ದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಾದ ಬಳಿಕವೂ ವಾಟ್ಸಾಪ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ‘ವಿಕಸಿತ್ ಭಾರತ್’ ಸಂದೇಶವನ್ನು ತಕ್ಷಣವೇ ನಿಲ್ಲಿಸುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಕೇಂದ್ರ ಚುನಾವಣಾ ಆಯೋಗವು ಸೂಚಿಸಿದೆ.
ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಬಳಿಕವೂ ತಮಗೆ ವಾಟ್ಸಾಪ್ ಮೂಲಕ ಪ್ರಧಾನಿಯವರ ಪಿಡಿಎಫ್ ಪತ್ರವಿರುವ ಸಂದೇಶಗಳು ಬರುತ್ತಿದೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಹಲವಾರು ದೂರುಗಳು ಚುನಾವಣಾ ಆಯೋಗಕ್ಕೆ ಬಂದ ಹಿನ್ನೆಲೆಯಲ್ಲಿ, ತಕ್ಷಣವೇ ‘ವಿಕಸಿತ್ ಭಾರತ್’ ಸಂದೇಶವನ್ನು ನಿಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
ECI directs MeitY to immediately stop sending ‘Viksit Bharat’ messages on WhatsApp in view of Model Code of Conduct in force. pic.twitter.com/8HhFjeGmZr
— Arvind Gunasekar (@arvindgunasekar) March 21, 2024
ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಪತ್ರ ಬರೆದಿದ್ದ ಆಯೋಗವು, ಉತ್ತರ ನೀಡುವಂತೆ ತಿಳಿಸಿತ್ತು. ಇದಕ್ಕೆ ಉತ್ತರಿಸಿರುವ ಸಚಿವಾಲಯವು, “ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲೇ ಈ ಸಂದೇಶಗಳನ್ನು ಕಳುಹಿಸಲಾಗಿದ್ದರೂ, ನೆಟ್‌ವರ್ಕ್ ಸಮಸ್ಯೆಯಿಂದಾಗಿ ಕೆಲವರಿಗೆ ವಿಳಂಬವಾಗಿ ತಲುಪಿರಬಹುದು” ಎಂದು ತಿಳಿಸಿರುವುದಾಗಿ ಆಯೋಗ ಮಾಹಿತಿ ನೀಡಿದೆ.
ಏನಿದು ಬೆಳವಣಿಗೆ?
ಲೋಕಸಭೆ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಘೋಷಿಸುವ ಮುನ್ನಾದಿನದಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ವಾಟ್ಸಾಪ್ ಮೂಲಕ ಪತ್ರವೊಂದನ್ನು ಬಿಡುಗಡೆ ಮಾಡಿತ್ತು. ಆ ಪತ್ರದಲ್ಲಿ ಸಮೃದ್ಧ ಭಾರತವನ್ನು ನಿರ್ಮಿಸುವ ಸಂಕಲ್ಪವನ್ನು ಈಡೇರಿಸುವಲ್ಲಿ ಸಲಹೆಗಳು ಮತ್ತು ಬೆಂಬಲವನ್ನು ಪ್ರಧಾನಿ ಮೋದಿ ಕೋರಿರುವುದಾಗಿ ತಿಳಿಸಿತ್ತು. ಭಾರತೀಯರಿಗೆ ಈ ಸಂದೇಶ ಆಶ್ಚರ್ಯವೆನಿಸದಿದ್ದರೂ, ಭಾರತೀಯರಲ್ಲದವರಿಗೂ ಈ ಸಂದೇಶ ತಲುಪಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.
ಯುಎಇಯಲ್ಲಿರುವ ಭಾರತೀಯ, ಪಾಕಿಸ್ತಾನ, ಬ್ರಿಟನ್ ವಲಸಿಗರ ಸ್ಮಾರ್ಟ್‌ಫೋನ್‌ಗಳಿಗೆ ಕಳೆದ ವಾರಾಂತ್ಯದಲ್ಲಿ ಭಾರತೀಯ ಸಂಖ್ಯೆಯಿಂದ ವಾಟ್ಸಾಪ್ ಸಂದೇಶ ಬಂದಿದ್ದು, ಆಶ್ಚರ್ಯಗೊಂಡಿದ್ದರು.
ಇದನ್ನು ಓದಿದ್ದೀರಾ? ಮೋದಿಯಿಂದ ಯುಎಇಯಲ್ಲಿರುವ ಭಾರತೀಯ, ಪಾಕ್, ಬ್ರಿಟನ್ ವಲಸಿಗರಿಗೆ ಅಚ್ಚರಿಯ ವಾಟ್ಸಾಪ್ ಸಂದೇಶ!
ದುಬೈ ಮೂಲದ ಪಾಕಿಸ್ತಾನಿ ಪತ್ರಕರ್ತೆ ಅಸ್ಮಾ ಝೈನ್ ತನಗೆ ಭಾರತ ಸರ್ಕಾರದಿಂದ ಬಂದ ಸಂದೇಶದ ಬಗ್ಗೆ ಮಾತನಾಡುತ್ತಾ, “ನನಗೆ ಮಧ್ಯರಾತ್ರಿ ಈ ಸಂದೇಶ ಬಂದಿದೆ. ಇದು ನನಗೆ ಆಶ್ಚರ್ಯವನ್ನುಂಟು ಮಾಡಿದೆ. ಸನ್ಮಾನ್ಯ ಮೋದಿ ಅವರಿಗೆ ನನ್ನಿಂದ ಯಾವ ರೀತಿಯ ಸಲಹೆಗಳು ಬೇಕಾಗಬಹುದು? ಅದಕ್ಕಿಂತ ಮುಖ್ಯವಾಗಿ ನಾನು ಆ ಸಲಹೆಗಳನ್ನು ನೀಡಬೇಕೆ? ಎಂಬ ಪ್ರಶ್ನೆ ಮೂಡಿತು” ಎಂದಿದ್ದರು. ಯುಎಇಯಲ್ಲಿರುವ ಇನ್ನೋರ್ವ ಪಾಕಿಸ್ತಾನಿ ಫಹಾದ್ ಸಿದ್ದೀಕಿ, “ಇದು ತುಂಬಾ ವಿಚಿತ್ರವಾಗಿದೆ. ನಮ್ಮ ಖಾಸಗಿತನಕ್ಕೆ ಧಕ್ಕೆ”ಎಂದು ಟೀಕಿಸಿದ್ದರು.
