ದೇಶದಲ್ಲಿ ಬೇಸಿಗೆಯ ದಗೆ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ. 2025ರಲ್ಲಿ 2024ಕ್ಕಿಂತ ಅಧಿಕ ತಾಪಮಾಣ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಧಿಕ ತಾಪಮಾನದ ಕಾರಣದಿಂದಾಗಿ 2025ರಲ್ಲಿ ವಿದ್ಯುತ್ ಬೇಡಿಕೆಯು ಶೇಕಡ 9ರಿಂದ 10ರಷ್ಟು ಹೆಚ್ಚಾಗಬಹುದು. ಈ ಬೇಡಿಕೆ ಪೂರೈಸಲು ಸಿದ್ಧವಾಗಿರಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಕಳೆದ ವರ್ಷ, ಮೇ 30ರಂದು ಅಖಿಲ ಭಾರತ ಗರಿಷ್ಠ ವಿದ್ಯುತ್ ಬೇಡಿಕೆ 250 ಗಿಗಾವ್ಯಾಟ್‌ಗಳನ್ನು (GW) ದಾಟಿತ್ತು. ಈ ಬೇಡಿಕೆಯು ಅಂದಾಜಿಗಿಂತ ಶೇಕಡ 6.3ರಷ್ಟು ಹೆಚ್ಚಾಗಿತ್ತು. ತಾಪಮಾನ ಏರಿಕೆಯಾಗಿರುವುದರಿಂದ ಈ ವರ್ಷವೂ ಇದೇ ರೀತಿ ವಿದ್ಯುತ್ ಬೇಡಿಕೆ ಅಧಿಕವಾಗಿರುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ತಾಪಮಾನ ಏರಿಕೆ | ವೇತನ ಸಹಿತ ಅರ್ಧ ದಿನದ ಕೆಲಸದ ಸಮಯಕ್ಕೆ ಪೌರಕಾರ್ಮಿಕರ ಒತ್ತಾಯ
ಪ್ರಸ್ತುತ ದೇಶದಲ್ಲಿ ಕೈಗಾರಿಕೆಗಳು, ಮನೆಗಳು ಮತ್ತು ಕೃಷಿಗಾಗಿ ಕ್ರಮವಾಗಿ ಶೇ. 33, ಶೇ. 28 ಮತ್ತು ಶೇ. 19 ರಷ್ಟು ವಿದ್ಯುತ್ ಬಳಸಲಾಗುತ್ತದೆ. ಆದರೆ ಬೇಸಿಗೆ ಸಂದರ್ಭದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತದೆ. ಅದರಲ್ಲೂ ಮನೆಗಳಲ್ಲಿ ವಿದ್ಯುತ್ ಬಳಕೆ ಅಧಿಕವಾಗುತ್ತಿದೆ. ದೆಹಲಿ ಮೂಲದ ಇಂಧನ, ಪರಿಸರ ತಜ್ಞೆ ದಿಶಾ ಅಗರ್ವಾಲ್ ಪ್ರಕಾರ, ಕಳೆದ ದಶಕದಲ್ಲಿ ಗೃಹಬಳಕೆಯ ವಿದ್ಯುತ್ ಬೇಡಿಕೆ ವೇಗವಾಗಿ ಬೆಳೆದಿದೆ.
2012-13ರಲ್ಲಿ ಶೇ. 22 ರಷ್ಟಿದ್ದ ಗೃಹಬಳಕೆಯ ವಿದ್ಯುತ್ ಬಳಕೆಯ ಪಾಲು 2022-23ರಲ್ಲಿ ಶೇ. 25 ಕ್ಕೆ ಏರಿದೆ. ಈ ಏರಿಕೆಗೆ ಆರ್ಥಿಕ ಬೆಳವಣಿಗೆ, ಹೆಚ್ಚುತ್ತಿರುವ ತಾಪಮಾನ ಕಾರಣ ಎಂಬುದು ತಜ್ಞರ ಅಭಿಪ್ರಾಯ. ಹವಾನಿಯಂತ್ರಣ (ಎಸಿ) ಮಾರಾಟವು ವರ್ಷದಿಂದ ವರ್ಷಕ್ಕೆ ಶೇ. 40ರಿಂದ 50ರಷ್ಟು ಏರಿಕೆಯಾಗಿದೆ ಎಂದು ದಿಶಾ ತಿಳಿಸಿದ್ದಾರೆ.
2022ರಿಂದ 2030 ರವರೆಗೆ ವಿದ್ಯುತ್ ಬೇಡಿಕೆ ವರ್ಷಕ್ಕೆ ಶೇ. 6ರಷ್ಟು ಹೆಚ್ಚಾಗುತ್ತದೆ ಎಂದು ಕೇಂದ್ರ ವಿದ್ಯುತ್ ಪ್ರಾಧಿಕಾರ (ಸಿಇಎ) ಅಂದಾಜಿಸಿತ್ತು. ಆದರೆ ಅದಕ್ಕೂ ಅಧಿಕ ಹೆಚ್ಚಾಗಲಿದೆ ಎನ್ನುತ್ತಾರೆ ತಜ್ಞರು.
ಇದನ್ನು ಓದಿದ್ದೀರಾ? ಜಾಗತಿಕ ತಾಪಮಾನ ಏರಿಕೆ: ಬಿಸಿಗಾಳಿಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು?
ಕಳೆದ ವಾರ ನೈಸರ್ಗಿಕ ಸಂಪನ್ಮೂಲ ರಕ್ಷಣಾ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹವಾನಿಯಂತ್ರಣಕ್ಕೆ ಬೇಡಿಕೆ ಅಧಿಕವಾಗುತ್ತಿರುವ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದರು. ಹವಾಮಾನ ಬದಲಾವಣೆ ಮತ್ತು ವಿಪತ್ತು ಅಪಾಯ ನಿರ್ವಹಣೆ ತಜ್ಞ ಅಭಾಸ್ ಝಾ, “ಭಾರತವು ಜಾಗತಿಕವಾಗಿ ಹವಾನಿಯಂತ್ರಣಗಳಿಗೆ (ಏರ್ ಕಂಡಿಷನರ್- ಎಸಿ) ಅತಿದೊಡ್ಡ ಮಾರುಕಟ್ಟೆಯಾಗಲಿದೆ. ಪ್ರತಿ 15 ಸೆಕೆಂಡುಗಳಿಗೆ, ಒಂದು ಎಸಿ ಮಾರಾಟವಾಗುತ್ತಿದೆ. ಇದರಿಂದ ವಿದ್ಯುತ್ ಬಳಕೆ ಇನ್ನಷ್ಟೂ ಅಧಿಕವಾಗಲಿದೆ” ಎಂದಿದ್ದಾರೆ.
ಈ ವರ್ಷ ದೇಶದಲ್ಲಿ ಕಳೆದ ವರ್ಷಕ್ಕಿಂತ ಮುನ್ನವೇ ಬಿಸಿಗಾಳಿ ಅಪ್ಪಳಿಸಿದೆ. 2024ರಲ್ಲಿ, ಒಡಿಶಾದಲ್ಲಿ ಮೊದಲು ಏಪ್ರಿಲ್ 5ರಂದು ಮೊದಲು ಬಿಸಿಗಾಳಿ ಕಂಡಿತ್ತು. ಆದರೆ 2025ರಲ್ಲಿ ಫೆಬ್ರವರಿ 27-28ರ ಆರಂಭದಲ್ಲಿ ಕೊಂಕಣ ಮತ್ತು ಕರಾವಳಿ ಕರ್ನಾಟಕದ ಕೆಲವು ಭಾಗಗಳಲ್ಲಿ ಬಿಸಿಗಾಳಿ ಅನುಭವವಾಗಿದೆ. ಮಾರ್ಚ್‌ನಿಂದ ಮೇವರೆಗೆ ಇರುವ ಬೇಸಿಗೆ ಈ ವರ್ಷ ಸಾಮಾನ್ಯಕ್ಕಿಂತ ಅಧಿಕ ತಾಪಮಾನದಿಂದ ಕೂಡಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
