ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಜಗ್ಗಿ ವಾಸುದೇವ್(ಸದ್ಗುರು) ಅವರ ಇಶಾ ಫೌಂಡೇಶನ್‌ನಿಂದ 2016 ರಿಂದ ಇಲ್ಲಿಯವರೆಗೆ ಆರು ಮಂದಿ ಕಾಣೆಯಾಗಿದ್ದಾರೆ ಎಂದು ತಮಿಳುನಾಡು ಪೊಲೀಸರು ಗುರುವಾರ ಮದ್ರಾಸ್ ಹೈಕೋರ್ಟ್‌ಗೆ ಮಾಹಿತಿ ನೀಡಿರುವುದಾಗಿ ‘ಬಾರ್ & ಬೆಂಚ್’ ವರದಿ ಮಾಡಿದೆ.
ನ್ಯಾಯಮೂರ್ತಿಗಳಾದ ಎಂ.ಎಸ್.ರಮೇಶ್ ಮತ್ತು ಸುಂದರ್ ಮೋಹನ್ ಅವರ ನ್ಯಾಯಪೀಠದ ಮುಂದೆ ಪೊಲೀಸರು ಮೌಖಿಕವಾಗಿ ಈ ಹೇಳಿಕೆ ನೀಡಿದ್ದಾರೆ. ಕಾಣೆಯಾದ ಪ್ರಕರಣಗಳ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ಪೊಲೀಸರ ಹೇಳಿಕೆಯನ್ನು ದಾಖಲಿಸಿಕೊಂಡಿರುವ ನ್ಯಾಯಾಲಯವು, ಮುಂದಿನ ವಿಚಾರಣೆಯನ್ನು ಏಪ್ರಿಲ್ 18ಕ್ಕೆ ಮುಂದೂಡಿದ್ದು, ತನಿಖೆಯ ಸ್ಥಿತಿಗತಿ ವರದಿಯನ್ನು ಅಂದು ಸಲ್ಲಿಸಲು ಪೊಲೀಸರಿಗೆ ನಿರ್ದೇಶನ ನೀಡಿದೆ.
ತಿರುನೆಲ್ವೇಲಿ ಜಿಲ್ಲೆಯ ನಿವಾಸಿ ತಿರುಮಲೈ ಎಂಬವರು ತಮ್ಮ ಸಹೋದರ ಗಣೇಶನ್ ಅವರನ್ನು ಹಾಜರುಪಡಿಸುವಂತೆ ಕೋರಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ದೇಶನ ನೀಡಿದೆ.
46 ವರ್ಷದ ಗಣೇಶನ್ ಕಳೆದ ವರ್ಷ ಮಾರ್ಚ್‌ನಲ್ಲಿ ಇಶಾ ಫೌಂಡೇಶನ್‌ನಿಂದ ಕಾಣೆಯಾದ ನಂತರ ತಿರುಮಲೈ ನ್ಯಾಯಾಲಯದ ಮೊರೆ ಹೋಗಿದ್ದರು. ಹಲವಾರು ದಿನಗಳಿಂದ ತನ್ನ ಸಹೋದರನೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಸಾಧ್ಯವಾಗದ ಕಾರಣ ತಾನು ಇಶಾ ಫೌಂಡೇಶನ್ ಅನ್ನು ಸಂಪರ್ಕಿಸಿದ್ದೆ ಎಂದು ಅವರು ಗುರುವಾರ ನ್ಯಾಯಾಲಯಕ್ಕೆ ತಿಳಿಸಿದರು.
ಇದನ್ನು ಓದಿದ್ದೀರಾ? ಕೇಜ್ರಿವಾಲ್ ಬಂಧನ | ಸತ್ಯಪಾಲ್ ಮಲಿಕ್ ಭವಿಷ್ಯ ನುಡಿದ ವಿಡಿಯೋ ವೈರಲ್
ಆದಾಗ್ಯೂ, ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ನನ್ನ ಸಹೋದರ ಎರಡು ದಿನಗಳಿಂದ ವರದಿ ಮಾಡಿಕೊಂಡಿಲ್ಲ ಎಂದು ಫೌಂಡೇಶನ್ ಆ ಸಮಯದಲ್ಲಿ ತನಗೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ತಾನು ತಿರುಮಲೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ ಎಂದು ಅವರು ವಿವರಿಸಿದ್ದಾರೆ.
