ಶತಮಾನಗಳಿಂದ ಹಲವಾರು ರೀತಿಯ ಶೋಷಣೆ ದೌರ್ಜನ್ಯ ಅಸಮಾನತೆಗಳಿಂದ ದೇವದಾಸಿ ಸಮುದಾಯ ಸಮಾಜದಲ್ಲಿ ಕಟ್ಟ ಕಡೆಯ ಹಿಂದುಳಿದ ಸಮುದಾಯವಾಗಿ ಉಳಿದಿದೆ. ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನವಾಗಿ ಗೌರವ ಘನತೆಯಿಂದ ಬದುಕುವುದು ಮೂಲಭೂತ ಹಕ್ಕು ಎಂದು ಫಾದರ್ ತಿಯೋಳ ಮಾಚ್ಯಾದ ಹೇಳಿದರು.
ವಿಜಯಪುರದ ಅನೌಪಚಾರಿಕ ಶಿಕ್ಷಣ ಸಂಸ್ಥೆ, ಜೀವನ ಜ್ಯೋತಿ ಮಾಜಿ ದೇವದಾಸಿ ಮಹಿಳೆಯರ ಜಿಲ್ಲಾ ಒಕ್ಕೂಟ ಇವರ ಸಹಯೋಗದಲ್ಲಿ ಮಾಜಿ ದೇವದಾಸಿ ಮಹಿಳೆಯರ ಜಿಲ್ಲಾ ಒಕ್ಕೂಟದ ಪದಾಧಿಕಾರಿಗಳಿಗೆ ಸಂಘಟನೆ ಮತ್ತು ನಾಯಕತ್ವ ಕುರಿತು ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಸಾಮಾಜಿಕ ನ್ಯಾಯ ಪಡೆಯಲು ಮಾಜಿ ದೇವದಾಸಿ ತಾಯಂದಿರು ಮುಂದಾಗಬೇಕು, ಸಂಘಟಿತರಾಗಬೇಕು. ಜೊತೆಗೆ ಸಾಮೂಹಿಕ ನಾಯಕತ್ವದೊಂದಿಗೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ನಮ್ಮ ಉದ್ದಾರ ನಮ್ಮಿಂದಲೇ ಆಗಬೇಕಾದರೆ ಎಲ್ಲ ದೇವದಾಸಿ ತಾಯಂದಿರು ಸಾಮೂಹಿಕ ನಾಯಕತ್ವಕ ವಹಿಸಬೇಕು. ಸಂಘಟಿತರಾಗಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕು. ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಪ್ರಗತಿ ಹೊಂದಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಅಂತೋನಿ ಸಿ ಮಾತನಾಡಿ, “ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮುಖ್ಯವಾದ ಮೂರು ಸೂತ್ರಗಳಾದ ಶಿಕ್ಷಣ, ಸಂಘಟನೆ ಹಾಗೂ ಪರಿವರ್ತನೆಯ ನಮ್ಮ ಮೂಲ ಮಂತ್ರವಾಗಬೇಕು. ಆ ನಿಟ್ಟಿನಲ್ಲಿ ಪ್ರತಿ ಮಾಜಿ ದೇವದಾಸಿ ತಾಯಂದಿರು ತಮಗಾದ ಅನ್ಯಾಯವನ್ನು ಎದುರಿಸಲು ನಾಯಕಿಯರಾಗಿ ಬೆಳೆಯಬೇಕು. ಆ ಮೂಲಕ ಸಾಮಾಜಿಕ ಸಮಾನತೆ ಕಂಡುಕೊಳ್ಳಬೇಕು” ಎಂದು ಹೇಳಿದರು.
ಹಲವು ಚಟುವಟಿಕೆ ಮುಖಾಂತರ ತರಬೇತಿ ನಡೆಸಿದರು. ನಂತರ ಜೀವನ ಜ್ಯೋತಿ ಮಾಜಿ ದೇವದಾಸಿ ಮಹಿಳೆಯರ ಎಲ್ಲ ಒಕ್ಕೂಟದ ಆಯ್ಕೆಯ ಪ್ರಜಾಪ್ರಭುತ್ವದ ನಿಟ್ಟಿನಲ್ಲಿ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ನೂತನ ಸಮಿತಿ ಆಯ್ಕೆ ಮಾಡಿದರು. ಅಧ್ಯಕ್ಷರಾಗಿ ರೇಣುಕಾ ಎಂಟಮಾನ, ಉಪಾಧ್ಯಕ್ಷರಾಗಿ ಮಲ್ಲಮ್ಮ ಕಟ್ಟಿಮನಿ, ಕಾರ್ಯದರ್ಶಿಯಾಗಿ ರೇಣುಕಾ ಕಾಂಬಳೆ ಹಾಗೂ ಖಜಂಚಿಯಾಗಿ ಚಂದಾಬಾಯಿ ಮಾದರ್ ಅವರನ್ನು ಆಯ್ಕೆ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ? ಬೀದರ್ | ಸಾಮಾಜಿಕ ಅಸಮಾನತೆ ನಿವಾರಣೆಗೆ ಅಂಬೇಡ್ಕರ್ ಕೊಡುಗೆ ಅಪಾರ : ಪ್ರೇಮಸಾಗರ ದಾಂಡೇಕರ್
ಕಾರ್ಯಕ್ರಮದಲ್ಲಿ ಎಲ್ಲ ತಾಲೂಕುಗಳಿಂದ ಸುಮಾರು 65 ಮಾಜಿ ದೇವದಾಸಿ ಮುಖಂಡರು ಭಾಗವಹಿಸಿದ್ದರು. ಸಿಸ್ಟರ್ ಜಯ, ಅನುಸೂಯ ಮಾಶಾಳ, ಭಾರತಿ ಹಾಗೂ ಮಂಜುಳಾ, ಸುನಿತಾ ಮೋರೆ, ದೇವಕಿ, ಮೀನಾಕ್ಷಿ ಸಿಂದೇ ಇದ್ದರು.