ಚುನಾವಣಾ ಆಯೋಗವು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಕರಡು ಪ್ರಕಟಿಸಿದ್ದು, ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ಹೊರಗಿಟ್ಟಿದೆ. ಸ್ಥಳಾಂತರ, ಮರಣ, ಗೈರುಹಾಜರಿ ಹಾಗೂ ನಕಲು ಸೇರಿದಂತೆ ವಿವಿಧ ಕಾರಣಗಳಿಂದ ಒಟ್ಟು 1.07 ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಈ ಪೈಕಿ ಬಳ್ಳಾರಿ-ವಿಜಯನಗರದಲ್ಲೇ 3.5 ಲಕ್ಷ ಮತದಾರರ ಹೆಸರು ಹೊರಗುಳಿದಿದೆ.
ಪ್ರತಿ ಜಿಲ್ಲೆಯಲ್ಲಿ ASDDO ಕಾರಣ ಕೊಟ್ಟು ಲಕ್ಷ ಲಕ್ಷ ಮತದಾರರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಅದರಲ್ಲೂ ಗಣಿನಾಡಿನಲ್ಲೂ ನಿರೀಕ್ಷೆಗೂ ಮೀರಿ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ 2 ಲಕ್ಷದ 23 ಸಾವಿರದ 279 ಮತದಾರರ ಹೆಸರನ್ನು ತೆಗೆದು ಹಾಕಲಾಗಿದೆ. ಅಂದರೆ ಜಿಲ್ಲೆಯಲ್ಲಿ ಒಟ್ಟು 12ಲಕ್ಷದ 29 ಸಾವಿರದ 586 ಮತದಾರರಿದ್ದು, ಶೇಕಡಾ 18.16ರಷ್ಟು ಅಂದರೆ 2,23,279 ಮತದಾರರನ್ನು ಕೈಬಿಡಲಾಗಿದೆ.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲೇ ಅತಿ ಹೆಚ್ಚು ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಈ ಕ್ಷೇತ್ರದಲ್ಲಿ 2,79,144 ಮತದಾರರಿದ್ದು ಅದರಲ್ಲೀಗ 76,503 ಮತದಾರರ ಮತದಾನದ ಹಕ್ಕನ್ನು ಹತ್ತಿಕ್ಕಲಾಗಿದೆ. ಹಾಗೆಯೇ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ 2,51,321 ಮತದಾರರು ಇದ್ದು, ಅದರಲ್ಲಿ 51,357 ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,42,174 ವೋಟರ್ಸ್ ಇದ್ದು, ಅದರಲ್ಲಿ 39,445 ಮತದಾರರನ್ನು ಪಟ್ಟಿಯಿಂದ ಬಿಡಲಾಗಿದೆ. ಸಿರುಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,28,277 ವೋಟರ್ಸ್ ಇದ್ದು, ಈ ಪೈಕಿ 32,105 ಜನರ ಮತಶಕ್ತಿ ಕಸಿದುಕೊಳ್ಳಲಾಗಿದೆ. ಹಾಗೆಯೇ ಕಂಪ್ಲಿ ಕ್ಷೇತ್ರದಲ್ಲಿ 2,28,666 ಜನರು ಮತದಾನದ ಹಕ್ಕು ಹೊಂದಿದ್ದು, ಇದರಲ್ಲಿ 23,884 ಜನರ ವೋಟ್ ಪವರ್ ಹತ್ತಿಕ್ಕಲಾಗಿದೆ.
ಇನ್ನು ವಿಜಯನಗರ ಜಿಲ್ಲೆಯಲ್ಲಿ ಒಟ್ಟು 11,42,732 ಮತದಾರರಿದ್ದು, ಈ ಪೈಕಿ ಈಗ 1,48,576 ಜನರನ್ನು ಮತಪಟ್ಟಿಯಿಂದ ಹೊರಗಿಡಲಾಗಿದೆ. ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲೇ 2,52,788 ಮತದಾರರಿದ್ದು, ಈ ಪೈಕಿ 41,694 ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಹೂವಿನ ಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ 2,01,396 ಮತದಾರರಿದ್ದು, ಇದರಲ್ಲಿ 27,031 ಮತದಾರರ ಹಕ್ಕಿಗೆ ಕೊಳ್ಳಿ ಇಡಲಾಗಿದೆ.
ಹರಪನಹಳ್ಳಿ ಕ್ಷೇತ್ರದಲ್ಲಿ 2,28,914 ವೋಟರ್ಸ್ ಇದ್ದು, ಈ ಪೈಕಿ 29,726 ಜನರ ಮತದಾನದ ಪವರ್ ಅನ್ನ ಅಡಗಿಸಲಾಗಿದೆ. ಹಾಗೆಯೇ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ 2,43,632 ಒಟ್ಟು ಮತದಾರರಿದ್ದು, ಅದರಲ್ಲಿ 28,946 ಮತದಾರರನ್ನು ಪಟ್ಟಿಯಿಂದ ಹೊರಕಳಿಸಲಾಗಿದೆ. ಕೊನೆಯದಾಗಿ ಕೂಡ್ಲಿಗಿ ಕ್ಷೇತ್ರದಲ್ಲಿ 2,16,002 ವೋಟರ್ಸ್ ಪೈಕಿ 21,179 ಜನರ ಹೆಸರನ್ನು ಲಿಸ್ಟ್ ನಿಂದ ತೆಗೆದು ಹಾಕಲಾಗಿದೆ. ಈ ಮೂಲಕ ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲೇ ಮೂರುವರೆ ಲಕ್ಷ ಮತದಾರರನ್ನು ಮತದಾನದ ಪಟ್ಟಿಯಿಂದ ಹೊರಗಿಡಲಾಗಿದ್ದು, ಇದು ಆಘಾತಕಾರಿ ಸಂಗತಿ ಎಂದು ವಿಚಾರವಾದಿಗಳು, ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಈದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಸಾಹಿತಿಗಳು, ಲೇಖಕರು ಹಾಗೂ ಹೋರಾಟಗಾರರಾದ ಪೀರ್ ಭಾಷಾ ಅವರು, ಎಸ್ಐಆರ್ ನಿಂದ ಹೊರಗಿಡಲ್ಪಟ್ಟವರನ್ನು ನೋಡಿದರೆ ಅವರು ಬಹುತೇಕರು ಕೆಳಜಾತಿಯವರು, ಹಿಂದುಳಿದವರು, ಶೋಷಿತರು ಹಾಗೂ ಅಲ್ಪಸಂಖ್ಯಾತರು ಆಗಿರುತ್ತಾರೆ. ಇದರಲ್ಲಿ ಜಾತಿ ಮತ್ತು ಧರ್ಮದ ಕಾರಣ ಪ್ರಮುಖವಾಗಿದೆ. ಅನಕ್ಷರತೆ, ಬಡತನ ಮತ್ತು ಕೂಲಿಗಾಗಿ ಗುಳೆ ಹೋಗುವಂಥಾದ್ದು ಇದಕ್ಕೆ ಪ್ರಮುಖ ಕಾರಣವಾಗಿದೆ. ದೇಶದ ನಾಗರಿಕರನ್ನು ಪ್ರಜಾಪ್ರಭುತ್ವದ ಪ್ರಕ್ರಿಯೆಯಿಂದ ಹೊರಗಿಡುವ ಮೂಲಕ ಪ್ರಜಾಪ್ರಭುತ್ವವನ್ನೇ ದುರ್ಬಲಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಪ್ರಜ್ಞಾಪೂರ್ವಕವಾಗಿಯೇ ಎಸ್ಐಆರ್ ಪ್ರಕ್ರಿಯೆಯನ್ನು ಮಾಡಲಾಗ್ತಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಚುನಾವಣಾ ಆಯೋಗ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಇದೆ ಎಂದರೂ ರಾಜ್ಯ ಸರ್ಕಾರಕ್ಕೂ ಅದರ ಮೇಲೆ ಅಧಿಕಾರ ಇರುತ್ತದೆ. ಹಾಗಾಗಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ, ಪಟ್ಟಿಯಿಂದ ಹೊರಗಿಡಲ್ಪಟ್ಟವರನ್ನು ಮತ್ತೆ ಸೇರಿಸಲು ಆಡಳಿತಾತ್ಮಕ ಪ್ರಯತ್ನಗಳೆಲ್ಲವನ್ನೂ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
ಚುನಾವಣಾ ಆಯೋಗದ ನಡೆಯನ್ನ ತೀವ್ರವಾಗಿ ಖಂಡಿಸಿರುವ ಮತಕಾವಲು ಸಮಿತಿಯ ವಿಜಯನಗರ ಜಿಲ್ಲಾ ಸಮಿತಿಯ ಪ್ರಧಾನ ಸಂಚಾಲಕರಾದ ವೀರಂಸಗಯ್ಯ ಅವರು, “ಎಸ್ಐಆರ್ ಎನ್ನುವುದು ಅವೈಜ್ಞಾನಿಕ ಎಂದಿದ್ದಾರೆ. ಅಲ್ಲದೇ, ರಾಜ್ಯದಲ್ಲಿ ಒಬ್ಬರೇ ಒಬ್ಬರು ನೈಜ ಮತದಾರರು ಪಟ್ಟಿಯಿಂದ ಹೊರಗುಳಿದರೆ ಕರ್ನಾಟಕಕ್ಕೆ ಅದಕ್ಕಿಂತ ದೊಡ್ಡ ಅಪಮಾನ ಮತ್ತೊಂದಿಲ್ಲ. ಸದ್ಯಕ್ಕೆ ರಾಜ್ಯದಲ್ಲಿ ಚುನಾವಣೆ ಇಲ್ಲ. ಇನ್ನೂ ಒಂದು ವರ್ಷ ಎಸ್ಐಆರ್ ಪ್ರಕ್ರಿಯೆಯನ್ನು ಮುಂದುವರಿಸಬೇಕು ಎಂದು ರಾಜ್ಯ ಸರ್ಕಾರ ಕ್ಯಾಬಿನೆಟ್ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ, ಮತಪಟ್ಟಿಯಿಂದ ಹೊರಗುಳಿದ ಮತದಾರನಿಗೆ ಚುನಾವಣಾ ಆಯೋಗ ನೋಟಿಸ್ ನೀಡಲು ಮುಂದಾಗಿದೆ. ಮತದಾರ ಏನು ತಪ್ಪು ಮಾಡಿದ್ದಾರೆ ಎಂದು ನೋಟಿಸ್ ಕೊಡ್ತೀರಿ ಎಂದು ಪ್ರಶ್ನಿಸಿದ್ದಾರೆ. ಈ ನಡೆ ಖಂಡಿಸಿ ಸೆಪ್ಟೆಂಬರ್ 1ರಂದು ಬೆಂಗಳೂರಿನಲ್ಲಿ ಚುನಾವಣಾ ಆಯೋಗದ ಕಚೇರಿ ಮುತ್ತಿಗೆ ಹಾಕಲಾಗುವುದು” ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನು, ಮತಪಟ್ಟಿಯಿಂದ ಹೊರಗುಳಿದವರು ಮತ್ತೆ ಸೇರ್ಪಡೆಯಾಗಲು ಸೆಪ್ಟೆಂಬರ್ 23ವರೆಗೂ ಕಾಲಾವಕಾಶ ನೀಡಲಾಗಿದೆ. ವಿವಿಧ ಕಾರಣಗಳಿಂದ ಡಿಲೀಟ್ ಆದವರು ಸಕಾರಣ ನೀಡಿ ಅಥವಾ ಫಾರಂ ನಂಬರ್ 6 ಅಥವಾ 8 ಅನ್ನು ಭರ್ತಿ ಮಾಡಿ ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು. ಅಕ್ಟೋಬರ್ 27 ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಲಿದೆ. ಆದರೆ ಅಂತಿಮವಾಗಿ ಎಷ್ಟು ಜನರು ಮತಪಟ್ಟಿಯಿಂದ ಹೊರಗೆ ಉಳಿಯುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ವಿಜಯಕುಮಾರ್ ಎಂ
ವಿಜಯನಗರ ಕೋಆರ್ಡಿನೇಟರ್



