ಎದ್ದೇಳು ಕರ್ನಾಟಕ ವಿಜಯಪುರ, ನಗರದ ನವಚೇತನ ಹಾಲ್ನಲ್ಲಿ ಲೋಕಸಭಾ ಚುನಾವಣೆಯ ಕುರಿತು ಸಭೆ ನಡೆಸಿದೆ. ಎದ್ದೇಳು ಕರ್ನಾಟಕದ ಅಶ್ವಿನಿ ಅವರು ಮಾತನಾಡಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಯಾವ ತರ ಕೆಲಸ ಮಾಡಿದ್ದೇವೆಯೋ, ಅದೇ ತರ 2024ರ ಲೋಕಸಭಾ ಚುನಾವಣೆಯಲ್ಲಿ ನಾವು ಕೆಲಸ ಮಾಡಬೇಕಾದ ಅಗತ್ಯವಿದೆ ಎಂದರು.
ಮುಂದುವರಿದು, ಬಹಳ ಮುಖ್ಯವಾಗಿ ನಾವು ಮಾಡಬೇಕಾದ ಕೆಲಸವೇನೆಂದರೆ, ಪ್ರತಿ ಹಳ್ಳಿಗಳಲ್ಲಿ ಮತದಾನದ ಜಾಗೃತಿ ಮೂಡಿಸುವುದು ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು. ಮಹಿಳಾ ಸಂಘಗಳನ್ನು ಒಟ್ಟುಗೂಡಿಸಿ, ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಈಗಿನ ಕೇಂದ್ರ ಸರ್ಕಾರ ಶಿಕ್ಷಣವನ್ನು ಕೇಸರಿಕರಣ ಮಾಡಲು ಎನ್ಇಪಿ ಜಾರಿ ಮಾಡಲು ಮುಂದಾಗುತ್ತಿದೆ. ಸಂವಿಧಾನದ ಆಶಯವನ್ನು ಮೊಟಕುಗೊಳಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ.
ಎದ್ದೇಳು ಕರ್ನಾಟಕ ಬೆಂಗಳೂರು ಮಲ್ಲಿಗೆಯವರು ಮಾತನಾಡಿ, ತಳಮಟ್ಟದಿಂದ ನಮ್ಮ ತಂಡವನ್ನು ತಯಾರು ಮಾಡಬೇಕಿದೆ. ಜಾತ್ಯತೀತ ಮಹಿಳಾ ಸಂಘಗಳು, ಹಿಂದುಳಿದ ಸಮುದಾಯದ ಯುವಕರ ಸಂಘ-ಸಂಸ್ಥೆಗಳೊಂದಿಗೆ, ನಮ್ಮ ಉದ್ದೇಶ ತಿಳಿಸಿ ನಮ್ಮ ಜೊತೆ ಕೆಲಸ ಮಾಡಲು ಪ್ರೇರೇಪಿಸಬೇಕಿದೆ. ಚುನಾವಣಾ ಅಕ್ರಮಗಳ ತಡೆಯುವ ಬಗ್ಗೆ ಜಾಗೃತಿ ಮೂಡಿಸುವುದು. ಎದ್ದೇಳು ಕರ್ನಾಟಕ ರಾಜ್ಯ ಅಲ್ಲದೆ, ದೇಶಾದ್ಯಂತ ಬೇರೆ ಬೇರೆ ರಾಜ್ಯಗಳಲ್ಲಿ ಅವರದೇ ಆದ ಟೀಮ್ ತಯಾರಿ ಮಾಡಿ ಸಭೆ ಮಾಡಲಾಗಿದೆ. ಸಭೆಯಲ್ಲಿ 24 ರಾಜ್ಯಗಳಿಂದ ಸದಸ್ಯರು ಭಾಗಿಯಾಗಿದ್ದರು.
ನಾವು ಪಕ್ಷಾತೀತವಾಗಿ ಕೆಲಸ ಮಾಡಬೇಕಾಗಿದೆ. 1924ರಿಂದ 2024ಕ್ಕೆ ಆರ್ಎಸ್ಎಸ್ಗೆ ನೂರು ವರ್ಷ. ಅದಕ್ಕಾಗಿ ಅವರು ಎಲ್ಲಾ ತರಹದ ತಯಾರಿಯಲ್ಲಿ ಇದ್ದಾರೆ. ನಿಮಗೆ ಗೊತ್ತಿದೆ, ಹಿಟ್ಲರ್ನ ದುರಾಡಳಿತ, ಧರ್ಮ-ಧರ್ಮಗಳ ಮಧ್ಯೆ ದ್ವೇಷ, ಭಾಷಣದಿಂದ ಅಧಿಕಾರದ ಗದ್ದುಗೆಗೇರಿದ ವಿಷಯ, ಸರ್ವಾಧಿಕಾರದ ಅಡಿಯಾಳಾಗಬಾರದು. ಪ್ರಗತಿಪರರು ಸೇರಿ ಕೋಮುವಾದಿ ರಾಜಕಾರಣವನ್ನು ಸೋಲಿಸಲು ಬೂತ್ ಮಟ್ಟದ ಕಾರ್ಯಕರ್ತರಾಗಿ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಡಿಸೇಂಬರ್ 3ರಂದು ಜನದನಿ ಸಮಾವೇಶ ಮಾಡಲು ಸಭೆ ತೀರ್ಮಾನಿಸಿತು. ಶ್ರೀನಾಥ್ ಪೂಜಾರಿ, ಅಬ್ದುಲ್ ಖಾದಿರ್, ಮುನಸಿ, ಡಾ. ಭುವನೇಶ್ವರಿ, ಸಮೀರ್ ಇತರರು ಸಭೆಯಲ್ಲಿ ಇದ್ದರು.