ಈ ದಿನ ಸಂಪಾದಕೀಯ | ನಿಮ್ಮ ʼಭ್ರಷ್ಟಾಚಾರ ಮುಕ್ತ ಭಾರತʼದಲ್ಲಿ ಬಿಜೆಪಿ ಇಲ್ಲವೇ ಮೋದಿಜಿ?

Date:

ಭ್ರಷ್ಟಾಚಾರಿಗಳನ್ನು ಬಂಧಿಸುವುದು, ಶಿಕ್ಷಿಸುವುದು ತಪ್ಪಲ್ಲ. ಆದರೆ ತಮ್ಮ ಪಕ್ಷದಲ್ಲಿರುವ ಭ್ರಷ್ಟರನ್ನು ರಕ್ಷಿಸುವುದು, ಬೇರೆ ಪಕ್ಷದ ಭ್ರಷ್ಟರನ್ನು ತಮ್ಮ ಜೊತೆ ಸೇರಿಸಿಕೊಂಡು ಆರೋಪ ಮುಕ್ತರನ್ನಾಗಿ ಮಾಡುವ ದುಷ್ಟ ನಡೆಯನ್ನು ಎಲ್ಲರೂ ಖಂಡಿಸಬೇಕಿದೆ. ಮೋದಿ ಸರ್ಕಾರದ ʼಭ್ರಷ್ಟಾಚಾರ ಮುಕ್ತ ಭಾರತʼ ದಡಿಯಲ್ಲಿ ಸ್ವಪಕ್ಷೀಯರು ಇಲ್ಲದಿದ್ದರೆ ಅದು ಬಿಜೆಪಿಯೇತರ ಭಾರತ ಎನಿಸುತ್ತದೆ.

 

ಹನ್ನೊಂದು ವರ್ಷಗಳ ಹಿಂದೆ ಯುಪಿಎ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರ ನೇತೃತ್ವದ ಬೃಹತ್‌ ಪ್ರತಿಭಟನೆಯಲ್ಲಿ ಅವರ ಜೊತೆಗೆ ಉದಯಿಸಿದ ನಾಯಕ ಅರವಿಂದ ಕೇಜ್ರಿವಾಲ್.‌ India against corruption ಹೆಸರಿನಲ್ಲಿ ದೆಹಲಿಯಲ್ಲಿ ನಡೆದ ಧರಣಿಯಲ್ಲಿ ಐಆರ್‌ಎಸ್‌ ಹುದ್ದೆಗೆ ರಾಜೀನಾಮೆ ಕೊಟ್ಟು ಹೋರಾಟಕ್ಕೆ ಧುಮುಕಿದ್ದ ಅರವಿಂದ ಕೇಜ್ರಿವಾಲ್‌ ಯುವ ಸಮುದಾಯದ ಪಾಲಿಗೆ ನಿಜಕ್ಕೂ ಸ್ಫೂರ್ತಿಯ ಚಿಲುಮೆಯಾಗಿದ್ದರು.

ಅಣ್ಣಾ ಹಜಾರೆ, ಕೇಜ್ರಿವಾಲ್‌ ಜೊತೆಗೆ ಯೋಗೇಂದ್ರ ಯಾದವ್‌, ನಿವೃತ್ತ ಐಪಿಎಸ್‌ ಅಧಿಕಾರಿ ಕಿರಣ್‌ ಬೇಡಿ, ಮನೀಶ್‌ ಸಿಸೋಡಿಯಾ ಮುಂತಾದ ಘಟಾನುಘಟಿಗಳೇ ಇದ್ದರು. ಬೆಂಗಳೂರಿನಲ್ಲಿ ನಡೆದ ಧರಣಿಯ ಮುಂದಾಳತ್ವವನ್ನು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ವಹಿಸಿದ್ದರು. ಭ್ರಷ್ಟಾಚಾರದ ವಿರುದ್ಧ ಅದೊಂದು ಐತಿಹಾಸಿಕ ಹೋರಾಟವಾಗಿತ್ತು. ಯುವಜನರು ಸ್ವಯಂಪ್ರೇರಿತರಾಗಿ ಪ್ರತಿಭಟನೆಗಳಲ್ಲಿ ಭಾಗವಹಿಸಿ ಹೋರಾಟಕ್ಕೆ ಜೀವ ತುಂಬಿದ್ದರು.

ಆದರೆ ಅದರ ಲಾಭವನ್ನು ನೇರವಾಗಿ ಪಡೆದು ಅಧಿಕಾರ ಹಿಡಿದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದ್ದೇನು? ಕಿರಣ್‌ ಬೇಡಿ ಅವರನ್ನು ಬಿಜೆಪಿಗೆ ಸೆಳೆದು ರಾಜ್ಯಪಾಲರ ಹುದ್ದೆ ನೀಡಿತು. ಸ್ವಂತ ಆಮ್‌ ಆದ್ಮಿ ಪಕ್ಷ ಕಟ್ಟಿ ದೆಹಲಿಯಲ್ಲಿ ಅಧಿಕಾರ ಹಿಡಿದ ಅರವಿಂದ ಕೇಜ್ರಿವಾಲ್‌ ಅವರನ್ನು ಇನ್ನಿಲ್ಲದಂತೆ ಕಾಡಲು ಶುರು ಮಾಡಿದ ಮೋದಿ ಸರ್ಕಾರ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ಗೆ ಹೆಚ್ಚಿನ ಅಧಿಕಾರ ನೀಡಿ ಕೇಜ್ರಿವಾಲ್‌ ಸರ್ಕಾರವನ್ನು ಅಭದ್ರಪಡಿಸಲು ನಾನಾ ಸರ್ಕಸ್‌ ಮಾಡಿತ್ತು. ಆದರೂ ದೆಹಲಿಯ ಚುಕ್ಕಾಣಿ ಹಿಡಿಯಲು ಮೋದಿ ಸರ್ಕಾರ ಮಾಡಿದ ಸಾಹಸ ಫಲ ನೀಡಲಿಲ್ಲ. ಎರಡನೇ ಅವಧಿಗೂ ಆಮ್‌ ಆದ್ಮಿ ಪಕ್ಷ ಸ್ಪಷ್ಟ ಬಹುಮತ ಪಡೆದು ಮತ್ತೆ ಕೇಜ್ರಿವಾಲ್‌ ಮುಖ್ಯಮಂತ್ರಿಯಾದರು. ಆ ನಂತರ ಮೋದಿ ಸರ್ಕಾರ ನೀಡುತ್ತ ಬಂದ ಕಿರುಕುಳ ಅಷ್ಟಿಷ್ಟಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೋದಿ ಸರ್ಕಾರ ಮತ್ತು ಕೇಜ್ರಿ ಸರ್ಕಾರದ ನಡುವೆ ಕಾನೂನು, ಆಡಳಿತಾತ್ಮಕ ತಿಕ್ಕಾಟ, ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಅದರ ಮಧ್ಯೆ ಅಬಕಾರಿ ನೀತಿ ಹಗರಣ, ಅಕ್ರಮ ಹಣ ಪಡೆದಿದ್ದಾರೆ ಎಂಬ ಆರೋಪದಲ್ಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರನ್ನು 2023 ಫೆಬ್ರುವರಿಯಲ್ಲಿ ಸಿಬಿಐ ಬಂಧಿಸಿತ್ತು, ಮಾರ್ಚ್‌ನಲ್ಲಿ ಇ.ಡಿ. ಕೂಡಾ ಬಂಧಿಸಿತ್ತು. ಆಗಸ್ಟ್ 2022 ರಲ್ಲೂ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿತು.

ಸಿಸೋಡಿಯಾ ಅವರು ಲೆಫ್ಟಿನೆಂಟ್‌ ಗವರ್ನರ್‌ ಅವರ ಅನುಮೋದನೆಯಿಲ್ಲದೆ ಅಬಕಾರಿ ನೀತಿಯಲ್ಲಿ ಬದಲಾವಣೆಗಳನ್ನು ಮಾಡಿದ್ದಾರೆ. ಈಗಾಗಲೇ ಜಾರಿಗೆ ತಂದಿರುವ ನೀತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿದರೆ, ಅಬಕಾರಿ ಇಲಾಖೆಯು ಅವುಗಳನ್ನು ಸಂಪುಟದ ಮುಂದೆ ಇರಿಸಬೇಕು ಮತ್ತು ಅಂತಿಮ ಅನುಮೋದನೆಗಾಗಿ ಲೆ.ಗವರ್ನರ್‌ಗೆ ರವಾನಿಸಬೇಕು. ಆದರೆ ಮನೀಶ್‌ ಹಾಗೆ ಮಾಡಿಲ್ಲ. ಅಷ್ಟೇ ಅಲ್ಲ 100 ಕೋಟಿ ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂಬುದು ಕೇಜ್ರಿ ಸರ್ಕಾರದ ಮೇಲಿರುವ ಆರೋಪ.

2022ರ ಜುಲೈ 22ರಂದು, ಎಲ್‌ಜಿ ವಿಕೆ ಸಕ್ಸೇನಾ ಅವರು ಹೊಸ ಅಬಕಾರಿ ನೀತಿಯ ಅನುಷ್ಠಾನದಲ್ಲಿ ನಿಯಮ ಉಲ್ಲಂಘನೆ ಮತ್ತು ಕಾರ್ಯವಿಧಾನದ ತಥಾಕಥಿತ ಲೋಪಗಳ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಮದ್ಯದ ಪರವಾನಗಿದಾರರಿಗೆ ಅನಗತ್ಯ ಪ್ರಯೋಜನಗಳನ್ನು ನೀಡಲಾಗಿದೆ ಎಂದು ದೆಹಲಿಯ ಮುಖ್ಯ ಕಾರ್ಯದರ್ಶಿಯ ವರದಿ ಹೇಳಿತ್ತು. ಆಪಾದಿತ ಅಕ್ರಮಗಳಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಲೆ.ಗವರ್ನರ್‌ ದೆಹಲಿಯ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ನಿಮಗೆ ನೆನಪಿರಲಿ, ದೆಹಲಿಯ ಎಲ್ಲ ಐಎಎಸ್‌ ಅಧಿಕಾರಿಗಳು, ಸರ್ಕಾರದ ಕಾರ್ಯದರ್ಶಿಗಳು ಕೇಂದ್ರ ಸರ್ಕಾರದ ನೇರ ನಿಯಂತ್ರಣದಲ್ಲಿರುತ್ತಾರೆ.

ಈ ಹಗರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್‌ ಅವರಿಗೆ ಎಂಟು ಬಾರಿ ಇ.ಡಿ. ಸಮನ್ಸ್‌ ಜಾರಿ ಮಾಡಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಬಂಧನದಿಂದ ಮಧ್ಯಂತರ ರಕ್ಷಣೆ ನೀಡಬೇಕು ಎಂದು ದೆಹಲಿ ಹೈಕೋರ್ಟ್‌ಗೆ ಕೇಜ್ರಿವಾಲ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಜಾ ಆಗುತ್ತಲೇ ಇ.ಡಿ. ಅಧಿಕಾರಿಗಳು ಗುರುವಾರ ರಾತ್ರಿ ಕೇಜ್ರಿವಾಲ್‌ ಅವರನ್ನು ಬಂಧಿಸಿದ್ದಾರೆ. ಶುಕ್ರವಾರ ಅವರನ್ನು ಹತ್ತು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಎರಡು ವರ್ಷದ ಹಿಂದೆ ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್‌ ಗಾಂಧಿ ಅವರನ್ನೂ ಇದೇ ಬಗೆಯಲ್ಲಿ ವಿಚಾರಣೆಯ ನೆಪದಲ್ಲಿ ಬಂಧಿಸುವ ಪ್ರಯತ್ನ ಮಾಡಿದ್ದನ್ನು ಮರೆಯಬಾರದು.

ಇದೇ ವರ್ಷದ ಜನವರಿಯಲ್ಲಿ ಜಾರ್ಖಂಡ್‌ ಮುಕ್ತಿ ಮೋರ್ಚದ ಮುಖಂಡ ಮುಖ್ಯಮಂತ್ರಿ ಹೇಮಂತ್‌ ಸೋರೇನ್‌ ಅವರನ್ನು ಭೂಹಗರಣದ ಆರೋಪದಡಿ ಇ.ಡಿ. ಅಧಿಕಾರಿಗಳು ಬಂಧಿಸಿದ್ದರು. ಈ ವರ್ಷ ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿಗಟ್ಟಿದ ಕೀರ್ತಿ ಮೋದಿ ಸರ್ಕಾರದ್ದು. ಆದರೆ ಅದೇ ಮೋದಿ ಸರ್ಕಾರದ ಮೇಲಿನ ಕುಖ್ಯಾತಿಗಳ ಸಂಖ್ಯೆ ಎಣಿಸಲು ಸಾಧ್ಯ. ಈಗ ಬಯಲಾಗಿರುವ ಎಲೆಕ್ಟೋರಲ್‌ ಬಾಂಡ್‌ ಮೋದಿಯ ನೈಜ ಮುಖವನ್ನು ಬಯಲು ಮಾಡಿದೆ. ಭ್ರಷ್ಟ, ದಗಾಕೋರ ಕಂಪನಿಗಳಿಂದ ಹಣ ಸುಲಿಗೆ ಮಾಡಿ ಅದಕ್ಕೆ ಎಲೆಕ್ಟೋರಲ್‌ ಬಾಂಡ್‌ ಎಂಬ ಹೆಸರಿಡಲಾಗಿದೆ ಅಷ್ಟೇ.

ಭ್ರಷ್ಟಾಚಾರಿಗಳನ್ನು ಬಂಧಿಸುವುದು ತಪ್ಪಲ್ಲ, ಶಿಕ್ಷಿಸುವುದು ತಪ್ಪಲ್ಲ. ಆದರೆ ತಮ್ಮ ಪಕ್ಷದಲ್ಲಿರುವ ಭ್ರಷ್ಟರನ್ನು ರಕ್ಷಿಸುವುದು, ವಿರೋಧಪಕ್ಷಗಳ ಭ್ರಷ್ಟರನ್ನು ತಮ್ಮ ಜೊತೆ ಸೇರಿಸಿಕೊಂಡು ಆರೋಪ ಮುಕ್ತರನ್ನಾಗಿ ಮಾಡುವ ದುಷ್ಟ ನಡೆಯನ್ನು ಎಲ್ಲರನ್ನೂ ಖಂಡಿಸಬೇಕಿದೆ. ಮೋದಿ ಸರ್ಕಾರದ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣದಡಿಯಲ್ಲಿ ಅವರೇ ಇಲ್ಲದಿದ್ದರೆ ಅದು ಬಿಜೆಪಿಯೇತರ ಭಾರತ ಎನಿಸುತ್ತದೆ.ಇದೊಂದು ಬಹು ದೊಡ್ಡ ವಿಪರ್ಯಾಸ. ಇದರ ಜೊತೆಗೆ ಆರೋಪಿಯ ವಿಚಾರಣೆಯ ನೆಪದಲ್ಲಿ ಸುದೀರ್ಘ ಅವಧಿ ನ್ಯಾಯಾಂಗ ಬಂಧನದಲ್ಲಿಡುವುದು, ಶಿಕ್ಷೆಯ ಅಸ್ತ್ರವನ್ನಾಗಿಸುತ್ತಿರುವುದನ್ನು ಮರೆಯುವಂತಿಲ್ಲ. ಇದಕ್ಕೆ  ಕಾಂಗ್ರೆಸ್‌ ಮುಖಂಡ ಡಿ ಕೆ  ಶಿವಕುಮಾರ್‌ ಅವರ ಪ್ರಕರಣವೇ ಸಾಕ್ಷಿ. ವಿಚಾರಣೆಯ ಹೆಸರಲ್ಲಿ ಒಂದು ತಿಂಗಳ ಕಾಲ  ಅವರನ್ನಿ ತಿಹಾರ್‌ ಜೈಲಿನಲ್ಲಿಟ್ಟಿದ್ದರು. ಈಗ ಆ ಪ್ರಕರಣವೇ ರದ್ದಾಗಿದೆ!

ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ವಿರುದ್ಧ ಗುತ್ತಿಗೆದಾರರು 40%ಕಮಿಷನ್‌ ಆರೋಪ ಮಾಡಿ ಪತ್ರ ಬರೆದರೂ ಕ್ಯಾರೇ ಅಂದಿಲ್ಲ. ಬಿಟ್‌ ಕಾಯಿನ್‌ ಹಗರಣದ ವಿಚಾರವನ್ನು ವಿದೇಶ ಏಜೆನ್ಸಿ ಮೋದಿ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ನಿಷ್ಪಕ್ಷಪಾತ ತನಿಖೆ ನಡೆಸಿಲ್ಲ. ಅದರಲ್ಲಿ ಖುದ್ದು ಗೃಹಸಚಿವರಾಗಿದ್ದ ಬಸವರಾಜ ಬೊಮ್ಮಾಯಿಯೇ ಶಾಮೀಲಾಗಿದ್ದಾರೆ ಎಂಬ ಆರೋಪ ಬಂದಿತ್ತು. ಅದಕ್ಕೆ ಸಂಬಂಧಿಸಿದ ತನಿಖೆ ನಡೆಸಲು ನೇಮಕವಾದ ಅಧಿಕಾರಿಗಳ ಮೂಲಕ ಸಾಕ್ಷ್ಯಗಳನ್ನು ನಾಶಪಡಿಸಲಾಗಿತ್ತು. ಈಗ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮರುತನಿಖೆಯಲ್ಲಿ ಈ ಗೋಲ್‌ಮಾಲ್‌ ಬಯಲಾಗಿದೆ.

ರಾಷ್ಟ್ರಮಟ್ಟದಲ್ಲಿ ಇಂತಹ ಹಲವು ಹಗರಣಗಳು ಲೀಲಾಜಾಲವಾಗಿ ನಡೆಯುತ್ತಿವೆ. ಮೋದಿ ಅವರು ಬಾಯಿಯಲ್ಲಿ ಮಾತ್ರ ಭ್ರಷ್ಟಾಚಾರದ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸುತ್ತಾರೆ. ಕಣ್ಣಮುಂದೆಯೇ ಭ್ರಷ್ಟಾಚಾರ ನಡೆಯುತ್ತಿದ್ದರೂ, ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮೋದಿಯವರಿಗೆ ನೇರವಾಗಿ ಪತ್ರ ಬರೆದರೂ ತಡೆಯುವ ಗೋಜಿಗೇ ಹೋಗುತ್ತಿಲ್ಲ ಸಂಗ್ರಹಿಸಿದ ಹಣಕ್ಕೆ ಲೆಕ್ಕ ಕೇಳುವಂತಿಲ್ಲ ಅಂದ್ರೆ ಅದು ಇನ್ನೆಷ್ಟು ದೊಡ್ಡ ಹಗರಣ ಆಗಿರಬೇಕು?

ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಇಮೇಜ್‌ ಹೆಚ್ಚಿಸಿಕೊಳ್ಳುವ ದುರುದ್ದೇಶದಿಂದ ಕೊರೋನಾ ಲಸಿಕೆ ಸರಿಯಾಗಿ ಪ್ರಯೋಗಕ್ಕೆ ಒಳಪಡಿಸದೇ ಆತುರ ಮಾಡಿ ಲಸಿಕೆಯನ್ನು ವಿದೇಶಕ್ಕೆ ರಫ್ತುಮಾಡಿ ಕಂಪನಿಗೆ ಲಾಭ ಮಾಡಿಕೊಟ್ಟು ಅದೇ ಕಂಪನಿಗಳಿಂದ ಎಲೆಕ್ಟೋರಲ್‌ ಬಾಂಡ್‌ ಹೆಸರಿನಲ್ಲಿ ದೇಣಿಗೆ ಪಡೆದ ಮೋದಿ ಅವರ ಬೂಟಾಟಿಕೆಯನ್ನು ಈ ದೇಶದ ಜನ ಅರ್ಥ ಮಾಡಿಕೊಂಡು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜ್ಯದ ಪರವಾಗಿ ಧ್ವನಿ ಎತ್ತದ ಸಂಸದರನ್ನು ಮತದಾರ ತಿರಸ್ಕರಿಸಬೇಕಿದೆ

ರಾಜ್ಯದ ಬಿಜೆಪಿ ಸಂಸದರು ತಮ್ಮದೇ ಪಕ್ಷ ಅಧಿಕಾರದಲ್ಲಿದ್ದೂ, ನಾಲ್ವರು ಸಚಿವರು ಇದ್ದೂ...

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...