ನಾಗಠಾಣಾ ವಿಧಾನಸಭಾ ಕ್ಷೇತ್ರದ ಅಲಿಯಾಬಾದ್ ಗ್ರಾಮ ಪಂಚಾಯತ್‌ನ ವಾರ್ಡ್ ಸಂಖ್ಯೆ-2ರ ಮೀಸಲಾತಿಯನ್ನು ನಿಯಮಾನುಸಾರ ಮರುಪರಿಶೀಲಿಸಿ, ಪರಿಶಿಷ್ಟ ಜಾತಿ (ಎಸ್‌ಸಿ) ಮಹಿಳೆಗೆ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ (ರಿ.) ನಿಯೋಗ ಜಿಲ್ಲಾಧಿಕಾರಿ ಹಾಗೂ ವಿಜಯಪುರ ಜಿಲ್ಲಾ ಚುನಾವಣಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿತು.
ಜಿಲ್ಲಾಧ್ಯಕ್ಷ ನಾಗರಾಜ ಕಬಾಡೆ ನೇತೃತ್ವದಲ್ಲಿ ಸಲ್ಲಿಸಿದ ಮನವಿಯಲ್ಲಿ, “ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ-2 ಪರಿಶಿಷ್ಟ ಜಾತಿ ಪುರುಷರಿಗೆ ಮೀಸಲಾಗಿತ್ತು. ಮೀಸಲಾತಿ ಸರಣಿಯ ನಿಯಮಗಳ ಪ್ರಕಾರ ಈ ಬಾರಿ ವಾರ್ಡ್ ಎಸ್‌ಸಿ ಮಹಿಳೆಗೆ ಮೀಸಲಾಗಬೇಕಾಗಿದ್ದರೂ, ಪ್ರಕಟಿಸಿರುವ ಮೀಸಲಾತಿಯಲ್ಲಿ ಆ ನಿಯಮ ಪಾಲನೆಯಾಗಿಲ್ಲ” ಎಂಬ ಅನುಮಾನ ವ್ಯಕ್ತವಾಗಿದೆ ಎಂದು ತಿಳಿಸಲಾಗಿದೆ.
ಇದರಿಂದ ಪರಿಶಿಷ್ಟ ಜಾತಿ ಮಹಿಳೆಯರಿಗೆ ಸಂವಿಧಾನಬದ್ಧವಾಗಿ ದೊರೆಯಬೇಕಾದ ರಾಜಕೀಯ ಪ್ರತಿನಿಧಿತ್ವದ ಅವಕಾಶಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಪಟ್ಟ ದಾಖಲೆಗಳು ಹಾಗೂ ಮೀಸಲಾತಿ ಸರಣಿಯನ್ನು ಸಮಗ್ರವಾಗಿ ಪರಿಶೀಲಿಸಿ, ಯಾವುದೇ ಲೋಪದೋಷಗಳಿದ್ದರೆ ತಕ್ಷಣ ಸರಿಪಡಿಸಿ ವಾರ್ಡ್ ಸಂಖ್ಯೆ-2ನ್ನು ಎಸ್‌ಸಿ ಮಹಿಳೆಗೆ ಮೀಸಲಾತಿ ಕಲ್ಪಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಅಪ್ಪುರಾಜ್ ನಿಮಾದಾರ, ರಾಜ್ಯ ಉಪಾಧ್ಯಕ್ಷ ವಿಜಯಕುಮಾರ ನಿಮಾದಾರ, ಜಿಲ್ಲಾ ಗೌರವಾಧ್ಯಕ್ಷ ಕಿರಣಕುಮಾರ ಅಲಿಯಾಬಾದ್, ರಾಜ್ಯ ಮಹಿಳಾ ಅಧ್ಯಕ್ಷೆ ನೀಲಾಂಬಿಕಾ ಕಟ್ಟಿಮನಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಶಿಲ್ಪಾ ಮೇತ್ರಿ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಹಕ್ ಇನಾಮದಾರ, ನಗರ ಘಟಕದ ಅಧ್ಯಕ್ಷ ರವಿಚಂದ್ರ ಶಹಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಕಟ್ಟಿಮನಿ, ಸಾಹೇಬಲಾಲ ಹಿಪ್ಪರಗಿ, ಎಂ.ಎಂ. ಖಾನ್, ಸಂತೋಷ ಕಟ್ಟಿಮನಿ, ಹುಸೇನ ಹಿಪ್ಪರಗಿ, ರಾಘವೇಂದ್ರ ಕಾಸೆ ಸೇರಿದಂತೆ ಹಲವರು ಇದ್ದರು.




