ಒಡಿಶಾದ ಕಟಕ್ ಜಿಲ್ಲೆಯ ನೆರ್ಗುಂಡಿ ರೈಲು ನಿಲ್ದಾಣದ ಬಳಿ ಭಾನುವಾರ ಎಸ್ಎಂವಿಟಿ ಬೆಂಗಳೂರು-ಕಾಮಾಖ್ಯ ಎಕ್ಸ್ಪ್ರೆಸ್ (ಎಸಿ) ರೈಲಿನ ಹನ್ನೊಂದು ಬೋಗಿಗಳು ಹಳಿತಪ್ಪಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.
ಮಂಗುಲಿ ಬಳಿಯ ನಿರ್ಗುಂಡಿಯಲ್ಲಿ ಬೆಳಿಗ್ಗೆ 11.54ಕ್ಕೆ ಈ ಘಟನೆ ನಡೆದಿದ್ದು ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪೂರ್ವ ಕರಾವಳಿ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್ಒ) ಅಶೋಕ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ಎಲ್ಪಿಜಿ ಸಾಗಿಸುತ್ತಿದ್ದ ಗೂಡ್ಸ್ ರೈಲು; ತಪ್ಪಿದ ಭಾರಿ ದುರಂತ
“ನಾವು ಈಗಾಗಲೇ ಎನ್ಡಿಆರ್ಎಫ್ ಮತ್ತು ಅಗ್ನಿಶಾಮಕ ಸೇವೆಗಳಿಗೆ ಮಾಹಿತಿ ನೀಡಿದ್ದೇವೆ. ಸ್ಥಳಕ್ಕೆ ಬದಲಿ ರೈಲನ್ನು ಕಳುಹಿಸಲಾಗಿದೆ. ನಮ್ಮ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿ ಕೂಡ ಸ್ಥಳಕ್ಕೆ ತಲುಪಿದ್ದಾರೆ” ಎಂದು ಮಿಶ್ರಾ ಹೇಳಿದ್ದಾರೆ.
ಘಟನೆಯ ನಂತರ ರೈಲ್ವೆ ಸಹಾಯವಾಣಿ ಸಂಖ್ಯೆಗಳನ್ನು ಸಹ ಸಕ್ರಿಯಗೊಳಿಸಿದೆ. ಸಹಾಯವಾಣಿ ಸಹಾಯವಾಣಿ 8455885999 ಮತ್ತು 8991124238 ಆರಂಭಿಸಲಾಗಿದೆ. ಈ ಅವಘಡದಲ್ಲಿ ಸಿಲುಕಿದ ಪ್ರಯಾಣಿಕರು ತಲುಪಬೇಕಾದ ಸ್ಥಳಗಳಿಗೆ ಕಳುಹಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
