ಪ್ರಧಾನಿ ನರೇಂದ್ರ ಮೋದಿ ಹಾಗೂ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯಡಿ ದೂರು ದಾಖಲಾದ ಮೂರು ವಾರದ ನಂತರ ಚುನಾವಣಾ ಆಯೋಗ ಪ್ರತಿಕ್ರಿಯೆ ನೀಡಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಂದ ಚುನಾವಣಾ ಆಯೋಗ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದ್ದು, ದೂರುಗಳು ಹಾಗೂ ಪ್ರತಿ ದೂರುಗಳು ಪರಿಶೀಲನೆ ಹಾಗೂ ಪರಿಗಣೆಯಲ್ಲಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ದ್ವೇಷಪೂರಿತ ಭಾಷಣಕ್ಕಾಗಿ ಸ್ವೀಕರಿಸಿದ ದೂರಿನಡಿ ನಡ್ಡಾ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಏ.25ರಂದು ನೋಟಿಸ್ ನೀಡಲಾಗಿತ್ತು. ಎರಡೂ ಪಕ್ಷದ ನಾಯಕರಿಗೆ ಏ.29ರೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇಶ ತನ್ನ ಹಳೆಯ ಲಯಕ್ಕೆ, ಪ್ರಜಾಪ್ರಭುತ್ವಕ್ಕೆ ಹಿಂದಿರುಗುತ್ತಿದೆಯೇ?
ದ್ವೇಷಪೂರಿತ ಭಾಷಣ ಮಾಡಿದ್ದಕ್ಕಾಗಿ ಕಾಂಗ್ರೆಸ್ನಿಂದ 170, ಬಿಜೆಪಿಯಿಂದ 95 ಹಾಗೂ ಇತರ ಪಕ್ಷ ಹಾಗೂ ವೈಯುಕ್ತಿಕವಾಗಿ 160 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
“ದೇಶದ ಸಾಮಾಜಿಕ ಚೌಕಟ್ಟನ್ನು ಸೂಕ್ಷ್ಮವಾಗಿ ಸಮತೋಲಿತಗೊಳಿಸುವ ಕಾರಣದಿಂದ ಉಳಿದಿರುವ ಹಂತಗಳಲ್ಲಿ ದ್ವೇಷಪೂರಿತ ಹೇಳಿಕೆಗಳು/ಉಚ್ಚಾರಣೆಗಳನ್ನು ಶಾಶ್ವತವಾಗಿ ಕಡಿಮೆಗೊಳಿಸುವುದು ನಾಯಕರ ಪ್ರಾಥಮಿಕ ಜವಾಬ್ದಾರಿಯಾಗಿದೆ” ಎಂದು ಚುನಾವಣಾ ಆಯೋಗ ತಿಳಿಸಿದೆ.
ಲೋಕಸಭಾ ಚುನಾವಣೆಯ ಕ್ಷೇತ್ರಗಳ ಮಟ್ಟದಲ್ಲಿ ಹಲವು ಪಕ್ಷಗಳು ಹಾಗೂ ಅಭ್ಯರ್ಥಿಗಳು ಗಲಭೆ ಮುಕ್ತ, ದ್ವೇಷ ಭಾಷಣ ಮುಕ್ತ, ಪ್ರಚೋದನೆ ಮತ್ತು ಆಡಂಬರ ಮುಕ್ತವಾಗಿ ಕಾಪಾಡಿಕೊಳ್ಳಬೇಕಾಗಿದೆ ಎಂದು ಆಯೋಗ ತಿಳಿಸಿದೆ.
