ಯೇಸುಕ್ರಿಸ್ತರ ಸಂದೇಶಗಳಾದ ಕ್ಷಮೆ, ಪ್ರೀತಿ ಸಹನೆ, ಸಹಬಾಳ್ವೆ ಮತ್ತು ಶಾಂತಿ ಈ ಮಾನವೀಯ ಮೌಲ್ಯಗಳನ್ನು ನಮ್ಮ ನಿತ್ಯ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಇನ್ನರ್ ವೀಲ್ ಕ್ಲಬ್‌ನ ಮಾಜಿ ಅಧ್ಯಕ್ಷರಾದ ಶ್ರೀಮತಿ ನಾಗರತ್ನ ಮನಗೂಳಿ ಹೇಳಿದರು.
ಅವರು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್ವ ಧರ್ಮೀಯ ಸ್ನೇಹಕೂಟದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
“ಸಂಗಮ ಎಂದರೆ ಎಲ್ಲರು ಒಟ್ಟಿಗೆ ಕೂಡಿಕೊಳ್ಳುವುದು. ವಿವಿಧ ರೀತಿಯಲ್ಲಿ ಸಂಗಮ ಸಂಸ್ಥೆಯು ಶಿಕ್ಷಣ ನೀಡುತ್ತಿದೆ. ಯಾರಿಗೂ ಭೇದಭಾವ ಮಾಡದೇ ಎಲ್ಲರಿಗೂ ಅವಕಾಶಗಳನ್ನು ಕೊಡುತ್ತಿದ್ದಾರೆ. ದೇವರು ಪ್ರತಿಯೊಬ್ಬರ ಆತ್ಮದೊಳಳಗೆ ಇರುವವನು. ನಾವು ಹೊಟ್ಟೆ ಕಿಚ್ಚು, ಅಸೂಯೆ ಪಡದೇ ಎಲ್ಲರೊಂದಿಗೆ ಸಹಬಾಳ್ವೆಯಿಂದ ಇರಬೇಕು” ಎಂದು ಸಾನಿಧ್ಯ ವಹಿಸಿದ್ದ ಸಿಂದಗಿಯ ಶ್ರೀ ಗುರುದೇವ ಆಶ್ರಮದ ಶ್ರೀ ಶ್ರೀ ಶಾಂತಗಂಗಾಧರ ಸ್ವಾಮೀಜಿ ಹೇಳಿದರು.

ಯೇಸು ಅವರ ಜೀವನ ಚರಿತ್ರೆ ಹಾಗೂ ಅವರು ಮಾಡಿದ ಜನರ ಸೇವೆ ಅಮೂಲ್ಯವಾದದ್ದು. ಯೇಸು ಅವರ ತತ್ವ ಮತ್ತು ಮೌಲ್ಯಗಳನ್ನು ಎಲ್ಲರೂ ಅನುಸರಿಸಬೇಕೆಂದು ಮುಸ್ಲಿಂ ಧರ್ಮಗುರು ಮೌಲವಿ ನಸ್ರುದ್ದೀನ್ ಮುಲ್ಲಾ ಗಣಿಹಾರ ಹೇಳಿದರು.
ಕ್ರಿಸ್ಮಸ್ ಹಬ್ಬವನ್ನು ವಿಶ್ವದಾದ್ಯಂತ ಎಲ್ಲರೂ ಆಚರಿಸುತ್ತಾರೆ. ನಮ್ಮಲ್ಲಿ ಯೇಸುವಿನ ಮೌಲ್ಯಗಳಾದ ನಿಸ್ವಾರ್ಥತೆ, ಕ್ಷಮೆ, ಪ್ರೀತಿಯನ್ನು ನಾವು ರೂಡಿಸಿಕೊಳ್ಳಬೇಕೆಂದು ಫಾದರ್ ಜೀವನ್ ಹೇಳಿದರು.
ಸಂಗಮ ಸಂಸ್ಥೆಯು ಪ್ರತಿ ವರ್ಷ ದೀಪಾವಳಿ, ಬಕ್ರೀದ್ ಮತ್ತು ಕ್ರಿಸ್ಮಸ್ ಹಬ್ಬಗಳನ್ನು ಎಲ್ಲ ಧರ್ಮಗಳ ಜೊತೆಗೂಡಿ ಆಚರಿಸುತ್ತೇವೆ ಎಂದು ಸಂಗಮ ಸಂಸ್ಥೆಯ ನಿರ್ದೇಶಕರಾದ ಫಾದರ್ ಸಂತೋಷ್ ಹೇಳಿದರು.
ಇದನ್ನು ಓದಿದ್ದೀರಾ? ದೇವಾಲಯಗಳ ಆಸ್ತಿ ರಕ್ಷಣೆಗೆ ಮಹತ್ವದ ಕ್ರಮ ವಹಿಸಿದ ರಾಜ್ಯ ಸರ್ಕಾರ: ಉಳಿಯಿತು 10,700 ಎಕರೆ ‘ದೇವರ ಸ್ವತ್ತು’
ಸಂಗಮ ಸಂಸ್ಥೆಯ ಸಹ ನಿರ್ದೇಶಕಿಯಾದ ಸಿಸ್ಟರ್ ಸಿಂತಿಯಾ ಡಿ’ಮೆಲ್ಲೊ ಸರ್ವಧರ್ಮ ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು. ಭಾರತದ ಸಂವಿಧಾನದ ಪೀಠಿಕೆಯ ಮೂಲಕ ಈ ಸ್ನೇಹಕೂಟವನ್ನು ಪ್ರಾರಂಭಿಸಲಾಯಿತು.
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ದೇವದಾಸಿ ತಾಯಂದಿರಿಗೆ, ವಿಶೇಷ ಚೇತನರಿಗೆ ಮತ್ತು ಹೆಚ್.ಐ.ವಿ ಬಾದಿತರಿಗೆ ಕಿಟ್ ವಿತರಿಸಲಾಯಿತು. ಹೊಲಿಗೆ ತರಬೇತಿ ಶಿಕ್ಷಕಿಯರಿಗೆ ಹಾಗೂ ಕಲಿಕಾ ಕೇಂದ್ರದ ಶಿಕ್ಷಕಿಯರಿಗೆ ಕ್ರಿಸ್ಮಸ್ ಉಡುಗೊರೆ ನೀಡಲಾಯಿತು. ಉಮೇಶ್ ನಿರೂಪಿಸಿದರು, ವಿಜಯಕುಮಾರ ಬಂಟನೂರ ಸ್ವಾಗತಿಸಿದರು ಮತ್ತು ಮಲ್ಕಪ್ಪ ಹಲಗಿ ವಂದಿಸಿದರು.

