ರಾಜ್ಯ ಹೆದ್ದಾರಿ ಯಾದಗಿರಿಯಿಂದ-ವಿಜಯಪುರಕ್ಕೆ ಹೋಗುವ ರಸ್ತೆ ಹದೆಗಟ್ಟಿದ್ದು, ರಸ್ತೆ ನವೀಕರಣ ಮಾಡುವಂತೆ ಹಾಗೂ ನಗರಸಭೆ ಪಕ್ಕದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗುವ ರಸ್ತೆ ಡಾಂಬರೀಕರಣ ಮಾಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಭೀಮ ಘರ್ಜನೆ, ರಾಜ್ಯ ಸಮಿತಿ ಹಾಗೂ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ಮಾಡುವುದರ ಮೂಲಕ ಕಾರ್ಯಪಾಲಕ ಅಭಿಯಂತರರು ಲೋಕೋಪಯೋಗಿ ವಿಭಾಗ ಯಾದಗಿರಿ ಇವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿ ರಾಜ್ಯ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ ಮಾತನಾಡಿ, “ರಾಜ್ಯ ಹೆದ್ದಾರಿ ಯಾದಗಿರಿ-ವಿಜಯಪುರಕ್ಕೆ ಹೋಗುವ ರಸ್ತೆ ಹದೆಗಟ್ಟಿದೆ. ಇದೊಂದು ಮುಖ್ಯ ರಸ್ತೆಯಾಗಿದ್ದು, ಸಾವಿರಾರು ವಾಹನಗಳು ಓಡಾಡುತ್ತವೆ. ದೊಡ್ಡ-ದೊಡ್ಡ ಗುಂಡಿಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗಿದೆ. ದಿನನಿತ್ಯ ಅಪಘಾತಗಳು ಸಂಭವಿಸುತ್ತಿವೆ” ಎಂದು ಆತಂಕ ವ್ಯಕ್ತಪಡಿಸಿದರು.

ಈ ಬಗ್ಗೆ ಹಲವಾರು ಬಾರಿ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಈ ರಸ್ತೆ ನವೀಕರಣ ಮಾಡಲು ಮುಂದಾಗಬೇಕು ಹಾಗೂ ನಗರಸಭೆ ಪಕ್ಕದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗುವ ರಸ್ತೆ ಕೂಡಾ ಹದೆಗೆಟ್ಟಿದ್ದು, ಸಾರ್ವಜನಿಕರು ನಿತ್ಯ ಓಡಾಡುವ ರಸ್ತೆಯಾಗಿದೆ. ಈ ರಸ್ತೆಯನ್ನು ಕೂಡ ಡಾಂಬರೀಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಲೋಕೋಪಯೋಗಿ ಕಛೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಗ್ರೌಂಡ್ ರಿಪೋರ್ಟ್ | ಕಡಕೋಳ ಗಲಭೆ: ಗ್ರಾಮವನ್ನೇ ತೊರೆದ 70ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳು!
ಈ ಸಂದರ್ಭದಲ್ಲಿ ರಾಜ್ಯ ಖಜಾಂಚಿ ಡಾ. ದೊಡ್ಡಪ್ಪ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಶೇಖಪ್ಪ ಕಾಡಂಗೇರಾ, ನೀಲಿ ಸೇನೆ ರಾಜ್ಯ ಉಪಾಧ್ಯಕ್ಷ ಜಾಫರ್ ಹುಸೇನ್, ಜಿಲ್ಲಾ ಸಂಚಾಲಕ ಮಾನಪ್ಪ ಕಲ್ಲದೇವನಹಳ್ಳಿ, ರಾಜ್ಯ ಸಮಿತಿ ಸದಸ್ಯ ಮರಪ್ಪ ಕನ್ಯಾಕೋಳೂರು, ಜಿಲ್ಲಾ ಉಪಾಧ್ಯಕ್ಷ ಎಮ್.ಡಿ.ಲಾಲಸಾಬ್ ಇನ್ನಿತರರು ಉಪಸ್ಥಿತರಿದ್ದರು.
