ಆಲಮಟ್ಟಿ ಜಲಾಶಯದ ಬಲಭಾಗದ ಸೀತಮ್ಮನಗುಡ್ಡದ ಹತ್ತಿರದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ(ಕೆಎಸ್‌ಐಎಸ್‌ಎಫ್) ಪೊಲೀಸರ ವಸಾಹತು ಬಳಿ ಪ್ರವಾಸಿಗರಿದ್ದ ಟೆಂಪೊ ಹಾಗೂ ಕಬ್ಬು ತುಂಬಿದ ಟ್ರಾಕ್ಟರ್ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರಿಗೆ ಮಂದಿಗೆ ಗಂಭೀರ ಮತ್ತು ಹದಿನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಸೀತಮ್ಮನಗುಡ್ಡದಲ್ಲಿನ ಲವಕುಶ ಉದ್ಯಾನ ನೋಡಿಕೊಂಡು ಆಲಮಟ್ಟಿ ಜಲಾಶಯದತ್ತ ಬರುತ್ತಿದ್ದ ಪ್ರವಾಸಿಗರ ಟೆಂಪೊ, ಚಾಲಕನ ನಿಯಂತ್ರಣಕ್ಕೆ ಬಾರದೇ ರಸ್ತೆಯ ಎದುರು ಬರುತ್ತಿದ್ದ ಕಬ್ಬು ಸಾಗಿಸುತ್ತಿದ್ದ ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಟೆಂಪೊ ಸಂಪೂರ್ಣ ನಜ್ಜುಗುಜ್ಜಾಗಿ ಉರುಳಿಬಿದ್ದಿದೆ. ಇದರ ಪರಿಣಾಮ 30 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರೆಲ್ಲರೂ ಟೆಂಪೋ ಪ್ರಯಾಣಿಕರು. ಅವರೆಲ್ಲರೂ ಯಾದಗಿರ ಜಿಲ್ಲೆಯ ಸುರಪುರ ತಾಲೂಕಿನ ಜೈನಾಪುರ ಹಾಗೂ ಕಿರಿದಳ್ಳಿ ಗ್ರಾಮದವರು. ಈ ಎರಡು ಗ್ರಾಮದ 30 ಮಂದಿ ಮೂರು ದಿನದ ಹಿಂದೆ ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಟೆಂಪೊದಲ್ಲಿ ಹೋಗಿದ್ದರು. ದೇವಿಯ ದರ್ಶನದ ನಂತರ ಆಲಮಟ್ಟಿಗೆ ಬಂದು, ಉದ್ಯಾನ ವೀಕ್ಷಿಸಿ ಮರಳಿ ತಮ್ಮೂರಿಗೆ ಸೋಮವಾರ ರಾತ್ರಿ ಹೊರಡಬೇಕಿತ್ತು. ಲವಕುಶ ಉದ್ಯಾನದಿಂದ ಆಲಮಟ್ಟಿ ಜಲಾಶಯದತ್ತ ಬರುವಾಗ ಭಾರೀ ಇಳಿಜಾರು ಇದ್ದು, ಅಲ್ಲಿ ಟೆಂಪೊ ನಿಯಂತ್ರಣಕ್ಕೆ ಬಾರದೇ ಈ ಅಪಘಾತ ಸಂಭವಿಸಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮತ್ತೊಬ್ಬ ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ; ಆರೋಪಿ ಬಂಧನ
ತೀವ್ರವಾಗಿ ಗಾಯಗೊಂಡ ಸರಸ್ವತಿ ಮಲ್ಲಪ್ಪ ದೊಡಮನಿ (35), ಹಣಮವ್ವ ದೇವೇಂದ್ರಪ್ಪ ವಾಲೀಕಾರ (50), ಗೌತಮ ವಾಲೀಕಾರ (10), ಭಾಗಮ್ಮ ವಾಲೀಕಾರ (17) ಅವರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ ಎಂದು ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ ಸತೀಶಕುಮಾರ ತಿಳಿಸಿದರು. ಆರು ಜನರಿಗೆ ಮೂಳೆ ಮುರಿತ ಆಗಿದ್ದು, 30 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದರು.