ಮಂಗಳೂರಿನ ಪುರಭವನದ ಬಳಿ ಅನಧಿಕೃತ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿರುವ ಕ್ರಮದ ಹಿನ್ನೆಲೆಯಲ್ಲಿ, ನಗರ ಬಡವರ ಜೀವನೋಪಾಯದ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯ ಧೋರಣೆಯನ್ನು ಆಮ್ ಆದ್ಮಿ ಪಾರ್ಟಿ (AAP) ದಕ್ಷಿಣ ಕನ್ನಡ ಘಟಕ ತೀವ್ರವಾಗಿ ಖಂಡಿಸಿದೆ.
ಇತ್ತೀಚೆಗೆ ಪುರಭವನದ ಸುತ್ತಮುತ್ತ ಅನಧಿಕೃತ ವ್ಯಾಪಾರಿಗಳಿಂದ ಉಂಟಾಗಿದ್ದ ನೈರ್ಮಲ್ಯ ಸಮಸ್ಯೆ, ಕಾಲುದಾರಿ ಅತಿಕ್ರಮಣ ಹಾಗೂ ಮಹಿಳೆಯರ ಸುರಕ್ಷತೆ ಕುರಿತ ಸಾರ್ವಜನಿಕ ಆಕ್ರೋಶದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವ್ಯಾಪಾರಿಗಳನ್ನು ತೆರವುಗೊಳಿಸಿತ್ತು. ಆದರೆ, ಈ ಕ್ರಮವು ಸಮಸ್ಯೆಯ ಮೂಲ ಕಾರಣವನ್ನು ಪರಿಹರಿಸುವ ಬದಲು ಬಡ ವ್ಯಾಪಾರಿಗಳ ಜೀವನೋಪಾಯವನ್ನೇ ಕಸಿದುಕೊಂಡಂತಾಗಿದೆ ಎಂದು ಪಕ್ಷ ಆರೋಪಿಸಿದೆ.
ಬೀದಿ ಬದಿ ವ್ಯಾಪಾರಿಗಳು ನಗರ ಆರ್ಥಿಕ ವ್ಯವಸ್ಥೆಯ ಪ್ರಮುಖ ಭಾಗವಾಗಿದ್ದು, ಕೇಂದ್ರ ಸರ್ಕಾರವೂ ವಿವಿಧ ಯೋಜನೆಗಳ ಮೂಲಕ ಅವರನ್ನು ಸಬಲೀಕರಣಗೊಳಿಸಲು ಕ್ರಮ ಕೈಗೊಳ್ಳುತ್ತಿದೆ. ಆದರೂ, ಮಂಗಳೂರು ಮಹಾನಗರ ಪಾಲಿಕೆ ಸೂಕ್ತ ವ್ಯಾಪಾರ ವಲಯಗಳನ್ನು ಗುರುತಿಸುವಲ್ಲಿ ವಿಫಲವಾಗಿರುವುದರಿಂದ ಸಾವಿರಾರು ಸಣ್ಣ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಪ್ ತಿಳಿಸಿದೆ.
ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರ ನಿಯಂತ್ರಣ) ಕಾಯ್ದೆಯಡಿ ವ್ಯಾಪಾರ ವಲಯಗಳ ಗುರುತು, ಬಯೋಮೆಟ್ರಿಕ್ ಪರವಾನಗಿ ವಿತರಣೆ ಹಾಗೂ ಕಾನೂನುಬದ್ಧ ರಕ್ಷಣೆಗೆ ಸ್ಪಷ್ಟ ಮಾರ್ಗಸೂಚಿಗಳಿದ್ದರೂ, ಅಧಿಕಾರಿಗಳ ಆಡಳಿತಾತ್ಮಕ ನಿರ್ಲಕ್ಷ್ಯ ಮತ್ತು ವಿಳಂಬ ನೀತಿಯಿಂದ ಈ ಪ್ರಕ್ರಿಯೆಗಳು ನೆನೆಗುದಿಗೆ ಬಿದ್ದಿವೆ ಎಂದು ಪಕ್ಷ ದೂರಿದೆ.
ಹಾಗೆಯೇ, ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹಣಕಾಸು ನೆರವು ಹಾಗೂ ಕಲ್ಯಾಣ ಯೋಜನೆಗಳು ಸ್ಥಳೀಯ ಮಟ್ಟದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂಬ ಆರೋಪವೂ ವ್ಯಕ್ತವಾಗಿದೆ.
ಆದ್ದರಿಂದ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತವು ತಕ್ಷಣವೇ ಪ್ರತ್ಯೇಕ ಬೀದಿ ಬದಿ ವ್ಯಾಪಾರ ವಲಯಗಳನ್ನು ಗುರುತಿಸಿ, ಪರವಾನಗಿ ವಿತರಣಾ ಪ್ರಕ್ರಿಯೆಯನ್ನು ಸರಳಗೊಳಿಸಿ, ಅರ್ಹ ವ್ಯಾಪಾರಿಗಳಿಗೆ ಯಾವುದೇ ವಿಳಂಬವಿಲ್ಲದೆ ಲೈಸೆನ್ಸ್ ನೀಡುವ ಮೂಲಕ ಅವರ ಜೀವನೋಪಾಯವನ್ನು ರಕ್ಷಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ದಕ್ಷಿಣ ಕನ್ನಡ ಘಟಕ ಆಗ್ರಹಿಸಿದೆ.





