ರಕ್ಷಕರೇ ಭಕ್ಷಕರಾಗುವ ಅದೇ ಹಳೆಯ ನಿರಾಶಾಜನಕ ಕತೆಯಿದು. ದೆಹಲಿ ಪ್ರತಿಭಟನೆಯಲ್ಲಿ ಪೊಲೀಸರ ಲೈಂಗಿಕ ಕಿರುಕುಳ- ಹಿಂಸೆ- ವಿಕೃತಿಗೆ ಒಳಗಾದ ಯುವತಿಯರು ನ್ಯಾಯ ಕೋರಿ ನಡೆಸಿರುವ ಹೋರಾಟದ ವ್ಯಥೆ. ಖಾಕಿ ರಕ್ಕಸನೊಬ್ಬ ಯುವತಿಯ ಎದೆ ಹಿಂಡಿ, ತೀರದ ನೋವು ಅವಹೇಳನ ಎಸಗಿದ್ದಾನೆ.
ರೋಸಿ ಎಂಬ ಸ್ವತಂತ್ರ ಪತ್ರಕರ್ತೆಯ ಮೇಲೆ ಇಂತಹ ವಿಕೃತಿಯನ್ನು ಪ್ರಯೋಗಿಸುವ ಪೊಲೀಸ್ ಅಧಿಕಾರಿಯ ಹುದ್ದೆ ಸಹಾಯಕ ಪೊಲೀಸ್ ಕಮಿಷನರ್ ದು. ಈ ಹಿಂದೆ ದೆಹಲಿಯಲ್ಲಿ ನಡೆದಿದ್ದ ಕಾಕ್ರೋಚ್ ಪ್ರತಿಭಟನೆಯಲ್ಲೂ ಯುವತಿಯ ಗುದಕ್ಕೆ ಲಾಠಿ ತೂರಿಸಿದ್ದ ವಿಕೃತಿ ಇವನದಾಗಿತ್ತು. ಮೋಶಾ ವ್ಯವಸ್ಥೆ ಆಗ ಇವನನ್ನು ರಕ್ಷಿಸಿತು. ಈಗಲೂ ರಕ್ಷಿಸುತ್ತಲಿದೆ. ಈವರೆಗೆ ಇವನ ವಿರುದ್ಧ ಎಫ್.ಐ.ಆರ್.ಕೂಡ ದಾಖಲಾಗಿಲ್ಲ.
ಪ್ರತಿಭಟನೆಗಳಲ್ಲಿ ತಳ್ಳಾಟ-ನೂಕಾಟ ಎಂದರೇನೆಂದು ಎಲ್ಲರಿಗೂ ಗೊತ್ತಿರುವ ಸಂಗತಿ.. ಎದೆಗೆ ಕೈ ಹಾಕುವುದು ಎಂದರೇನು ಎಂಬುದೂ ತಿಳಿಯದ್ದೇನಲ್ಲ. ತಳ್ಳಾಟ-ನೂಕಾಟದ ಪರಿಸ್ಥಿತಿಯನ್ನು ದುರುಪಯೋಗಿಸಿ, ಮಹಿಳೆಯನ್ನು ಲೈಂಗಿಕ ಇರಾದೆಯಿಂದ ಸ್ಪರ್ಶಿಸುವುದು ಅಥವಾ ಎದೆ ಹಿಡಿಯುವುದನ್ನು ‘ಗ್ರೋಪಿಂಗ್’ ಎಂದು ಕರೆಯಲಾಗುತ್ತದೆ.ಜೂನ್‌ನಿಂದ ಜುಲೈವರೆಗೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇದ್ದವು. ದೊಡ್ಡ ಸಂಖ್ಯೆಯಲ್ಲಿ ಹುಡುಗಿಯರು ಈ ಪ್ರತಿಭಟನೆಗಳಿಗೆ ಬರುತ್ತಿದ್ದರು.
ಹಗಲಿನಲ್ಲಾಗಲಿ, ರಾತ್ರಿಯಲ್ಲಾಗಲಿ, ಯಾರೂ ತಮ್ಮನ್ನು ಕೆಟ್ಟ ಉದ್ದೇಶದಿಂದ ಮುಟ್ಟಲು ಪ್ರಯತ್ನಿಸಿರಲಿಲ್ಲ. ಅವರಿಗೆ ಎಂದಿಗೂ ಅಸುರಕ್ಷಿತವೆನಿಸಿರಲಿಲ್ಲ ಎಂಬುದು ಅವರ ಅನುಭವವಾಗಿತ್ತು.‘ಬೇಟಿ ಬಚಾವ್’ ಎಂದು ಬಾಯಿ ಹರಿಯುವಂತೆ ಬೊಬ್ಬಿರಿಯುತ್ತಿದ್ದ ಪಕ್ಷ ಮತ್ತು ಅದರ ಪೊಲೀಸರು ‘ಬೇಟಿ’ಯನ್ನು ಹುರಿದು ಮುಕ್ಕುತ್ತಿರುವ ಪರಿಯಿದು.
ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ಜರುಗುತ್ತಿರುವ ಸಾಲು ಸಾಲು ಅತ್ಯಾಚಾರಗಳು ಮತ್ತು ಹತ್ಯೆಗಳಿಗೆ ಈ ಪಕ್ಷ ಮತ್ತು ಅದರ ಕಿವುಡರೂ ಕುರುಡರೂ ಆಗಿದ್ದಾರೆ. ಹೆಣ್ಣುಮಕ್ಕಳು ಹಿಂದೂಗಳಾಗಿ, ಹಿಂದೂಗಳೇ ಅವರ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದರೆ ಇವರ ನಾಲಗೆ ಸೇದಿ ಹೋಗುತ್ತದೆ. ಕೈಗೆ ಲಕ್ವ ಹೊಡೆಯುತ್ತದೆ. ಹಿಂದು ಕೋಮಿನ ಅತ್ಯಾಚಾರಿಗಳಿಗೆ ದಲಿತ ಹಿಂದುಳಿದ ಹೆಣ್ಣುಮಕ್ಕಳ ಬಲಿಯ ಕುರಿತು ಚಕಾರ ಎತ್ತದ ಇವರು, ಇದೇ ಅಪರಾಧ ಒಂದು ನಿರ್ದಿಷ್ಟ ಕೋಮಿನಿಂದ ನಡೆದರೆ ಮಾತ್ರ ಮುಗಿಲೆತ್ತರಕ್ಕೆ ಹಾರಿ ಬಿದ್ದು ಕಿರುಚುತ್ತಾರೆ. ಹಿಂದೂಗಳು ಅಪಾಯದಲ್ಲಿದ್ದಾರೆಂದು ಕೋಮುಧೃವೀಕರಣದ ಬೆಂಕಿ ಹೊತ್ತಿಸಿ ಅದರಲ್ಲಿ ಕೈ ಕಾಯಿಸಿಕೊಳ್ಳುತ್ತಾರೆ.
ತನ್ನನ್ನು ಹಾಡಹಗಲು ಪೊಲೀಸ್ ಸಮವಸ್ತ್ರದಲ್ಲಿ ನೋಯಿಸಿ ಅವಮಾನಿಸಿದ ಅಧಿಕಾರಿಯ ಮೇಲೆ ಎಫ್.ಐ.ಆರ್. ಕೂಡ ಆಗಿಲ್ಲವೆಂದು ರೋಸಿ ಕಣ್ಣೀರು ಹರಿಸಿದ್ದಾರೆ. ಈ ಕಣ್ಣೀರು ಕಟುಕರ ಕರುಳನ್ನು ಕರಗಿಸಿಲ್ಲ.
ಹೆಣ್ಣುಮಕ್ಕಳ ಸಂಸ್ಕೃತಿ ಕೆಡುತ್ತಿದೆಯೆಂದು ರಾತ್ರೋರಾತ್ರಿ ವಿಡಿಯೋ ಮಾಡಿ ದೂರಿ ಕರ್ಮಠ ಹಿಂದುತ್ವದ ಸೀಳು ನಾಯಿಗಳನ್ನು, ಜಂತರ್ ಮಂತರ್ ನಲ್ಲಿ ತಮ್ಮನ್ನು ನಿಂದಿಸಿ ಪ್ರತಿಭಟಿಸಿದ್ದ ಬಾಲೆಯೊಬ್ಬಳ ವಿರುದ್ಧ ಛೂ ಬಿಟ್ಟಿದ್ದರು ಮೋದೀಜಿ. ಮೋದೀಜೀ, ನೀವು ನನ್ನ ಬದುಕನ್ನೇ ನರಕ ಮಾಡಿದ್ದೀರೆಂದು ಅಲವತ್ತುಕೊಂಡಿದ್ದಳು ಬಾಲೆ.
ಈ ಹಿಂದೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ನಡೆದಿದ್ದ ಪ್ರತಿಭಟನೆಯಲ್ಲೂ ಯುವತಿಯರನ್ನು ವಿಶೇಷವಾಗಿ ಹಿಂಸಿಸಿದ್ದರು ದೆಹಲಿ ಪೊಲೀಸರು. ಇದೀಗ ಇಬ್ಬರು ಮಹಿಳಾ ಪತ್ರಕರ್ತೆಯರು ಈ ಪೊಲೀಸರ ಮೇಲೆ ಲೈಂಗಿಕ ಹಿಂಸೆಯ ದೂರು ನೀಡಿದ್ದಾರೆ.
ಕೂದಲು ಹಿಡಿದು ದರದರನೆ ಎಳೆಯುವುದು, ತೋಳು, ಹೊಟ್ಟೆಯನ್ನು ಹಿಡಿದು ತಿರುಚುವುದು, ಚಿವುಟುವುದು, ಕಿವಿಯ ಬಳಿ ಬಾಯಿಟ್ಟು ಬೈಗುಳಗಳ ಮಳೆ ಸುರಿಸುವ ವಿಕೃತಿಯನ್ನು ಮಹಿಳಾ ಪೊಲೀಸರು ಕೂಡ ತೋರುತ್ತಿದ್ದಾರೆಂಬ ದೂರುಗಳಿವೆ. ಹೀಗೆ ಮಾಡುವಂತೆ ಇವರಿಗೆ ಯಾರಾದರೂ ಆದೇಶ ನೀಡಿರಲೇಬೇಕು. ಅವರು ಎತ್ತರದ ಸ್ಥಾನಗಳನ್ನು ಅಲಂಕರಿಸಿರುವವರೇ ಇದ್ದಾರು.
ದೆಹಲಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಗಳಲ್ಲಿ ಭಾಗವಹಿಸಲು ಆರಂಭಿಸಿರುವುದೇ ಈ ವಿಕೃತ ಹಿಂಸೆಗೆ ಕಾರಣವೇ?ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳ ದಿನಗಳಿಂದಲೂ ಮಹಿಳೆಯರು ಪೊಲೀಸ್ ಲಾಠಿಗಳ ಎದುರು ಎದೆಗುಂದದೆ ನಿಂತಿದ್ದಾರೆ. ಲಾಠಿ ಏಟು ತಿಂದಿದ್ದಾರೆ. ಸರ್ಕಾರ ಮಹಿಳೆಯರಿಗೆ ಕಾಯಂ ಪಾಠ ಕಲಿಸುವುದು, ಅವರನ್ನು ಹೆದರಿಸುವುದು ಸಾಧ್ಯವಾಗಲಿಲ್ಲ.
ಕಾಕ್ರೋಚ್ ಪ್ರತಿಭಟನೆಯ ದಿನಗಳಲ್ಲಿ ಯುವತಿಯರು ಜಂತರ್ ಮಂತರ್‌ಗೆ ಹರಿದು ಬಂದು ಪ್ರತಿಭಟನೆಯ ಭಾಷೆಯನ್ನೇ ಬದಲಿಸಿದರು. 20–22 ವರ್ಷದ ಯುವತಿಯರನ್ನು ಹೆದರಿಸಲು ಮೋದಿ ಗುಲಾಮಗಿರಿಗೆ ಬಿದ್ದಿರುವ ಗೋದಿ ಮಾಧ್ಯಮಗಳು ಪ್ರಯತ್ನಿಸಿದವು.ಪೊಲೀಸರು ಅವರ ಮನೆ ಬಾಗಿಲು ಬಡಿದರು. ಮೋದಿ ಟ್ರೋಲ್ ಸೇನೆ ಅವರನ್ನು ಟ್ರೋಲ್ ಮಾಡಿತು. ಆದರೂ ಯುವತಿಯರು ಹೆದರಲಿಲ್ಲ.
ಇದೀಗ ದೇಶದಲ್ಲಿ ಹಲವು ಚುನಾವಣೆಗಳ ಗೆಲುವನ್ನು ಕದಿಯಲು ವಿಧವಿಧವಾಗಿ ನೆರವಾಗುತ್ತ ಬಂದಿರುವ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಡೆದಿರುವ ಪ್ರತಿಭಟನೆಗಳಲ್ಲೂ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಕಣಕ್ಕಿಳಿದಿದ್ದಾರೆ.
ರೋಸಿ ಎಂಬ ಯುವ ಪತ್ರಕರ್ತೆಯ ದೂರನ್ನು ಸ್ವೀಕರಿಸಲು ಕೂಡ ಒಂದು ತಾಸು ಕಾಯಿಸಲಾಗಿದೆ. ತನಿಖೆಗೆ ಒತ್ತಡ ಹೆಚ್ಚಿದ ನಂತರ ಕ್ರೈಂ ಬ್ರ್ಯಾಂಚ್ ಗೆ ರವಾನಿಸಿರುವುದಾಗಿ, ಸಿಸಿ ಟಿವಿ, ವಿಡಿಯೋ ದೃಶ್ಯಗಳನ್ನು ಪರಿಶೀಲಿಸುವ ಸಬೂಬು ಹೇಳಲಾಗಿದೆ. ಈ ಪರಿಶೀಲನೆಗೆ ದಿನಗಟ್ಟಲೆ ಕಾಲಾವಕಾಶ ಬೇಕೇ? ಮೋಶಾ ರಾಜ್ಯಭಾರವನ್ನು ಟೀಕಿಸುವವರ ಮೇಲೆ ಹಿಗ್ಗಾಮುಗ್ಗಾ ಎಫ್.ಐ.ಆರ್.ಗಳನ್ನು ದಾಖಲಿಸುವ ಪೊಲೀಸರು ಹೆಣ್ಣುಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಹತ್ಯೆಗಳ ಮಾತು ಬಂದಾಗ ನಿಷ್ಕ್ರಿಯರಾಗುವುದು ಯಾಕೆ?
ಲೈಂಗಿಕ ಕಿರುಕುಳಕ್ಕೆ ತುತ್ತಾಗಿರುವ ರೋಸಿ ಎಂಬ ಸ್ವತಂತ್ರ ಪತ್ರಕರ್ತೆಯ ಹೊರತಾಗಿ, ಪೊಲೀಸರು ತಮ್ಮ ಬಟ್ಟೆಗಳನ್ನು ಹರಿದಿದ್ದಾರೆ ಎಂದು ಕೆಲ ವಿದ್ಯಾರ್ಥಿನಿಯರೂ ಆರೋಪಿಸಿದ್ದಾರೆ. ಮೋಶಾ ಆಡಳಿತ ಮತ್ತು ಅದರ ಪೊಲೀಸರು ಈ ಆರೋಪಗಳನ್ನು ಇಷ್ಟು ಹಗುರವಾಗಿ ಕಾಣುತ್ತಿರುವುದೇಕೆ?
ಒಬ್ಬ ಮಹಿಳಾ ಪತ್ರಕರ್ತೆ ತನ್ನ ವಿಡಿಯೋದಲ್ಲಿ ತನ್ನ ಬಟ್ಟೆಗಳು ಹರಿದಿರುವುದನ್ನು ತೋರಿಸಿದ್ದಾರೆ. “ಇದನ್ನು ಪುರುಷ ಪೊಲೀಸ್ ಅಧಿಕಾರಿಗಳು ಮಾಡಿದ್ದಾರೆ. ಮಹಿಳಾ ಪತ್ರಕರ್ತೆಯ ಮೇಲೆ ಪುರುಷ ಪೊಲೀಸ್ ಅಧಿಕಾರಿಗಳು ಕೈ ಹಾಕಿರುವುದು ಸಂಪೂರ್ಣ ತಪ್ಪು. ಪೊಲೀಸರೆಂದರೆ ಅವರಿಗೆ ಯಾವ ಕಟ್ಟುಪಾಡುಗಳೂ ಇಲ್ಲವೇ” ಎಂದು ಪ್ರಶ್ನಿಸಿದ್ದಾರೆ.
ದೂರುದಾರ ಪತ್ರಕರ್ತೆ ರೋಸಿ ಅವರನ್ನು ಸೋಮವಾರ ಪೊಲೀಸರು ಮತ್ತೆ ವಶಕ್ಕೆ ಪಡೆದರು. ಅವರೊಂದಿಗೆ ಧರಣಿಯಲ್ಲಿ ಕುಳಿತಿದ್ದ ಹಲವು ಪತ್ರಕರ್ತರನ್ನೂ ವಶಕ್ಕೆ ಪಡೆದು ದೆಹಲಿ ದಂಡುಪ್ರದೇಶದ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಪೀಡಿತ ಪತ್ರಕರ್ತೆಯ ಸಹೋದ್ಯೋಗಿಗಳ ಪ್ರಕಾರ, ಅಲ್ಲಿ ಸುಮಾರು 20 ಪತ್ರಕರ್ತರಿದ್ದಾರೆ. ಇಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿರುವ ವರದಿಗಳಿವೆ.ಪೀಡಿತ ಮಹಿಳಾ ಪತ್ರಕರ್ತೆ ತಮ್ಮ ಮೇಲೆ ಪೊಲೀಸರು ಮತ್ತೆ ಹಲ್ಲೆ ಮಾಡಿದ್ದಾರೆಂದಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿಯ ರತ್ನಾ ಸಿಂಗ್ ಹಂಚಿಕೊಂಡಿರುವ ಕೆಲವು ವಿಡಿಯೋಗಳಲ್ಲಿ ವಿದ್ಯಾರ್ಥಿಗಳನ್ನು ಥಳಿಸಿರುವುದು ಕಾಣಿಸುತ್ತದೆ. ಅವರಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ದೆಹಲಿ ಪೊಲೀಸರು ತಮ್ಮ ತಪ್ಪಿತಸ್ಥ ಅಧಿಕಾರಿಯನ್ನು ರಕ್ಷಿಸಲು, ನ್ಯಾಯಕ್ಕಾಗಿ ಆಗ್ರಹಿಸುತ್ತಿರುವ ಯುವಜನರನ್ನು ಹಿಂಸಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.ಮನೆಯಿಂದ ಹೊರಗೆ ಹೆಜ್ಜೆ ಇರಿಸುವ ಹೆಣ್ಣುಮಕ್ಕಳಿಗೆ ಸಂಸ್ಕೃತಿಯಿಲ್ಲ ಎಂದು ನಿಂದಿಸಲಾಗುತ್ತಿದೆ. ನ್ಯಾಯ ಕೇಳುವ ಧೈರ್ಯ ಮಾಡಿದ್ದಕ್ಕೆ ಶಿಕ್ಷೆ ನೀಡಲಾಗುತ್ತಿದೆ. ಅವರ ಧೈರ್ಯವನ್ನು ಹೊಸಕಿ ಹಾಕಲಾಗುತ್ತಿದೆ.
ನೂರಾರು ಮಂದಿ ಧರಣಿ ಕುಳಿತರೂ, ಮೂರು ದಿನಗಳ ಕಾಲ ಪ್ರತಿಭಟನೆ ನಡೆಸಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದು ಏಕೆ? ವೈದ್ಯಕೀಯ ಪರೀಕ್ಷೆ ನಡೆಸುವ ಒತ್ತಾಯವನ್ನೂ ಗಾಳಿಗೆ ತೂರಿದ್ದೇಕೆ?
ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಡಿಜಿಟಲ್ ಪತ್ರಕರ್ತರ ಸಂಸ್ಥೆ ಡಿಜಿಪಬ್, ಕರ್ನಾಟಕ ರಾಜ್ಯ ಮಹಿಳಾ ಪತ್ರಕರ್ತರ ಸಂಘ ಈ ಯುವತಿಯರಿಗೆ ಬೆಂಬಲ ಸಾರಿವೆ. ಡಿಜಿಪಬ್ ಹೇಳಿಕೆಯ ಪ್ರಕಾರ, ಅಕ್ಟೋಬರ್ 2 ಮತ್ತು 3ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಪತ್ರಕರ್ತೆಯರ ಮೇಲೆ ಲೈಂಗಿಕ ಹಿಂಸೆ, ದುರ್ವರ್ತನೆ ಮತ್ತು ಅನುಚಿತ ಸ್ಪರ್ಶ ನಡೆದಿದೆ ಎಂಬ ಆರೋಪಗಳಿವೆ. ಇಂತಹ ಕೃತ್ಯಗಳು ಖಂಡನೀಯ.
ಹಿರಿಯ ಅಧಿಕಾರಿಗಳು ಮತ್ತು ಇತರ ಪೊಲೀಸ್ ಸಿಬ್ಬಂದಿ ಇಂತಹ ಕೀಳು ಕೃತ್ಯಗಳಲ್ಲಿ ತೊಡಗಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿಯೂ ಮಹಿಳಾ ಪತ್ರಕರ್ತೆಯರನ್ನು ಕ್ರೂರವಾಗಿ ಎಳೆದಿದ್ದಾರೆ. ಅವರ ಮೈಕ್‌ಗಳನ್ನು ಕಿತ್ತುಕೊಂಡಿದ್ದಾರೆ ಮತ್ತು ಅವರನ್ನು ಬಸ್‌ಗಳೊಳಗೆ ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಮತ್ತು ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಬೇಕಿರುವ ದೆಹಲಿ ಪೊಲೀಸ್ ಪಡೆಯ ಜವಾಬ್ದಾರಿಯುತ ಅಧಿಕಾರಿಗಳೇ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂಬ ಆರೋಪ ಅತ್ಯಂತ ಗಂಭೀರ.
ಆರೋಪಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು, ಅವರನ್ನು ಅಮಾನತುಗೊಳಿಸಬೇಕು ಮತ್ತು ತನಿಖೆ ನಡೆಸಬೇಕು ಎಂದು ಡಿಜಿಪಬ್ ಒತ್ತಾಯಿಸಿದೆ. ಆರೋಪ ಸಾಬೀತಾದರೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಬೇಡಿಕೆ ನ್ಯಾಯಯುತವಾಗಿದೆ.ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿ, ವಿಧಿವತ್ತಾದ ತನಿಖೆಯನ್ನು ಆರಂಭಿಸಿದ್ದರೆ ಈ ಧರಣಿ-ಪ್ರತಿಭಟನೆಯ ಪರಿಸ್ಥಿತಿ ಎದುರಾಗುತ್ತಿರಲಿಲ್ಲ.
2013ರಲ್ಲಿ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ, ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಅಪರಾಧದ ಮಾಹಿತಿ ಬಂದ ಕೂಡಲೇ ಎಫ್‌ಐಆರ್ ದಾಖಲಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಮತ್ತು ಅವರಿಗೆ 6 ತಿಂಗಳಿಂದ 2 ವರ್ಷಗಳವರೆಗೆ ಶಿಕ್ಷೆಯಾಗಬಹುದು ಎಂದು ಆ ಪತ್ರದಲ್ಲಿ ಹೇಳಲಾಗಿತ್ತು. ಆಗ ಮನಮೋಹನ್ ಸಿಂಗ್ ಸರ್ಕಾರವಿತ್ತು. ಈ ಆದೇಶದ ಆಧಾರದ ಮೇಲೆ ಇದುವರೆಗೆ ಎಷ್ಟು ಪೊಲೀಸ್ ಅಧಿಕಾರಿಗಳಿಗೆ ಶಿಕ್ಷೆಯಾಗಿದೆ? ಈ ಪತ್ರವನ್ನು ಏಕೆ ಬರೆಯಬೇಕಾಯಿತು?
ನಿರ್ಭಯಾ ಪ್ರಕರಣದ ನಂತರ ಜನರಲ್ಲಿ ಭಾರಿ ಆಕ್ರೋಶವಿತ್ತು. ಲೈಂಗಿಕ ಹಿಂಸೆ ಮತ್ತು ಅತ್ಯಾಚಾರದ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲು ಪೊಲೀಸರು ನಿರ್ಲಕ್ಷ್ಯ ತೋರಿಸುತ್ತಿದ್ದರು. ಈ ಪರಿಸ್ಥಿತಿಯಲ್ಲಿ ಇಂದಿಗೂ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ.
ಎಫ್‌ಐಆರ್ ದಾಖಲಿಸದಿರುವುದೂ ಒಂದು ಅಪರಾಧ. ಅದಕ್ಕೆ ಸಂಬಂಧಿಸಿದ ಆದೇಶಗಳೇ ಇದ್ದಾಗ ಈ ನಿರ್ಲಕ್ಷ್ಯವೇಕೆ? ನೀಟ್ ಪರೀಕ್ಷೆಗಳ ಅಕ್ರಮದ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಹಿಲ್ ಲೋಚಬ್ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸುವಂತೆ ರಾಹುಲ್ ಗಾಂಧಿಯವರು ಇದೇ ಸಂಸತ್ ಮಾರ್ಗ್ ಠಾಣೆಗೆ ಏಕೆ ಹೋಗಬೇಕಾಯಿತು? ಸಾಹಿಲ್ ಲೋಚಬ್ ಒಂದು ತಿಂಗಳಿನಿಂದ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲು ಇದೇ ಠಾಣೆಯ ಸುತ್ತಾಟ ಮಾಡುತ್ತಿದ್ದರು. ಪೆಲೆಟ್ ಗನ್ ಪ್ರಯೋಗದಿಂದಾಗಿ ಅವರ ಕಣ್ಣಿಗೆ ಹಾನಿಯಾಗಿತ್ತು. ರಾಹುಲ್ ಗಾಂಧಿಯವರು ಹಲವು ಗಂಟೆಗಳ ಕಾಲ ಧರಣಿ ನಡೆಸಬೇಕಾಯಿತು. ನಂತರವೇ ಎಫ್‌ಐಆರ್ ದಾಖಲಾಯಿತು.
ಪೊಲೀಸರು ಈ ಕೆಲಸವನ್ನು ತಾವಾಗಿಯೇ ಮಾಡಬೇಕಿರಲಿಲ್ಲವೇ? ಆಗ ಯಾವುದೇ ಎಸಿಪಿ ವಿರುದ್ಧ ಆರೋಪವೂ ಇರಲಿಲ್ಲ.ಸ್ವತಂತ್ರ ಭಾರದ್ವಾಜ್ ವಿರುದ್ಧ ಎಫ್‌ಐಆರ್ ದಾಖಲಿಸಿ, ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಸೌರಭ್ ದಾಸ್ ಮತ್ತು ಕಾಕ್ರೋಚ್‌ಗಳು ಇದೇ ಸಂಸತ್ ಮಾರ್ಗ್ ಠಾಣೆಗೆ ಏಕೆ ಹೋಗಬೇಕಾಯಿತು?
ಸ್ವತಂತ್ರ ಭಾರದ್ವಾಜ್ ಸ್ವತಃ ಒಂದು ಸಂದರ್ಶನದಲ್ಲಿ ದಲಿತ ಪತ್ರಕರ್ತೆ ನಿಶು ಆಜಾದ್ ಅವರ ತಂದೆಯ ತಲೆಯನ್ನು ಒಡೆದಿರುವುದಾಗಿ ಒಪ್ಪಿಕೊಂಡಿದ್ದರೆ, ಪೊಲೀಸರು ತಾವಾಗಿಯೇ ಯಾಕೆ ಕ್ರಮ ಕೈಗೊಳ್ಳಲಿಲ್ಲ? ಕೊಲೆ ಯತ್ನದ ಅಡಿಯಲ್ಲಿ ಪ್ರಕರಣವನ್ನು ಯಾಕೆ ದಾಖಲಿಸಲಿಲ್ಲ? ಸ್ವತಂತ್ರ ಭಾರದ್ವಾಜನನ್ನು ವಿಚಾರಣೆಗೆ ಏಕೆ ಕರೆಯಲಿಲ್ಲ?
ಪೊಲೀಸರು ಆತ್ಮಪರಿಶೀಲನೆ ಮಾಡಿಕೊಳ್ಳಬೇಕು. ಸಾಕ್ಷ್ಯಾಧಾರಗಳಿಲ್ಲದೆ ಅಥವಾ ನ್ಯಾಯಾಲಯದ ಆದೇಶವಿಲ್ಲದೆ ಅಸಂಖ್ಯ ಜನರನ್ನು ತಾವು ಬಂಧಿಸಿಲ್ಲವೇ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕು..
ಕಳೆದ ತಿಂಗಳು ಸೆಪ್ಟೆಂಬರ್ 3ರಂದು ನಡೆದ ಮತ್ತೊಂದು ಘಟನೆಯಲ್ಲಿ., ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಕಾರ್ಯಕ್ರಮದಲ್ಲಿ ಪ್ರಶ್ನೆ ಕೇಳಲು ಪ್ರಯತ್ನಿಸಿದಾಗ ದೆಹಲಿ ಪೊಲೀಸರು ಅವರನ್ನು ಹಿಡಿದು ಠಾಣೆಗೆ ಕರೆದೊಯ್ದರು ಎಂದು 4PM ನ್ಯೂಸ್‌ನ ಪತ್ರಕರ್ತೆಯರಾದ ಶಾಹೀನ್ ಮತ್ತು ನಫೀಸಾ ಆರೋಪಿಸಿದ್ದಾರೆ. ಅವರೊಂದಿಗೆ ದುರ್ವರ್ತನೆ ಮತ್ತು ಹಲ್ಲೆ ನಡೆದಿದೆ ಎಂದು ಆರೋಪವಿದೆ.
ಶಾಹೀನ್ ಅವರ ಆರೋಪದ ಪ್ರಕಾರ, ಅವರು ಮುಸ್ಲಿಂ ಎಂಬುದು ತಿಳಿದ ನಂತರ ಕಿರುಕುಳ ಇನ್ನಷ್ಟು ಹೆಚ್ಚಾಯಿತು.ದೆಹಲಿ ದೇಶದ ರಾಜಧಾನಿ. ಅಲ್ಲಿನ ಪೊಲೀಸ್ ವ್ಯವಸ್ಥೆಯನ್ನು ದೇಶದ ಗೃಹಮಂತ್ರಿಯೇ ಖುದ್ದಾಗಿ ನಿಯಂತ್ರಿಸುತ್ತಾರೆ. ಕಳಂಕದ ಕೆಲಸಕ್ಕೆ ಕೈ ಹಾಕದೆ ದೆಹಲಿ ಪೊಲೀಸರು ಘನತೆಯಿಂದ ನಡೆದುಕೊಳ್ಳಬೇಕು. ಇತರೆ ಪೊಲೀಸರಿಗೆ ಮಾದರಿ ಎನಿಸಬೇಕು.




