ಬಸವಣ್ಣನವರ ಜನ್ಮ ಭೂಮಿಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಸನ್ಮಾನ ಮಾಡಿದ್ದು ಹೇಯ ಕೃತ್ಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ವಿಜಯಪುರ ನಗರದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ಗೌರಿ ಹತ್ಯೆ ಆರೋಪಿಗಳಾದ ಮನೋಹರ ಯಡವೆ ಹಾಗೂ ಪರಶುರಾಮ ವಾಗ್ಮೋರೆಗೆ ಸಂಘಪರಿವಾರದ ಸಂಘಟನೆಗಳ ಮುಖಂಡರು ಸನ್ಮಾನಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು.
“ಗೌರಿ ಹತ್ಯೆಯ ಆರೋಪಿಗಳಿಗೆ ಸನ್ಮಾನ ಮಾಡಿದ್ದನ್ನು ನಾನು ಮಾಧ್ಯಮಗಳ ಮೂಲಕ ನೋಡಿದ್ದೇನೆ. ಉಮೇಶ್ ವಂದಾಲ್ ಹಾಗೂ ಕಂಪನಿ ಈ ಸನ್ಮಾನ ಮಾಡಿದೆ. ಇದು ಅತ್ಯಂತ ಕೆಟ್ಟ ಕೆಲಸ. ಗೌರಿ ಲಂಕೇಶ್ ಹಾಗೂ ಇತರ ಚಿಂತಕರ ಹತ್ಯೆಯ ಆರೋಪಿಗಳಿಗೆ ಸನ್ಮಾನ ಮಾಡಿದವರ ವಿರುದ್ಧ ಕೇಸ್ ದಾಖಲಿಸಲು ಚಿಂತನೆ ಮಾಡಲಾಗುತ್ತದೆ” ಎಂದು ತಿಳಿಸಿದರು.
ಕೆಲವು ವರ್ಷಗಳ ಹಿಂದೆ ಸಂಶೋಧಕ ಎಂ ಎಂ ಕಲ್ಬುರ್ಗಿಯವರ ಹತ್ಯೆಯಾದಾಗಲೂ ಇದೇ ರೀತಿ ಸಂಭ್ರಮ, ಸನ್ಮಾನ ನಡೆದುದನ್ನು ನೆನಪಿಸಿಕೊಂಡರು.
ಕಲ್ಬುರ್ಗಿಯವರು ಬಿಜಾಪುರದ ಪುತ್ರ. ಲಿಂಗಾಯತ ಸಮುದಾಯದ ಮೇಧಾವಿ. ಬಸವ ಭಕ್ತ. ಅವರನ್ನು ಕೊಂದಾಗಲೂ ಇದೆ ರೀತಿ ಸಂಭ್ರಮಪಟ್ಟಿದ್ದರು. ಇದರ ಪರಿಣಾಮ ಉಮೇಶ್ ವಂದಾಲ್ ಹಾಗೂ ಕಂಪನಿಗೆ ಅರ್ಥವಾಗಬೇಕು ಎಂದು ಹೇಳಿದರು.

ಗೌರಿ ಲಂಕೇಶ್ ಹತ್ಯೆಯ ಪ್ರಕರಣದಲ್ಲಿ ನಿರಪರಾಧಿಗಳಾಗಿ ಬಂದ ಮೇಲೆ ಸನ್ಮಾನ ಮಾಡುವುದು ವಿಚಾರ ಬೇರೆ. ಆದರೆ, ಅದಕ್ಕೂ ಮೊದಲೇ ಜಾಮೀನಿನ ಮೇಲೆ ಬಂದವರಿಗೆ ಸನ್ಮಾನ ಮಾಡಿದ್ದು ಸರಿಯಲ್ಲ. ಸಮಾಜದಲ್ಲಿ ಗುರುತಿಸಲ್ಪಟ್ಟ ಮಹಾನ್ ವ್ಯಕ್ತಿಗಳ ಹತ್ಯೆ ಮಾಡಿದ ಆರೋಪಿಗಳಿಗೆ ಸನ್ಮಾನ ಮಾಡುವುದು ಹೇಯ ಕೃತ್ಯ. ಗೌರಿ ಲಂಕೇಶ್ ಹತ್ಯೆ ಆರೋಪಿಗಳು ತಪ್ಪಿತಸ್ಥರಲ್ಲ ಎಂದು ಹೇಳೋಕೆ ಇವರು ನ್ಯಾಯಾಧೀಶರಾ? ಇವರು ಅಪರಾಧಿಗಳಾ? ನಿರಪರಾಧಿಗಳಾ ಎಂದು ನ್ಯಾಯಾಲಯ ನಿರ್ಧಾರ ಮಾಡುತ್ತದೆ ಎಂದರು.
ಸನ್ಮಾನ ಮಾಡಿದವರ ವಿರುದ್ಧ ಯಾವ ರೀತಿ ಕೇಸ್ ದಾಖಲಿಸುತ್ತೀರಾ ಎಂದು ಪತ್ರಕರ್ತರು ಕೇಳಿದಾಗ, ಇದರ ಬಗ್ಗೆ ಮೊದಲು ಮಾಹಿತಿ ಕಲೆ ಹಾಕುತ್ತೇನೆ ಎಂದು ಹೇಳಿದರು.
