ಚಿತ್ರದುರ್ಗದಂತಹ ಜಿಲ್ಲೆಗಳಲ್ಲಿ RTI ಅನುಷ್ಠಾನವನ್ನು ಬಲಪಡಿಸುವುದು ಮತ್ತು ಅಧಿಕಾರಿಗಳ ಜವಾಬ್ದಾರಿಯನ್ನು ಖಚಿತಪಡಿಸುವುದು ಇಂದಿನ ಅಗತ್ಯ. ಜನರು ತಮ್ಮ ಹಕ್ಕುಗಳಿಗಾಗಿ ಜಾಗೃತರಾಗಿ, ಕಾನೂನು ಮಾರ್ಗಗಳನ್ನು ಬಳಸಬೇಕು. ಇಲ್ಲದಿದ್ದರೆ, ಆಡಳಿತದಲ್ಲಿ ಪಾರದರ್ಶಕತೆ ಕೇವಲ ಕಾಗದದ ಮೇಲೆಯೇ ಉಳಿಯುತ್ತದೆ.
ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯ ಹೊರಡಿಸಿರುವ ಕಟ್ಟುನಿಟ್ಟಿನ ಆದೇಶಗಳನ್ನು ಚಿತ್ರದುರ್ಗದ ಕೆಲವು ಸಾರ್ವಜನಿಕ ಸೇವಕರು ಗಾಳಿಗೆ ತೂರಿರುವುದು ಬೆಳಕಿಗೆ ಬಂದಿದೆ.
ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ನಿರ್ವಹಿಸಬೇಕಾದ ʼನಗದು ಘೋಷಣೆ ವಹಿʼ ಕುರಿತು ಮಾಹಿತಿ ಹಕ್ಕು ಕಾಯಿದೆ ಅಡಿ ಮಾಹಿತಿ ಕೇಳಿದರೆ, ಅಧಿಕಾರಿಗಳು ನಾನಾ ಕುಂಟುನೆಪಗಳನ್ನು ಒಡ್ಡಿ ಮಾಹಿತಿ ನೀಡದೆ ಕಳ್ಳಾಟವಾಡುತ್ತಿದ್ದಾರೆ. ಅರ್ಜಿದಾರರಾಗಿರುವ ಪಿ. ದೀಪ ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಗಳಿಗೆ ವಿವಿಧ ಇಲಾಖೆಗಳು ನೀಡಿರುವ ಹಿಂಬರಹಗಳು ಅಧಿಕಾರಿಗಳ ಉದ್ಧಟತನ ಮತ್ತು ಕಾಯಿದೆಯ ದುರ್ಬಳಕೆಯನ್ನು ಸ್ಪಷ್ಟವಾಗಿ ತೋರಿಸುತ್ತಿವೆ.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು, ಹಿಂದಿನ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ 2021ನೇ ಸಾಲಿನಲ್ಲಿ ಮಹತ್ವದ ಆದೇಶ ಹೊರಡಿಸಿದ್ದರು. ಇದರ ಅನ್ವಯ ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪ್ರತಿದಿನ ಕೆಲಸದ ಸಮಯದಲ್ಲಿ ‘ನಗದು ಘೋಷಣೆ ವಹಿ’ಯನ್ನು ಕಡ್ಡಾಯವಾಗಿ ನಿರ್ವಹಣೆ ಮಾಡುವುದು ಆದ್ಯ ಕರ್ತವ್ಯವಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯ ಕೂಡ WRIT PETITION(ರಿಟ್ ಅರ್ಜಿ) NO: 79/2021(GM-KLA)ರಲ್ಲಿ ಈ ಕುರಿತು ಸ್ಪಷ್ಟ ಆದೇಶ ನೀಡಿದೆ. ಆದಾಗ್ಯೂ, ಅಧಿಕಾರಿಗಳು ಈ ಆದೇಶಗಳನ್ನು ಪಾಲಿಸುತ್ತಿಲ್ಲ.

ಸಮಾಜ ಕಲ್ಯಾಣ ಇಲಾಖೆ, ಸಹಾಯಕ ನಿರ್ದೇಶಕರು, ಗ್ರೇಡ್ 1 ದಿನಾಂಕ 05-02-2026 ರಂದು ನೀಡಿರುವ ಹಿಂಬರಹದಲ್ಲಿ, ಆರ್‌ಟಿಐ ಕಾಯಿದೆಯ ಸೆಕ್ಷನ್ 8(1)(ಇ) ಮತ್ತು 8(1)(ಜೆ) ಅಡಿ ಇದು ‘ವೈಯಕ್ತಿಕ ಮಾಹಿತಿ’ ಎಂದು ನೆಪವೊಡ್ಡಿ, ಅರ್ಜಿಯನ್ನು ಏಕಪಕ್ಷೀಯವಾಗಿ ವಿಲೇವಾರಿ ಮಾಡಲಾಗಿದೆ. ನ್ಯಾಯಾಲಯದ ಆದೇಶದ ಅಡಿ ನಿರ್ವಹಿಸಬೇಕಾದ ಸಾರ್ವಜನಿಕ ವಹಿಯನ್ನು ವೈಯಕ್ತಿಕ ಮಾಹಿತಿ ಎನ್ನುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ.
ಜನವರಿ 31ರ ಪತ್ರದಲ್ಲಿ, ʼಕಚೇರಿಯಲ್ಲಿ ನಗದು ಘೋಷಣಾ ವಹಿಯನ್ನು ನಿರ್ವಹಿಸಲಾಗುತ್ತಿದೆʼ ಎಂದು ಒಪ್ಪಿಕೊಂಡಿರುವ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಅದನ್ನು ಒದಗಿಸಲು ಕಾಯಿದೆ ಕಲಂ 8(1)(ಜೆ) ಪ್ರಕಾರ ʼನೌಕರರ ವೈಯಕ್ತಿಕ ಮಾಹಿತಿʼ ಎಂದು ಹೇಳಿ ನಿರಾಕರಿಸಿದ್ದಾರೆ.

ಫೆಬ್ರವರಿ 2ರಂದು ಮಾಹಿತಿ ಹಕ್ಕು ಅರ್ಜಿಯನ್ನು ತಿರಸ್ಕರಿಸಿರುವ ಕಚೇರಿ ಅಧೀಕ್ಷಕರು, ಅರ್ಜಿದಾರರು ʼಇಂಡಿಯನ್ ಪೋಸ್ಟಲ್ ಆರ್ಡರ್ ಪ್ರತಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು ಮತ್ತು ಪದನಾಮವನ್ನು ತಪ್ಪಾಗಿ ನಮೂದಿಸುತ್ತೀರಿʼ ಎಂಬ ಕ್ಷುಲ್ಲಕ ಕಾರಣ ನೀಡಿ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ. ಇದೇ ರೀತಿ ಫೆಬ್ರವರಿ 23ರಂದು ಹಿಂಬರಹ ನೀಡಿರುವ ತಾಲೂಕು ಅಧಿಕಾರಿಗಳು, ಪೋಸ್ಟಲ್ ಆರ್ಡರನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಯ ಹೆಸರಿನಲ್ಲಿ ಸಲ್ಲಿಸಿಲ್ಲ ಎಂಬ ನೆಪವೊಡ್ಡಿ ಅರ್ಜಿಯನ್ನು ವಿಲೇಪಡಿಸಿದ್ದಾರೆ.

ರಾಜ್ಯದಲ್ಲಿ ಕೆಲವು ಭ್ರಷ್ಟ ಅಧಿಕಾರಿಗಳು ಸರ್ಕಾರಿ ಕಚೇರಿಗಳನ್ನು ತಮ್ಮ ಪಿತ್ರಾರ್ಜಿತ ಆಸ್ತಿಯಂತೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕರು ಭ್ರಷ್ಟಾಚಾರದ ವಿರುದ್ಧ ಕರಾರುವಕ್ಕಾದ ಮಾಹಿತಿ ಕೇಳಿದಾಗ, ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 8(1)(ಜೆ) ಮತ್ತು (ಇ) ನಿಯಮಗಳನ್ನು ಮುಂದಿಟ್ಟುಕೊಂಡು ಜಾರಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಮೇಲಧಿಕಾರಿಗಳು ಸರಿಯಾದ ರೀತಿಯಲ್ಲಿ ಕಚೇರಿಗಳ ತಪಾಸಣೆ ಮತ್ತು ನಿಗಾವಹಿಸದೆ ಇರುವುದೇ ಇಂತಹ ಅಧಿಕಾರಿಗಳ ಉದ್ಧಟತನಕ್ಕೆ ಮುಖ್ಯ ಕಾರಣವಾಗಿದೆ.
ಇದನ್ನೂ ಓದಿದ್ದೀರಾ? ಬಾಗಲಕೋಟೆ | ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ, ಗ್ಯಾರೆಂಟಿ ಸೇವೆಗೆ ಬೆಂಬಲಿಸಿ: ಡಾ.ಯತೀಂದ್ರ ಸಿದ್ದರಾಮಯ್ಯ ಮತಯಾಚನೆ
ರಾಜ್ಯದ ಶಾಲೆಗಳಲ್ಲಿ ಪ್ರಾರ್ಥನೆಯ ಹೊತ್ತಿನಲ್ಲಿ ಈ ನಿಯಮಗಳ ಬಗ್ಗೆ ಓದಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಹೊಣೆಗಾರಿಕೆ ಸ್ಥಾನದಲ್ಲಿರುವ ಅಧಿಕಾರಿಗಳು ನ್ಯಾಯಾಲಯದ ಆದೇಶಕ್ಕೆ ಬೆಲೆ ಕೊಡದೆ ಸಾರ್ವಜನಿಕ ಸೇವೆಗೆ ನೇರ ದ್ರೋಹ ಬಗೆಯುತ್ತಿದ್ದಾರೆ. ಈ ಕೂಡಲೇ ಸಂಬಂಧಪಟ್ಟ ಉನ್ನತ ಮೇಲಧಿಕಾರಿಗಳು ಮತ್ತು ಇಲಾಖಾ ಮುಖ್ಯಸ್ಥರು, ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಕರ್ತವ್ಯಲೋಪ ಎಸಗಿರುವ ಈ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ನ್ಯಾಯಾಲಯದ ಆದೇಶಕ್ಕೂ ಬೆಲೆ ಕೊಡದ ಅಧಿಕಾರಿಗಳ ಈ ಹಿಂದೇಟು ಪಾರದರ್ಶಕತೆಯ ಶತ್ರು ಮತ್ತು ಜನತಂತ್ರದ ದೌರ್ಬಲ್ಯ. ಇಂತಹ ಪ್ರಕರಣಗಳು ಹೆಚ್ಚಾದರೆ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಬೇಕು. ಜತೆಗೆ ದಂಡ, ಶಿಸ್ತು ಕ್ರಮ ಮತ್ತು ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡುವುದು ಅಗತ್ಯವಾಗಿದೆ.
ಚಿತ್ರದುರ್ಗದಂತಹ ಜಿಲ್ಲೆಗಳಲ್ಲಿ RTI ಅನುಷ್ಠಾನವನ್ನು ಬಲಪಡಿಸುವುದು ಮತ್ತು ಅಧಿಕಾರಿಗಳ ಜವಾಬ್ದಾರಿಯನ್ನು ಖಚಿತಪಡಿಸುವುದು ಇಂದಿನ ಅಗತ್ಯ. ಜನರು ತಮ್ಮ ಹಕ್ಕುಗಳಿಗಾಗಿ ಜಾಗೃತರಾಗಿ, ಕಾನೂನು ಮಾರ್ಗಗಳನ್ನು ಬಳಸಬೇಕು. ಇಲ್ಲದಿದ್ದರೆ, ಆಡಳಿತದಲ್ಲಿ ಪಾರದರ್ಶಕತೆ ಕೇವಲ ಕಾಗದದ ಮೇಲೆಯೇ ಉಳಿಯುತ್ತದೆ.



