ನೀಟ್ ಸೇರಿದಂತೆ ಹಲವು ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ನಡೆಸುತ್ತಿರುವ ಉಪವಾಸ ಪ್ರತಿಭಟನೆ 3ನೇ ವಾರಕ್ಕೆ ಕಾಲಿಟ್ಟಿದೆ. ಅವರ ಆರೋಗ್ಯ ಬಿಗಡಾಯಿಸಿದೆ. ಉಪವಾಸವನ್ನು ಕೈಬಿಡುವಂತೆ ದೇಶಾದ್ಯಂತ ಸಿನಿಮಾ ಮಂದಿ, ವಿಪಕ್ಷಗಳ ನಾಯಕರು ಹಾಗೂ ಹೋರಾಟಗಾರರು ಮನವಿ ಮಾಡುತ್ತಿದ್ದಾರೆ. ಆದಾಗ್ಯೂ, ಸರ್ಕಾರವು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸದ ಹೊರತು, ಉಪವಾಸ ಕೈಬಿಡುವುದಿಲ್ಲವೆಂದು ಸೋನಮ್ ಪಟ್ಟುಹಿಡಿದಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿ ಉಪವಾಸ ಕುಳಿತಿರುವ ಸೋನಮ್ ಅವರನ್ನು ಖ್ಯಾತ ಹಾಸ್ಯನಟ ಕುನಾಲ್ ಕಮ್ರಾ ಮತ್ತು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಬುಧವಾರ ಖುದ್ದಾಗಿ ಭೇಟಿಯಾಗಿದ್ದಾರೆ. ಸೋನಮ್ ಮತ್ತು ಕಾಕ್ರೋಚ್ ಪಾರ್ಟಿಯ ಯುವಜನರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಈ ವೇಳೆ, ಕುನಾಲ್ ಕಮ್ರಾ ಮಹಾತ್ಮಾ ಗಾಂಧೀಜಿಯವರ ಚಿತ್ರವಿರುವ ಟಿ-ಶರ್ಟ್ ಧರಿಸಿ ಕೇಂದ್ರ ಸರ್ಕಾರಕ್ಕೆ ಅಹಿಂಸಾ ಪ್ರತಿಭಟನೆ ಮತ್ತು ಇತಿಹಾಸದ ಪಾಠ ಹೇಳಿದ್ದಾರೆ.
ಕಮ್ರಾ, ಆಜಾದ್ ಅವರು ಪ್ರತಿಭಟನಾಕಾರರನ್ನು ಭೇಟಿ ಮಾಡಿರುವುದು ಕಳೆದ 25 ದಿನಗಳಿಂದ ಬೀದಿಗಿಳಿದು ಹೋರಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ಮೂಡಿಸಿದೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಇಂದು (ಗುರುವಾರ) ವಾಂಗ್ಚುಕ್ ಅವರಿಗೆ ಬೆಂಬಲ ಸೂಚಿಸಲು ದೇಶಾದ್ಯಂತ ಒಂದು ದಿನದ ಸಾಮೂಹಿಕ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದ್ದಾರೆ.

ಮತ್ತೊಂದೆಡೆ, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನುದ್ದೇಶಿಸಿ ಬಹಿರಂಗ ಪತ್ರ ಬರೆದಿದ್ದು, ತಾವೂ ಈ ಹೋರಾಟದೊಂದಿಗೆ ಇರುವುದಾಗಿ ಘೋಷಿಸಿದ್ದಾರೆ. “ಯುವ ಭಾರತ ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮಗೆ ತೀವ್ರ ಕಳಕಳಿಯಿದೆ ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಗಡಾಯಿಸಿದೆ ಸೋನಮ್ ಆರೋಗ್ಯ; ಇತಿಹಾಸದಲ್ಲಿ ಮೋದಿಯೇ ಅಪರಾಧಿ – ಸಿಗದು ಕ್ಷಮೆ!
ನಟಿ ಸೋನಿ ರಜ್ದಾನ್ ಕೂಡ ಕವನದ ರೂಪದಲ್ಲಿ ವಾಂಗ್ಚುಕ್ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ, ದೇಶಕ್ಕೆ ಅವರ ಅಗತ್ಯವಿದೆ ಎಂದು ಬರೆದುಕೊಂಡಿದ್ದಾರೆ. ಇನ್ನು ಖ್ಯಾತ ಚಲನಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಸರ್ಕಾರದ ಮೌನವನ್ನು ತೀವ್ರವಾಗಿ ಟೀಕಿಸಿದ್ದು, ಇಂತಹ ಪರಿಸ್ಥಿತಿಯಲ್ಲಿ ವ್ಯವಸ್ಥೆಯು ಜನರ ಜೀವಕ್ಕೆ ಇಷ್ಟು ನಿರ್ಲಕ್ಷ್ಯ ವಹಿಸಿರುವುದು ಆತಂಕಕಾರಿ. ಸರ್ಕಾರದ ಈ ಮೌನವೇ ಅವರ ಅಪರಾಧ ಪ್ರಜ್ಞೆಗೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯ ನಟಿ ಜೀನತ್ ಅಮಾನ್ ಹಾಗೂ ನಟ ಓಮಿ ವೈದ್ಯ ಕೂಡ ವಾಂಗ್ಚುಕ್ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸರ್ಕಾರ ತಕ್ಷಣವೇ ಮಾತುಕತೆ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸದ್ಯ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಪರಿಸ್ಥಿತಿ ತೀವ್ರ ಕಳವಳಕಾರಿಯಾಗಿದೆ ಎಂದು ವೈದ್ಯಕೀಯ ವರದಿಗಳು ತಿಳಿಸಿವೆ. ನಿರಂತರ ಉಪವಾಸದಿಂದಾಗಿ ಅವರು ತೀವ್ರವಾಗಿ ದಣಿದಿದ್ದು, ವೈದ್ಯರ 24 ಗಂಟೆಗಳ ನಿರಂತರ ನಿಗಾದಲ್ಲಿದ್ದಾರೆ. ಉಪವಾಸ ಆರಂಭವಾದಾಗಿನಿಂದ ಅವರ ತೂಕ 8.9 ಕೆಜಿಯಷ್ಟು ಕಡಿಮೆಯಾಗಿದೆ. ಅವರ ರಕ್ತದೊತ್ತಡ 105/76 ಮತ್ತು ರಕ್ತದ ಸಕ್ಕರೆ ಮಟ್ಟ 80 mg/dL ನಷ್ಟಿದ್ದು, ಆಮ್ಲಜನಕದ ಸ್ಯಾಚುರೇಶನ್ 97% ರಷ್ಟಿದೆ. ಅವರು ದೈಹಿಕವಾಗಿ ತೀವ್ರ ನಿಶ್ಯಕ್ತಿಯಿಂದ ಬಳಲುತ್ತಿರುವುದರಿಂದ ನಿರಂತರ ವೈದ್ಯಕೀಯ ತಪಾಸಣೆ ಅತ್ಯಗತ್ಯವಾಗಿದೆ ಎಂದು ವೈದ್ಯರ ತಂಡ ಹೇಳಿದೆ.



