ಪ್ರಸ್ತಾವಿತ ಸಕ್ಕರೆ ನಿಯಂತ್ರಣ ಕರಡು ಆದೇಶ 2024 ಅನ್ನು ವಾಪಸ್ ಪಡೆದು ಈಗಾಗಲೇ ಅಸ್ತಿತ್ವದಲ್ಲಿರುವ ಕಬ್ಬು ನಿಯಂತ್ರಣ ಆದೇಶ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಿ ಸಮರ್ಪಕವಾಗಿ ಜಾರಿಗೊಳಿಸಲು ಆಗ್ರಹಿಸಿ ವಿಜಯಪುರದಲ್ಲಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಸದ ರಮೇಶ ಜಿಗಜಿಣಗಿಯವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷೆ ಅಣ್ಣಾರಾಯ ಈಳಗೇರ ಮಾತನಾಡಿ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಸರ್ಕಾರ ಕಬ್ಬು ಬೆಳೆಗಾರರ ಕೊರಳಿಗೆ ಉರುಲು ಹಾಕಲು ಹೊರಟಿದೆ. ಬಿಜೆಪಿಯ ಮೂಲ ನೀತಿಯಾದ ಬಂಡವಾಳ ಶಾಹಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ 2024ರ ಪ್ರಸ್ತಾವಿತ ಸಕ್ಕರೆ ನಿಯಂತ್ರಣ ಕರಡು ಆದೇಶವನ್ನು ಜಾರಿ ಮಾಡಲು ಹೊರಟಿದೆ. ಈ ಕರಡು ನೀತಿಯ ಬಗ್ಗೆ ಕಬ್ಬು ಬೆಳೆಗಾರರ ಸಂಘ ಹಾಗೂ ರೈತ ಬಂಧುಗಳ ಜೊತೆ ಚರ್ಚೆ ನಡೆಸದೆ ಅವರ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸಕ್ಕರೆ ಕಾರ್ಖಾನೆಗಳು ಮತ್ತು ರಾಜ್ಯ ಸರ್ಕಾರಗಳ ಸಂಬಂಧಿತ ಸಕ್ಕರೆ ಇಲಾಖೆಯ ಅಭಿಪ್ರಾಯಗಳ ಆಧಾರದ ಮೇಲೆ ನಿಲುವು ತೆಗೆದುಕೊಂಡಿರುವುದು ಖಂಡನೀಯ ಎಂದು ತಿಳಿಸಿದರು.

ಈಗಾಗಲೇ ಆಸ್ತಿತ್ವದಲ್ಲಿರುವ ಕಬ್ಬು ನಿಯಂತ್ರಣ ಸಕ್ಕರೆ ಆದೇಶದಿಂದ ಕಬ್ಬು ಬೆಳೆಗಾರರಿಗೆ ಪ್ರಯೋಜನಕಾರಿಯಾದ ನಿಬಂಧನೆಗಳನ್ನು ಕೇಂದ್ರ ಸರ್ಕಾರವು ಒಂದೊಂದಾಗಿ ಅಳಿಸುತ್ತಿರುವುದು ತಿಳಿಯುತ್ತದೆ. ಕಬ್ಬಿನ ರೈತರಿಗೆ ಸಕ್ಕರೆ ಕಾರ್ಖಾನೆಗಳಿಂದ ಬರುವ ಲಾಭದಲ್ಲಿ ಹೆಚ್ಚುವರಿ ಬೆಲೆಯನ್ನು ಪಡೆಯಲು ಅನುವು ಮಾಡಿಕೊಡುವ ಕಾಯ್ದೆಯಿಂದ ತೆಗೆದು ಹಾಕಲಾಗಿದೆ. ಕಬ್ಬು ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ರಾಜ್ಯ ಸರ್ಕಾರಗಳು ರಾಜ್ಯ ಸಲಹೆ ಬೆಲೆಯನ್ನು ಘೋಷಿಸಿಸುವ ಕಬ್ಬು ನಿಯಂತ್ರಣ ಆದೇಶ 1866ರ ನಿಬಂಧನೆಗಳನ್ನು ಸರ್ಕಾರ ರದ್ದು ಮಾಡಲು ಹೊರಟಿದೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರು.
ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಭೀಮರಾಯ ಪೂಜಾರಿ ಮಾತನಾಡಿ, ಈ ಕಾಯ್ದೆಯು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದ್ದು, ರಾಜ್ಯ ಸರ್ಕಾರಗಳ ಹಕ್ಕುಗಳನ್ನು ಕಸಿದುಕೊಳ್ಳಬಹುದು ಮತ್ತು ಕೇಂದ್ರ ಸರ್ಕಾರಕ್ಕೆ ರಾಜ್ಯಗಳನ್ನು ತನ್ನ ಅಧೀನದಲ್ಲಿಟ್ಟುಕೊಳ್ಳಲು. ಸಕ್ಕರೆ ಮಾರಾಟಕ್ಕೂ ಪ್ರತಿ ತಿಂಗಳು ಮಾರಾಟದ ಪ್ರಮಾಣದ ನಿಗದಿ ಮಾಡುತ್ತದೆ. ಕೇಂದ್ರ ಸರ್ಕಾರ ತನಗೆ ಇಷ್ಟ ಬಂದ ಕಾರ್ಖಾನೆಗಳಿಗೆ ಮಾತ್ರ ಅನುಕೂಲ ಕಲ್ಪಿಸಿ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಕಡೆಗಣಿಸಿ ರಾಜಕೀಯ ಕಾರಣದಿಂದ ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳುತ್ತದೆ ಎಂದರು.
ಇದನ್ನು ಓದಿದ್ದೀರಾ? ಉಡುಪಿಯಲ್ಲಿ ಅಬಕಾರಿ ಪೊಲೀಸರ ದಾಳಿ: ಅಕ್ರಮವಾಗಿ ದಾಸ್ತಾನಿರಿಸಿದ್ದ ಭಾರೀ ಮೌಲ್ಯದ ಮದ್ಯ ವಶಕ್ಕೆ
ಈ ಸಂದರ್ಭದಲ್ಲಿ ಗೋಪಾಲ ಶಿವಗದ್ದಿಗೆ. ಚಿದಾನಂದ ಬೆಳ್ಳಿನವರ, ಮಲ್ಲಿಕಾರ್ಜುನ ಸಾವುಕಾರ, ಪವಾಡಪ್ಪ ಸಾವುಕಾರ, ಸಿದ್ದಣ್ಣ ಗಡಗಿ, ಮಹಬೂಬ ಕಕ್ಕಳಮೇಲಿ, ಸೈಫನಸಾಬ ಬಾಗವಾನ, ಸಿದ್ದಣ್ಣ ಕುಂಬಾರ. ಮುರಿಗೆಪ್ಪ ಕೊಳಕಾರ, ಮಹಾಂತೇಶ ಶಿಂಗಾಡಿ, ಮಹಿಬೂಬ ಕಕ್ಕಳಮೇಲಿ ಮತ್ತಿತರರು ಉಪಸ್ಥಿತರಿದ್ದರು.
