ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಸಂಸದರನ್ನು ದೆಹಲಿಯಲ್ಲಿ ಬಂಧಿಸಿರುವುದನ್ನು ಖಂಡಿಸಿ ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿ, ಯುವ ಕಾಂಗ್ರೆಸ್ ನೇತ್ರತ್ವದಲ್ಲಿ ಗುರುವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮುಖಂಡರು, ಕಾರ್ಯಕರ್ತರು ಕೈ, ಹಣೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕೇಂದ್ರ ಸರ್ಕಾರ, ಚುನಾವಣಾ ಆಯೋಗ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಂಬೇಡ್ಕರ್ ವೃತ್ತದ ಎದುರುಗಡೆಯ ರಸ್ತೆ ಮೇಲೆ ಯುವ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರು ಅವಕಾಶ ನೀಡದಿದ್ದರೂ ಟೈರ್‌ಗೆ ಬೆಂಕಿ ಹಚ್ಚಿದರು, ತಕ್ಷಣವೇ ಪೊಲೀಸರು ನೀರು ಹಾಕಿ ಆರಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೋಡೆ ಮಾತನಾಡಿ, ” ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನವಾಗಿ ಮತದಾನ ಹಕ್ಕು ನೀಡಿದ್ದಾರೆ. ಅದನ್ನು ಕಸಿಯುವ ಅಧಿಕಾರ ಯಾರಿಗೂ ಇಲ್ಲ. ಕೇಂದ್ರದ ಮೋದಿ ನೇತ್ರತ್ವದ ಸರ್ಕಾರ ಬಡ, ದಲಿತ, ಅಲ್ಪಸಂಖ್ಯಾತರ ಮತಹಕ್ಕು ಕಸಿಯುವುದು ಹುನ್ನಾರ ನಡೆಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತಗಳ್ಳತನ ವಿರುದ್ಧ ದೆಹಲಿಯಲ್ಲಿ ಹೋರಾಟ ರೂಪಿಸಿ ಜಾಗೃತಿ ಮೂಡಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ಜ್ಞಾನೇಶ ಕುಮಾರ ರಾಜೀನಾಮೆಗೆ ಆಗ್ರಹಿಸಿದರೆ, ಅವರನ್ನು ಬಂಧಿಸುವ ಕ್ರಮ ಖಂಡನಾರ್ಹ” ಎಂದು ಹೇಳಿದರು.

ಬಿಡಿಎ ಅಧ್ಯಕ್ಷ ವಿನೋದಕುಮಾರ ಅಪ್ಪೆ ಮಾತನಾಡಿ, “ಕೇಂದ್ರದ ಬಿಜೆಪಿ ನೇತ್ರತ್ವದ ಸರ್ಕಾರ ಮತಗಳ್ಳತನ ಮುಖಾಂತರ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಕಗ್ಗೊಲೆ ನಡೆಸುತ್ತಿದೆ. ಜಾತಿ-ಜಾತಿಗಳ ಮಧ್ಯೆ ವಿಷಬೀಜ ಬಿತ್ತುವ ಬಿಜೆಪಿಯವರ ತಂತ್ರಗಾರಿಕೆ ಜನರಿಗೆ ಅರ್ಥವಾಗಿದ್ದು, ಇನ್ಮುಂದೆ ಅವರ ಆಟ ನಡೆಯುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತ್ರತ್ವದ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯಬೇಕಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರೆಸಿದರೆ ಬೀದರ್‌ನಿಂದ ದೆಹಲಿವರೆಗೆ ಹೋರಾಟ ನಡೆಸಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು” ಎಂದರು.
ಮುಖಂಡ ಮುಹಮ್ಮದ್ ಗೌಸ್ ಮಾತನಾಡಿ, “ದೇಶದ ಪ್ರತಿಯೊಬ್ಬ ಮತದಾರನ ಮತದಾನದ ಹಕ್ಕು, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಈ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು. ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಸಾರ್ವಜನಿಕವಾಗಿ ಎದ್ದಿರುವ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗ ಸ್ಪಷ್ಟ ಉತ್ತರ ನೀಡಬೇಕು. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕೂಡಲೇ ರಾಜೀನಾಮೆ ನೀಡಬೇಕು. ಮತಗಳ್ಳತನ ಆರೋಪಗಳ ಕುರಿತು ಸ್ವತಂತ್ರ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ : ಬೀದರ್ | ಬೆಂಬಲ ಬೆಲೆಯಲ್ಲಿ ಹೆಸರುಕಾಳು, ಸೋಯಾಬೀನ್ ಖರೀದಿಗೆ ನೋಂದಣಿ ಆರಂಭ
ಪ್ರತಿಭಟನೆಯಲ್ಲಿ ಮಾಜಿ ಸಂಸದ ನರಸಿಂಗ್‌ರಾವ್ ಸೂರ್ಯವಂಶಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಫರೀದ್ ಖಾನ್ ಪ್ರಮುಖರಾದ ಪರ್ವೇಜ್ ಕಮಾಲ್, ಎಂ.ಡಿ.ಸಮೀ ಜಾರ್ಜ್ ಫರ್ನಾಂಡಿಸ್, ಡಾ.ಮಕ್ಸೂದ್ ಚಂದಾ, ಗೋವರ್ಧನ ರಾಠೋಡ್, ಯೂಸುಫ್ ಖಾನ್, ಇಮ್ರಾನ್ ಖಾನ್, ನಾಸೀರ್ ಅಹ್ಮದ್, ಪ್ರಶಾಂತ ದೊಡ್ಡಿ, ಮಾಣಿಕೇಶ ಪಾಟೀಲ್, ಜೋಶ್ವಾ, ಸೂರ್ಯಕಾಂತ ಸಾಧುರೆ, ಸುನೀಲ್ ಬಚ್ಚನ್, ಪವನ್ ಮಿಠಾರೆ, ವಿಠಲದಾಸ್ ಪ್ಯಾಗೆ, ಶಾಂತಕುಮಾರ್ ಕೊಡ್ಡಿಕರ್, ಶರಣಪ್ಪ ಶರ್ಮ, ಅನಿಲ್ ನಿಡೋದಾ ಅನಿಲ ಜಾಧವ್, ವಿನಯಕುಮಾರ್ ಮಾಳಗೆ, ವಿನೋದ್ ಬಂದಗೆ ವಿದ್ಯಾ ತುಗಾವೆ, ಸಂಗೀತಾ ಕಾರಬಾರಿ, ತೇಜಮ್ಮ ಸೇರಿದಂತೆ ಕಾಂಗ್ರೆಸ್ ಮುಖಂಡರು, ಯುವ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.




