2024ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಆಂಧ್ರಪ್ರದೇಶದ ರಾಜಂಪೇಟ್‌ನ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿಯವರು ವಿಪಕ್ಷಗಳ ವಿರುದ್ಧ ಸುಳ್ಳು ಹೇಳುವಲ್ಲಿ ಉತ್ಸಾಹಭರಿತರಾಗಿದ್ದರು.
“ರೈತರು ಇಲ್ಲಿ ಹೆಣಗಾಡುತ್ತಿದ್ದಾರೆ ಮತ್ತು ಯುವಜನರು ಇತರ ನಗರಗಳಲ್ಲಿ ಉದ್ಯೋಗಕ್ಕಾಗಿ ಅಲೆಯುತ್ತಿದ್ದಾರೆ. ಇದು ಬದಲಾವಣೆಯ ಸಮಯವಲ್ಲವೇ? ಹಾಗಾದರೆ, ಪರಿಹಾರವೇನು? ಅಂದರೆ ಆಂಧ್ರಪ್ರದೇಶದ ಪರಿಸ್ಥಿತಿಯನ್ನು ಬದಲಾಯಿಸಲು ಡಬಲ್ ಎಂಜಿನ್ ಸರ್ಕಾರ ನಿರ್ಮಾಣ ಮಾಡಬೇಕು” ಎಂದು ಪ್ರಧಾನಿ ಮೋದಿ ಮತದಾರರನ್ನು ಹುರಿದುಂಬಿಸಿದ್ದಾರೆ.
ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ರೈತ ಸಾಲ ಮನ್ನಾಕ್ಕಾಗಿ ಆಗ್ರಹಿಸಿ ನಡೆದ ‘ದೆಹಲಿ ಚಲೋ’ ಹೋರಾಟಕ್ಕೆ ರೈತರು ಮುಂದಾದಾಗ ರೈತರು ದೆಹಲಿ ತಲುಪದಂತೆ ತಡೆಯಲು ಹರಿಯಾಣ ಮತ್ತು ಕೇಂದ್ರ ಬಿಜೆಪಿ ಸರ್ಕಾರಗಳು ಭಾರೀ ಪ್ರಯತ್ನ ನಡೆಸಿದವು. ರೈತರ ಮೇಲೆ ಟಿಯರ್ ಗ್ಯಾಸ್, ರಬ್ಬರ್ ಗುಂಡಿನ ದಾಳಿಗಳೂ ನಡೆದವು. ಆರು ಮಂದಿ ರೈತರು ಸಾವನ್ನಪ್ಪಿದ್ದರು. ಆದರೂ, ಸರ್ಕಾರದ ದಮನಕ್ಕೆ ಬಗ್ಗದ ರೈತರು ಹೋರಾಟ ಮುಂದುವರೆಸಿದ್ದರು.
ಈ ಹಿಂದೆಯೇ, ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡುವುದಾಗಿ ಭರವಸೆ ನೀಡಿದ್ದ ಮೋದಿ ಈಗಾಗಲೇ ವಿಫಲರಾಗಿದ್ದಾರೆ. ಮತ್ತೊಮ್ಮೆ ಯುವ ಮತದಾರರು ಮತ್ತು ರೈತರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಮತಬೇಟೆ ನಡೆಸುತ್ತಿದ್ದಾರೆ. ರೈತರನ್ನು ಮತ ಹಾಕುವಂತೆ ಕೇಳುವ ಮೋದಿ ನಿಜವಾಗಿಯೂ ಲಜ್ಜೆಗೆಟ್ಟವರಲ್ಲವೇ? ದೇವಸ್ಥಾನಗಳನ್ನು ನಿರ್ಮಾಣ ಮಾಡಿ ಅದರಲ್ಲಿ ಉದ್ಯೋಗ ಸೃಷಿಸುವುದಾಗಿ ಹೇಳುವ ಮೋದಿ ಗ್ರಾಜ್ಯುಯೇಟ್‌ಗಳಿಗೆ ನೀಡುವ ಉದ್ಯೋಗವಾದರು ಏನು? ಈ ಕುರಿತು ಯುಜನರು ಚಿಂತಿಸಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
ಇದೀಗ “ಮುಂದಿನ 5 ವರ್ಷಗಳಲ್ಲಿ ನಾವು ಟೊಮೆಟೊದಂತಹ ತರಕಾರಿಗಳಿಗಾಗಿ ವಿಶೇಷ ಶೇಖರಣಾ ಕ್ಲಸ್ಟರ್‌ಗಳನ್ನು ಸ್ಥಾಪಿಸುತ್ತೇವೆ. ಪುಲಿವೆಂಡುಲಾದಲ್ಲಿ ಬಾಳೆ ಸಂಸ್ಕರಣಾ ಕ್ಲಸ್ಟರ್ ಈಗಾಗಲೇ ಉತ್ತಮ ಯಶಸ್ಸನ್ನು ಕಂಡಿದೆ. ಇದು ರೈತರು ಮತ್ತು ಯುವಕರಿಗೆ ಪ್ರಯೋಜನವನ್ನು ನೀಡುತ್ತದೆ. ಮುಂದಿನ 5 ವರ್ಷಗಳಲ್ಲಿ, ನಾವು ಆಹಾರ ಸಂಸ್ಕರಣಾ ಉದ್ಯಮವನ್ನು ಮತ್ತಷ್ಟು ವಿಸ್ತರಿಸುವ ಗುರಿ ಹೊಂದಿದ್ದೇವೆ. ಹೆಚ್ಚುವರಿಯಾಗಿ, ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒಗಳು) ಈ ಪ್ರಯತ್ನದಲ್ಲಿ ಸಹಾಯವನ್ನು ಪಡೆಯುತ್ತವೆ” ಎಂದು ಸುಳ್ಳು ಭರವಸೆ ನೀಡಿದರು.
ಅಂಬಾನಿ ಮತ್ತು ಆದಾನಿಯಂತಹ ಉದ್ಯಮಿಗಳ ಅನುಕೂಲಕ್ಕಾಗಿ ಯಾರ ಅನುಮತಿ ಇಲ್ಲದೆ ರಾತ್ರೋ ರಾತ್ರಿ ಕೃಷಿ ಕಾಯಿದೆಗಳನ್ನು ಜಾರಿಗೆ ತರುವ ಮೋದಿಯಿಂದ ರೈತರ ಸಂಕಷ್ಟಕ್ಕೆ ನಿಜವಾಗಿಯೂ ಸಾಂತ್ವನ ಸಿಗುತ್ತದೆಯೇ? ಈಗಲೇ ರೈತರ ಸಂಕಷ್ಟಕ್ಕೆ ಸ್ಪಂದಿಸದ, ಬರಪರಿಹಾರಗಳನ್ನು ನೀಡದ ಮೋದಿ ವೋಟ್ ಬ್ಯಾಂಕ್‌ಗಾಗಿ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ.
“ವೈಎಸ್ಆರ್ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದಾಗ ಆಂಧ್ರಪ್ರದೇಶದ ಜನರು ಹೆಚ್ಚಿನ ಭರವಸೆಗಳನ್ನು ಹೊಂದಿದ್ದರು. ಆದರೆ ಅವರು ನಿಮಗೆ ದ್ರೋಹ ಬಗೆದಿದ್ದಾರೆ? ಅಭಿವೃದ್ಧಿಯ ಬದಲು, ಅವರು ಬಡವರ ಅಗತ್ಯಗಳನ್ನು ನಿರ್ಲಕ್ಷಿಸಿ ಮಾಫಿಯಾ ಸಂಸ್ಕೃತಿಯನ್ನು ಬೆಳೆಸಿದ್ದಾರೆ. ವೈಎಸ್ಆರ್ ಕಾಂಗ್ರೆಸ್ ಸಚಿವರು ಗೂಂಡಾಗಿರಿಯಲ್ಲಿ ತೊಡಗಿದ್ದು, ಕಾನೂನುಬಾಹಿರತೆ ಮೆರೆಯುತ್ತಿರುವುದು ಆಘಾತಕಾರಿಯಾಗಿದೆ” ಎಂದು ಆಂಧ್ರಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ವೈಎಸ್ಆರ್ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ.
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾದಾಗ ಪಶ್ಚಿಮ ಬಂಗಾಳದಲ್ಲಿ ಕಲ್ಲು ತೂರಾಟದ ವರದಿಗಳು ಬಂದಿದ್ದವು.
“ಪ್ರಮುಖ ಕ್ಷೇತ್ರಗಳಾದ ಕೂಚ್ ಬೆಹಾರ್, ಜಲ್ಪೈಗುರಿ ಮತ್ತು ಅಲಿಪುರ್‌ದವಾರ್‌ನಲ್ಲಿ ಮತದಾನ ನಡೆದ ವೇಳೆ, ಸೋಲಿನ ಭೀತಿಯಿಂದ ಬಿಜೆಪಿ ಬೆಂಬಲಿಗರು ಟಿಎಂಸಿ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಈ ಮೂರು ಕ್ಷೇತ್ರಗಳಲ್ಲಿ ಹೀನಾಯವಾಗಿ ಸೋಲುವುದು ಬಿಜೆಪಿಗೆ ತಿಳಿದುಬಂದಿದೆ. ಆದ್ದರಿಂದ ಮೊದಲ ಗಂಟೆಯಿಂದಲೇ ಅವರು ಗೂಂಡಾಗಿರಿಯ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಅಲ್ಲದೆ ಪ್ರತಿ ಕ್ಷೇತ್ರದಲ್ಲೂ ನಮ್ಮ ಟಿಎಂಸಿ ಕಾರ್ಯಕರ್ತರನ್ನು ಹೊಡೆಯಲಾಗುತ್ತಿದೆ. ಪ್ರಮುಖ ಕ್ಷೇತ್ರಗಳಲ್ಲಿ ಸೋಲಿನ ನಿರೀಕ್ಷೆಯಲ್ಲಿ ಗೂಂಡಾಗಿರಿ ನಡೆಸುತ್ತಿರುವುದು ಗಮನಾರ್ಹವಾಗಿದೆ” ತೃಣಮೂಲ ಕಾಂಗ್ರೆಸ್(ಟಿಎಂಸಿ) ನಾಯಕ ಸಂತಾನು ಸೇನ್ ಆರೋಪಿಸಿದ್ದರು.
“ಬಿಜೆಪಿಯವರು ಗೂಂಡಾಗಿರಿ ನಡೆಸುತ್ತಿದ್ದು, ಎಎಪಿ ಶಾಸಕರಿಗೆ ಪಕ್ಷ ತೊರೆಯುವಂತೆ ಕರೆಗಳು ಬರುತ್ತಿವೆ. ಇದರಿಂದ ದೇಶಕ್ಕೆ ಹಾನಿಯಾಗಲಿದೆ” ಎಂದು ಎಎಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸಂದೀಪ್ ಪಾಠಕ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.
हर जगह आम आदमी पार्टी के विधायकों को कॉल आ रहे हैं । कह रहे हैं “जो चाहिए बोलो मिल जाएगा, नहीं आये तो तुम्हारी ख़ैर नहीं”। दिल्ली पंजाब की जनता ने इतनी उम्मीद से केजरीवाल को चुना है , और ये जनता का अधिकार है । भाजपा ये गुंडागर्दी किसी पार्टी से नहीं कर रही है बल्कि देश के साथ…
— Dr. Sandeep Pathak (@SandeepPathak04) March 28, 2024
ಹೀಗಿರುವಾಗ ನಮ್ಮ ಪ್ರಧಾನಿ ವಿಪಕ್ಷಗಳನ್ನು ಗೂಂಡಾಗಿರಿ ಮಾಡುತ್ತಿದ್ದಾರೆ ಎನ್ನುವುದು ವಿಪರ್ಯಾಸವೇ ಸರಿ. ತಮ್ಮದೇ ಪಕ್ಷದ ಉನ್ನತ ಹುದ್ದೆಯಲ್ಲಿರುವ ನಾಯಕರು, ಕೇಂದ್ರ ಮಂತ್ರಿಗಳು ಗೂಂಡಾಗಿರಿ ನಡೆಸಿದಾಗಲೂ ಮೌನ ಮುರಿಯದ ಮೋದಿಗೆ ವಿಪಕ್ಷಗಳನ್ನು ಟೀಕಿಸುವ ನೈತಿಕತೆ ಇದೆಯೇ?
“ಸರ್ಕಾರವು ಬಲವಾಗಿದ್ದಾಗ, ದೇಶವು ಬಲವಾಗಿರುತ್ತದೆ. ಗಲ್ಫ್‌ನಲ್ಲಿರುವ ಭಾರತೀಯರ ಬಗ್ಗೆ ಗೌರವ ಹೆಚ್ಚಾಗಿದೆ. ಕತಾರ್‌ನಲ್ಲಿನ ಬಿಕ್ಕಟ್ಟಿನಲ್ಲಿ ಸಿಲುಕಿದ್ದ ಭಾರತೀಯರನ್ನು ಮೋದಿ ಸುರಕ್ಷಿತವಾಗಿ ಮರಳಿ ಕರೆತಂದರು. ಹಾಗಾಗಿ ನಿಮ್ಮ ಪ್ರತಿ ಮತವೂ ಎನ್‌ಡಿಎಗೆ ಹೋಗಬೇಕು. ಮತ್ತೊಮ್ಮೆ ಮೋದಿ ಸರ್ಕಾರ ರಚನೆಗೆ ತಾವು ಬೆಂಬಲಿಸಬೇಕು” ಎಂದು ಮತದಾರರನ್ನು ತಮ್ಮ ಸುಳ್ಳಿನ ಮೂಲಕ ಒತ್ತಾಯಿಸಿದರು.
ಕಳೆದ ವರ್ಷ ಗುಜರಾತ್ ವಿಧಾನಸಭಾ ಚುನಾವಣೆಯ ಕುರಿತು ಅಹಮದಾಬಾದ್‌ನ ಸರಸ್‌ಪುರದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, “2014 ರಿಂದ ನಾವು ಗಲ್ಫ್ ಇಸ್ಲಾಮಿಕ್ ರಾಷ್ಟ್ರಗಳಾದ ಸೌದಿ ಅರೇಬಿಯಾ, ಯುಎಇ ಮತ್ತು ಬಹ್ರೇನ್ ಜೊತೆಗಿನ ಸ್ನೇಹವನ್ನು ಬಲಪಡಿಸಿದ್ದೇವೆ. ಈ ದೇಶಗಳ ಪಠ್ಯಕ್ರಮದಲ್ಲಿ ಯೋಗವನ್ನು ಅಧಿಕೃತವಾಗಿ ಸೇರಿಸಲಾಗಿದೆ. ಭಾರತದ ಹಿಂದೂಗಳಿಗಾಗಿ ಅಬುಧಾಬಿ ಮತ್ತು ಬಹ್ರೇನ್‌ನಲ್ಲಿ ದೇವಾಲಯಗಳನ್ನು ನಿರ್ಮಿಸಲಾಗುತ್ತಿದೆ” ಎಂದು ಹೇಳಿದ್ದರು.
ತನ್ನದೇ ದೇಶದಲ್ಲಿರುವ ದೇಶೀಯ ಮುಸಲ್ಮಾನರನ್ನು ಕಂಡರೆ ದ್ವೇಷ ಉರಿದು ಮುಕ್ಕುತ್ತಿರುವ ಮೋದಿಜಿ ಗಲ್ಫ್ ರಾಷ್ಟ್ರಗಳೊಂದಿಗೆ ಸ್ನೇಹ ಬೆಳೆಸಿರುವುದಾಗಿ ಹೇಳಿಕೊಳ್ಳುತ್ತಾರೆ.
ನಮ್ಮದೇ ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮುಸ್ಲಿಂ ರಾಜಮನೆತನಗಳ ಬಗೆಗಿನ ಕುರಿತ ವಿಷಯವನ್ನು ಇಲ್ಲಿಯ ಪಠ್ಯಕ್ರಮದಿಂದ ಕಿತ್ತು ಬಿಸಾಕುವ ಮೋದಿ ಮತ್ತು ಬಿಜೆಪಿ, ಅಪ್ರತಿಮ ವೀರ ಟಿಪ್ಪುವಿನಂತಹ ಜನ್ಮ ದಿನಾಚರಣೆಯನ್ನು ನಿಷೇಧಿಸುವ ಬಿಜೆಪಿ, ಗಲ್ಫ್ ಪಠ್ಯಕ್ರಮದಲ್ಲಿ ಯೋಗವನ್ನು ಅಧಿಕೃತವಾಗಿ ಸೇರಿಸಲಾಗಿದೆ ಎನ್ನಲು ನಾಚಿಕೆಯಾಗುವುದಿಲ್ಲವೇ?.
ಗಲ್ಫ್ ರಾಷ್ಟ್ರದಲ್ಲಿ ಮೋದಿಯವರ ಸ್ವಾಗತದ ಬಗ್ಗೆ ಪಾಕಿಸ್ತಾನದಲ್ಲಿ ಸಾಕಷ್ಟು ಚರ್ಚೆಗಳು ನಡೆದವು. ಭಾರತದಲ್ಲಿನ ಪಾಕಿಸ್ತಾನದ ಮಾಜಿ ಹೈಕಮಿಷನರ್ ಅಬ್ದುಲ್ ಬಾಸಿತ್ ಮಾತನಾಡಿ, “ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಯುಎಇಗೆ ತೆರಳಿದ್ದರು. ಆ ವೇಳೆ ಅವರನ್ನು ಕಿರಿಯ ಸಚಿವರು ಬರಮಾಡಿಕೊಂಡರು. ಭಾರತದ ಈ ಖ್ಯಾತಿಗೆ ಧಕ್ಕೆ ತರುತ್ತದೆ” ಎಂದು ಹೇಳಿದ್ದರು.
“ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಅನಿರೀಕ್ಷಿತ ಸ್ನೇಹ ಬೆಳೆಸಿದ್ದಾರೆಂದು ಹೇಳಲಾಗುತ್ತದೆ. 2017ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಮೋದಿ ಸರ್ಕಾರವು ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿತ್ತು. ಆಗ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಯುಎಇಯ ಅಧ್ಯಕ್ಷರಾಗಿರಲಿಲ್ಲ, ಅಬುಧಾಬಿಯ ಯುವರಾಜರಾಗಿದ್ದರು. ಸಂಪ್ರದಾಯದ ಪ್ರಕಾರ, ಗಣರಾಜ್ಯೋತ್ಸವದಂದು ಭಾರತವು ಒಂದು ದೇಶದ ಪ್ರಧಾನಿ ಅಥವಾ ರಾಷ್ಟ್ರಪತಿಯನ್ನು ಮುಖ್ಯ ಅತಿಥಿಯನ್ನಾಗಿ ಮಾಡುತ್ತಿತ್ತು. ಆದರೆ ಅಲ್ ನಹ್ಯಾನ್ 2017ರ ಗಣರಾಜ್ಯೋತ್ಸವದಂದು ಮುಖ್ಯ ಅತಿಥಿಯಾಗಿ ಬಂದಿದ್ದರು” ಎಂದು ಹೇಳಿದ್ದರು.
ಆದರೆ, ನಮ್ಮ ಪ್ರಧಾನಿ ಮಾತ್ರ ತಾವು ಏನೇ ಮಾಡಿದರೂ ಸರಿ, ಆದರೆ ವಿಪಕ್ಷಗಳು ದೇಶೀಯ ಮುಸಲ್ಮಾನರಿಗೆ ಸಂವಿಧಾನದಲ್ಲಿನ ಮೀಸಲಾತಿ ನೀಡಿದರೆ ಅಪರಾಧವೆಂಬಂತೆ ದೇಶಕ್ಕೆ ಸುಳ್ಳಿನ ಸರಮಾಲೆಯನ್ನೇ ಹಬ್ಬಿಸುತ್ತಿದ್ದಾರೆ.
“ಕಾಂಗ್ರೆಸ್ ಪಕ್ಷವು ಭಾರತದ ಸಂಸ್ಕೃತಿ ಮತ್ತು ಪರಂಪರೆಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿದೆ. ಯಾವಾಗಲೂ ವಿಭಜಕ ಆಲೋಚನೆಗಳನ್ನೇ ಹೊಂದಿದೆ. ದೇವರನ್ನು ತುಂಡು ತುಂಡುಗಳಾಗಿ ನೋಡುವ ಮನಸ್ಥತಿ ಅವರದ್ದಾಗಿದೆ. ಇದು ರಾಷ್ಟ್ರೀಯ ಏಕತೆಯನ್ನು ದುರ್ಬಲಗೊಳಿಸುವ ಹೇಳಿಕೆಗಳಿಗೆ ಕಾರಣವಾಗುತ್ತದೆ. ಇತ್ತೀಚೆಗೆ, ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ನಾಚಿಕೆಗೇಡಿನ ಹೇಳಿಕೆಗಳನ್ನು ನೀಡಿದರು, ಇದು ಪಕ್ಷದ ವಿಭಜಕ ಮನಸ್ಥಿತಿಯನ್ನು ಸೂಚಿಸುತ್ತದೆ. ʼಈಶಾನ್ಯದ ಜನರು ಚೀನೀಯರನ್ನು ಹೋಲುತ್ತಾರೆ, ದಕ್ಷಿಣ ಭಾರತದ ಜನರು ಆಫ್ರಿಕನ್ನರಂತೆ ಕಾಣುತ್ತಾರೆ ಮತ್ತು ಪಶ್ಚಿಮ ಭಾರತದ ಜನರು ಅರಬ್ಬರನ್ನು ಹೋಲುತ್ತಾರೆ. ಉತ್ತರ ಭಾರತೀಯರ ಮನೋಭಾವವು ಬಿಳಿಯರ ಮನಸ್ಥಿತಿಯಂತಿದೆʼ ಎಂದು ಅವರು ಸಲಹೆ ನೀಡಿದರು. ಇಂತಹ ಜನಾಂಗೀಯ ಟೀಕೆಗಳು ಸ್ವೀಕಾರಾರ್ಹವಲ್ಲ. ಒಂದು ಕಾಲದಲ್ಲಿ ಅಧಿಕಾರಕ್ಕಾಗಿ ದೇಶವನ್ನು ವಿಭಜಿಸಲು ಕಾರಣವಾದ ಕಾಂಗ್ರೆಸ್ ಈಗಲೂ ಕೂಡಾ ಭಾರತೀಯರ ವಿರುದ್ಧ ವಿಭಜಕ ಭಾಷೆಯನ್ನು ಆಶ್ರಯಿಸುತ್ತಿದೆ” ಎಂದು ಮತದಾರರಿಗೆ ತಪ್ಪು ಕಲ್ಪನೆಗಳನ್ನು ನೀಡುತ್ತಾ ಅಪ್ಪಟ ಸುಳ್ಳುಗಳನ್ನು ಹೇಳುತ್ತಿದ್ದಾರೆ.
ಹೌದು, ಕಾಂಗ್ರೆಸ್ ಸಾಗರೋತ್ತರ ಘಟಕದ ಅಧ್ಯಕ್ಷರಾಗಿದ್ದ ಸ್ಯಾಮ್ ಪಿತ್ರೋಡಾ ಅವರು ದಿ ಸ್ಟೇಟ್ಸ್‌ಮನ್‌ಗೆ ನೀಡಿದ ಸಂದರ್ಶನದಲ್ಲಿ, ಭಾರತದ ವೈವಿಧ್ಯತೆಯ ಬಗ್ಗೆ ಮಾತನಾಡಿ, “ನಾವು ಭಾರತದಂತಹ ವೈವಿಧ್ಯಮಯ ದೇಶವನ್ನು ಒಟ್ಟಿಗೆ ಹಿಡಿದಿಡಬಹುದು. ಅಲ್ಲಿ ಪೂರ್ವದ ಜನರು ಚೀನೀಯರಂತೆ ಕಾಣುತ್ತಾರೆ, ಪಶ್ಚಿಮದ ಜನರು ಅರಬ್ಬರಂತೆ ಕಾಣುತ್ತಾರೆ, ಉತ್ತರದ ಜನರು ಬಿಳಿಯರಂತೆ ಕಾಣುತ್ತಾರೆ ಮತ್ತು ದಕ್ಷಿಣದ ಜನರು ಆಫ್ರಿಕಾದಂತೆ ಕಾಣುತ್ತಾರೆ. ಇದು ಅಪ್ರಸ್ತುತವಾಗುತ್ತದೆ. ನಾವೆಲ್ಲರೂ ಸಹೋದರ ಸಹೋದರಿಯರು. ಭಾರತದ ಜನರು ವಿವಿಧ ಭಾಷೆಗಳು, ಧರ್ಮ, ಆಹಾರ ಮತ್ತು ಪದ್ಧತಿಗಳನ್ನು ಗೌರವಿಸುತ್ತಾರೆ. ಇದು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ” ಎಂದು ಹೇಳಿದ್ದರು.
“ಭಾರತವು ವಿಶ್ವದಲ್ಲಿ ಪ್ರಜಾಪ್ರಭುತ್ವದ ಉಜ್ವಲ ಉದಾಹರಣೆಯಾಗಿದೆ. ದೇಶದ ಜನರು 75 ವರ್ಷಗಳ ಕಾಲ ಬಹಳ ಸಂತೋಷದ ವಾತಾವರಣದಲ್ಲಿ ಬದುಕಿದ್ದಾರೆ, ಅಲ್ಲಿಯ ಜನರು ಅಲ್ಲಲ್ಲಿ ನಡೆಯುವ ಕೆಲವು ಜಗಳಗಳನ್ನು ಬಿಟ್ಟರೆ ಸೌಹಾರ್ದದಿಂದ ಒಟ್ಟಿಗೆ ವಾಸಿಸಬಹುದು” ಎಂದು ಹೇಳಿದ್ದರು. ಇದು ವಿವಾದವಾದ ಬಳಿಕ ತಮ್ಮ ಜವಾಬ್ದಾರಿಗೆ ರಾಜೀನಾಮೆ ಕೂಡ ನೀಡಿದ್ದರು.
ಇದನ್ನೂ ಓದಿದ್ದೀರಾ? ಮೋದಿಯ ಇಂದಿನ ಸುಳ್ಳುಗಳು | ಅಂಬೇಡ್ಕರ್ ಹೆಸರಿನಲ್ಲಿ ಚುನಾವಣಾ ವ್ಯಾಪಾರ ಮಾಡುತ್ತಿದ್ದಾರಾ ಮೋದಿ?
ಪಿತ್ರಾರ್ಜಿತ ಆಸ್ತಿ ತೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಮ್ ರಮೇಶ್ ಮಾತನಾಡಿ, “ಪಿತ್ರೋಡಾ ಅವರ ಅಭಿಪ್ರಾಯಗಳು ಯಾವಾಗಲೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಿಲುವನ್ನು ಪ್ರತಿಬಿಂಬಿಸುತ್ತವೆಂಬುದು ಇದರ ಅರ್ಥವಲ್ಲ” ಎಂದು ಸ್ಪಷ್ಟನೆಯನ್ನೂ ನೀಡಿದ್ದರು.
ಆದರೆ, ದೇಶದಲ್ಲಿ ಒಡೆದಾಳುವ ನೀತಿಯ್ನು ಅನುಸರಿಸುತ್ತಿರುವ ಬಿಜೆಪಿಗೆ ಸ್ಯಾಮ್ ಪಿತ್ರೋಡಾ ಅವರ ವೈವಿಧ್ಯತೆಯ ಹೋಲಿಕೆ ಸರಿಹೊಂದಲಿಲ್ಲ. ಹಾಗಾಗಿ ಬಿಜೆಪಿ ಮತ್ತು ಪ್ರಧಾನಿ ದೇಶಿಯರಲ್ಲಿ ಮುಸಲ್ಮಾನರನ್ನು ಗುರಿಯಾಗಿಸಿ ವಿಷಬೀಜ ಬಿತ್ತುತ್ತಿದ್ದಾರೆ.