳ ಸಂಕಷ್ಟದಲ್ಲಿ ಆಸರೆಯಾಗಬೇಕಾಗಿದೆ. ಇಲ್ಲದೇ ಹೋದರೆ ಶುಲ್ಕದ ಹೆಸರಿನ ಸುಲಿಗೆಗೆ ಬಡಪಾಯಿ ಮಕ್ಕಳು ಬಲಿಯಾಗಬೇಕಾಗುತ್ತದೆ.

ಶುಲ್ಕ ಏರಿಕೆಯು ಬಡ ಮತ್ತು ಶ್ರಮಜೀವಿ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ತಣ್ಣೀರು ಎರಚಿದಂತಾಗಿದೆ. ಶಿಕ್ಷಣ ಸಂಸ್ಥೆಗಳು ಕೇವಲ ಆದಾಯದ ಮೂಲವಾಗದೆ, ವಿದ್ಯಾರ್ಥಿಗಳ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ವಿಶ್ವವಿದ್ಯಾಲಯವು ತಕ್ಷಣವೇ ಹೆಚ್ಚಿಸಿರುವ ಶುಲ್ಕವನ್ನು ಹಿಂಪಡೆದು, ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವ್ಯಾಸಂಗ ಮುಂದುವರಿಸಲು ಅನುಕೂಲ ಮಾಡಿಕೊಡುವುದು ಪ್ರಸ್ತುತ ಅಗತ್ಯವಾಗಿದೆ.

WhatsApp Image 2026 04 20 at 18.37.37 e1776691850820
ವಿಜಯಕುಮಾರ್ ಎಂ
+ posts

ವಿಜಯನಗರ ಕೋಆರ್ಡಿನೇಟರ್‌