ದಲಿತ, ಆದಿವಾಸಿ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ನಕಲಿ, ಇದರ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂಬ ಆಗ್ರಹ, ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ, “ವಿಕ್ರಂ ಗೌಡ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಯಾವುದೇ ಸಂಶಯ ಬೇಡ. ಆತನ ಬಳಿ ಮಷೀನ್ ಗನ್ ಇದ್ದಿದ್ದಕ್ಕೆ ಹತ್ಯೆ ಮಾಡಲಾಗಿದೆ” ಎಂದು ಹೇಳಿಕೆ ನೀಡಿದ್ದಾರೆ.
“ಸಂಜೆ 6ರ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ. ಕಾಡು ಪ್ರದೇಶದಲ್ಲಿ ಎರಡು ಮೂರು ಮನೆ ಇತ್ತು. ನಕ್ಸಲ್ ಪೊಲೀಸ್ ಮುಖಾಮುಖಿ ಆಗಿ ಎನ್ ಕೌಂಟರ್ ಆಗಿದೆ. ಈ ಎನ್ ಕೌಂಟರ್ ನಲ್ಲಿ ಯಾವುದೇ ಸಂಶಯ ಬೇಡ” ಎಂದು ಹೇಳಿದ್ದಾರೆ.
“ಮನೆಗಳನ್ನು ಖಾಲಿ ಮಾಡೋದು ಕಳುಹಿಸೋದು ನಮ್ಮ ಕೆಲಸ ಅಲ್ಲ. ವಿಕ್ರಂ ಗೌಡ ಬಳಿ ಮಷೀನ್ ಗನ್, ಪಿಸ್ತೂಲ್, ಚಾಕು ಸಿಕ್ಕಿದೆ” ಎಂದು ಮಾಹಿತಿ ನೀಡಿದರು.

“ಯೋಜನೆ ಮಾಡಿ ಎನ್ ಕೌಂಟರ್ ಮಾಡಿಲ್ಲ. ಇದೊಂದು ಪರ್ಫೆಕ್ಟ್ ಎನ್‌ಕೌಂಟರ್ ಆಗಿತ್ತು. ಸಾಧಾರಣ ಕತ್ತಲಾಗಿರುವ ವಾತಾವರಣ ಆಗಿತ್ತು. ಆದ್ದರಿಂದ ಎಷ್ಟು ಜನ ಇದ್ದರು ಎಂದು ಎ ಎನ್ ಎಫ್ ಗೆ ಮಾಹಿತಿ ಇಲ್ಲ. ವಿಕ್ರಂ ಗೌಡ ಶರಣಾಗತಿಗೆ ಯಾವುದೇ ಪತ್ರ ವ್ಯವಹಾರ ಮಾಡಿರಲಿಲ್ಲ. ವಿಕ್ರಂ ಗೌಡ ಅವರದ್ದು ಫೇಕ್ ಎನ್‌ಕೌಂಟರ್ ಎಂಬುವುದು ಸತ್ಯವೇ ಅಲ್ಲ” ಎಂದರು.
“ಕಾಡು, ಗ್ರಾಮ ಸುತ್ತಮುತ್ತಲಿನ ಜಿಲ್ಲೆಯಲ್ಲಿ ಕೂಂಬಿಂಗ್ ನಡೆಸುತ್ತಿದ್ದೇವೆ. ವಿಕ್ರಂ ಮೇಲೆ ಹಲವಾರು ಕೇಸುಗಳಿದ್ದವು. ಮೋಸ್ಟ್ ವಾಂಟೆಡ್, ನಕ್ಸಲ್ ಮೂವ್ ಮೆಂಟ್ ನಾಯಕನಾಗಿದ್ದ ಆತ. ಎನ್ ಕೌಂಟರ್ ಅಲ್ಲ, ಶರಣಾಗತಿ ನಮ್ಮ ಮೂಲ ಉದ್ದೇಶವಾಗಿದೆ. ಶರಣಾಗತಿಗೆ ನೂರಾರು ದಾರಿಗಳು ಇದೆ. ಸರೆಂಡರ್ ಪ್ಯಾಕೇಜ್, ಪುನರ್ವಸತಿ ಪ್ಯಾಕೇಜ್ ಇವೆ. ಇದನ್ನು ಅವರು ಬಳಸಿಕೊಳ್ಳಬಹುದು” ಎಂದು ಮೊಹಂತಿ ಹೇಳಿದ್ದಾರೆ.
“ನಮ್ಮ ಜೊತೆ ವಿಕ್ರಂ ಗೌಡ ಇತ್ತೀಚಿಗೆ ಓಡಾಟ ನಡೆಸಿರುವ ಫೋಟೋ ಇದೆ. ಎಎಎನ್ ಎಫ್ ಬಳಿ ಎಲ್ಲಾ ದಾಖಲೆ ಇರುತ್ತದೆ. ಎಲ್ಲರ ಹೊಸ ದಾಖಲೆಗಳು ಎಎನ್ ಎಫ್ ಬಳಿ ಇವೆ. ಬೇರೆ ಬೇರೆ ಕಡೆ ಕೂಂಬಿಂಗ್ ಮಾಡಿದ್ದೇವೆ. ನಮ್ಮ ತಂಡ ನಿರಂತರ ಕೂಂಬಿಂಗ್ ಆಪರೇಷನ್ ಮಾಡುತ್ತಲೇ ಇದೆ. ಜನ ಭಯಪಡಬೇಕಾದ ಅವಶ್ಯಕತೆ ಇಲ್ಲ. ನಾವು ಜನರ ರಕ್ಷಣೆಗಾಗಿಯೇ ಇದ್ದೇವೆ. ನಕ್ಸಲ್ ಚಟುವಟಿಕೆ ಬಗ್ಗೆ ಯಾವುದೇ ಆತಂಕ ಭಯ ಬೇಡ” ಎಂದು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಹೇಳಿದರು.
“ಇದು ಪೂರ್ವ ನಿಯೋಜಿತ ಎನ್‌ಕೌಂಟರ್ ಅಲ್ಲ, ಬದಲಾಗಿ ಅವಕಾಶ ಒದಗಿ ಬಂತು. ದಿನಸಿಗೆ ಬಂದಿದ್ದನೋ ಅಥವಾ ಬೇರೆ ಯಾವ ಉದ್ದೇಶದಿಂದ ಎಂಬುದು ನಮಗೆ ಗೊತ್ತಿಲ್ಲ. ಎಷ್ಟು ಗುಂಡು ಬಿದ್ದಿದೆ ಗೊತ್ತಿಲ್ಲ. ಪೋಸ್ಟ್ ಮಾರ್ಟಂ ವರದಿ ಬರಬೇಕಿದೆ. ವಿಕ್ರಂ ಬಳಿ ಮೂರು ಆಯುಧ ಇತ್ತು. ಒಂದು ಬಾರಿ ಟ್ರಿಗರ್ ಮಾಡಿದ್ರೆ 50- 60 ಬುಲೆಟ್ ಸಿಡಿಯುವ ಗನ್ ಇತ್ತು. 3 ಎಂಎಂ ಪಿಸ್ತೂಲ್ ಇತ್ತು” ಎಂದು ಹೇಳಿದರು.

“ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ದ.ಕ ಹಾಗೂ ಕೇರಳದ ನಡುವೆ ನಕ್ಸಲ್ ಮೂವ್ ಮೆಂಟ್ ಇದೆ. ನಕ್ಸಲ್ ಪ್ರತಿದಾಳಿ ಬಗ್ಗೆ ಅಲರ್ಟ್ ಇದ್ದೇವೆ. ಪ್ರತಿದಾಳಿ ಮಾಡಿದರೆ ತಡೆಯುತ್ತೇವೆ. ಶರಣಾಗತಿಗೆ ನಮ್ಮ ಫೋಕಸ್. ಎನ್‌ಕೌಂಟರ್ ನಮ್ಮ ಗುರಿಯಲ್ಲ. ಕೇರಳ ಜೊತೆ ನಮ್ಮ ರಾಜ್ಯದ ಎಎನ್‌ಎಫ್ ಸಂಪರ್ಕ, ಸಂಬಂಧ ಚೆನ್ನಾಗಿದೆ. ನಕ್ಸಲ್ ತಡೆಗೆ ಅಲ್ಲಿಂದ ಸಹಕಾರ ಇದೆ. ಏಪ್ರಿಲ್ ತಿಂಗಳಲ್ಲಿ ದ.ಕನ್ನಡ, ಕೊಡಗಿನಲ್ಲಿ ವಿಕ್ರಂ ಗೌಡ ಚಲನವಲನಗಳ ಬಗ್ಗೆ ಮಾಹಿತಿ ಇತ್ತು. ಆ ಬಗ್ಗೆ ನಾವು ಪ್ರಕರಣ ದಾಖಲಿಸಿದ್ದೆವು. ತಿಂಗಳ ಹಿಂದೆ ಆತನ ಓಡಾಟದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಊಹಾಪೋಹ, ಮತ್ತು ಅರ್ಧ ಸತ್ಯದ ಮಾಹಿತಿಗೆ ಯಾರೂ ಕಿವಿಗೊಡಬಾರದು” ಎಂದು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಉಪಸ್ಥಿತರಿದ್ದರು.
