ಮಧ್ವಾಚಾರ್ಯರು ದ್ವೈತ ತತ್ವವನ್ನು ದೇಶಾದ್ಯಂತ ಪಸರಿಸುವ ಮೂಲಕ ಭಾರತೀಯ ತತ್ವಶಾಸ್ತ್ರ ಹಾಗೂ ಆಧ್ಯಾತ್ಮಿಕ ಪರಂಪರೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪಿಎಂಇಬಿ ನಿರ್ದೇಶಕ ಪ್ರೊ. ಪಿ.ಜಿ. ತಡಸದ ಹೇಳಿದರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಮಧ್ವಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತ ಸಿದ್ಧಾಂತವು ಭಾರತೀಯ ತತ್ವಶಾಸ್ತ್ರದ ಪ್ರಮುಖ ಚಿಂತನಾ ಪರಂಪರೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
ಮಧ್ವಾಚಾರ್ಯರ ತತ್ವಗಳು ಭಕ್ತಿ, ಧಾರ್ಮಿಕ ಚಿಂತನೆ ಹಾಗೂ ನೈತಿಕ ಮೌಲ್ಯಗಳ ಮಹತ್ವವನ್ನು ಸಾರುತ್ತವೆ. ಸಮಾಜದಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸುವುದರ ಜೊತೆಗೆ ಭಾರತೀಯ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಜಗತ್ತು ಸತ್ಯ ಎಂಬ ತತ್ವವನ್ನು ಪ್ರತಿಪಾದಿಸಿದ ಮಧ್ವಾಚಾರ್ಯರು, ಶ್ರೀಹರಿಯೇ ಸರ್ವೋತ್ತಮ ಎಂಬ ನಂಬಿಕೆಯೊಂದಿಗೆ ಭಕ್ತಿ ಮತ್ತು ಧರ್ಮದ ಮಹತ್ವವನ್ನು ಸಾರಿದರು. ಅವರ ದಾರ್ಶನಿಕ ಚಿಂತನೆಗಳು ಭಾರತೀಯ ಆಧ್ಯಾತ್ಮಿಕ ಪರಂಪರೆಗೆ ಹೊಸ ಆಯಾಮ ನೀಡಿದ್ದು, ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕ ಪ್ರಭಾವ ಬೀರಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೊ. ಜಿ.ಜಿ. ರಜಪೂತ, ಪ್ರೊ. ಓಂಕಾರ ಕಾಕಡೆ, ಪ್ರೊ. ಎಂ.ಪಿ. ಬಳಿಗಾರ, ಪ್ರೊ. ಜ್ಯೋತಿ ಉಪಾಧ್ಯೆ, ಪ್ರೊ. ಶ್ರೀನಿವಾಸ, ಡಾ. ಭಾಗ್ಯಶ್ರೀ ದೊಡಮನಿ, ವಿಜಯಕುಮಾರ ಹಿರೇಮಠ, ಸುರೇಖಾ ಕೇಸ್ಕರ್, ಯಲಗೂರೇಶ ದೇಶಪಾಂಡೆ, ಬಿ.ಕೆ. ಜೋಶಿ, ಜ್ಯೋತಿ ಜೋಶಿ, ಮಧುಮತಿ ಕುಲಕರ್ಣಿ, ದಯಾನಂದ ಸೇರಿದಂತೆ ವಿಶ್ವವಿದ್ಯಾನಿಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





