ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ, ನವದೆಹಲಿಯ ಜಂತರ್ ಮಂತರ್ನಲ್ಲಿ ಶಿಕ್ಷಣತಜ್ಞ ಸೋನಮ್ ವಾಂಗ್ಚುಕ್ ಹಾಗೂ ಇತರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ, ಪ್ರಗತಿಪರ ಸಂಘಟನೆಗಳ ವೇದಿಕೆ ವತಿಯಿಂದ ಜುಲೈ 17ರಂದು ವಿಜಯಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10.30 ಗಂಟೆಗೆ ಆರಂಭವಾಗುವ ಈ ಧರಣಿಯಲ್ಲಿ ಜಿಲ್ಲೆಯ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು, ಯುವಜನರು, ಬುದ್ಧಿಜೀವಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವೇದಿಕೆ ಮನವಿ ಮಾಡಿದೆ.
ಪ್ರಕಟಣೆಯಲ್ಲಿ ತಿಳಿಸಲಾಗಿರುವಂತೆ, ನವದೆಹಲಿಯ ಜಂತರ್ ಮಂತರ್ನಲ್ಲಿ ಸೋನಮ್ ವಾಂಗ್ಚುಕ್ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹವು ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ನಿರ್ವಹಣೆಯ ವೈಫಲ್ಯ ಮತ್ತು ಆಡಳಿತಾತ್ಮಕ ಲೋಪಗಳ ಹೊಣೆಗಾರಿಕೆಗೆ ಒತ್ತಾಯಿಸುತ್ತಿದೆ. ಜೊತೆಗೆ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ, ಪರೀಕ್ಷಾ ಬಿಕ್ಕಟ್ಟಿನಿಂದ ಜೀವ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ನ್ಯಾಯ ಒದಗಿಸಬೇಕೆಂದು ಆಗ್ರಹಿಸಲಾಗಿದೆ.
“ಈ ನ್ಯಾಯಯುತ ಹೋರಾಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸದಿರುವುದು ಖಂಡನೀಯವಾಗಿದ್ದು, ಇದರ ವಿರುದ್ಧ ವಿಜಯಪುರದಲ್ಲಿ ಧರಣಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಮಧ್ಯಪ್ರವೇಶಿಸುವಂತೆ ಒತ್ತಾಯಿಸಲಾಗುವುದು” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಿರಿಯ ಪತ್ರಕರ್ತ ಅನಿಲ ಹೊಸಮನಿ ಅವರು, ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಎಲ್ಲ ಪ್ರಜ್ಞಾವಂತ ನಾಗರಿಕರು ಧರಣಿಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡುವಂತೆ ಕೋರಿದ್ದಾರೆ.




