ಸಕಾಲಕ್ಕೆ ಶಾಲೆಗೆ ತೆರಳಲು ಆಗಮಿಸುವ ಬಸ್‌ಗಳು ನಿಲುಗಡೆ ಕೊಡುತ್ತಿಲ್ಲ ಎಂದು ಆರೋಪಿಸಿ ವಿಜಯಪುರ ಜಿಲ್ಲೆಯ ನಾಲತವಾಡ ಸಮೀಪದ ವೀರೇಶ ನಗರದಲ್ಲಿ ವಿದ್ಯಾರ್ಥಿಗಳು ವಾಹನಗಳನ್ನು ತಡೆದು ಪ್ರತಿಭಟಿಸಿದ ಘಟನೆ ನಡೆದಿದೆ.
ಗಡಿಭಾಗದ ನಾಲತವಾಡ ಪಟ್ಟಣಕ್ಕೆ ನಿತ್ಯ ಆರೇಶಂಕರ, ನಾಗಬೇನಾಳ, ಸಿದ್ದಾಪೂರ ಡ್ಯಾಮ್, ವೀರೇಶ್ ನಗರ ಸೇರಿದಂತೆ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳುತ್ತಾರೆ. ಶಾಲೆಯ ಸಮಯಕ್ಕೆ ತಲುಪುವುದು ಕಷ್ಟವಾಗಿದೆ ಎಂದ ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಲಿಂಗಸುಗೂರು ಸೇರಿದಂತೆ ಇತರೆ ಘಟಕಗಳ ಬಸ್‌ಗಳೇ ನಮಗೆ ಆಸರೆಯಾಗಿವೆ. ಆದರೆ ಸ್ವಘಟಕ ಮುದ್ದೇಬಿಹಾಳ ಮೂಲಕ ಬಸ್‌ಗಳ ಸೌಕರ್ಯ ಕಲ್ಪಿಸುತ್ತಿಲ್ಲ. ಬರೀ ಪ್ರತಿಭಟನೆ ಮಾಡುವುದೇ ಆಗಿದೆ. ಗಡಿರಾಜ್ಯದ ಸಂಪರ್ಕ ಹೊಂದಿದ ನಮ್ಮ ಗ್ರಾಮಕ್ಕೆ ಬಸ್‌ಗಳು ಓಡುತ್ತಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.
“ಹಿಂದಿನಿಂದಲೂ ಸಾರಿಗೆ ಬಸ್‌ಗಳ ಸಮಸ್ಯೆ ತಪ್ಪಿಲ್ಲ. ಇತ್ತೀಚೆಗೆ ಜಾರಿಯಾದ ಶಕ್ತಿ ಯೋಜನೆಯಿಂದ ಬಸ್‌ಗಳು ಪ್ರಯಾಣಕರಿಂದ ತುಂಬಿಕೊಂಡೇ ಬರುತ್ತಿವೆ. ಹೀಗಾಗಿ ಚಾಲಕರು ಬಸ್‌ಗಳನ್ನು ನಿಲ್ಲಿಸದೇ ವೇಗವಾಗಿ ತೆರಳುತ್ತಾರೆ. ನಮ್ಮ ಗತಿ ಏನು? ನಾವು ಶಾಲೆಗೆ ತೆರಳಬೇಡವೇ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.
ಪ್ರೌಢಶಾಲೆ ನಿರ್ಮಾಣಕ್ಕೆ ಆಗ್ರಹ
ನಾಲತವಾಡ ಪಟ್ಟಣದ ಪ್ರೌಢಶಾಲೆ ಹಾಗೂ ಕಾಲೇಜಿಗೆ ನಿತ್ಯ ಹೋಗುವ ತಾಪತ್ರೆಯ ತಪ್ಪಿಸುವ ನಿಟ್ಟಿನಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೇರೆ ಸ್ಥಳಕ್ಕೆ ಹೋಗಿ ಕಲಿಯಬೇಕಿದೆ. ವೀರೇಶ ನಗರದಲ್ಲಿ ಶೀಘ್ರವೇ 10ನೇ ತರಗತಿವರೆಗೆ ಪ್ರೌಢಶಾಲೆ ಆರಂಭಿಸಿ, ನಿತ್ಯ ಬಸ್‌ಗೆ ಕಾಯುವ ಸಂಕಷ್ಟ ತಪ್ಪಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.
ವಿದ್ಯಾರ್ಥಿಗಳ ಧರಣಿಯ ವೇಳೆ ಶಿವಾನಂದ ಗೌಂಡಿ, ಸಂಗಯ್ಯ ಡಂಬಳ, ಸಂಗಪ್ಪ ಉಂಡಿ, ಬಸವರಾಜ ಕೋಟೆಗುಡ್ಡ, ಚನ್ನಪ್ಪ ಗುರಿಕಾರ. ಚೆನ್ನಪ್ಪ ಕೋಳೂರ, ಭೀಮಣ್ಣ ಗುರಿಕಾರ, ಬಸಪ್ಪ ಹಾವಲ್ದಾರ ಇತರರು ಇದ್ದರು.