ಚುನಾವಣಾ ಸಂದರ್ಭ ಎದುರಿಸಿದ್ದೇವೆ. ಅದರ ಅನುಭವವೂ ಇದೆ. ಫ್ಯಾಸಿಸ್ಟ್ ಶಕ್ತಿ ಕುಂದಿಲ್ಲ ಮತ್ತು ಸೋತಿಲ್ಲ. ಅದರ ಶಕ್ತಿ ಹಿಮ್ಮೆಟ್ಟಿಸಲು ಸಾಕಷ್ಟು ತಯಾರಿ ಅಗತ್ಯವಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ್ ಪೂಜಾರಿ ಹೇಳಿದ್ದಾರೆ.
ವಿಜಯಪುರ ನಡೆದ ‘ಎದ್ದೇಳು ಕರ್ನಾಟಕ’ ಆಂದೋಲನದ ಸಭೆಯಲ್ಲಿ ಅವರು ಮಾತನಾಡಿದರು. “ಲೋಕಸಭಾ ಚುನಾವಣೆಯಲ್ಲಿ ಫಾಸಿಸ್ಟ್, ಕೋಮುವಾದಿ ಬಿಜೆಪಿಯನ್ನು ಸೋಲಿಸಬೇಕು. ಅದಕ್ಕಾಗಿ ರಾಜ್ಯದಲ್ಲಿ ಮತ್ತೆ ಆಂದೋಲನ ಆರಂಭವಾಗಲಿದೆ: ಎಂದು ಹೇಳಿದರು.
ಎದ್ದೇಳು ಕರ್ನಾಟಕದ ಮುಖಂಡೆ ಗೌರಿ ಮಾತನಾಡಿ, “ನಮ್ಮ ಮುಂದೆ ದೊಡ್ಡ ಸವಾಲಿದೆ. ಎದುರಾಳಿಗಳು ಹಣ ಅಧಿಕಾರ ಇರುವುದರಿಂದ ಬೇಗ ಜನರ ಬೆಂಬಲ ಪಡೆಯುತ್ತಾರೆ. ಇತಿಹಾಸ ನೋಡಿದಾಗ ‘ಸತ್ಯ ಇವತ್ತಲ್ಲ ನಾಳೆ ಗೆದ್ದೇ ಗೆಲ್ಲುತ್ತದೆ’ ಎಂಬುದು ಅರಿವಿಗೆ ಬರುತ್ತದೆ” ಎಂದರು.
“ಬದಲಾವಣೆ ಜಗದ ನಿಯಮ ಅಂತ ಸುಮ್ನೆ ಕುಂತರೆ ಆಗುವುದಿಲ್ಲ. ಸೌಹಾರ್ದಯುತ ಪರಂಪರೆ ಉಳಿಸಲು ಪ್ರಯತ್ನ ಮಾಡಲೇಬೇಕು. ಜನಪರ ಒಕ್ಕೂರಿಲಿನಿಂದ ಎದ್ದೇಳು ಕರ್ನಾಟಕ ಹುಟ್ಟಿತು. ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡಿದ್ದೇವೆ. ಮುಂದೆಯೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ” ಎಂದು ತಿಳಿಸಿದರು.
“ಬೆಲೆ ಏರಿಕೆ, ನಿರುದ್ಯೋಗ, ಕೊರೊನಾ ನಂತರದ ಪರಿಸ್ಥಿತಿ, ಹೊಟ್ಟೆಪಾಡಿನ ವಿಷಯಗಳು ರಾಜಕೀಯದಲ್ಲಿ ಚರ್ಚೆಯಾಗಬೇಕು. ಇಂತಹ ವಿಚಾರಗಳನ್ನು ಸಮಾಜದಲ್ಲಿ ಚರ್ಚೆ ತರಬೇಕು” ಎಂದರು.
ಸಭೆಯಲ್ಲಿ ಅಬ್ದುಲ್ ಅಹಮದ್ ಖದೀರ್, ದಸ್ತಗಿರಿ ಹುಲಿಕಟ್ಟಿ, ಅಕ್ರಮ ಮಸಾಳಕರ, ಡಾ. ಭುವನೇಶ್ವರಿ, ಬಾಳು ಜೇವರು, ಮೀನಾಕ್ಷಿ ಸಿಂಗೆ, ಶಾಂತಾ ದಗಿನಾಳ, ಹಿಂದೂ ಹೊಸಮನಿ, ಇತರರು ಇದ್ದರು.