ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮತ್ತೊಂದು ಕಾಲರಾ ರೋಗ ಪತ್ತೆಯಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಕಾಲರಾ ಪ್ರಕರಣಗಳ ಸಂಖ್ಯೆ 41ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ ಒಟ್ಟು 49 ಪ್ರಕರಣಗಳು ದೃಡವಾಗಿವೆ.
ಬಂಗಾಳ ಮೂಲದ 28 ವರ್ಷದ ಕಾರ್ಮಿಕನಲ್ಲಿ ಕಾಲರಾ ರೋಗ ಪತ್ತೆಯಾಗಿದೆ. ರೋಗಿಯ ರಕ್ತ ಮಾದರಿ ಲ್ಯಾಬ್ಗೆ ಕಳಸಿ ಪರಿಶೀಲಿಸಿದಾಗ ಕಾಲರಾ ಅಂಶ ಪತ್ತೆಯಾಗಿದೆ.
ಕಲುಷಿತ ನೀರು ಸೇವನೆ ಹಾಗೂ ಬೀದಿ ಬದಿ ತೆರೆದಿಟ್ಟ ಆಹಾರ ಸೇವನೆಯಿಂದ ಕಾಲರಾ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದರಿಂದಾಗಿ ವ್ಯಕ್ತಿಯ ದೇಹದಲ್ಲಿ ವಾಂತಿ, ಭೇಧಿ, ನಿರ್ಜಲೀಕರಣ, ಅತಿಸಾರ ಉಂಟಾಗಿ ವ್ಯಕ್ತಿಯು ನಿತ್ರಾಣಗೊಳ್ಳುತ್ತಾನೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದರಿಂದ ಸೋಂಕಿನಿಂದ ಚೇತರಿಸಿಕೊಳ್ಳಬಹುದು. ಕಾಲರಾ ಬರಲು ಕಲಷಿತ ನೀರು, ಆಹಾರದ ಜತೆಗೆ ಬಿಸಿಲಿನ ತಾಪಮಾನವೂ ಕಾರಣ ಎಂದು ತಜ್ಞರು ಹೇಳಿದ್ದಾರೆ.
ಆರೋಗ್ಯ ಇಲಾಖೆ ಕುಡಿಯುವ ನೀರಿನ ಮೂಲಗಳ ಶುದ್ಧತೆ ಪರಿಶೀಲನೆಗೆ ಮುಂದಾಗಿದೆ. ರಾಜ್ಯದ ಜನರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಇಲಾಖೆ ಮನವಿ ಮಾಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 24 ಪ್ರಕರಣಗಳು, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 15, ಚಿಕ್ಕಮಗಳೂರು 1, ಕೊಡಗು 1, ಕೋಲಾರ 2 ಹಾಗೂ ರಾಮನಗರದಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 49 ಜನರಲ್ಲಿ ಕಾಲರಾ ಅಂಶ ಪತ್ತೆಯಾಗಿದ್ದು, 48 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ತಾಪಮಾನ ಹೆಚ್ಚಳ | ಎಳನೀರು, ಹಣ್ಣಿನ ರಸಗಳಿಗೆ ಹೆಚ್ಚಿದ ಬೇಡಿಕೆ; ಬೆಲೆಯೂ ಏರಿಕೆ
ಕಾಲರಾ ತಡೆಗಟ್ಟಲು ಏನು ಮಾಡಬಹುದು?
- ಕುಡಿಯುವ ನೀರಿನ ನೈರ್ಮಲ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು.
- ಶುದ್ಧೀಕರಿಸಿದ ಅಥವಾ ಚೆನ್ನಾಗಿ ಕುದಿಸಿದ ನೀರನ್ನೇ ಕುಡಿಯಬೇಕು.
- ಸಾಬೂನು ಮತ್ತು ನೀರಿನಿಂದ ಕೈ ತೊಳೆಯಬೇಕು.
- ವಿಶೇಷವಾಗಿ ಊಟ ಅಥವಾ ಅಡುಗೆ ಮಾಡುವ ಮೊದಲು ಎಲ್ಲರೂ ನೈರ್ಮಲ್ಯದ ಅಭ್ಯಾಸಗಳನ್ನು ಅನುಸರಿಸಬೇಕು.
- ಚೆನ್ನಾಗಿ ಬೆಂದಿರದ ಆಹಾರ ಸೇವನೆಯಿಂದ ದೂರವಿರಬೇಕು.
- ಈ ರೋಗವನ್ನು ತಡೆಗಟ್ಟಲು ಲಸಿಕೆ ಸಹ ಈಗ ಲಭ್ಯವಿದೆ.