ಭ್ರಷ್ಟಾಚಾರದ ವಿರುದ್ಧ ದೂರು ನೀಡುವವರನ್ನು ರಕ್ಷಿಸುವ ಬದಲು, ಅವರ ಬಾಯಿ ಮುಚ್ಚಿಸಲು ಯಾದಗಿರಿ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮುಂದಾಗಿದ್ದಾರೆಯೇ ಎಂಬ ಗಂಭೀರ ಅನುಮಾನಗಳು ಹುಟ್ಟಿಕೊಂಡಿವೆ.
ಇದಕ್ಕೆ ಪುಷ್ಠಿ ನೀಡುವಂತೆ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹೊರಡಿಸಿರುವ ‘ವಸೂಲಾತಿ ನೋಟೀಸ್’ಗಳಲ್ಲಿ ಅಧಿಕಾರಿಗಳ ಅಸಡ್ಡೆ, ಬೇಜವಾಬ್ದಾರಿತನ ಹಾಗೂ ದಿನಾಂಕಗಳ ಮಹಾ ಯಡವಟ್ಟುಗಳು ಬಯಲಾಗಿವೆ. ಅಚ್ಚರಿ ಎಂದರೆ, ಇನ್ನೂ ಬರದೇ ಇರುವ ‘ಭವಿಷ್ಯದ’ ದಿನಾಂಕವನ್ನು ಉಲ್ಲೇಖಿಸಿ ದೂರುದಾರರಿಗೆ ನೊಟೀಸ್ ಜಾರಿ ಮಾಡಲಾಗಿದೆ.
ಜನ ಆಕ್ರೋಶ ಪತ್ರಿಕೆಯ ಸಂಪಾದಕ ಲಕ್ಷ್ಮೀಕಾಂತ್ ನಾಯಕ್ ಅವರಿಗೆ ನೀಡಲಾದ ನೊಟೀಸ್(ಸಂಖ್ಯೆ: ಜಿಪಂಯಾ/ಆಡಳಿತ/2026-27, ದಿನಾಂಕ: 13.04.2026) ಅಧಿಕಾರಿಗಳ ಬೇಜವಾಬ್ದಾರಿಗೆ ಕನ್ನಡಿ ಹಿಡಿದಿದೆ. ನೊಟೀಸ್ ಜಾರಿಯಾದ ದಿನಾಂಕ: 13-04-2026 (ಏಪ್ರಿಲ್ 13, 2026) ನೋಟೀಸ್ನಲ್ಲಿ ಉಲ್ಲೇಖಿಸಿರುವ ದೂರು ಹಿಂಪಡೆದ ದಿನಾಂಕ (ಉಲ್ಲೇಖ-2): 05-11-2026(ನವೆಂಬರ್ 05, 2026) ಏಪ್ರಿಲ್ ತಿಂಗಳಲ್ಲಿ ನೊಟೀಸ್ ಟೈಪ್ ಮಾಡುವ ಅಧಿಕಾರಿಗೆ, ದೂರುದಾರರು ಮುಂದಿನ ನವೆಂಬರ್ ತಿಂಗಳಲ್ಲಿ ದೂರು ಹಿಂಪಡೆಯಲಿದ್ದಾರೆ ಎಂಬ ಭವಿಷ್ಯ ಮೊದಲೇ ಗೊತ್ತಿತ್ತೇ? ಕನಿಷ್ಠ ತಾವು ಏನು ಟೈಪ್ ಮಾಡುತ್ತಿದ್ದೇವೆ, ಯಾವ ದಿನಾಂಕ ಹಾಕುತ್ತಿದ್ದೇವೆ ಎಂಬ ಪರಿಜ್ಞಾನವೂ ಇಲ್ಲದೆ ನೊಟೀಸ್ ಜಾರಿ ಮಾಡಲಾಗಿದೆ.
ಇನ್ನೊಂದು ಪ್ರಕರಣದಲ್ಲಿ, ಶಹಾಪುರದ ಭೀಮಾಶಂಕರ್ ನಾಟೇಕರ್ ಸಾಮಾಜಿಕ ಅರಣ್ಯ ವಲಯದಲ್ಲಿ ನರೇಗಾ ಯೋಜನೆಯಡಿ ನಡೆದಿರುವ ಅಕ್ರಮದ ಕುರಿತು 2025ರ ಮಾರ್ಚ್ 11ರಂದು ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರಿನ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು(ದಿನಾಂಕ: 21-03-2025 ರ ಪತ್ರ) “ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕು” ಎಂದು ಯಾದಗಿರಿ ಜಿ ಪಂ ಸಿಇಒಗೆ ಸ್ಪಷ್ಟ ನಿರ್ದೇಶನ ನೀಡಿದ್ದರು.
ಆದರೆ, ನರೇಗಾ ಹಗರಣದ ತನಿಖೆ ನಡೆಸಿ ಭ್ರಷ್ಟರ ಮೇಲೆ ಕ್ರಮ ಕೈಗೊಳ್ಳಬೇಕಿದ್ದ ಜಿ.ಪಂ. ಅಧಿಕಾರಿಗಳು ಅದನ್ನು ಬಿಟ್ಟು 2026ರ ಏಪ್ರಿಲ್ 13ರಂದು ದೂರುದಾರ ಭೀಮಾಶಂಕರ್ ಅವರಿಗೇ ʼನಿಮ್ಮ ದೂರು ಸುಳ್ಳು, ಆಧಾರರಹಿತʼ ಎಂದು ಷರಾ ಬರೆದು ದಂಡ ಪಾವತಿಸುವಂತೆ ನೊಟೀಸ್ ನೀಡಿದ್ದಾರೆ.
ಹೋರಾಟಗಾರರ ಎದುರಾಗಿ ದಂಡದ ಅಸ್ತ್ರ, ಕಪ್ಪು ಪಟ್ಟಿಯ ಬೆದರಿಕೆ ಹಾಕಿದ್ದಾರೆ. ದೂರುದಾರರು ದೂರು ನೀಡಿದ್ದರಿಂದ ಕಚೇರಿಯ ಸಮಯ ವ್ಯರ್ಥವಾಗಿದೆ. ಸ್ಥಳ ಪರಿಶೀಲನೆಗೆ ಖರ್ಚಾಗಿದೆ ಎಂದು ಹೇಳಿ ಲಕ್ಷ್ಮೀಕಾಂತ್ ನಾಯಕ್ ಅವರಿಗೆ ₹6,500 ಹಾಗೂ ಭೀಮಾಶಂಕರ್ ಅವರಿಗೆ ₹6,200 ದಂಡವನ್ನು 7 ದಿನಗಳೊಳಗೆ ಪಾವತಿಸುವಂತೆ ತಾಕೀತು ಮಾಡಲಾಗಿದೆ.
ಅಲ್ಲದೆ, ಭಾರತೀಯ ನ್ಯಾಯ ಸಂಹಿತೆಯ ಕಠಿಣ ಸೆಕ್ಷನ್ಗಳ (212, 217, 236, 240, 248) ಅಡಿ ಜೈಲು ಶಿಕ್ಷೆ ಮತ್ತು ದಂಡದ ಬೆದರಿಕೆ ಹಾಕಲಾಗಿದೆ. ಜತೆಗೆ ಮುಂದೆ ಕಚೇರಿಗೆ ದೂರು ನೀಡದಂತೆ ʼಕಪ್ಪು ಪಟ್ಟಿʼಗೆ ಸೇರಿಸುವ ಎಚ್ಚರಿಕೆ ನೀಡಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಅನ್ಯಾಯದ ವಿರುದ್ಧ ದ್ವನಿ ಎತ್ತುವವರನ್ನು, ಸಾಮಾಜಿಕ ಕಾರ್ಯಕರ್ತರನ್ನು ಹಾಗೂ ಪತ್ರಕರ್ತರನ್ನು ಆಡಳಿತಾತ್ಮಕ ವೆಚ್ಚದ ಹೆಸರಿನಲ್ಲಿ ದಂಡ ವಿಧಿಸಿ ಬೆದರಿಸುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ.
ಅಧಿಕೃತ ದಾಖಲೆಗಳಲ್ಲಿ ದಿನಾಂಕಗಳನ್ನೇ ಸರಿಯಾಗಿ ನಮೂದಿಸಲು ಬಾರದ ಅಧಿಕಾರಿಗಳು, ಇನ್ನು ಭ್ರಷ್ಟಾಚಾರದ ತನಿಖೆಯನ್ನು ಎಷ್ಟು ಸಮರ್ಪಕವಾಗಿ ಮಾಡಬಲ್ಲರು? ಅರಣ್ಯ ಇಲಾಖೆಯ ಮೇಲಧಿಕಾರಿಗಳು ತನಿಖೆಗೆ ಆದೇಶಿಸಿದರೂ, ಅಕ್ರಮವೆಸಗಿದ ಅಧಿಕಾರಿಗಳನ್ನು ರಕ್ಷಿಸಿ ದೂರುದಾರರನ್ನೇ ಟಾರ್ಗೆಟ್ ಮಾಡುತ್ತಿರುವುದು ಏಕೆ?
ಸಾರ್ವಜನಿಕರು ಮತ್ತು ಪತ್ರಕರ್ತರು ದೂರು ನೀಡಿದರೆ ದಂಡ ಹಾಕಿ ಕಪ್ಪು ಪಟ್ಟಿಗೆ ಸೇರಿಸಲು ಇದು ಬ್ರಿಟಿಷರ ಆಡಳಿತವೇ? ಈ ಕೂಡಲೇ ಸರ್ಕಾರ ಹಾಗೂ ಮೇಲಧಿಕಾರಿಗಳು ಯಾದಗಿರಿ ಜಿಲ್ಲಾ ಪಂಚಾಯತ್ನಲ್ಲಿ ನಡೆದಿರುವ ನರೇಗಾ ಹಗರಣಗಳ ಬಗ್ಗೆ ಮತ್ತು ಇಂತಹ ಪ್ರಮಾದಭರಿತ ಹಾಗೂ ಬೆದರಿಕೆ ಒಡ್ಡುವ ನೋಟೀಸ್ಗಳನ್ನು ಜಾರಿ ಮಾಡಿದ ಅಧಿಕಾರಿಗಳ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಭ್ರಷ್ಟಾಚಾರದ ವಿರುದ್ಧ ದೂರು ನೀಡುವವರನ್ನು ರಕ್ಷಿಸದೆ, ಅವರನ್ನು ಹಿಂಸಿಸುವ ಅಥವಾ ಬೆದರಿಸುವ ಪ್ರಯತ್ನ ನಡೆದರೆ ಅದು ಜನತಂತ್ರಕ್ಕೆ ದೊಡ್ಡ ಬೆದರಿಕೆಯಾಗಿದೆ. ಜಿಲ್ಲಾ ಪಂಚಾಯತ್ ಅಧಿಕಾರಿಗಳು(ಸಿಇಒ, ಡಿಸಿ) ಈ ಬಗ್ಗೆ ಪಾರದರ್ಶಕ ತನಿಖೆ ನಡೆಸಿ, ದೂರು ನೀಡುವವರಿಗೆ ಸುರಕ್ಷತೆ ಒದಗಿಸಬೇಕು. ಇಲ್ಲದಿದ್ದರೆ, ರಾಜ್ಯ ಸರ್ಕಾರ, ಲೋಕಾಯುಕ್ತ ಅಥವಾ ಮಾಧ್ಯಮಗಳ ಮುಂದೆ ವಿಷಯ ತರುವುದು ಅಗತ್ಯವಾಗಿದೆ.
ಭ್ರಷ್ಟಾಚಾರ ನಿರ್ಮೂಲನೆಗೆ ಸಕ್ರಿಯ ನಾಗರಿಕರು ಅಗತ್ಯ. ಹಾಗಾಗಿ ಅವರನ್ನು ರಕ್ಷಿಸದಿದ್ದರೆ ವ್ಯವಸ್ಥೆಯೇ ದುರ್ಬಲವಾಗುತ್ತದೆ. ಪಾರದರ್ಶಕತೆ ಮತ್ತು ಜವಾಬ್ದಾರಿ ಇದೇ ನಿಜವಾದ ಪರಿಹಾರ.




