ಅಂತರ್ಜಲದ ಬಗ್ಗೆ ಅರಿವಿರದ ಕಾಲದಲ್ಲಿ, ಕೇವಲ ಆರಿಂಚು ಕೊಳವೆ ಕೊರೆದು, ನೀರು ತೆಗೆದು, ಆ ಮೂಲಕ ಜನರ ದಾಹವನ್ನು ನೀಗಿಸಿದ, ಕೃಷಿಯಲ್ಲಿ ಕ್ರಾಂತಿ ಮಾಡಿದ, ದೇಶದ ಆರ್ಥಿಕಾಭಿವೃದ್ಧಿಯನ್ನು ಹೆಚ್ಚಿಸಿದ ಎಸ್ ಜಿತೇಂದ್ರಕುಮಾರ್- ಅಳತೆಗೆ ಸಿಗದ ಅಸಲಿ ಅನುಭವಗಳ ಖನಿ. ವಿಶ್ವ ಜಲದಿನದಂದು ಜೀವಜಲ ಕುರಿತು ಅವರ ಪ್ರೀತಿ, ಕಾಳಜಿ ಮತ್ತು ಸಾಧನೆಗಳತ್ತ ಒಂದು ನೋಟ
ನಲವತ್ತು ವರ್ಷಗಳ ಹಿಂದೆ, ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಬೌರಿಂಗ್ ಅಂಡ್ ಲೇಡಿ ಕರ್ಜನ್ ಆಸ್ಪತ್ರೆಯ ನೋಟಿಸ್ ಬೋರ್ಡನಲ್ಲಿ ಆಸ್ಪತ್ರೆಗೆ ಬರುವ ಗರ್ಭಿಣಿ ಸ್ತ್ರೀಯರಿಗೆ ಸೂಚನೆ ನೀಡಲಾಗಿತ್ತು. ಅದೇನೆಂದರೆ, ಹೆರಿಗೆಗೆ ಬರುವ ಗರ್ಭಿಣಿಯರು ಜೊತೆಯಲ್ಲಿ ಜನರನ್ನು ಕರೆತರುವುದಕ್ಕಿಂತ ಮುಖ್ಯವಾಗಿ ಎರಡು ಬಕೆಟ್ ನೀರು ತರುವುದು ಕಡ್ಡಾಯವಾಗಿತ್ತು.
1983ರಲ್ಲಿ ಬೌರಿಂಗ್ ಆಸ್ಪತ್ರೆಯಲ್ಲಿದ್ದ ನೆಲಬಾವಿಗಳು ಬತ್ತಿಹೋಗಿ ನೀರಿನ ಕೊರತೆ ಉಂಟಾಗಿತ್ತು. ಆಪರೇಷನ್ ಸಮಯದಲ್ಲಿ ಲೇಬರ್ ವಾರ್ಡ್‌ನಲ್ಲಿ ನೀರು ಬಳಸುವುದು ಬಹಳ ಮುಖ್ಯವಾಗಿತ್ತು. ಆದಕಾರಣ, ಆಸ್ಪತ್ರೆ ಸಿಬ್ಬಂದಿ ವಿಧಿ ಇಲ್ಲದೆ, ಗರ್ಭಿಣಿಯರು ಹೆರಿಗೆಗಾಗಿ ಆಸ್ಪತ್ರೆಗೆ ಬರುವಾಗ ಕಡ್ಡಾಯವಾಗಿ ಎರಡು ಬಕೆಟ್ ನೀರು ತರಬೇಕೆಂದು ಸೂಚಿಸಲಾಗಿತ್ತು.
ಇದನ್ನು ಈಗ, 40 ವರ್ಷಗಳ ನಂತರ ಪ್ರಸ್ತಾಪಿಸುತ್ತಿರುವುದಕ್ಕೆ ಕಾರಣವಿದೆ. ಅಂದು ಆ ಆಸ್ಪತ್ರೆಯ ನೀರಿನ ಕೊರತೆಯನ್ನು ನೀಗಿಸಿದವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಾಗಿದ್ದ ತಂಗರಾಜ್. ಆ ಕೆಲಸದ ಉಸ್ತುವಾರಿ ಹೊತ್ತವರು ಮುಖ್ಯ ಡ್ರಿಲ್ಲಿಂಗ್ ಎಂಜಿನಿಯರ್ ಹಾಗೂ ಭೂ ವಿಜ್ಞಾನಿ ಎಸ್ ಜಿತೇಂದ್ರ ಕುಮಾರ್.

ಬೌರಿಂಗ್ ಆಸ್ಪತ್ರೆಯ ನೀರಿನ ಕೊರತೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದ ಜಿತೇಂದ್ರ ಕುಮಾರ್, ಆಸ್ಪತ್ರೆಯ ಜಾಗದಲ್ಲಿಯೇ ಮೊದಲು ನೀರಿನ ಸೆಲೆ ಇರುವ ಜಾಗ ಹುಡುಕಿ, ಮೂರು ಕೊಳವೆಬಾವಿಗಳನ್ನು ಕೊರೆಸಿದರು. ಗಂಟೆಗೆ ಐದು ಸಾವಿರ ಗ್ಯಾಲನ್- 25 ಸಾವಿರ ಲೀಟರ್- ನೀರು ತೆಗೆಯುವ ಸಾಮರ್ಥ್ಯವಿರುವ ಬೋರ್‌ವೆಲ್‌ಗಳಿಂದ ಯಥೇಚ್ಛ ನೀರು ಸಿಕ್ಕಿ, ಕೊರತೆ ನೀಗಿತು. ಜನ ನಿಟ್ಟುಸಿರುಬಿಟ್ಟರು.
ಜಿತೇಂದ್ರ ಕುಮಾರ್- ನಾಡು ಕಂಡ ಬಹಳ ಅಪರೂಪದ ಭೂ ವಿಜ್ಞಾನಿ. ಮಣ್ಣು, ನೀರು ಮತ್ತು ಕಲ್ಲುಗಳ ಕುರಿತು ಅಗಾಧ ಜ್ಞಾನ ಹೊಂದಿರುವವರು. ಅವುಗಳ ಆಳ-ಅಗಲ ಕುರಿತು ದಿನಗಟ್ಟಲೆ ಮಾತನಾಡಬಲ್ಲವರು. ಭೂಮಿಯೊಳಗಿನ ಅಂತರ್ಜಲದಂತೆಯೇ ಜೀತೇಂದ್ರರದು, ಅಳತೆಗೆ ಸಿಗದ ಅಸಲಿ ಅನುಭವಗಳ ಖನಿ. ಅವರ ವಿಸ್ತಾರ ಅರಿವನ್ನು, ಅನುಭವವನ್ನು ಸದುಪಯೋಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರೆ, ನಾಡು ಇನ್ನಷ್ಟು ಸಂಪದ್ಭರಿತ, ಸಮೃದ್ಧ, ಸುಭಿಕ್ಷವಾಗುವುದರಲ್ಲಿ ಅನುಮಾನವಿಲ್ಲ.
ಜೈನ ಧರ್ಮಕ್ಕೆ ಸೇರಿದ ಜಿತೇಂದ್ರಕುಮಾರ್ ಅವರ ತಂದೆ ಶಾಂತಿರಾಜ ಶಾಸ್ತ್ರಿ. ಆ ಕಾಲದ ಸಂಸ್ಕೃತ, ಪ್ರಾಕೃತ ಪಂಡಿತರು. ವಿಶ್ವಬಂಧು ಪತ್ರಿಕೆಯ ಸಂಪಾದಕರು. ಜೈನ ಸಾಹಿತ್ಯ ಕುರಿತು ಸುಮಾರು 55 ಕೃತಿಗಳನ್ನು ರಚಿಸಿದವರು. ಇವರ `ಮಹಾಪುರಾಣ’ ಕೃತಿ ಸಾಹಿತ್ಯ ಕ್ಷೇತ್ರಕ್ಕೆ ಸಿಕ್ಕ ಶ್ರೇಷ್ಠ ಕೃತಿ. ಮೈಸೂರು ಮಹಾರಾಜರು ಇವರ ವಿದ್ವತ್ತು, ಪಾಂಡಿತ್ಯಕ್ಕೆ ಮನಸೋತು1948ರಲ್ಲಿ ‘ಪಂಡಿತರತ್ನ’ ಎಂಬ ಬಿರುದು ನೀಡಿ ಗೌರವಿಸಿದ್ದರು. ಜಿತೇಂದ್ರಕುಮಾರ್ ಅವರು ಚಿಕ್ಕವರಿದ್ದಾಗಲೇ, 1952ರಲ್ಲಿ ಶಾಂತಿರಾಜರು ನಿಧನರಾದರು. ಆ ಸಂದರ್ಭದಲ್ಲಿ ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ, ಮನೆ ನಡೆಸುವುದೇ ಕಷ್ಟವಾಯಿತು. ಜಿತೇಂದ್ರರಿಗೆ ಆಗ ಹದಿನಾರು ವರ್ಷ. ಮೈಸೂರಿನ ಸಿಪಿಸಿ ಪಾಲಿಟೆಕ್ನಿಕ್‌ನಲ್ಲಿ ಆಟೋಮೊಬೈಲ್ ಎಂಜಿನಿಯರ್ ಕೋರ್ಸ್‌ಗೆ ಸೇರಿದ ಜಿತೇಂದ್ರರು, ಓದುತ್ತಲೇ ಅರೆಕಾಲಿಕ ಕೆಲಸ ಮಾಡಿದ ಕಷ್ಟ ಸಹಿಷ್ಣು. ತಮ್ಮ ಅನ್ನವನ್ನು ತಾವೇ ದುಡಿದು ತಿಂದ ಸ್ವಾಭಿಮಾನಿ. ಓದುವುದರಲ್ಲಿ ಸದಾ ಮುಂದಿದ್ದ ಜಿತೇಂದ್ರರು ಮೂರು ವರ್ಷವೂ ಪ್ರಥಮದರ್ಜೆಯಲ್ಲಿ ತೇರ್ಗಡೆ ಹೊಂದಿದರು. ಪದವಿ ಮುಗಿಯುತ್ತಿದ್ದಂತೆ ಮೂರು ಕೆಲಸಗಳು ಅರಸಿ ಬಂದವು. ಅದರಲ್ಲಿ ಭೂ ಮತ್ತು ಗಣಿವಿಜ್ಞಾನ ಇಲಾಖೆಯಲ್ಲಿ ಡೈಮಂಡ್ ಡ್ರಿಲ್ಲಿಂಗ್‌ನಲ್ಲಿ ಅಪ್ರೆಂಟಿಸ್ ಆಗಿ 1957ರಲ್ಲಿ ಕೆಲಸಕ್ಕೆ ಸೇರಿದರು. 1966 ರಲ್ಲಿ ಬೆಂಗಳೂರಿಗೆ ಬಂದರು.

ಡ್ರಿಲ್ಲರ್ ಅಂತ ಕೆಲಸಕ್ಕೆ ಸೇರಿದರೂ, ಡ್ರಿಲ್ಲಿಂಗ್‌ಗೆ ಸಂಬಂಧಪಟ್ಟ ಎಲ್ಲ ಉಪಕರಣಗಳನ್ನು ಹೊರಗಿನಿಂದಲೇ ತರಿಸಬೇಕಾಗಿತ್ತು. ಜಿತೇಂದ್ರರಿಗೆ ಆಟೋಮೊಬೈಲ್ ಎಂಜಿನಿಯರಿಂಗ್ ಕೂಡ ಗೊತ್ತಿದ್ದರಿಂದ ರಿಪೇರಿ ಕೂಡ ಮಾಡತೊಡಗಿದರು. ಆಗ ಇಲಾಖೆಯಲ್ಲಿ 2 ಡ್ರಿಲ್ಲಿಂಗ್ ಮೆಷಿನ್‌ಗಳಿದ್ದವು. ಅವುಗಳನ್ನು ಬಳಸಿ ಮೊದಲಿಗೆ ಖನಿಜ ನಿಕ್ಷೇಪಗಳನ್ನು ಪತ್ತೆಹಚ್ಚುವಲ್ಲಿ, ದೇಶದ ಭೂಪಟದಲ್ಲಿ ಕರ್ನಾಟಕ ರಾಜ್ಯವನ್ನು ತಾಮ್ರ ನಿಕ್ಷೇಪ ಗುರುತು ಮಾಡಿ ದಾಖಲಿಸುವಲ್ಲಿ ಇಲಾಖೆಗೆ ಹೆಸರು ತಂದರು. ನಂತರ ಅಂತರ್ಜಲ ಶೋಧಿಸುವ, ಕೊಳವೆಬಾವಿ ಕೊರೆಯುವ ವಿಭಾಗದ ಮುಖ್ಯಸ್ಥರಾದರು.
ಅರವತ್ತರ ದಶಕದಲ್ಲಿ ನೀರಿನ ಬಗ್ಗೆ ಜನರಲ್ಲಿದ್ದ ಸಾಮಾನ್ಯ ತಿಳಿವಳಿಕೆ ಎಂದರೆ, ಕೆರೆ-ಕಟ್ಟೆ-ಬಾವಿಗಳು, ನದಿ-ಹೊಳೆ-ಜಲಾಶಯಗಳು, ಸಮುದ್ರ-ಸಾಗರಗಳು ಮಾತ್ರ. ಬಾವಿಗಳಿದ್ದುದರಿಂದ ಭೂಮಿಯೊಳಗೆ ನೀರಿದೆ ಅಂತ ಗೊತ್ತಿತ್ತು. ಅದಕ್ಕೆ ಆಗ ‘ಭೂಜಲ’ವೆಂದು ಕರೆಯುತ್ತಿದ್ದರು. ಇದನ್ನು ಮೊಟ್ಟ ಮೊದಲ ಬಾರಿಗೆ ‘ಅಂತರ್ಜಲ’ ಎಂದು ನಾಮಕರಣ ಮಾಡಿದವರು ರಾಧಾಕೃಷ್ಣ ಎಂಬ ಅಧಿಕಾರಿ. ಭೂಮಿಗೆ ಬಿದ್ದ ಮಳೆ ನೀರು ನೆಲದಡಿಗೆ ಒಸರಿ ಇಲ್ಲವೇ ಸೋರಿ, ಬಿರುಕು, ಪೊಳ್ಳು, ಪೊಟರೆ, ಸೀಳುಗಳಲ್ಲಿ ಜಮೆಯಾಗುವ ನೀರೇ ಅಂತರ್ಜಲ. ಹಾಗೆಯೇ ಕೇವಲ ಆರು ಇಂಚು ಜಾಗದಲ್ಲಿ ಕೊಳವೆಬಾವಿ ಕೊರೆದು ಗ್ಯಾಲನ್‌ಗಟ್ಟಲೆ ನೀರು ಹೊರ ತೆಗೆಯುವ ಕೊಳವೆ ಬಾವಿಗಳು(ಬೋರ್ ವೆಲ್) ಬಳಕೆಗೆ ಬಂದದ್ದು ಕೂಡ ಅರವತ್ತರ ದಶಕದಲ್ಲಿಯೇ. ಅಂತರ್ಜಲ ವಿಭಾಗ ಶುರು ಮಾಡಿದ್ದು, ದೇಶದಲ್ಲಿ ಕರ್ನಾಟಕ ರಾಜ್ಯವೇ ಮೊದಲು.
ಅಂತರ್ಜಲ ಅಭಿವೃದ್ಧಿಯಾದರೆ ಎಲ್ಲ ಕ್ಷೇತ್ರವೂ ಅಭಿವೃದ್ಧಿ ಆಗುತ್ತದೆ ಎಂಬುದು ಗಟ್ಟಿಗೊಳ್ಳುತ್ತಿದ್ದ ಸಂದರ್ಭದಲ್ಲಿ, 1968ರಲ್ಲಿ, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಅಮೆರಿಕದ USIAD (The United States Agency for International Development) ಸಂಸ್ಥೆಯಿಂದ ನಮಗೆ ಕರೆಬಂತು. ದೇಶದ 21 ಭೂ ವಿಜ್ಞಾನಿಗಳಿಗೆ ಅಂತರ್ಜಲ ಕುರಿತು 6 ತಿಂಗಳ ತರಬೇತಿ ನೀಡಲು ಸಂಸ್ಥೆ ವಿಶೇಷ ಆಹ್ವಾನ ನೀಡಿತು. ಕರ್ನಾಟಕದ 7 ಜನ ಭೂವಿಜ್ಞಾನಿಗಳ ಪೈಕಿ ನಾನೂ ಒಬ್ಬ. ಅಲ್ಲಿ ನಾವು ಮಳೆ ನೀರು ಬಿದ್ದು, ಅದು ಅಂತರ್ಜಲವಾಗುವ ಪರಿ ಹೇಗೆ ಎಂಬುದರ ಕುರಿತು ಸಾಕಷ್ಟು ಹೊಸ ವಿಚಾರಗಳನ್ನು ಅಧ್ಯಯನದಿಂದ ಅರಿತೆವು. ನನಗನ್ನಿಸುವ ಪ್ರಕಾರ, ಇಂತಹ ವಿಷಯಗಳಲ್ಲಿ ಅಮೆರಿಕ ನಮಗಿಂತ 40 ವರ್ಷಗಳಷ್ಟು ಮುಂದಿದೆ. ಅಲ್ಲಿಂದ ಬಂದಮೇಲೆ, ಅಲ್ಲಿನ ಅಧ್ಯಯನ, ಅನುಭವ ಮತ್ತು ಗ್ರಹಿಕೆಯನ್ನು ಬರವಣಿಗೆಗಿಳಿಸಿ, 1969 ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದೆವು.
‘ದುರದೃಷ್ಟಕ್ಕೆ ನಮ್ಮನ್ನು, ನಮ್ಮ ಜ್ಞಾನವನ್ನು ಸರ್ಕಾರ ಬಳಸಿಕೊಳ್ಳಲಿಲ್ಲ. ನಾವೇ ಬಳಸಿಕೊಳ್ಳುವಂತೆ ಮಾಡುವತ್ತ ಕಾರ್ಯೋನ್ಮುಖರಾದೆವು. ನೀರಿನ ಸದ್ಬಳಕೆ ಕುರಿತು ಜನರಿಗೆ ತಿಳಿವಳಿಕೆ ತುಂಬುತ್ತಾ ಹೋದೆವು. ಜೊತೆಗೆ ನೀರಿನ ಗುಣಮಟ್ಟ, ಆವಿ, ಒರತೆ, ಮಳೆನೀರು- ಎಲ್ಲಾ ರೀತಿಯಿಂದ ಪರೀಕ್ಷೆಗೊಡ್ಡುತ್ತಾ ಹೋದೆವು. ಚಿತ್ರದುರ್ಗದ ಇಂಗಳದಾಳು ಬಳಿ ಕ್ಯಾಂಪ್ ಮಾಡಿ, ಎರಡು ಮೂರು ಬೋರ್ ವೆಲ್ ಕೊರೆದು ನೀರಿನ ಗುಣಮಟ್ಟ ಪರೀಕ್ಷೆ ಮಾಡಿದೋ. ಜನರಿಗೆ ಅವುಗಳ ಉಪಯೋಗ ಕುರಿತು ಪ್ರಾತ್ಯಕ್ಷಿಕೆ ನೀಡಿದೆವು. ಆಮೇಲೆ ಸರ್ಕಾರ ಮುಂದೆ ಬಂತು. ನಂತರ ಸರ್ಕಾರಿ ಸಂಸ್ಥೆಗಳಿಗೆ, ಕಚೇರಿಗಳಿಗೆ, ಆಸ್ಪತ್ರೆಗಳಿಗೆ ಬೋರ್ ವೆಲ್ ಕೊರೆದು ನೀರಿನ ಕೊರತೆ ನೀಗಿಸಿದೆವು’ ಎನ್ನುವ ಜಿತೇಂದ್ರಕುಮಾರ್, ಶಿಸ್ತು, ಶ್ರದ್ಧೆ ಮತ್ತು ದಕ್ಷತೆಗೆ ಹೆಸರಾದವರು.
ಅದರಲ್ಲೂ ನೀರಿನ ಬಗೆಗಿನ ಅವರ ಪ್ರೀತಿ ಮತ್ತು ಕಾಳಜಿ ಪದಗಳಿಗೂ ಮೀರಿದ್ದು. ನೀರಿನ ಸದ್ಬಳಕೆ ಹೇಗೆ ಮಾಡಬೇಕು, ಅದರ ಗುಣಮಟ್ಟ ಹೇಗೆ ಪರೀಕ್ಷಿಸಬೇಕು, ಸಿಹಿ ನೀರು ಹುಡುಕುವುದು-ಬಳಸುವುದು ಹೇಗೆ, ಬೋರ್ ವೆಲ್ ನಿರ್ವಹಣೆ ಹೇಗೆ, ಎಷ್ಟು ಸಮಯದವರೆಗೆ ನೀರನ್ನು ಪಂಪ್ ಮಾಡಬಹುದು ಎಂಬ ಬಗ್ಗೆ ದಿನವಿಡೀ ಮಾತಾಡಬಲ್ಲ ಮಹಾಜ್ಞಾನಿ.
70ರ ದಶಕದಲ್ಲಿ ಭಾರೀ ಪ್ರಚಲಿತವಿದ್ದ ಮಾಧ್ಯಮ, ಜನರಿಗೆ ಬಹಳ ಬೇಗ ತಲುಪುತ್ತಿದ್ದುದು ರೇಡಿಯೋ. ಜಿತೇಂದ್ರಕುಮಾರ್ ಆ ಕಾಲದ ಆವಿಷ್ಕಾರವಾದ ಅಂತರ್ಜಲ ಮತ್ತು ಕೊಳವೆಬಾವಿ ಕುರಿತು 150 ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ದಾಖಲೆ ನಿರ್ಮಿಸಿದ್ದೂ ಉಂಟು. ಅಲ್ಲಿಯವರೆಗೆ ಮಳೆಯಾಶ್ರಿತ ಕೃಷಿ ಮಾತ್ರವಿತ್ತು. ಕೆರೆ-ಕಟ್ಟೆ-ಬಾವಿಗಳನ್ನು ಕುಡಿಯುವ ನೀರಿಗಾಗಿ ಆಶ್ರಯಿಸಲಾಗುತ್ತಿತ್ತು. ಜಿತೇಂದ್ರಕುಮಾರ್ ಅವರ ಕೊಳವೆಬಾವಿಗಳಿಂದ, ಕಡಿಮೆ ಜಾಗದಲ್ಲಿ ಅತಿಹೆಚ್ಚು ನೀರು ತೆಗೆಯುವ, ಅದನ್ನು ಕೃಷಿಗೆ ಉಪಯೋಗಿಸುವ ಸದ್ಬಳಕೆಯತ್ತ ಗಮನ ಹರಿಸಲಾಯಿತು. ಕೃಷಿ ಕ್ಷೇತ್ರದಲ್ಲಿ ಹಸಿರುಕ್ರಾಂತಿಯಾಯಿತು. ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ರೈತರ ಆರ್ಥಿಕಾಭಿವೃದ್ಧಿಯಾಯಿತು. ಆ ನಂತರ ಹನಿನೀರಾವರಿ ಚಾಲ್ತಿಗೆ ಬಂದಿತು. ನೀರನ್ನು ಹಿತಮಿತವಾಗಿ ಬಳಸಿಕೊಳ್ಳುವತ್ತ ಪ್ರಾತ್ಯಕ್ಷಿಕೆಗಳ ಮೂಲಕ ತಿಳಿವಳಿಕೆ ತುಂಬಲಾಯಿತು. ರಾಗಿ ಬೆಳೆಗೆ 6 ಇಂಚು, ಬತ್ತಕ್ಕೆ 21 ಇಂಚು, ಕಬ್ಬಿಗೆ 120 ಇಂಚು- ಯಾವ ಬೆಳೆಗೆ ಎಷ್ಟು ನೀರು ಬೇಕು ಎನ್ನುವುದನ್ನು ರೈತರಿಗೆ ವೈಜ್ಞಾನಿಕವಾಗಿ ತಿಳಿಸಿಕೊಡಲಾಯಿತು.
1971-72 ರಲ್ಲಿ ರಾಜ್ಯದಲ್ಲಿ ಭಾರೀ ಬರಗಾಲ. ಅನ್ನಕ್ಕಿರಲಿ ನೀರಿಗೂ ಹಾಹಾಕಾರ. ಅದರಲ್ಲೂ ಬೆಂಗಳೂರು ನಗರವಾಸಿಗಳು ನೀರಿಲ್ಲದೆ ನರಳುವಂತಹ ಸ್ಥಿತಿ ಎದುರಾಗಿತ್ತು. ಆಗ ಎಚ್ಚೆತ್ತುಕೊಂಡ ಸರ್ಕಾರ, ಗಣಿ ಮತ್ತು ಭೂವಿಜ್ಙಾನ ಇಲಾಖೆಯನ್ನು ಗಂಭೀರವಾಗಿ ಪರಿಗಣಿಸಿ, ರಾಜ್ಯದ ನೀರಿನ ಕೊರತೆ ನೀಗಿಸುವ ಜವಾಬ್ದಾರಿ ವಹಿಸಿತು. ಜಿತೇಂದ್ರಕುಮಾರ್ ತಂಡ ಮೊದಲಿಗೆ ರಾಜ್ಯದಾದ್ಯಂತ ಪ್ರವಾಸ ಮಾಡಿ, 1800 ಬಾವಿಗಳನ್ನು ಗುರುತು ಮಾಡಿತು. ನೀರಿನ ಚಲನ-ವಲನ ಕುರಿತು ಅಧ್ಯಯನ ಮಾಡಿ ಅಂಕಿ-ಸಂಖ್ಯೆಗಳನ್ನು ದಾಖಲಿಸಿತು. 1972-73ರಲ್ಲಿ ಚಳ್ಳಕೆರೆ ಸುತ್ತಮುತ್ತಲ ಹಳ್ಳಿಗಳಲ್ಲಿ ನೀರಿಗೆ ಅಭಾವವಿತ್ತು. ಪರಿಹಾರ ಹುಡುಕುವ ಸಲುವಾಗಿ, ತಳಕು ಎಂಬಲ್ಲಿ ಕೊಳವೆಬಾವಿ ಕೊರೆಯುವ ಬಹಳ ದೊಡ್ಡ ಪ್ರಯೋಗಕ್ಕೆ ಮುಂದಾಯಿತು. ಅದರಿಂದ ಆ ಭಾಗದ ನೀರಿನ ಕೊರೆತೆ ನೀಗಿತು. ಇದು ರಾಜ್ಯದಾದ್ಯಂತ ಸುದ್ದಿಯಾಗಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಬಗ್ಗೆ ವಿಶ್ವಾಸ ಹುಟ್ಟುವಂತಾಯಿತು. ಕೊಳವೆಬಾವಿ ತೆಗೆಸುವವರಿಗೆ ಸರ್ಕಾರ ಮೊದಲ ಬಾರಿಗೆ ಸಾಲ ನೀಡುವ ಹೊಸ ಕಾಯ್ದೆಯನ್ನು ಜಾರಿಗೆ ತಂದಿತು.
ಈ ನಡುವೆ ಸ್ವಾರಸ್ಯಕರ ವಿಷಯವೊಂದನ್ನು ಜಿತೇಂದ್ರಕುಮಾರ್ ಪ್ರಸ್ತಾಪಿಸಿದರು. `ಇದೇ ಸಮಯದಲ್ಲಿ, ದೇವರಾಜ ಅರಸರ ಸರ್ಕಾರವಿತ್ತು. ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದರು. ನಮ್ಮ ಕೊಳವೆಬಾವಿ ಸುದ್ದಿಯಾಗಿ, ಅವರ ಗಮನಕ್ಕೆ ಬಂದಿತ್ತು. ನಮ್ಮನ್ನು ಕರೆಸಿಕೊಂಡು, ತಮ್ಮ ಜಮೀನಿನ ಕತೆ ಹೇಳಿದರು. ಅವರ ಕೋರಿಕೆಯ ಮೇರೆಗೆ ಅವರ ಹುಟ್ಟೂರಾದ ಹರದನಹಳ್ಳಿಯ ಜಮೀನಿನಲ್ಲೊಂದು ಕೊಳವೆಬಾವಿ ಕೊರೆದೆವು. 250 ಗ್ಯಾಲನ್ ನೀರು ಬಂತು. ಗೌಡರು ಖುಷಿಯಾದರು. ನಮ್ಮ ತಂಡವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಕೊನೆಗೆ ಅದರ ಖರ್ಚುವೆಚ್ಚದ ಬಾಬ್ತು ರೂ. 500 ಆಗಿತ್ತು. ಬಿಲ್ ಕೊಟ್ಟರೆ, `ನನ್ನ ಹತ್ರ ದುಡ್ಡಿಲ್ಲಪ್ಪ’ ಅಂದರು. ಆದರೆ ಅದು ಸರ್ಕಾರಿ ಕೆಲಸ. ನಾವು ಬಿಡಲಿಲ್ಲ’ ಎಂದರು.

1983ರಲ್ಲಿ, ಬೆಂಗಳೂರು ನಗರಕ್ಕೆ ನೀರಿನ ಅಭಾವ ಉಂಟಾಯಿತು. ಆಗ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವರಾಗಿದ್ದ ಅಬ್ದುಲ್ ನಜೀರ್ ಸಾಬ್ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರ ಕೊಳವೆಬಾವಿಗಳ ಬಗ್ಗೆ ಕೇಳಿ ತಿಳಿದಿದ್ದರು. ಇಲಾಖೆಯ ಉನ್ನತಾಧಿಕಾರಿ ತಂಗರಾಜ್ ಮತ್ತವರ ತಂಡವನ್ನು ಕರೆಸಿ, ಪರಿಹಾರ ಕಂಡುಹಿಡಿಯಲು ಕೇಳಿಕೊಂಡರು. ಜಿತೇಂದ್ರಕುಮಾರ್ ಅವರ ತಂಡ ಹೊಸ ಪ್ರಯೋಗಕ್ಕೆ ಕೈಹಾಕಿತು. ಅದೇನೆಂದರೆ, ಬೆಂಗಳೂರು ನಗರದ ಸುತ್ತಮುತ್ತ ಇರುವ ಕೆರೆ-ಕಟ್ಟೆಗಳನ್ನು ಗುರುತಿಸಿತು. ಅದರಲ್ಲೂ ಮುಖ್ಯವಾಗಿ ನಗರಕ್ಕೆ ನೀರು ಸರಬರಾಜು ಆಗುತ್ತಿದ್ದ ಹೆಸರಘಟ್ಟ ಕೆರೆಯನ್ನು ಪ್ರಯೋಗದ ಕೇಂದ್ರಬಿಂದುವನ್ನಾಗಿಟ್ಟುಕೊಂಡಿತು. ಮೊದಲಿಗೆ ಕೆರೆಯ ಅಂಚಿನಲ್ಲಿ ಆರೇಳು ಕೊಳವೆಬಾವಿಗಳನ್ನು ಕೊರೆಯಿತು. ಕೆರೆ ಬತ್ತಿಹೋಗಿದ್ದರೂ, ಕೆರೆಯ ಅಂಚು ಅಂತರ್ಜಲ ಜಿನುಗುವ ಪ್ರದೇಶವಾದ್ದರಿಂದ ಕೊಳವೆಬಾವಿಗಳಲ್ಲಿ ನೀರು ಉಕ್ಕಿ ಹರಿಯಿತು.
ಕರ್ನಾಟಕ ಜನತೆಯ ಜನರ ನೀರಿನ ದಾಹ ತೀರಿಸಿರುವ ಜಿತೇಂದ್ರಕುಮಾರ್, ಡ್ರಿಲ್ಲರ್ ಆಗಿ ಕೆಲಸಕ್ಕೆ ಸೇರಿದಾಗ ಇಲಾಖೆಯಲ್ಲಿ ಇದ್ದದ್ದು 2 ಡ್ರಿಲ್ಲಿಂಗ್ ಮೆಷಿನ್. ಅವರು ನಿವೃತ್ತರಾಗುವ ವೇಳೆಗೆ 80 ಡ್ರಿಲ್ಲಿಂಗ್ ಮೆಷಿನ್ ಗಳಿದ್ದವು. 1966ರಿಂದ 1991ರವರೆಗೆ, ಜಿತೇಂದ್ರಕುಮಾರ್ ನೇತೃತ್ವದ ಡ್ರಿಲ್ಲಿಂಗ್ ತಂಡ ಸರಿಸುಮಾರು ವರ್ಷಕ್ಕೆ ಒಂದು ಸಾವಿರ ಕೊಳವೆಬಾವಿ ಕೊರೆದಿದೆ. ಅದರಲ್ಲೂ ಅಬ್ದುಲ್ ನಜೀರ್ ಸಾಬ್ ಅವರು ಸಚಿವರಾಗಿದ್ದಾಗ, ಪ್ರತಿಹಳ್ಳಿಯಲ್ಲೂ ಕೊಳವೆಬಾವಿ ಕೊರೆಸಿ, `ನೀರ್ ಸಾಬ್’ ಎಂಬ ಬಿರುದಿಗೂ ಕಾರಣವಾಗಿದೆ.
ಈ ಸುದ್ದಿ ಓದಿದ್ದೀರಾ? ಲಡಾಖ್ | ಶೀಘ್ರದಲ್ಲೇ ಭಾರತದ ಮೊದಲ ರಾತ್ರಿ ಆಗಸ ವೀಕ್ಷಣಾಧಾಮ ಕಾರ್ಯಾರಂಭ
ವಿದ್ವತ್ತಿನ ಜೊತೆಗೆ ವಿವೇಕ ಮತ್ತು ವಿನಯ ಒಟ್ಟುಗೂಡಿದರೆ ಆಗುವ ಮೊತ್ತವೇ ಜಿತೇಂದ್ರಕುಮಾರ್. ಇಂತಹ ಜಿತೇಂದ್ರರಿಗೆ ಈಗ 87ರ ಹರೆಯ. ಅವರನ್ನು ನೀರು, ಅಂತರ್ಜಲ, ಕೊಳವೆಬಾವಿಗಳ ಬಗ್ಗೆ ಕೇಳಿದರೆ, `ಆಗ ಬರಗಾಲವಿತ್ತು. ನೀರಿಗೆ ಅಭಾವವಿತ್ತು. ಬಾವಿಗಳು ಬತ್ತಿಹೋಗಿದ್ದವು. ಕೊಳವೆಬಾವಿ ಕೊರೆಯುವುದು ಅನಿವಾರ್ಯವಾಗಿತ್ತು. ಆದರೆ ಕಾಲಾಂತರದಲ್ಲಿ ಕೊಳವೆಬಾವಿಗಳು ಅತಿಯಾಗಿ, ತೆರೆದ ಬಾವಿಗಳು ಮುಚ್ಚಲ್ಪಟ್ಟವು. ಇದು ಮಾನವ ಜನಾಂಗಕ್ಕೆ ಭವಿಷ್ಯದಲ್ಲಿ ಭಾರೀ ಹೊಡೆತ ಕೊಡಲಿದೆ. ಕೆರೆ-ಕಟ್ಟೆ-ಬಾವಿಗಳು ನಮ್ಮ ಜೀವಸೆಲೆಯುಕ್ಕಿಸುವ ಭಂಡಾರಗಳು. ಅವುಗಳನ್ನು ಕಾಪಿಟ್ಟುಕೊಳ್ಳಬೇಕಾದ್ದು ನಮ್ಮ ಆದ್ಯ ಕರ್ತವ್ಯ. ಕೊಳವೆ ಬಾವಿ ಕೊರೆತಕ್ಕೆ ಸ್ಪಷ್ಟ ನಿಯಮಾವಳಿ ರೂಪಿಸಿ, ಕಠಿಣವಾಗಿ ಅನುಷ್ಠಾನಗೊಳಿಸಬೇಕು ಹಾಗೂ ಅನವಶ್ಯಕ ಕೊರೆತವನ್ನು ನಿರ್ಬಂಧಿಸಲೇಬೇಕು. ಅಂತರ್ಜಲವನ್ನು ತುರ್ತಿಗಷ್ಟೇ ಬಳಸಬೇಕು. ಮಳೆನೀರಿನ ಸಂಗ್ರಹವನ್ನು ಎಲ್ಲ ವಿಧಾನದಲ್ಲೂ ಅಳವಡಿಸಿಕೊಳ್ಳುವುದೇ ಅತ್ಯುತ್ತಮ ಮಾದರಿ. ನೆಲದಲ್ಲಿ ದೊರೆಯುವ ಮುಖ್ಯ ಖನಿಜಗಳಿಗಿಂತ, ಬೆಲೆಬಾಳುವ ಲೋಹಗಳಿಗಿಂತ ಅಮೂಲ್ಯವಾದದ್ದು ಅಂತರ್ಜಲ. ಅದು ಸಂಪತ್ತು. ಅಂತರ್ಜಲವೂ ಕೂಡ ನೆಲದಲ್ಲಿ ಬೆಳೆಯುವ ಬೆಳೆ. ವರ್ಷ ವರ್ಷವೂ ಸತತವಾಗಿ ದೊರೆಯುವ ಸಂಪತ್ತು. ಆಪತ್ಕಾಲದಲ್ಲಿ ಒದಗುವ ನಿಧಿಯೆಂಬಂತೆ ಅದನ್ನು ಕಾಯ್ದು ಕಾಪಾಡಿಕೊಳ್ಳಬೇಕು. ದೈವದತ್ತವಾದ ಈ ಸಂಪತ್ತನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ದಾಟಿಸುವ ಸದ್ಭುದ್ಧಿ ನಮ್ಮಲ್ಲಿ ಬೆಳೆಯುವಂತಾಗಬೇಕು’ ಎನ್ನುತ್ತಾರೆ.
…ಹೌದು, ನೀರು ಸುಲಭಕ್ಕೆ ಸಿಗುವ, ಚಿಲ್ಲರೆಯಂತೆ ಚೆಲ್ಲುವ ವಸ್ತುವಲ್ಲ, ಜೀವಜಲ. ಈ ಜೀವಜಲ ಮುಂದಿನ ಪೀಳಿಗೆಯ ಜೀವ ಉಳಿಸಲಿದೆ. ಜೀವ ಉಳಿಯಬೇಕಾದರೆ ಜಲವನ್ನು ಉಳಿಸಿಕೊಳ್ಳಲೇಬೇಕಾಗಿದೆ.
ನಿಮ್ಮ ಲೇಖನ ಓದಿದೆ ಚೆನ್ನಾಗಿ ಮೂಡಿಬಂದಿದೆ ಹಾಗೂ ಬಹಳ ಅರ್ಥಗರ್ಭಿತವಾಗಿದೆ. ಇದಕ್ಕಾಗಿ ತಮಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಧನ್ಯವಾದಗಳು. ಇಂತಹ ಉಪಯುಕ್ತ ಲೇಖನಗಳು ಇನ್ನೂ ಹೆಚ್ಚು ಹೆಚ್ಚು ಮೂಡಿಬರಲೆಂದು ಅಪೇಕ್ಷಿಸುವೆ.